
ಬಿಡದಿ ಟೌನ್‌ಶಿಪ್: ಪ್ರತಿಭಟನೆ ವೇಳೆ ಪೊಲೀಸರ ಜತೆ ವಾಗ್ವಾದ, 70 ರೈತರು ವಶಕ್ಕೆ
ಬಿಡದಿ (ರಾಮನಗರ): ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಐಟಿಟಿ) ಯೋಜನೆ ವಿರೋಧಿಸಿ ರೈತರು ಬೈರಮಂಗಲ ವೃತ್ತದಲ್ಲಿ ಬಿಡದಿ– ಹಾರೋಹಳ್ಳಿ ಮುಖ್ಯರಸ್ತೆ ತಡೆದು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮತ್ತು ಉಪವಾಸ ಸತ್ಯಾಗ್ರಹ ಶುಕ್ರವಾರ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು.
ಧರಣಿನಿರತ 70 ಮಂದಿಯನ್ನು ಪೊಲೀಸರು ಏಕಾಏಕಿ ವಶಕ್ಕೆ ಪಡೆದರು. ರಸ್ತೆಯಲ್ಲಿ ರೈತರು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ತೆರವುಗೊಳಿಸಿ, ಸಂಚಾರಕ್ಕೆ ಮುಕ್ತಗೊಳಿಸಿದರು.
ಈ ಸಂದರ್ಭದಲ್ಲಿ ನಡೆದ ತಳ್ಳಾಟದಲ್ಲಿ ರೈತ ಮಹಿಳೆಯೊಬ್ಬರು ಪ್ರಜ್ಞೆ ತಪ್ಪಿದರು.
ಹೋರಾಟ ಬೆಂಬಲಿಸಿ ಸ್ಥಳಕ್ಕೆ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಎ.ಮಂಜುನಾಥ್ ಸೇರಿದಂತೆ ಪಕ್ಷದ ಮುಖಂಡರು ಭೇಟಿ ನೀಡಿದರು.
ಜೆಡಿಎಸ್ ನಾಯಕರು ಮಧ್ಯಾಹ್ನ ಸ್ಥಳದಿಂದ ತೆರಳಿದ ಬಳಿಕ ರೈತರು ಎಂದಿನಂತೆ ಧರಣಿ ಮುಂದುವರಿಸಿದರು. ಸಂಜೆ 5.30ರ ಸುಮಾರಿಗೆ ಕೆಲ ಸ್ಥಳೀಯ ರೈತರು ಡೇರಿಗೆ ಹಾಲು ನೀಡುವ ಸಲುವಾಗಿ ತೆರಳಿದರು. ಅದೇ ಸಮಯಕ್ಕಾಗಿ ಕಾದಿದ್ದ ಪೊಲೀಸರು, ಉಳಿದ ರೈತರನ್ನು ಒಮ್ಮೆಲೇ ಸುತ್ತುವರಿದು ಬಂಧಿಸಿದರು. ಈ ವೇಳೆ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ಮತ್ತು ಪರಸ್ಪರ ತಳ್ಳಾಟ ನಡೆಯಿತು.
ಪ್ರತಿರೋಧ ಲೆಕ್ಕಿಸದೆ ರೈತರನ್ನು ಪೊಲೀಸರು ವಾಹನದೊಳಕ್ಕೆ ಎಳೆದೊಯ್ದರು. ಕೆಲ ಮಹಿಳೆಯರು ಕೆಳಕ್ಕೆ ಬಿದ್ದರೂ ಲೆಕ್ಕಿಸದೆ ವಾಹನಕ್ಕೆ ತುಂಬಿಸಿದರು. ಈ ವೇಳೆ ವರಲಕ್ಷ್ಮಮ್ಮ ಎಂಬುವರು ಪ್ರಜ್ಞೆ ತಪ್ಪಿದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕೆಲವೇ ನಿಮಿಷಗಳಲ್ಲಿ ಪೊಲೀಸರು ಸ್ಥಳದಲ್ಲಿ ಇದ್ದವರನ್ನು ಬಂಧಿಸಿ, ಚನ್ನಪಟ್ಟಣದ ಪೊಲೀಸ್ ತರಬೇತಿ ಕೇಂದ್ರದ ಮೈದಾನಕ್ಕೆ ಕರೆದೊಯ್ದರು.