ಬಿಡುಗಡೆಯಾಗಿಲ್ಲ 15ನೇ ಹಣಕಾಸು ಆಯೋಗದ ಅನುದಾನ: ವಿದ್ಯುತ್ ಬಿಲ್‌ಗೂ ಹಣವಿಲ್ಲ
ಚಿಕ್ಕಮಗಳೂರು: ಒಂದೂವರೆ ವರ್ಷದಿಂದ 15ನೇ ಹಣಕಾಸು ಆಯೋಗದ ಅನುದಾನ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗದೆ ಗ್ರಾಮ ಪಂಚಾಯಿತಿಗಳ ನಿರ್ವಹಣೆಗೆ ಅಧಿಕಾರಿಗಳು ತಿಣು ಕಾಡುತ್ತಿದ್ದಾರೆ. ಬೀದಿ ದೀಪ ನಿರ್ವಹಣೆ, ಕುಡಿಯುವ ನೀರಿನ ಮೋಟರ್ ರಿಪೇರಿ, ವಿದ್ಯುತ್ ಬಿಲ್ ಪಾವತಿ ಸಾಧ್ಯವಾಗದೆ ಪರದಾಡುತ್ತಿದ್ದಾರೆ.
ರಾಜ್ಯದಲ್ಲಿ 5,949 ಗ್ರಾಮ ಪಂಚಾಯಿತಿಗಳಿದ್ದು, ಬಹುತೇಕ ಪಂಚಾಯಿತಿಗಳು ನಿರ್ವಹಣೆಗೆ 15ನೇ ಹಣಕಾಸು ಆಯೋಗದ ಅನುದಾನ ನಂಬಿಕೊಂಡಿವೆ. ನಗರಕ್ಕೆ ಹೊಂದಿಕೊಂಡಿರುವ ಮತ್ತು ಹೋಬಳಿ ಮಟ್ಟದಲ್ಲಿ ವರಮಾನ ಹೆಚ್ಚಾಗಿ ಸಂಗ್ರಹ ಮಾಡುತ್ತಿರುವ ಗ್ರಾಮ ಪಂಚಾಯಿತಿಗಳು ನಿರ್ವಹಣೆಗೆ ಸ್ವಾವಲಂಬಿಗಳಾಗಿದ್ದರೆ, ಶೇ 90ರಷ್ಟು ಪಂಚಾಯಿತಿಗಳು ಅನುದಾನವನ್ನೇ ನೆಚ್ಚಿಕೊಂಡಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 227 ಗ್ರಾಮ ಪಂಚಾಯಿತಿಗಳಿದ್ದು, ಬಹುತೇಕ ಪಂಚಾಯಿತಿಗಳು 15ನೇ ಹಣಕಾಸು ಆಯೋಗದ ಅನುದಾನದಿಂದಲೇ ನಡೆಯುತ್ತಿವೆ. ಆದರೆ, 2025ರ ಏಪ್ರಿಲ್‌ನಿಂದ ರಾಜ್ಯಕ್ಕೆ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಾಗಿಲ್ಲ.
ಬೀದಿ ದೀಪ ಮತ್ತು ಕುಡಿಯುವ ನೀರಿನ ಪಂಪ್ ಸೆಟ್‌ಗಳ ವಿದ್ಯುತ್ ಬಿಲ್ ಏಳೆಂಟು ತಿಂಗಳಿಂದ ಬಾಕಿ ಉಳಿಸಿಕೊಂಡಿವೆ. ಪ್ರತಿ ಗ್ರಾಮ ಪಂಚಾಯಿತಿಯ ವಿದ್ಯುತ್ ಬಿಲ್ ಲಕ್ಷಗಟ್ಟಲೆ ಬಾಕಿ ಇದೆ. ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಡಿತಗೊಳಿಸುವುದಾಗಿ ನೋಟಿಸ್ ಮೇಲೆ ನೋಟಸ್ ಜಾರಿಗೊಳಿಸುತ್ತಿದ್ದಾರೆ. ಸದ್ಯ ಗ್ರಾಮ ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳು ಕೂಡ ಇಲ್ಲವಾಗಿದ್ದು, ಪಂಚಾಯಿತಿ ಅಧಿಕಾರಿಗಳು ದಿಕ್ಕು ತೋಚದಾಗಿದ್ದಾರೆ.
