
ವೇಮಗಲ್: ಗಗನಕ್ಕೇರಿದ ಈರುಳ್ಳಿ ದರ, ಗ್ರಾಹಕರಿಗೆ ಕಣ್ಣೀರು
ವೇಮಗಲ್: ದೈನಂದಿನ ಅಡುಗೆಯ ಅವಿಭಾಜ್ಯ ಅಂಗವಾಗಿರುವ ಈರುಳ್ಳಿ ದರ ಗಗನಕ್ಕೇರಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ.
ಕೆಲವು ದಿನಗಳ ಹಿಂದೆ ಪ್ರತಿ ಕೆ.ಜಿ.ಗೆ ಸುಮಾರು ₹40ರ ಆಸುಪಾಸಿನಲ್ಲಿದ್ದ ಗುಣಮಟ್ಟದ ದಪ್ಪ ಈರುಳ್ಳಿ ಬೆಲೆ ದಿಢೀರನೇ ₹70–₹75ರ ಗಡಿ ದಾಟಿದೆ. ಮಧ್ಯಮ ವರ್ಗದ ಸಂಸಾರಗಳ ಮಾಸಿಕ ಬಜೆಟ್ ಮೇಲೆ ಇದು ಭಾರೆ ಹೊಡೆತ ನೀಡಿದೆ. ದಿನಬಳಕೆ ತರಕಾರಿಗಳ ಪಟ್ಟಿಯಲ್ಲಿ ಈರುಳ್ಳಿ ಖರೀದಿ ಸವಾಲಾಗಿ ಪರಿಣಮಿಸಿದೆ ಎನ್ನುತ್ತಾರೆ ಗ್ರಾಹಕರು.
ಒಂದೆಡೆ ದಿನೇ ದಿನೇ ಅಡುಗೆ ಎಣ್ಣೆ ಬೆಲೆ ಏರುತ್ತಿದೆ. ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟುತ್ತಿರುವ ನಡುವೆಯೇ ಈರುಳ್ಳಿ ದರ ಏರಿಕೆಯಿಂದ ಹೋಟೆಲ್ ಮಾಲೀಕರು ಹಾಗೂ ಸಣ್ಣಪುಟ್ಟ ಬೀದಿಬದಿ ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ವೇಮಗಲ್ ಪಟ್ಟಣ ವ್ಯಾಪ್ತಿಯಲ್ಲಿ 40–50ಕ್ಕೂ ಹೆಚ್ಚು ತಳ್ಳುಗಾಡಿಗಳಲ್ಲಿ ಬೋಂಡಾ, ಸಮೋಸ, ಬಜ್ಜಿ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿಗಳಿದ್ದಾರೆ. ಜೊತೆಗೆ 30–40 ಉಪಹಾರ ಗೃಹಗಳು, ಟಿಫನ್ ಸೆಂಟರ್‌ಗಳು ಹಾಗೂ ಹೋಟೆಲ್‌ಗಳಿವೆ. ಸಂಜೆ ತಿನಿಸುಗಳಾದ ಬೋಂಡಾ, ಈರುಳ್ಳಿ ಬಜ್ಜಿ, ಸಮೋಸ ಹಾಗೂ ಪಲ್ಯಗಳಿಗೆ ಈರುಳ್ಳಿ ಪ್ರಮುಖ ಕಚ್ಚಾವಸ್ತು. ಆದರೆ, ಬೆಲೆ ದುಪ್ಪಟ್ಟಾಗಿರುವ ಕಾರಣ ಗ್ರಾಹಕರಿಗೆ ತಿಂಡಿಗಳ ಬೆಲೆ ಹೆಚ್ಚಿಸುವಂತೆಯೂ ಇಲ್ಲ. ಹಾಗೆಂದು ಕಡಿಮೆ ಬೆಲೆಗೆ ಮಾರಾಟ ಮಾಡಿದರೆ ಹಾಕಿದ ಅಸಲು ಕೂಡ ಕೈಸೇರದಂತಹ ಧರ್ಮಸಂಕಟಕ್ಕೆ ಸಿಲುಕಿದ್ದಾರೆ ವ್ಯಾಪಾರಿಗಳು.
ಪ್ಲೇಟ್‌ಗಳಲ್ಲಿ ಉಚಿತವಾಗಿ ಈರುಳ್ಳಿ ಹೆಚ್ಚಿ ಕೊಡುವುದನ್ನು ಹಲವು ಹೋಟೆಲ್‌ಗಳು ಈಗಾಗಲೇ ಕಡಿತಗೊಳಿಸಿವೆ.
