
ಗದುಗಿನ ಕಪ್ಪತ್ತಗುಡ್ಡದಲ್ಲಿ ಪ್ರವಾಸಿಗರಿಲ್ಲದೆ ಮೌನ
ಗದಗ: ಉತ್ತರ ಕರ್ನಾಟಕದ ‘ಸಹ್ಯಾದ್ರಿ’, ಜಿಲ್ಲೆಯ ಕಪ್ಪತ್ತಗುಡ್ಡವು ಪ್ರತಿ ವರ್ಷ ಮಳೆಗಾಲದಲ್ಲಿ ನೈಸರ್ಗಿಕ ಸೌಂದರ್ಯದಿಂದ ಕಂಗೊಳಿಸುತ್ತದೆ. ಮಳೆಯ ಸಿಂಚನ, ಮಂಜಿನ ಮಜ್ಜನ, ಹಸಿರ ಸೊಬಗಿನಿಂದ ಇಲ್ಲಿನ ಸ್ವರ್ಗಸದೃಶ ವಾತಾವರಣ ಮನಸೂರೆಗೊಳ್ಳುತ್ತದೆ.
ಸಮುದ್ರ ಮಟ್ಟದಿಂದ 2,700 ಅಡಿ ಎತ್ತರದಲ್ಲಿರುವ ಕಪ್ಪತ್ತಗುಡ್ಡವು ಮಂಜಿನ ಹೊದಿಕೆಯಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಚಾರಣಕ್ಕೆ ಪ್ರಶಸ್ತ ತಾಣವಾಗಿದೆ. ಹಾಗಾಗಿ, ಪ್ರತಿವರ್ಷ ಇಲ್ಲಿಗೆ ಭೇಟಿ ನೀಡುವವರು ಸಂಖ್ಯೆ ವೃದ್ಧಿಸುತ್ತಿತ್ತು. ಸುತ್ತಲಿನ ಜಿಲ್ಲೆಗಳು ಮಾತ್ರವಲ್ಲದೆ, ಬೆಂಗಳೂರಿನಿಂದಲೂ ಪ್ರವಾಸಿಗರು ಬರುತ್ತಿದ್ದರು. ಆದರೆ, ಈ ಬಾರಿ ಉಂಟಾಗಿರುವ ಮಳೆ ಕೊರತೆಯಿಂದ ಹೆಚ್ಚು ಪ್ರವಾಸಿಗರಿಲ್ಲದೇ ಕಪ್ಪತ್ತಗುಡ್ಡದಲ್ಲಿ ಮೌನ ಆವರಿಸಿದೆ.
ಮುಂಗಾರು ಮಳೆ ಸುರಿಯುವ ಜೂನ್ ತಿಂಗಳಿನಿಂದ ಹಿಡಿದು ಸೆಪ್ಟೆಂಬರ್ ತಿಂಗಳವರೆಗೆ ಹೆಚ್ಚು ಪ್ರವಾಸಿಗರು ಕಪ್ಪತ್ತಗುಡ್ಡಕ್ಕೆ ಭೇಟಿ ನೀಡುತ್ತಿದ್ದರು. ಪ್ರಕೃತಿಯ ಸೊಬಗು ಸವಿದು ಸಂತೃಪ್ತಿಯಿಂದ ತೆರಳುತ್ತಿದ್ದರು. ಹೆಚ್ಚಿನವರಿಗೆ ಇದು ಪ್ರತಿ ವಾರಾಂತ್ಯದ ನೆಚ್ಚಿನ ತಾಣವಾಗಿತ್ತು. ಆದರೆ, ಈ ವರ್ಷ ಹೆಚ್ಚಿನ ಮಂದಿ ಕಪ್ಪತ್ತಗುಡ್ಡಕ್ಕೆ ಭೇಟಿ ನೀಡಿಲ್ಲ. ಒಮ್ಮೆ ಬಂದ ಕೆಲವರು ಮತ್ತೆ ಬರುವ ಮನಸ್ಸು ಮಾಡಿಲ್ಲ.
