ಕಸ್ತೂರಿ ರಂಗನ್ ವರದಿ: ರೈತರ ಪರವಾಗಿ ನಿರ್ಧಾರ; ಸಿಎಂ ಡಿ.ಕೆ.ಶಿವಕುಮಾರ್

ಕಸ್ತೂರಿ ರಂಗನ್ ವರದಿ: ರೈತರ ಪರವಾಗಿ ನಿರ್ಧಾರ; ಸಿಎಂ ಡಿ.ಕೆ.ಶಿವಕುಮಾರ್

ಕಸ್ತೂರಿ ರಂಗನ್ ವರದಿ: ರೈತರ ಪರವಾಗಿ ನಿರ್ಧಾರ; ಸಿಎಂ ಡಿ.ಕೆ.ಶಿವಕುಮಾರ್

ಚಿಕ್ಕಮಗಳೂರು: ‘ಹೊಸ ಒತ್ತುವರಿ ಮಾಡಬೇಡಿ. ಇದುವರೆಗೆ ಸಾಗುವಳಿ ಮಾಡಿರುವ ಭೂಮಿ ಕಾಪಾಡಿಕೊಳ್ಳಿ. ನಿಮಗೆ ರಕ್ಷಣೆ ಕೊಡುವ ಕೆಲಸವನ್ನು ನಾವು ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಲೆನಾಡಿನ ರೈತರಿಗೆ ಅಭಯ ನೀಡಿದರು.

ಕಸ್ತೂರಿ ರಂಗನ್ ವರದಿ ಕುರಿತು ಬಾಳೆಹೊನ್ನೂರಿನ ಕಲಾರಂಗ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ರೈತರಿಗೆ ತೊಂದರೆ ಕೊಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದೇನೆ. ಕಾನೂನಿನ ಅಡಿಯಲ್ಲಿ ರೈತರಿಗೆ ರಕ್ಷಣೆ ಕೊಡುವ ಕೆಲಸ ಆಗಲಿದೆ’ ಎಂದರು.

ಉಳುವವನಿಗೇ ಭೂಮಿಯ ಒಡೆತನ ಕೊಡಬೇಕು ಎಂಬ ಲಕ್ಷಾಂತರ ಅರ್ಜಿಗಳಿವೆ. ಯಾವ ಅರ್ಜಿ ಉಳಿದಿವೆ, ತೊಡಕು ಏನು ಎಂದು ತೀರ್ಮಾನ ಮಾಡಿ ಎಲ್ಲ ಅರ್ಜಿ ವಿಲೇವಾರಿಗೆ ಸಮಗ್ರ ಆದೇಶ ಹೊರಡಿಸಲಾಗುವುದು. ಕಾಫಿ ಭೂಮಿ ಗುತ್ತಿಗೆ ವಿಷಯ ಸೇರಿ ಮಲೆನಾಡಿನ ರೈತರ ಸಮಸ್ಯೆಗಳು ಸರ್ಕಾರದ ಗಮನದಲ್ಲಿವೆ. ಎಲ್ಲವನ್ನೂ ಬಗೆಹರಿಸಲಾಗುವುದು ಎಂದು ಹೇಳಿದರು.