15ನೇ ಹಣಕಾಸು ಆಯೋಗದ ಅನುದಾನ ಮತ್ತು ರಾಜ್ಯ ಸರ್ಕಾರ ನೀಡುತ್ತಿದ್ದ ಎಸ್ಕಾಂ ಅನುದಾನ ಒಟ್ಟುಗೂಡಿಸಿ ವಿದ್ಯುತ್ ಬಿಲ್ ಪಾವತಿಸಲಾಗುತ್ತಿತ್ತು. ಇತ್ತೀಚೆಗೆ ಎಸ್ಕಾಂ ಅನುದಾನ ಕೂಡ ಬಂದಿಲ್ಲ. ಆದ್ದರಿಂದ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ವಿದ್ಯುತ್ ಬಿಲ್ ಪಾವತಿಯಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೇಳುತ್ತಾರೆ.
‘ಬೀದಿ ದೀಪಗಳು ಕೆಟ್ಟರೆ ಸಕಾಲ ಯೋಜನೆ ಪ್ರಕಾರ ಮೂರು ದಿನಗಳಲ್ಲಿ ರಿಪೇರಿ ಮಾಡಿಸಬೇಕು. ಕಳೆದ ವರ್ಷ ರಿಪೇರಿ ಮಾಡಿರುವ ಬಿಲ್ ಇನ್ನೂ ಪಾವತಿಸಲು ಸಾಧ್ಯವಾಗಿಲ್ಲ. ರಿಪೇರಿ ಕೆಲಸಕ್ಕೆ ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಹಣ ಬರುವುದು ಖಾತ್ರಿ ಇಲ್ಲದ ಕಾರಣ ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಕುಡಿಯುವ ನೀರಿನ ಮೋಟರ್ ಕೆಟ್ಟರೆ ರಿಪೇರಿ ಮಾಡಿಸುವುದು ಹರಸಾಹಸದ ಕೆಲಸವಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಳಲು ತೋಡಿಕೊಳ್ಳುತ್ತಾರೆ.
ಸ್ಥಳೀಯವಾಗಿ ಸಂಗ್ರಹವಾಗುವ ವರಮಾನದಲ್ಲಿ ಶೇ 53ರಷ್ಟನ್ನು ಸರ್ಕಾರಕ್ಕೆ ಪಾವತಿಸಿ ಉಳಿದ ಶೇ 47ರಷ್ಟು ಹಣದಲ್ಲಿ ಹೊರ ಗುತ್ತಿಗೆ ನೌಕರರಿಗೆ ವೇತನ ಪಾವತಿಸಿ ಕಚೇರಿ ನಿರ್ವಹಣೆ ಮಾಡಿಕೊಳ್ಳಬೇಕು. ಕಚೇರಿಗಳಲ್ಲಿ ಕಂಪ್ಯೂಟರ್ ಕೆಟ್ಟರೆ ರಿಪೇರಿ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಕನಿಷ್ಠ ಆ್ಯಂಟಿ ವೈರಸ್ ಇನ್‌ಸ್ಟಾಲ್ ಮಾಡಿಸಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ. ಗ್ರಾಮ ಸಭೆ ನಡೆದರೆ, ಕಚೇರಿಗೆ ಯಾರಾದರೂ ಬಂದರೆ ಕಾಫಿ–ಟಿ ತರಿಸಿಕೊಡಲು ಹಣ ಇಲ್ಲದಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
‘ಮಳೆ ಕೊರತೆಯಿಂದ ರಾಜ್ಯದ ಬಹುತೇಕ ಕಡೆ ಬರಗಾಲದ ಸ್ಥಿತಿ ಇದೆ. ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ವರ್ಷ ಕುಡಿಯುವ ನೀರಿನ ನಿರ್ವಹಣೆ ಹೇಗೆ ಮಾಡುವುದು ಎಂಬುದೇ ಚಿಂತೆಯಾಗಿದೆ’ ಎಂದು ಅವರು ಹೇಳಿದರು.