ಮಂಜು ಕಡಿಮೆ: ‘ಮಳೆ ಸರ್ಮಪಕವಾಗಿ ಸುರಿದ ಕಾರಣ ಕಪ್ಪತ್ತಗುಡ್ಡದಲ್ಲಿ ಈ ಹಿಂದಿನ ವರ್ಷಗಳಲ್ಲಿ ಆವರಿಸಿದ್ದ ಮಂಜಿನಷ್ಟು ಈ ವರ್ಷ ಮಂಜು ಆವರಿಸಿಲ್ಲ. ಅಂತಹ ವಾತಾವರಣ ಇದ್ದರಷ್ಟೇ ಹೆಚ್ಚಿನ ಜನರು ಇಷ್ಟಪಟ್ಟು ಇಲ್ಲಿಗೆ ಬರುತ್ತಾರೆ. ಈಗೀಗ ಬೇಗನ ಬಿಸಿಲೇರುತ್ತದೆ. ಬಿಸಿಲಿನಲ್ಲಿ ಪ್ರಕೃತಿ ಅಷ್ಟು ಚೆನ್ನಾಗಿ ಕಾಣುವುದಿಲ್ಲ’ ಎಂದು ಸ್ಥಳೀಯ ರೈತರು ತಿಳಿಸಿದರು.
ಬತ್ತುತ್ತಿದೆ ನೀರಿನ ಸೆಲೆಗಳು: ‘ಮಳೆಯ ತೀವ್ರ ಕೊರತೆ ಕಾರಣ ಕಪ್ಪತ್ತಗುಡ್ಡದ ನೀರಿನ ಸೆಲೆಗಳು ಬತ್ತುವ ಹಂತ ತಲುಪಿವೆ. ಗುಡ್ಡದ ಮೇಲೆ ಬಿದ್ದ ನೀರು ವ್ಯರ್ಥವಾಗಿ ಹರಿಯುವುದನ್ನು ತಪ್ಪಿಸಲು 40ಕ್ಕೂ ಹೆಚ್ಚು ಕಡೆ ಬಾಂದಾರಗಳನ್ನು ನಿರ್ಮಿಸಲಾಗಿದೆ. ಸಾವಿರಾರು ಕಲ್ಲಿನ ಕಟ್ಟೆಗಳನ್ನು ನಿರ್ಮಿಸಲಾಗಿದೆ. ನೀರು ಇಂಗಿಸಿ, ಕಪ್ಪತ್ತಗುಡ್ಡವನ್ನು ಹಸಿರಾಗಿ ಉಳಿಸುವ ಕ್ರಮವಂತೂ ಆಗಿದೆ. ಆದರೆ, ಮಳೆಯೇ ಇಲ್ಲ’ ಎಂದು ಕಪ್ಪತ್ತಗುಡ್ಡ ತಪ್ಪಲಿನ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ತಿಳಿಸಿದರು.
‘ಮೂರು ತಿಂಗಳಿಂದ ಮಳೆ ಸಮರ್ಪಕವಾಗಿ ಆಗಿಲ್ಲ. ಇದರಿಂದ ಕಪ್ಪತ್ತಗುಡ್ಡದ ಸಸ್ಯ ಹಾಗೂ ಜೀವವೈವಿಧ್ಯಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ. ನಂದಿವೇರಿ ಮಠದ ಬಾವಿಗಳು, ಸಮೀಪದ ಬಂಗಾರದ ಹಳ್ಳ ಬತ್ತಿದೆ. ಮಳೆ ಕೊರತೆ ಹೀಗೇ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಕಪ್ಪತ್ತಗುಡ್ಡದಿಂದ ಹರಿಯುವ ನೀರು ಸುತ್ತಲಿನ ಹೊಲಗಳಿಗೆ ಜೀವಕಳೆ ತುಂಬುತ್ತಿತ್ತು. ಸುತ್ತಲಿನ ಕೆರೆ–ಕಟ್ಟೆಗಳಲ್ಲಿನ ನೀರಿನಿಂದ ಭೂಮಿ ತಂಪಾಗಿ, ಕಪ್ಪತ್ತಗುಡ್ಡವೂ ನಳನಳಿಸುತ್ತಿತ್ತು. ಮಳೆಯಂತೂ ಸಂಪೂರ್ಣ ಕೈಕೊಟ್ಟಿದೆ. ತುಂಗಭದ್ರಾ ಜಲಾಶಯದಿಂದ ಕಾಲುವೆ ಮೂಲಕ ನೀರು ಹರಿಸಿ, ಕೆರೆ–ಕಟ್ಟೆಗಳನ್ನು ತುಂಬಿಸುವ ಕಾರ್ಯವೂ ಸಮರ್ಪಕವಾಗಿ ಆಗುತ್ತಿಲ್ಲ. ಇದು ಇಡೀ ವಾತಾವರಣ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ’ ಎಂದು ಸ್ಥಳೀಯರು ತಿಳಿಸಿದರು.
