
ಲೋಕಾಯುಕ್ತ ಪ್ರಕರಣ: ಆರೋಪಿ ಚಿಕಿತ್ಸೆ ಸುತ್ತ ಸಂದೇಹದ ಹುತ್ತ!
ಮಂಡ್ಯ: ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಮಹಮ್ಮದ್ ಹುಸೇನ್, ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಅನಧಿಕೃತವಾಗಿ ಚಿಕಿತ್ಸೆ ಪಡೆದಿರುವ ಬಗ್ಗೆ ಸಾರ್ವಜನಿಕರಲ್ಲಿ ಹಲವು ಸಂದೇಹಗಳು ಮೂಡಿವೆ. ಆ.12ರಂದು ‘ಫಿಸಿಕಲಿ ಫಿಟ್ ಆಗಿದ್ದವ, ಆ.21ರಂದು ಅಂದರೆ ಹತ್ತೇ ದಿನಗಳಲ್ಲಿ ‘ಹೈರಿಸ್ಕ್ ಪೇಷೆಂಟ್’ ಆಗಿದ್ದು ಹೇಗೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಲೋಕಾಯುಕ್ತ ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಹುಸೇನ್ (39) ಬೆನ್ನುನೋವಿನ ಚಿಕಿತ್ಸೆ ನೆಪದಲ್ಲಿ ಗೆಳತಿಯೊಂದಿಗೆ ಆಸ್ಪತ್ರೆಯ ಪ್ರತ್ಯೇಕ ಕೋಣೆಯಲ್ಲಿ ಕಾಲ ಕಳೆಯುತ್ತಿದ್ದಾಗ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ತಂಡಕ್ಕೆ ‘ರೆಡ್ ಹ್ಯಾಂಡ್’ ಆಗಿ ಆ.24ರಂದು ಸಿಕ್ಕಿಬಿದ್ದಿದ್ದ.
‘ಭದ್ರತೆ ಒದಗಿಸುವ ವಿಚಾರದಲ್ಲಿ ಕರ್ತವ್ಯಲೋಪವಾಗಿದೆ’ ಎಂಬ ಆರೋಪದ ಮೇರೆಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್ ಚಂದನ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ ಈಚೆಗೆ ಅಮಾನತುಗೊಳಿಸಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಕಲಿ ದಾಖಲೆ ಮತ್ತು ನಕಲಿ ಸೀಲುಗಳ ಬಳಕೆ ಆರೋಪದ ಮೇರೆಗೆ ಎಂಟು ಸರ್ಕಾರಿ ನೌಕರರು ಮತ್ತು ಖಾಸಗಿ ವ್ಯಕ್ತಿಯನ್ನು ಲೋಕಾಯುಕ್ತ ಪೊಲೀಸರು ಜೂನ್‌ನಲ್ಲಿ ಬಂಧಿಸಿದ್ದರು. ಈ ಪ್ರಕರಣದ ಎ–1 ಆರೋಪಿ ಎಡಿಎಲ್‌ಆರ್ ಮಹಮ್ಮದ್ ಹುಸೇನ್ ತಲೆಮರೆಸಿಕೊಂಡಿದ್ದ. ಎರಡು ತಿಂಗಳ ನಂತರ ಆ.5ರಂದು ರಾಯಚೂರಿನಲ್ಲಿ ಗೆಳತಿ ಜತೆ ಇದ್ದಾಗ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಫಿಸಿಕಲಿ ಫಿಟ್: ತನಿಖೆಯ ಸಂಬಂಧ ಮಹಮ್ಮದ್ ಹುಸೇನ್‌ನನ್ನು ಆ.7ರಂದು ಶ್ರೀರಂಗಪಟ್ಟಣ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ‘ಯಾವುದೇ ರೋಗದ ಗುಣಲಕ್ಷಣಗಳು ಕಂಡುಬಂದಿಲ್ಲ’ ಎಂದು ವೈದ್ಯರು ಷರಾ ಬರೆದಿದ್ದರು. ಆ.8, ಆ.10 ಹಾಗೂ ಆ.12ರಂದು ಮತ್ತೆ ತಪಾಸಣೆ ಮಾಡಿಸಿದಾಗ ‘ಫಿಸಿಕಲಿ ಅಂಡ್ ಮೆಂಟಲಿ ಫಿಟ್’ ಎಂದು ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ವರದಿ ನೀಡಿದ್ದರು.