ಅನುದಾನ ಬಾರದಿರಲು ಕಾರಣ ಏನು?
ಈ ಹಿಂದೆ ಕೇಂದ್ರದಿಂದ ನೀಡಿದ ಅನುದಾನವನ್ನು ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡಲು ಮಾಡಿದ ವಿಳಂಬ ಮತ್ತು ದಂಡದ ಬಡ್ಡಿ ಪಾವತಿಸದಿರುವುದು, ಪಂಚಾಯಿತಿಗಳಿಗೆ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸದಿರುವುದೇ 15ನೇ ಹಣಕಾಸು ಆಯೋಗದ ಅನುದಾನ ತಡೆಗೆ ಕಾರಣ ಎಂದು ಕೇಂದ್ರ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ.
15ನೇ ಹಣಕಾಸು ಆಯೋಗದ ಅನುದಾನ ಬಾರದಿರಲು ಕಾರಣ ಏನು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರ ಒದಗಿಸಿರುವ ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್, ‘ಕರ್ನಾಟಕದ ಗ್ರಾಮ ಪಂಚಾಯಿತಿಗಳಿಗೆ 2025–26ರ 15ನೇ ಹಣಕಾಸು ಆಯೋಗದ ಎರಡು ಕಂತುಗಳ ಅನುದಾನ ಬಿಡುಗಡೆ ಮಾಡಿಲ್ಲ. ಅದಕ್ಕೆ ಕಾರಣ ಏನೆಂದರೆ ಗ್ರಾಮ ಪಂಚಾಯಿತಿಗಳಿಗೆ ಸಮಯಕ್ಕೆ ಸರಿಯಾಗಿ ಹಾಗೂ ಸಂಪೂರ್ಣವಾಗಿ ಹಣ ವರ್ಗಾಯಿಸಿರುವ ಬಗ್ಗೆ ಸಲ್ಲಿಸಿರುವ ದಾಖಲೆಗಳಲ್ಲಿ ಕೆಲ ವ್ಯತ್ಯಾಸ ಕಂಡುಬಂದಿವೆ. ಅಲ್ಲದೆ, ಪಂಚಾಯಿತಿಗಳಿಗೆ ಅನುದಾನ ವರ್ಗಾವಣೆ ವಿಳಂಬ ಮಾಡಲಾಗಿದೆ. ವಿಳಂಬವಾಗಿದ್ದಕ್ಕೆ ರಾಜ್ಯ ಸರ್ಕಾರವು ಪಾವತಿಸಬೇಕಾದ ದಂಡದ ಬಡ್ಡಿ ಬಿಡುಗಡೆ ಮಾಡಿಲ್ಲ. ಇದು ಕೂಡ ಅನುದಾನ ತಡೆ ಹಿಡಿಯಲು ಕಾರಣ’ ಎಂದು ಹೇಳಿದ್ದಾರೆ. ‘2021ರ 15ನೇ ಹಣಕಾಸು ಆಯೋಗದ ಮಾರ್ಗಸೂಚಿ ಪ್ರಕಾರ, ಜನಪ್ರತಿನಿಧಿಗಳ ಸಹಿತ ಅಸ್ತಿತ್ವದಲ್ಲಿದ್ದರೆ ಮಾತ್ರ ಗ್ರಾಮ ಸ್ಥಳೀಯ ಸಂಸ್ಥೆಗಳು ಅನುದಾನ ಪಡೆಯಲು ಅರ್ಹವಾಗುತ್ತವೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆ 2021ರಿಂದ ಬಾಕಿ ಇದೆ. ಆದ್ದರಿಂದಲೂ ಅನುದಾನ ಪಡೆಯಲು ಅರ್ಹವಾಗಿಲ್ಲ’ ಎಂದು ವಿವರಿಸಿದ್ದಾರೆ.