ಹೊಂಡಗಳಿಗೆ ನೀರು ತುಂಬಿಸಲು ಕ್ರಮ
ಗದಗ ಜಿಲ್ಲೆಯು ಸಾಮಾನ್ಯವಾಗಿ ಒಣಭೂಮಿ ಪ್ರದೇಶ. ಕಪ್ಪತ್ತಗುಡ್ಡದಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಉಂಟಾಗಿಲ್ಲ. ಮಳೆ ಕೊರತೆ ಹೆಚ್ಚಾದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಆಗಬಹುದು. ಬೇಸಿಗೆಗೆ ಮುನ್ನ ಬಿಸಿಲ ಝಳ ಹೆಚ್ಚಬಹುದು ಹಾಗೂ ನೀರಿನ ಕೊರತೆಯೂ ಉಂಟಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ವನ್ಯಜೀವಿಗಳ ಸಂರಕ್ಷಣೆಗಾಗಿ ಕಪ್ಪತ್ತಗುಡ್ಡದಲ್ಲಿನ ಹೊಂಡಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗುವುದು.
–ಸಂತೋಷಕುಮಾರ್ ಕೆಂಚ್ಚಪ್ಪನವರ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಗದಗ
ಅರಣ್ಯ ಪರಿಸರ ವ್ಯವಸ್ಥೆಗೆ ತೀವ್ರ ಹಾನಿ
ಮಳೆಯ ಕೊರತೆಯು ಅರಣ್ಯ ಪರಿಸರ ವ್ಯವಸ್ಥೆಗೆ ತೀವ್ರ ಹಾನಿ ಉಂಟುಮಾಡುವುದು ಖಚಿತ. ಸಂಪೂರ್ಣ ಜೈವಿಕ ಮತ್ತು ಜಲವಿಜ್ಞಾನ ವ್ಯವಸ್ಥೆಗೆ ಅಡ್ಡಿಪಡಿಸುತ್ತದೆ. ಕಾಡುಗಳು ಉಳಿಯಲು ತೇವಾಂಶ ಅವಶ್ಯ. ಸದ್ಯ, ಉತ್ತರೆ ಮಳೆಯಾಗುತ್ತಿಲ್ಲ. ಈ ಅವಧಿಯಲ್ಲಿ ಬಿಸಿಲು ಹೆಚ್ಚು. ಇದು ಸಸ್ಯ ಸಂಕುಲ ಮತ್ತು ಪ್ರಾಣಿ ಸಂಕುಲಕ್ಕೆ ತೊಂದರೆ ಮಾಡಬಹುದು.
–ಮಂಜುನಾಥ ನಾಯಕ್, ಜೀವವೈವಿಧ್ಯ ಸಂಶೋಧಕ
35,620;ಪ್ರಸಕ್ತ ವರ್ಷ ಜೂನ್‌ನಿಂದ ಆಗಸ್ಟ್‌ವರೆಗೆ ಪ್ರವಾಸಿಗರ ಭೇಟಿ
38,563;2026ರ ಜೂನ್, ಜುಲೈ ತಿಂಗಳಲ್ಲಿ ಪ್ರವಾಸಿಗರ ಭೇಟಿ
ಈ ಭಾಗದ ಎಲ್ಲ ಕೆರೆ–ಕಟ್ಟೆಗಳಿಗೆ ನೀರು ತುಂಬಿಸಿ, ಜೀವ ಹಾಗೂ ಸಸ್ಯವೈವಿಧ್ಯ ಕಾಪಾಡಬೇಕು. ಕಪ್ಪತ್ತಗುಡ್ಡಕ್ಕೆ ತೊಂದರೆಯಾಗದಂತೆ ಸರ್ಕಾರ ತುರ್ತು ಕ್ರಮ ವಹಿಸಬೇಕು