ಶ್ರಾವಣ ಮಾಸ ಮುಕ್ತಾಯದ ಹಂತ ತಲುಪುತ್ತಿದ್ದು, ಶ್ರಾವಣ ಕಳೆಯುತ್ತಿದ್ದಂತೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೇಡಿಕೆ ಇನ್ನಷ್ಟು ದುಪ್ಪಟ್ಟಾಗುವ ಸಾಧ್ಯತೆ ಇದೆ. ಶ್ರಾವಣದ ವ್ರತ ಮುಗಿದ ಬಳಿಕ ಬಹುತೇಕ ಮಾಂಸಾಹಾರ ಪ್ರಿಯರ ಮನೆ ಹಾಗೂ ಮಾಂಸಾಹಾರಿ ಹೋಟೆಲ್‌ಗಳಲ್ಲಿ ಈರುಳ್ಳಿ ಬಳಕೆ ವ್ಯಾಪಕವಾಗಿ ಹೆಚ್ಚುತ್ತದೆ. ಮುಂಬರುವ ದಿನಗಳಲ್ಲಿ ಬೇಡಿಕೆ ಹೆಚ್ಚಾದರೆ, ಈರುಳ್ಳಿ ಬೆಲೆ ಮತ್ತಷ್ಟು ದುಬಾರಿಯಾಗಲಿದೆ ಎಂದು ವ್ಯಾಪಾರಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಈರುಳ್ಳಿಯನ್ನು ಪ್ರಮುಖ ಬೆಳೆಯಾಗಿ ಬೆಳೆಯುವುದು ವಿರಳ. ಕೋಲಾರ ಜಿಲ್ಲೆಯಲ್ಲಿ ಟೊಮೆಟೊ, ಹೂವು, ರೇಷ್ಮೆ ಹಾಗೂ ಮಾವು ಬೆಳೆಯಲಾಗುತ್ತದೆ. ಈ ಭಾಗದ ಮಣ್ಣು ಮತ್ತು ವಾತಾವರಣವು ಈರುಳ್ಳಿಗೆ ಅಷ್ಟಾಗಿ ಪೂರಕವಾಗಿಲ್ಲ. ಜಿಲ್ಲೆಯಲ್ಲಿ ನಿರಂತರವಾಗಿ ಕಾಡುವ ಅಂತರ್ಜಲ ಕೊರತೆ ಮತ್ತು ನೀರಿನ ಅಭಾವದಿಂದ ರೈತರು ಈರುಳ್ಳಿಯಂತಹ ನೀರಾವರಿ ಆಧಾರಿತ ವಾಣಿಜ್ಯ ಕಂದಮೂಲ ಬೆಳೆಗಳನ್ನು ಗಮನಹರಿಸುವುದಿಲ್ಲ.
ಬೆರಳೆಣಿಕೆಯಷ್ಟು ರೈತರು ಜಮೀನಿನ ಅಂಚಿನಲ್ಲಿ ಸ್ವಂತ ಬಳಕೆಗೆ ಮತ್ತು ಸಣ್ಣ ಪ್ರಮಾಣದ ಸ್ಥಳೀಯ ಮಾರುಕಟ್ಟೆಗಾಗಿ ಈರುಳ್ಳಿ ಬೆಳೆಯುತ್ತಾರೆ. ಇಡೀ ಕೋಲಾರ ಜಿಲ್ಲೆಯು ದಿನನಿತ್ಯದ ಈರುಳ್ಳಿ ಅಗತ್ಯಕ್ಕಾಗಿ ಉತ್ತರ ಕರ್ನಾಟಕದ ಮಾರುಕಟ್ಟೆ ಹಾಗೂ ಬೆಂಗಳೂರಿನ ಯಶವಂತಪುರ ಸಗಟು ಮಾರುಕಟ್ಟೆಯನ್ನೇ ಅವಲಂಬಿಸಿದೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಸಾಗಾಣಿಕೆ ವೆಚ್ಚ, ಕಮಿಷನ್ ಎಲ್ಲವೂ ಸೇರ್ಪಡೆಯಾಗುವುದರಿಂದ ಗ್ರಾಹಕರಿಗೆ ಸೇರುವಷ್ಟರಲ್ಲಿ ಈರುಳ್ಳಿ ಬೆಲೆ ಮತ್ತಷ್ಟು ದುಬಾರಿಯಾಗಲಿದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು.