‘ಕಸ್ತೂರಿ ರಂಗನ್ ವರದಿ ವಿಷಯದಲ್ಲಿ ಅನುಮಾನ ಬೇಡ. ಕೇಂದ್ರ ಸರ್ಕಾರ ಹೊರಡಿಸಿರುವ ಪರಿಸರ ಸೂಕ್ಷ್ಮ ಪ್ರದೇಶ(ಇಎಸ್‌ಎ) ಕರಡು ಆದೇಶದ ವಿಷಯದಲ್ಲಿ ಖಂಡಿತವಾಗಿ ನಿಮ್ಮ ಪರವಾಗಿ ನಿಲ್ಲುತ್ತೇನೆ. ಅದಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಲಾಗಿದ್ದು, ನಿಮ್ಮ ಬಳಿಗೇ ಬಂದು ನಿಮ್ಮ ಅಹವಾಲು ಆಲಿಸುತ್ತಿದ್ದೇನೆ. ಅಧಿವೇಶನದಲ್ಲಿ ನಿಮ್ಮ ಸಮಸ್ಯೆಗಳನ್ನು ವಿವರಿಸಿ ನಿಮ್ಮ ಪರವಾಗಿಯೇ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ಬಗರ್ ಹುಕುಂ ಸಾಗುವಳಿ ದೊಡ್ಡ ಸಂಖ್ಯೆಯಲ್ಲಿದೆ. ಸಕ್ರಮಗೊಳಿಸಲು ಶಾಸಕರ ಅಧ್ಯಕ್ಷತೆ ಸಮಿತಿಗಳು ಇನ್ನೂ ಹೆಚ್ಚಿನ ಸಭೆಗಳನ್ನು ನಡೆಸಲು ಸೂಚನೆ ನೀಡಲಾಗುವುದು ಎಂದರು.

‘ವಿಧಾನಸೌಧಕ್ಕೆ ಬರಲು ನಿಮಗೆ ಕಷ್ಟವಾಗಬಹುದು. ಸರ್ಕಾರವೇ ನಿಮ್ಮ ಬಳಿಗೆ ಬಂದು ಅಹವಾಲು ಕೇಳಿದೆ. ಪ್ರಜಾಸೇವೆ ಎಂಬ ಪ್ರತ್ಯೇಕ ಇಲಾಖೆಯನ್ನೇ ತೆರೆದಿದ್ದೇವೆ. ತಿಂಗಳಲ್ಲಿ ಎರಡು ದಿನ ಎರಡು ಕ್ಷೇತ್ರಗಳಲ್ಲಿ ಪ್ರವಾಸ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಆದೇಶ ಕೊಟ್ಟಿದ್ದೇವೆ’ ಎಂದು ಹೇಳಿದರು.

‘ಮಲೆನಾಡಿನಲ್ಲೇ ಹೆಚ್ಚಿನದಾಗಿ ಬರ ಪರಿಸ್ಥಿತಿ ಇದೆ. ಕಿಗ್ಗಾ ಋಷ್ಯಶೃಂಗೇಶ್ವರ ದೇಗುಲದಲ್ಲಿ ಮಳೆಗಾಗಿ ಹೋಮ ನಡೆಸಲು ಶಾಸಕ ರಾಜೇಗೌಡ ಅವರಿಗೆ ತಿಳಿಸಿದ್ದೆ, ಅವರು ಮಾಡಿದ್ದಾರೆ. ನಾನೂ ಅಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವೆ’ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಕುದುರೆಮುಖ ರಾಷ್ಟ್ರೀಯ ಉದ್ಯಾನ ಘೋಷಣೆ ಮುಂಚೆ ನೀಡಿದ ಭರವಸೆ ಈಡೇರಿಸಿಲ್ಲ. ತುಂಗಾ, ಭದ್ರಾ ಮೇಲ್ದಂಡೆ ಯೋಜನೆಗೆ ಮಲೆನಾಡಿನ ಜನರು ಭೂಮಿ ಕಳೆದುಕೊಂಡಿದ್ದು, ಇದುವರೆಗೆ ಪರಿಹಾರ ಸಿಕ್ಕಿಲ್ಲ. ಸೆಕ್ಷನ್-4, ಜಿಲ್ಲಾಧಿಕಾರಿ ಮೀಸಲು ಅರಣ್ಯದಿಂದ ಜನ ನಿತ್ಯ ಸಂಕಟ ಅನುಭವಿಸುವಂತಾಗಿದೆ ಎಂದರು.

