
ಶಿಡ್ಲಘಟ್ಟ | ನಿಷೇಧದ ನಡುವೆಯೂ ಪಿಒಪಿ ಗಣೇಶ ಮೂರ್ತಿಗಳ ಮಾರಾಟ, ಬಳಕೆಯ ಆರೋಪ
ಶಿಡ್ಲಘಟ್ಟ: ಪರಿಸರಕ್ಕೆ ಹಾನಿಕಾರಕ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಹಾಗೂ ರಾಸಾಯನಿಕ ಬಣ್ಣ ಬಳಕೆಯ ಗಣೇಶ ಮೂರ್ತಿಗಳ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಾಲ್ಲೂಕು ಆಡಳಿತ ಸ್ಪಷ್ಟಪಡಿಸಿದ್ದರೂ, ನಗರದಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗಿರುವ ದೊಡ್ಡ ಗಾತ್ರದ ಗಣೇಶ ಮೂರ್ತಿಗಳ ಪೈಕಿ ಹಲವು ಪಿಒಪಿ ಮೂರ್ತಿಗಳೇ ಎಂಬ ಆರೋಪ ಕೇಳಿಬಂದಿದೆ.
ನಗರಸಭೆಯಿಂದ ಗಣೇಶ ಮೂರ್ತಿಗಳ ವಿಸರ್ಜನೆಗೆ ವೀರಪುರ ಗ್ರಾಮದ ಕಲ್ಯಾಣಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಗುಡಿಹಳ್ಳಿ ಕೆರೆಯಲ್ಲಿಯೂ ದೊಡ್ಡ ಗಾತ್ರದ ಗಣೇಶ ಮೂರ್ತಿಗಳ ವಿಸರ್ಜನೆ ನಡೆದಿದ್ದು, ಅವುಗಳ ಅವಶೇಷಗಳು ನೀರಿನಲ್ಲಿ ಕಂಡುಬರುತ್ತಿವೆ. ಗುಡಿಹಳ್ಳಿ ಕೆರೆಯ ಕೋಡಿ ಹರಿದಾಗ ಅದರ ನೀರು ಅಮ್ಮನಕೆರೆಗೆ ಸೇರುವುದರಿಂದ ಜಲಮೂಲಗಳ ಮಾಲಿನ್ಯದ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಗುಡಿಹಳ್ಳಿ ಕೆರೆಯಲ್ಲಿ ದೊಡ್ಡ ಗಾತ್ರದ ಪಿಒಪಿ ಗಣೇಶ ಮೂರ್ತಿಗಳ ಅವಶೇಷಗಳು ಕಂಡುಬರುತ್ತಿವೆ. ಪಿಒಪಿ ನೀರಿನಲ್ಲಿ ಸುಲಭವಾಗಿ ಕರಗದೆ ದೀರ್ಘಕಾಲ ಉಳಿಯುವುದರಿಂದ ಮೂರ್ತಿಗಳ ವಿಸರ್ಜನೆಯಿಂದ ಕೆರೆಯ ಪರಿಸರ ವ್ಯವಸ್ಥೆ ಹಾಗೂ ಜಲಚರಗಳ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಮೂರ್ತಿಗಳಿಗೆ ಬಳಸುವ ರಾಸಾಯನಿಕ ಬಣ್ಣಗಳಲ್ಲಿರುವ ಕೆಲವು ಅಂಶಗಳು ನೀರಿಗೆ ಸೇರಿದರೆ ಜಲಚರ ಹಾಗೂ ಪರಿಸರದ ಮೇಲೆ ಪರಿಣಾಮ ಬೀರುವ ಆತಂಕ ಇದೆ. ಮಾಲಿನ್ಯಕಾರಕ ಅಂಶಗಳು ಮಣ್ಣಿನೊಳಗೆ ಸೇರಿ ಅಂತರ್ಜಲದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ.
ತಾಲ್ಲೂಕಿನ ಬಹುತೇಕ ಕೆರೆಗಳು ಒಣಗಿರುವ ಸಂದರ್ಭದಲ್ಲಿ ಗುಡಿಹಳ್ಳಿ ಕೆರೆಯಲ್ಲಿ ಇನ್ನೂ ಸಾಕಷ್ಟು ನೀರು ಸಂಗ್ರಹವಾಗಿದೆ. ಎಚ್.ಎನ್. ವ್ಯಾಲಿ ಯೋಜನೆಯ ನೀರು ತಾಲ್ಲೂಕಿನಲ್ಲಿ ಮೊಟ್ಟಮೊದಲು ಬಂದಿರುವ ಕೆರೆಗಳಲ್ಲೊಂದಾಗಿರುವ ಗುಡಿಹಳ್ಳಿ ಕೆರೆ ಸುತ್ತಮುತ್ತಲಿನ ಕೊಳವೆಬಾವಿ ಹಾಗೂ ಕೆರೆ ಅಚ್ಚುಕಟ್ಟುದಾರರಿಗೆ ಪ್ರಮುಖ ಜಲಮೂಲವಾಗಿದೆ.