ಪೂರೈಕೆ ಕೊರತೆಯಿಂದ ದುಬಾರಿ
ಈರುಳ್ಳಿ ಬೆಲೆಯ ಈ ಹಠಾತ್ ಏರಿಕೆಗೆ ಪೂರೈಕೆಯಲ್ಲಿನ ಕೊರತೆಯೇ ಮುಖ್ಯ ಕಾರಣ ಎನ್ನಲಾಗಿದೆ. ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಬೆಳಗಾವಿ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಈರುಳ್ಳಿಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತದೆ.
ಜತೆಗೆ, ಮಹಾರಾಷ್ಟ್ರದ ನಾಸಿಕ್ ಹಾಗೂ ಪುಣೆ ಮಾರುಕಟ್ಟೆಗಳಿಂದ ರಾಜ್ಯಕ್ಕೆ ಈರುಳ್ಳಿ ಭಾರಿ ಪ್ರಮಾಣದಲ್ಲಿ ಆವಕವಾಗುತ್ತದೆ. ಆದರೆ, ಈ ಬಾರಿ ಮುಂಗಾರು ಮಳೆ ಏರುಪೇರು, ಹಲವೆಡೆ ಮಳೆ ಕೈಕೊಟ್ಟಿದ್ದರಿಂದ ಬಿತ್ತನೆ ತೀವ್ರ ಕುಂಠಿತಗೊಂಡಿದೆ. ಅಲ್ಲದೆ, ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಅಕಾಲಿಕ ಹವಾಮಾನ ವೈಪರೀತ್ಯದಿಂದ ಈರುಳ್ಳಿ ಬೆಳೆ ಹಾನಿಗೊಳಗಾಗಿರುವುದು ಮಾರುಕಟ್ಟೆಗೆ ಬರುವ ಆವಕವನ್ನು ಗಣನೀಯವಾಗಿ ಕುಗ್ಗಿಸಿದೆ.
‘ಆವಕ ಹೆಚ್ಚಾದರಷ್ಟೇ ಬೆಲೆ ಇಳಿಕೆ’
ಬೆಂಗಳೂರಿನ ಯಶವಂತಪುರ ಸಗಟು ಮಾರುಕಟ್ಟೆಯಿಂದಲೇ ನಮಗೆ ಈರುಳ್ಳಿ ಆವಕವಾಗುತ್ತದೆ. ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದಿಂದ ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದಾಗಿ ಸಗಟು ದರ ಕೆ.ಜಿ.ಗೆ ₹50–₹65ರವರೆಗೆ ಏರಿಕೆಯಾಗಿದೆ. ಸಾಗಾಣಿಕೆ ವೆಚ್ಚ, ಹಮಾಲಿ ಹಾಗೂ ಹಾಳಾಗುವ ಈರುಳ್ಳಿ ನಷ್ಟವನ್ನೆಲ್ಲಾ ಲೆಕ್ಕ ಹಾಕಿದರೆ ನಾವು ಇಲ್ಲಿ ₹70–₹75ಕ್ಕೆ ಮಾರಾಟ ಮಾಡಿದರೂ ಕನಿಷ್ಠ ಲಾಭ ಸಿಗುತ್ತಿಲ್ಲ.
ಹಿಂದೆ ಎರಡು–ಮೂರು ಕೆ.ಜಿ ಒಯ್ಯುತ್ತಿದ್ದ ಗ್ರಾಹಕರು, ದರ ಏರಿಕೆಯಿಂದಾಗಿ ಅರ್ಧ ಕೆ.ಜಿ, ಒಂದು ಕೆ.ಜಿ ಖರೀದಿಸುತ್ತಿದ್ದಾರೆ. ವ್ಯಾಪಾರ ಸಂಪೂರ್ಣ ಕುಸಿದಿದ್ದು, ಹೊಸ ಬೆಳೆ ಬಂದು ಆವಕ ಹೆಚ್ಚಾಗುವವರೆಗೆ ದರ ಇಳಿಕೆಯಾಗುವ ಲಕ್ಷಣಗಳಿಲ್ಲ.
– ಅರುಣ್ ವಿಜಿ, ಈರುಳ್ಳಿ ಸಗಟು ವ್ಯಾಪಾರಿ, ವೇಮಗಲ್