ನಮೂನೆ 50, 57 ಹಾಗೂ 94 –ಸಿ, 94 –ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಲಕ್ಷಾಂತರ ಜನರು ಭೂಒಡೆತನಕ್ಕೆ ಕಾಯುತ್ತಿದ್ದಾರೆ. ಕಾಫಿ ಬೆಳೆಗಾರರರಿಗೆ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡಲು ಸಾಧ್ಯವಾಗುತ್ತಿಲ್ಲ. ಹಲವು ಅರಣ್ಯ ಕಾಯ್ದೆಗಳ ಜತೆಗೆ ಕಸ್ತೂರಿ ರಂಗನ್ ವರದಿ ಜಾರಿ ಮಾಡಲು ಸಿದ್ಧತೆ ನಡೆದಿದೆ. ಇದರಿಂದ ಮಲೆನಾಡಿನ ಜನ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದರು.

ಶಾಸಕಿ ನಯಾನ ಮೋಟಮ್ಮ ಮಾತನಾಡಿ, ಭದ್ರಾ ಹುಲಿ ಸಂರಕ್ಷಿತ ಪ್ರದೇಶ, ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೆ ಭೂಮಿ ಕಳೆದುಕೊಂಡವರಿಗೆ ಈಗಲೂ ಪರ್ಯಾಯ ಭೂಮಿ ನೀಡಿಲ್ಲ. ಮಾನವ-ಪ್ರಾಣಿ ಸಂಘರ್ಷ ಜನರ ನೆಮ್ಮದಿ ಕೆಡುವಂತೆ ಮಾಡಿದೆ ಎಂದರು.

ಜೆಡಿಎಸ್ ಮುಖಂಡ ಸುಧಾಕರಶೆಟ್ಟಿ ಮಾತನಾಡಿ, ‘ಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕುದುರೆಮುಖ ಯೋಜನೆಗೆ ಭೂಮಿ ನೀಡಿದ ರೈತರು ಬೀದಿ ಪಾಲಾಗಿದ್ದಾರೆ. ಅವರಿಗೆ ಇಂದಿನ ದರದಲ್ಲಿ ಪರಿಹಾರ ನೀಡಬೇಕು. ಡೀಮ್ಡ್ ಅರಣ್ಯ ಸಮಸ್ಯೆಯಿಂದ ಸಾಮಾನ್ಯ ಜನರು ಮನೆಕಟ್ಟಲು ಸಾಧ್ಯವಾಗದ ಪರಿಸ್ಥಿತಿ ಇದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಶಾಸಕರಾದ ಜಿ.ಎಚ್.ಶ್ರೀನಿವಾಸ್, ಎಚ್.ಡಿ.ತಮ್ಮಯ್ಯ, ಕೆ.ಎಸ್.ಆನಂದ್, ವಿಧಾನ ಪರಿಷತ್ ಸದಸ್ಯರಾದ ಗಾಯತ್ರಿ ಶಾಂತೇಗೌಡ, ಅರತಿ ಕೃಷ್ಣ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಭದ್ರಾ ಕಾಡ ಅಧ್ಯಕ್ಷ ಕೆ.ಪಿ.ಅಂಶುಮಂತ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಶಿವಾನಂದಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಭಾಗವಹಿಸಿದ್ದರು.