ವೀರಪುರ ಕುಂಟೆಯ ಒಂದು ಭಾಗದಲ್ಲಿ ನಗರಸಭೆಯಿಂದ ಜೆಸಿಬಿ ಮೂಲಕ ಆಳವಾದ ಹೊಂಡ ತೆಗೆಯಲಾಗಿದೆ. ಸಮೀಪದ ಶುದ್ಧ ನೀರಿನ ಘಟಕದ ತ್ಯಾಜ್ಯ ನೀರನ್ನು ಹೊಂಡಕ್ಕೆ ಹರಿಸಿ, ನಗರ ಪ್ರದೇಶದ 50 ಗಣೇಶ ಮೂರ್ತಿಗಳನ್ನು ಅದರಲ್ಲಿ ಇರಿಸಿ ಬಳಿಕ ಮಣ್ಣು ಮುಚ್ಚುವ ಉದ್ದೇಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ಪಿಒಪಿ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸುವ ಬದಲು ಮಣ್ಣಿನಲ್ಲಿ ಹೂಳುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಮೂರ್ತಿಗಳಲ್ಲಿರುವ ಪಿಒಪಿ ಹಾಗೂ ಬಣ್ಣಗಳ ಅಂಶಗಳು ಮಣ್ಣು ಮತ್ತು ಅಂತರ್ಜಲದ ಮೇಲೆ ಬೀರುವ ಪರಿಣಾಮದ ಕುರಿತು ವೈಜ್ಞಾನಿಕ ಪರಿಶೀಲನೆ ಅಗತ್ಯ ಎನ್ನುವುದು ಸಾರ್ವಜನಿಕರ ಒತ್ತಾಯ.
ಅದೇ ಕಲ್ಯಾಣಿಯ ಮತ್ತೊಂದು ಭಾಗದಲ್ಲಿ ಕಳೆದ ವರ್ಷದ ಪಿಒಪಿ ಗಣೇಶ ಮೂರ್ತಿಗಳ ಅವಶೇಷಗಳು ಉಳಿದಿದ್ದು, ಅವು ಪಳೆಯುಳಿಕೆಗಳಂತೆ ಕಾಣುತ್ತಿವೆ. ಅಲ್ಲಿನ ನೀರು ಕಪ್ಪು ಬಣ್ಣಕ್ಕೆ ತಿರುಗಿರುವುದೂ ಕಂಡುಬರುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗಣೇಶೋತ್ಸವ ಆರಂಭಕ್ಕೂ ಮುನ್ನ ಸೆಪ್ಟೆಂಬರ್ 2ರಂದು ನಗರದಲ್ಲಿನ ಗಣೇಶ ಮೂರ್ತಿಗಳ ಮಾರಾಟ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದ ತಹಶೀಲ್ದಾರ್ ಗಗನ ಸಿಂಧು ಹಾಗೂ ಪೌರಾಯುಕ್ತೆ ಅಮೃತ, ಪಿಒಪಿ ಮತ್ತು ರಾಸಾಯನಿಕ ಬಣ್ಣ ಬಳಸಿ ತಯಾರಿಸಿದ ಗಣೇಶ ಮೂರ್ತಿಗಳ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಘೋಷಿಸಿದ್ದರು.
ಪಿಒಪಿ ಹಾಗೂ ರಾಸಾಯನಿಕ ಬಣ್ಣಗಳಿಂದ ಜಲಚರಗಳು ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದರಿಂದ ನೈಸರ್ಗಿಕ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಬೇಕು ಎಂದು ಮನವಿ ಮಾಡಿದ್ದರು. ನಿಯಮ ಉಲ್ಲಂಘಿಸಿ ಪಿಒಪಿ ಅಥವಾ ರಾಸಾಯನಿಕ ಬಣ್ಣ ಬಳಿದ ಮೂರ್ತಿಗಳ ಮಾರಾಟ ಅಥವಾ ಬಳಕೆ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಿದ್ದರು.
ಆದರೆ ವಿಸರ್ಜನಾ ಸ್ಥಳಗಳಲ್ಲಿನ ಚಿತ್ರಣವು ನಿಷೇಧದ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಪ್ರಶ್ನೆ ಎತ್ತಿದೆ.