ಆ.16ರಂದು ಬೆನ್ನು ನೋವು ಎಂದು ಮಹಮ್ಮದ್ ಹುಸೇನ್ ಕಾರಾಗೃಹದಲ್ಲಿ ನರಳಿದ್ದ. ಆಗ ಕ್ಯಾತುಂಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದಾಗ, ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ‘ಮಿಮ್ಸ್’ ಆಸ್ಪತ್ರೆಗೆ ಶಿಫಾರಸು ಮಾಡಿದ್ದರು. ಆ.18ರಂದು ‘ಮಿಮ್ಸ್’ನ ಕೀಲು ಮತ್ತು ಮೂಳೆರೋಗ ಹೊರರೋಗಿ ವಿಭಾಗದಲ್ಲಿ ಪರೀಕ್ಷಿಸಲಾಗಿತ್ತು. ಆ.19ರಂದು ನರರೋಗ ಶಸ್ತ್ರಚಿಕಿತ್ಸಕರು ಪರೀಕ್ಷಿಸಿ, ಶಸ್ತ್ರಚಿಕಿತ್ಸೆ ರಹಿತ ಚಿಕಿತ್ಸಾ ವಿಧಾನವನ್ನು ಅನುಸರಿಸಲು ಸಲಹೆ ನೀಡಿದ್ದರು.
ಆ.21ರಂದು ಅದೇ ಬೆನ್ನುನೋವಿನ ದೂರಿನೊಂದಿಗೆ ಆರೋಪಿಯನ್ನು ಕಾರಾಗೃಹದಿಂದ ಮತ್ತೆ ಮಿಮ್ಸ್ ಆಸ್ಪತ್ರೆಗೆ ಪೊಲೀಸರು ಕರೆತಂದಿದ್ದರು. ಕೀಲು ಮತ್ತು ಮೂಳೆರೋಗ ವಿಭಾಗದ ವೈದ್ಯರ ಸಲಹೆ ಮೇರೆಗೆ ಕೈದಿಗಳಿಗೆ ಮೀಸಲಿಟ್ಟಿರುವ ‘ಜೈಲು ವಾರ್ಡ್’ನಲ್ಲಿ ದಾಖಲಿಸಿ, ಆ.24ರವರೆಗೆ ಹೈರಿಸ್ಕ್ ಪೇಷೆಂಟ್ ಎಂದು ಪರಿಗಣಿಸಿ ಚಿಕಿತ್ಸೆ ನೀಡಲಾಗಿದೆ ಎಂಬುದನ್ನು ‘ಮಿಮ್ಸ್’ ಆಸ್ಪತ್ರೆ ದಾಖಲೆಗಳು ತಿಳಿಸುತ್ತವೆ.
ಮಿಮ್ಸ್‌ನಲ್ಲಿ ‘ಜೈಲ್ ವಾರ್ಡ್’ ಕೊರತೆ
ಕಾರಾಗೃಹದಿಂದ ಬರುವ ವಿಚಾರಣಾಧೀನ ಬಂದಿಗಳಿಗೆ ಮಂಡ್ಯ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಪ್ರತ್ಯೇಕ ‘ಜೈಲ್ ವಾರ್ಡ್’ ಕೊರತೆ ಕಾಡುತ್ತಿದೆ.
‘ಕಾರಾಗೃಹದ ಬ್ಯಾರಕ್ ಮಾದರಿಯ ಸುಸಜ್ಜಿತ ಭದ್ರತೆ ವ್ಯವಸ್ಥೆಯುಳ್ಳ ಜೈಲ್ ವಾರ್ಡ್ ಅಗತ್ಯವಿದೆ. ಆ ವಾರ್ಡ್‌ನಲ್ಲಿಯೇ ಭದ್ರತಾ ಸಿಬ್ಬಂದಿ ಅವರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಒಳರೋಗಿಯಾಗಿ ದಾಖಲಾಗುವ ಕಾರಾಗೃಹ ಬಂದಿಗಳನ್ನು ಪ್ರತ್ಯೇಕವಾಗಿ ಇರಿಸಲು ಈ ವಾರ್ಡ್ ಅವಶ್ಯ ಎಂದು ಹಲವು ಬಾರಿ ಮಿಮ್ಸ್ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಆದರೂ ಪ್ರಯೋಜನವಾಗಿಲ್ಲ’ ಎಂದು ಮಂಡ್ಯ ಕಾರಾಗೃಹದ ಅಧೀಕ್ಷಕಿಯಾಗಿದ್ದ ಶಾಂತಮ್ಮ ತಿಳಿಸಿದ್ದಾರೆ.
ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಮತ್ತು ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರ ತಂಡ ಮಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದ ವೇಳೆ, ‘ಆರೋಪಿಗೆ ಯಾವುದೇ ಗಂಭೀರ ಸಮಸ್ಯೆಗಳಿಲ್ಲ. ಒತ್ತಾಯಪೂರ್ವಕವಾಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ’ ಎಂದು ಮಿಮ್ಸ್ ವೈದ್ಯಕೀಯ ಅಧೀಕ್ಷಕ ಶಿವಕುಮಾರ್ ತಿಳಿಸಿದ್ದರು.
