
ಭದ್ರಾ ನಾಲೆ ಹಾಳು ಮಾಡಿದರೆ ಕಾನೂನು ಕ್ರಮ: ಸಚಿವ ಟಿ.ರಘುಮೂರ್ತಿ ಎಚ್ಚರಿಕೆ
ಹೊಳಲ್ಕೆರೆ: ಕೆಲವು ಕಡೆ ಭದ್ರಾ ನಾಲೆಗೆ ಹಾನಿ ಉಂಟುಮಾಡಿರುವ ಘಟನೆಗಳು ನಡೆದಿದ್ದು, ಇಂತಹ ಕೃತ್ಯ ಎಸಗುವ ಕಿಡಿಗೇಡಿಗಳ ವಿರುದ್ಧ ನೀರಾವರಿ ಇಲಾಖೆಯ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಎಚ್ಚರಿಸಿದರು.
ಪಟ್ಟಣದ ಸಂವಿಧಾನ ಸೌಧದಲ್ಲಿ ಶನಿವಾರ ನಡೆದ ಪ್ರಜಾಸೇವಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘50–60 ವರ್ಷಗಳ ಹೋರಾಟದ ಫಲವಾಗಿ ಜಿಲ್ಲೆಗೆ ಭದ್ರಾ ನೀರು ಬಂದಿದೆ. ಈ ಯೋಜನೆ ಸಾಕಾರಗೊಳ್ಳಲು ಎಲ್ಲಾ ಪಕ್ಷಗಳ ಸರ್ಕಾರದ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಹೋರಾಟಗಾರರು, ರೈತ ಮುಖಂಡರು, ಪತ್ರಕರ್ತರ ಕೊಡುಗೆ ಇದೆ. ಜಿಲ್ಲೆಗೆ ಈಗಿನ್ನೂ ಭದ್ರೆ ಆಗಮಿಸಿದ್ದು, ಸಣ್ಣಪುಟ್ಟ ಸಮಸ್ಯೆಗಳು ಎದುರಾಗಿವೆ. ಆದರೆ ತೀವ್ರ ಬರಗಾಲದಿಂದ ತತ್ತರಿಸಿರುವ ರೈತರು ತಮಗೆ ನೀರು ಸಿಗುತ್ತದೋ ಇಲ್ಲವೋ ಎಂದು ಆತಂಕಗೊಂಡಿದ್ದಾರೆ. ನೀರಿಗಾಗಿ ಅಲ್ಲಲ್ಲಿ ರೈತರ ನಡುವೆಯೇ ಜಗಳಗಳಾಗುತ್ತಿವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 3 ಟಿಎಂಸಿ ಅಡಿ ನೀರು ಬಿಡಲು ಸೂಚನೆ ನೀಡಿದ್ದು, ಇದುವರೆಗೆ ಕೇವಲ 0.6 ಟಿಎಂಸಿ ಅಡಿ ನೀರು ಜಿಲ್ಲೆಗೆ ಬಂದಿದೆ. ಇನ್ನೂ 2.4 ಟಿಎಂಸಿ ಅಡಿ ನೀರು ಬಾಕಿ ಇದ್ದು, ನಿಗದಿಯಂತೆ ಎಲ್ಲಾ ಕೆರೆಗಳೂ ತುಂಬಲಿವೆ. ರೈತರು ಸಮಾಧಾನದಿಂದ ಇರಬೇಕು’ ಎಂದು ಕೋರಿದರು.
ಭದ್ರಾ ಮೇಲ್ದಂಡೆ ಯೋಜನೆಯಿಂದ ನಾಲ್ಕು ಜಿಲ್ಲೆಗಳ 12 ತಾಲ್ಲೂಕುಗಳಿಗೆ 29.9 ಟಿಎಂಸಿ ಅಡಿ ನೀರು ಹಂಚಿಕೆ ಆಗಿದೆ. ಅದರಲ್ಲಿ ನಮ್ಮ ಜಿಲ್ಲೆಗೆ 19 ಟಿಎಂಸಿ ಅಡಿ ನೀರು ಹಂಚಿಕೆ ಆಗಿದೆ. ಈಗ ಪ್ರಯೋಗಾರ್ಥವಾಗಿ ನೀರು ಹರಿದಿದ್ದು, ಮುಂದೆ ಜಿಲ್ಲೆಗೆ ಸಮೃದ್ಧವಾಗಿ ಹರಿದು ಬರಲಿದೆ. ಕಾನೂನು ಪಾಲಿಸುವುದು ಎಲ್ಲರ ಕರ್ತವ್ಯ ಎಂದರು.