ನಿಯಮ ಅನುಷ್ಠಾನದಲ್ಲಿ ನಿರ್ಲಕ್ಷ್ಯ
‘ಪಿಒಪಿ ಗಣೇಶ ಮೂರ್ತಿಗಳ ಬಳಕೆ ಮತ್ತು ವಿಸರ್ಜನೆಗೆ ಸಂಬಂಧಿಸಿದಂತೆ ಸ್ಪಷ್ಟ ನಿಯಮಗಳಿದ್ದರೂ ಅವುಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ವಿಷಾದನೀಯ’ ಎಂದು ಜಯಂತಿ ಗ್ರಾಮ ನಾರಾಯಣಸ್ವಾಮಿ ಹೇಳಿದರು.
‘ಉಳಿದ ಕೆರೆಗಳಿಗೂ ಕೂಡಲೇ ಎಚ್.ಎನ್. ವ್ಯಾಲಿ ನೀರು ಹರಿಸಬೇಕು ಹಾಗೂ ನೀರಿನ ಮಾರ್ಗದಲ್ಲಿ ನಡೆಯುತ್ತಿರುವ ಅಕ್ರಮ ನೀರೆತ್ತುವಿಕೆಯನ್ನು ತಡೆಯಬೇಕು ಎಂದು ರೈತ ಸಂಘಟನೆಗಳು ಒಂದೆಡೆ ಹೋರಾಟ ನಡೆಸುತ್ತಿವೆ. ಮತ್ತೊಂದೆಡೆ ಅಂತರ್ಜಲ ಅಭಿವೃದ್ಧಿ ಹಾಗೂ ಕೆರೆಗಳ ಪುನಶ್ಚೇತನಕ್ಕಾಗಿ ಹರಿಸಲಾಗುತ್ತಿರುವ ನೀರನ್ನೇ ಪಿಒಪಿ ಮೂರ್ತಿ, ರಾಸಾಯನಿಕ ಬಣ್ಣಗಳಿಂದ ಕಲುಷಿತಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.
ಕಟ್ಟುನಿಟ್ಟಿನ ಕ್ರಮ ಅಗತ್ಯ
ರೈತಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ಅವರು, ‘ಪಿಒಪಿ ಗಣೇಶ ಮೂರ್ತಿಗಳ ವಿಸರ್ಜನೆಯಿಂದ ಕೆರೆಗಳ ನೀರಿನ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಜಲಮೂಲಗಳ ಸಂರಕ್ಷಣೆಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಕೆರೆಗಳು ಹಾಗೂ ಅವುಗಳಿಗೆ ಹರಿದುಬರುವ ನೀರಿನ ಮಾರ್ಗಗಳನ್ನು ಸಂರಕ್ಷಿಸುವುದು ಅಗತ್ಯ. ಪಿಒಪಿ ಮೂರ್ತಿಗಳನ್ನು ಇರಿಸಲು ಅನುಮತಿ ನೀಡಿರುವುದೇ ತಪ್ಪು, ಇನ್ನು ವಿಸರ್ಜನೆಗೆ ಪರ್ಯಾಯ ವೈಜ್ಞಾನಿಕ ವ್ಯವಸ್ಥೆ ಕಲ್ಪಿಸಿ, ಜಲಮೂಲಗಳಲ್ಲಿ ವಿಸರ್ಜನೆ ಮಾಡುವುದನ್ನು ತಡೆಯಬೇಕು. ಪಿಒಪಿ ಮೂರ್ತಿಗಳ ಬಳಕೆ ನಡೆದಿದ್ದರೆ ಅವುಗಳನ್ನು ನೀರಿಗೆ ಬಿಡುವುದಾಗಲಿ, ವೈಜ್ಞಾನಿಕ ಪರಿಶೀಲನೆ ಇಲ್ಲದೆ ಮಣ್ಣಿನಲ್ಲಿ ಹೂಳುವುದಾಗಲಿ ಮಾಡಬಾರದು. ಗುಡಿಹಳ್ಳಿ ಕೆರೆ ಸೇರಿದಂತೆ ಜಲಮೂಲಗಳ ನೀರು ಮತ್ತು ಮಣ್ಣಿನ ಗುಣಮಟ್ಟ ಪರೀಕ್ಷಿಸಿ, ಮಾಲಿನ್ಯದ ಪ್ರಮಾಣ ಹಾಗೂ ಅದರ ಪರಿಣಾಮವನ್ನು ವೈಜ್ಞಾನಿಕವಾಗಿ ಪರಿಶೀಲಿಸುವ ಅಗತ್ಯವಿದೆ ಎಂದರು.