ಎರಡು ದಿನಗಳಲ್ಲಿ ಹೊಸ ಬರಪಟ್ಟಿ

ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಹೆಚ್ಚಾಗುತ್ತಿದೆ. ಕಸ್ತೂರಿ ರಂಗನ್ ವರದಿ ಕುರಿತು ನಡೆಯುತ್ತಿರುವ ವಿಶೇಷ ಅಧಿವೇಶನದ ಬಳಿಕ ಬರಗಾಲದ ಸ್ಥಿತಿಯ ಬಗ್ಗೆಯೂ ವಿಶೇಷ ಅಧಿವೇಶನ ನಡೆಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಬರಪೀಡಿತ ತಾಲ್ಲೂಕು ಘೋಷಣೆಗೆ 21 ದಿನ ನಿರಂತರ ಮಳೆ ಕೊರತೆ ಆಗಿರಬೇಕು ಎಂಬ ನಿಯಮ ಇದೆ. ಬರ ಪರಿಸ್ಥಿತಿ ಬಗ್ಗೆ ಬೆಳೆಗಳ ಪರಿಸ್ಥಿತಿ ಬಗ್ಗೆ ವಾಸ್ತವ ತಿಳಿಯಲು ಸರ್ವೆ ನಡೆಯುತ್ತಿದೆ. ಎರಡು–ಮೂರು ದಿನಗಳಲ್ಲಿ ಬೇರೆ ತಾಲ್ಲೂಕುಗಳು ಬರಪಟ್ಟಿ ಸೇರಲಿವೆ ಎಂದು ಹೇಳಿದರು.

ಸ್ತೂರಿ ರಂಗನ್ ವರದಿ: ಒಕ್ಕೊರಲ ವಿರೋಧ

ಕಸ್ತೂರಿ ರಂಗನ್ ವರದಿ ವಿರುದ್ಧ ಎಲ್ಲ ಪಕ್ಷಗಳ ಮುಖಂಡರು, ಸಂಘಟನೆಗಳ ಮುಖಂಡರು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದರು.

ಶಾಸಕರಾದ ಟಿ.ಡಿ.ರಾಜೇಗೌಡ, ನಯನಾ ಮೋಟಮ್ಮ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜೆಡಿಎಸ್ ವಕ್ತಾರ ಸುಧಾಕರ ಶೆಟ್ಟಿ, ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೋಳ್ಳಿ, ಎಸ್.ವಿಜಯಕುಮಾರ್ ಅವರು ಮಾತನಾಡಿದರು.

ಕಸ್ತೂರಿ ರಂಗನ್ ವರದಿಯಿಂದ ರೈತರು ಆತಂಕದಲ್ಲಿ ಇದ್ದಾರೆ. ಜಿಲ್ಲೆಯಲ್ಲಿ 138 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಅಧಿಸೂಚನೆ ಮಾಡಿದ್ದಾರೆ. ಕುದುರೆಮುಖ ರಾಷ್ಟ್ರೀಯ ಅರಣ್ಯ, ಭದ್ರಾ ಹುಲಿ ಸಂರಕ್ಷಿತ ಪ್ರದೇಶ, ಸೋಮೇಶ್ವರ ಹಾಗೂ ಶೆಟ್ಟಿಹಳ್ಳಿ ಅಭಯಾರಣ್ಯ ಮಾಡಲಾಗಿದೆ. ಇದರಿಂದ ಅನೇಕರನ್ನು ಪುನರ್ ವಸತಿ ಮಾಡುವಾಗ ಸರಿಯಾಗಿ ಪರಿಹಾರ ನೀಡಿಲ್ಲ. ಈ ಮಧ್ಯೆ ವರದಿ ಜಾರಿಯಾದರೆ ಪರಿಸ್ಥಿತಿ ಏನು ಎಂಬ ಆತಂಕ ಮೂಡಿಸಿದೆ ಎಂದರು.