ಆದರೆ, ಇದೇ ಶಿವಕುಮಾರ್ ಅವರು ಮಿಮ್ಸ್ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ‘ಆರೋಪಿಗೆ ಎಡಭಾಗದ ಸಯಾಟಿಕಾ ಹಾಗೂ ಎಲ್–4 ಎಲ್–5 ಮಟ್ಟದಲ್ಲಿ ‘ಐವಿಡಿಪಿ’ ಇರುವುದು ದೃಢಪಟ್ಟಿದೆ. ಹೀಗಾಗಿ ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡಲಾಗಿದೆ’ ಎಂದು ತಿಳಿಸಿಸಿದ್ದಾರೆ. ಈ ದ್ವಂದ್ವ ಹೇಳಿಕೆಗಳು ಹಲವು ಸಂದೇಹಗಳನ್ನು ಹುಟ್ಟಿಹಾಕಿವೆ.
‘ಆರೋಪಿಯೊಂದಿಗೆ ಹಣ ಮತ್ತಿತರ ಆಮಿಷಕ್ಕೆ ಶಾಮೀಲಾಗಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನ್ಯಾಯಾಲಯಕ್ಕೆ ದಾರಿ ತಪ್ಪಿಸಿ ವಂಚಿಸುವ ಉದ್ದೇಶವಿಲ್ಲ. ಮಿಮ್ಸ್‌ಗೆ ಧಕ್ಕೆ ತರುವ ಕರ್ತವ್ಯಲೋಪ ಮಾಡಿಲ್ಲ’ ಎಂಬುದನ್ನೂ ಪತ್ರದಲ್ಲಿ ಶಿವಕುಮಾರ್ ತಿಳಿಸಿದ್ದಾರೆ.
‘ಕಾಯಿಲೆಯ ನಾಟಕ; ತನಿಖೆಗೆ ಆಗ್ರಹ’
‘10 ದಿನಗಳ ಹಿಂದೆ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದ ಆರೋಪಿ, ದಿಢೀರನೇ ಬೆನ್ನುನೋವಿನ ಗಂಭೀರ ಸಮಸ್ಯೆಗೆ ತುತ್ತಾಗಿದ್ದು ಹೇಗೆ? ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಆರೋಪಿಯ ಬಗ್ಗೆ ನ್ಯಾಯಾಧೀಶರು ಪ್ರಶ್ನೆ ಮಾಡಿದ ದಿನವೇ (ಆ.24) ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಕಾರಾಗೃಹಕ್ಕೆ ಕಳುಹಿಸಿದ್ದು ಏಕೆ? ಕಾರಾಗೃಹದಲ್ಲಿರುವುದನ್ನು ತಪ್ಪಿಸಿಕೊಳ್ಳಲು ಆರೋಪಿ ಕಾಯಿಲೆಯ ನಾಟಕ ಮಾಡಿದ್ದಾನೆ ಅನಿಸುತ್ತದೆ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ ಆಗ್ರಹಿಸಿದ್ದಾರೆ.
ಚುಚ್ಚುಮದ್ದಿಗೆ ಆರೋಪಿ ಒಪ್ಪಲಿಲ್ಲ!
‘ಹುಸೇನ್ ಅವರಿಗೆ ಎಡಭಾಗದ ಸಯಾಟಿಕಾ ಹಾಗೂ ಎಲ್–4 ಮತ್ತು ಎಲ್–5 ಮಟ್ಟದಲ್ಲಿ ‘ಐವಿಡಿಪಿ’ ಇರುವುದು (ಸಾಮಾನ್ಯ ಭಾಷೆಯಲ್ಲಿ ‘ಸ್ಲಿಪ್ ಡಿಕ್ಸ್’) ದೃಢಪಟ್ಟಿತ್ತು. ಅವರಿಗೆ ಶಸ್ತ್ರಚಿಕಿತ್ಸೆ ರಹಿತ ಚಿಕಿತ್ಸೆಯನ್ನು ನೀಡಲಾಗಿದೆ. ರೋಗಲಕ್ಷಣ ಕಡಿಮೆಯಾಗದಿದ್ದರೆ ಬೆನ್ನುಮೂಳೆಯ ನರಗಳ ಸುತ್ತಲಿನ ಉರಿಯೂತದ ಜಾಗಕ್ಕೆ ಇಂಜೆಕ್ಷನ್ ಪಡೆಯಲು ಸಲಹೆ ನೀಡಲಾಗಿತ್ತು. ರೋಗಲಕ್ಷಣ ಕಡಿಮೆಯಾಗಿದ್ದರಿಂದ ಈ ಚಿಕಿತ್ಸೆ ಪಡೆಯಲು ಆರೋಪಿ ಒಪ್ಪಲಿಲ್ಲ. ನಂತರ ಆ.24ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು’ ಎಂದು ಮಿಮ್ಸ್ ವೈದ್ಯಕೀಯ ಅಧೀಕ್ಷಕ ಶಿವಕುಮಾರ್ ಅವರು ಮಿಮ್ಸ್ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-40-638419591