‘ತಾಲ್ಲೂಕಿನಲ್ಲಿ ಅಡಿಕೆ ಪ್ರಮುಖ ಬೆಳೆಯಾಗಿದ್ದು, ರೈತರು ಅಂತರ್ಜಲವನ್ನೇ ನಂಬಿ ಬದುಕಿದ್ದಾರೆ. ಆದರೆ ನಮ್ಮ ತಾಲ್ಲೂಕಿನ 11 ಕೆರೆಗಳು ಭದ್ರಾ ಮೇಲ್ದಂಡೆ ಯೋಜನೆಯಿಂದ ಬಿಟ್ಟು ಹೋಗಿದ್ದು, ಸೇರ್ಪಡೆ ಮಾಡಬೇಕಿದೆ. 3 ಟಿಎಂಸಿ ಅಡಿ ನೀರು ಬಿಡಲು ಸಿಎಂ ಸೂಚನೆ ನೀಡಿದ್ದರಿಂದ ಜಿಲ್ಲೆಯ ಎಲ್ಲಾ ರೈತರಿಗೆ ಸಂತಸವಾಗಿದೆ. ಆದರೆ ತೀವ್ರ ಬರದಿಂದ ತತ್ತರಿಸಿರುವ ರೈತರಿಗೆ ಇಷ್ಟು ನೀರು ಸಾಕಾಗುವುದಿಲ್ಲ’ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಖಾತೆ ಬದಲಾವಣೆ, ಪಿಂಚಣಿ, ಆಶ್ರಯ ಮನೆ ಮಂಜೂರಾತಿಗೆ ಸಂಬಂಧಿಸಿದಂತೆ ಒಟ್ಟು 78 ಅರ್ಜಿಗಳು ಸ್ವೀಕೃತವಾದವು.
ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ಜಿಲ್ಲಾಧಿಕಾರಿ ಎಸ್.ರಮ್ಯಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರ ಸ್ವಾಮಿ, ಎಸಿ ಕಾಂತರಾಜ್, ತಹಶೀಲ್ದಾರ್ ವಿಜಯ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಶಿವಣ್ಣ, ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ, ಹನುಮಲಿ ಷಣ್ಮುಖಪ್ಪ, ಕೆ.ಎಂ.ಹಾಲೇಶ್, ಕೆಡಿಪಿ ಸದಸ್ಯರಾದ ಪಾಡಿಗಟ್ಟೆ ಸುರೇಶ್, ಕಿರಣ್, ಪುಟ್ಟಸ್ವಾಮಿ, ಗಂಗಾಧರ್, ಡಿ.ಸಿ.ಮೋಹನ್, ಲೋಹಿತ್ ಕುಮಾರ್, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಹೊಳಲ್ಕೆರೆ ತಾಲ್ಲೂಕಿನ ಹೊರಕೆರೆ ದೇವರಪುರದ ನಿವಾಸಿಗಳು ತಮ್ಮ ಮನೆಗಳ ಇ-ಸ್ವತ್ತು ಪಡೆಯಲು 8 ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಸಮಸ್ಯೆ ಬಗೆಹರಿಯದೇ ಇರುವುದರಿಂದ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದರು.
‘ಗ್ರಾಮದ 200ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿರುವ ನಮ್ಮ ಜಾಗಕ್ಕೆ ಗ್ರಾಮ ಪಂಚಾಯಿತಿಯಲ್ಲಿ ಖಾತೆಗಳು ಇವೆ. ಈ ಜಾಗ ಸರ್ವೇ ನಂ.90 ಕ್ಕೆ ಸಂಬಂಧಿಸಿದ್ದು, ಇ–ಸ್ವತ್ತು ದಾಖಲೆಗಳ ಸಮಸ್ಯೆಯಿಂದಾಗಿ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಬೇಡಿಕೆ ಈಡೇರಿಲ್ಲ. ಈಗ ಮತ್ತೊಮ್ಮೆ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದ್ದು, ಸಮಸ್ಯೆ ಬಗೆಹರಿಸದಿದ್ದರೆ ಪಾದಯಾತ್ರೆ ನಡೆಸಲಾಗುವುದು’ ಎಂದು ಫಲಾನುಭವಿಗಳು ತಿಳಿಸಿದರು.