ಮಲೆನಾಡು ಕರಾವಳಿ ಭಾಗವನ್ನು ವಿಶೇಷ ಕೃಷಿ ವಲಯ ಎಂದು ಘೋಷಿಸಬೇಕು. ಈ ಭಾಗ ರಾಜ್ಯದ ಬಹುತೇಕ ನದಿಗಳ ಕೇಂದ್ರವಾಗಿದ್ದು, ಮೀಸಲು ಜಲ ಪ್ರಮಾಣ ಘೋಷಣೆ ಮಾಡಬೇಕು. ಈ ವರದಿ ಕೇವಲ ನಮ್ಮ ಜಮೀನು, ಮನೆ ಮಾತ್ರ ಸೇರಿಸಿ ಅಧಿಸೂಚನೆ ಹೊರಡಿಸಿಲ್ಲ. ನಮ್ಮ ರಸ್ತೆ, ಸಾರ್ವಜನಿಕ ಬಳಕೆಯ ಸರ್ಕಾರಿ ಕಟ್ಟಡಗಳನ್ನು ಸೇರಿಸಲಾಗಿದೆ. ಮುಖ್ಯಮಂತ್ರಿಗಳು ಸಂಸದರನ್ನು ಸೇರಿಸಿ ಸರ್ವಪಕ್ಷ ನಾಯಕರ ಸಭೆ ಮಾಡುತ್ತಿದ್ದು, ಇದೇ ರೀತಿ, ಸಂಸದರು ಕೇಂದ್ರ ಅರಣ್ಯ ಸಚಿವರ ಸಮ್ಮುಖದಲ್ಲಿ ಎಲ್ಲ ಪಕ್ಷಗಳ ನಾಯಕರನ್ನು ಕರೆದು ಸಭೆ ನಡೆಸಬೇಕು ಎಂದು ಸುಧೀರ್ ಕುಮಾರ್ ಮುರೊಳ್ಳಿ ಆಗ್ರಹಿಸಿದರು.

‘ಆತಂಕಪಡುವ ಅಗತ್ಯವಿಲ್ಲ’

‘ಕಸ್ತೂರಿ ರಂಗನ್ ವರದಿಯಲ್ಲಿ ಸ್ಪಷ್ಟತೆ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ. ಸರ್ಕಾರ ಜನರ ಪರವಾಗಿದ್ದು, ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯ ಇಲ್ಲ’ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ‘ಜನ ಹಾಗೂ ಜನಪ್ರನಿಗಳ ಅಭಿಪ್ರಾಯ ಆಲಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಶೀಘ್ರವೇ ಮತ್ತೊಮ್ಮೆ ಜಿಲ್ಲೆಗೆ ಭೇಟಿ ನೀಡಿ ಬೇರೆ ಸಮಸ್ಯೆಗಳ ಬಗ್ಗೆ ಜನರ ಅಹವಾಲು ಆಲಿಸಿವೆ’ ಎಂದರು.

ಗುಟ್ಕಾ ನಿಷೇಧ ಆದೇಶ ಹಿಂಪಡೆಯಲು ಆಗ್ರಹ

‘ಗುಟ್ಕಾ ನಿಷೇಧ ಆದೇಶ ಹಿಂಪಡೆಯುವುದಾಗಿ ಹೇಳಿಕೆ ನೀಡಿದ್ದೀರಿ. ಆದರೆ, ಇನ್ನು ಆದೇಶ ಹೊರ ಬಿದ್ದಿಲ್ಲ. ಕೂಡಲೇ ಆದೇಶ ಹಿಂಪಡೆಯುವ ಮರು ಆದೇಶ ಹೊರಡಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು. ಆದೇಶದ ನಂತರ ₹62 ಸಾವಿರ ಇದ್ದ ಅಡಿಕೆ ದರ ₹42 ಸಾವಿರಕ್ಕೆ ಇಳಿದಿದೆ. ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಆದೇಶವನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದರು. ಕಸ್ತೂರಿ ರಂಗನ್ ವರದಿ ಸಂಬಂಧ ಕೇರಳದ ಉಮರ್ ಸಮಿತಿ ಮಾದರಿಯಲ್ಲಿ ರಾಜ್ಯದಲ್ಲಿಯೂ ಉತ್ಕೃಷ್ಟವಾದ ಸಮಿತಿಯನ್ನು ರಚಿಸಬೇಕು. 6 ತಿಂಗಳಲ್ಲಿ ವರದಿ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಿದರೆ ಒಟ್ಟಾಗಿ ಚರ್ಚೆ ನಡೆಸಬಹುದು ಎಂದರು.

260920-126-1044897606

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