
ಚೇಳೂರು-ಚಿಂತಾಮಣಿ ಮುಖ್ಯರಸ್ತೆಗೆ ಬಾಗಿವೆ ಒಣಗಿದ ಮರಗಳು
ಚೇಳೂರು: ಚೇಳೂರು- ಚಿಂತಾಮಣಿ ಸಂಪರ್ಕ ಕಲ್ಪಿಸುವ ರಸ್ತೆಯು ತಾಲ್ಲೂಕಿನ ಪ್ರಮುಖ ರಸ್ತೆಯಾಗಿದೆ. ವ್ಯಾಪಾರ, ಶಿಕ್ಷಣದ ಕಾರಣಕ್ಕೆ ಈ ರಸ್ತೆಯಲ್ಲಿ ಜನರು, ವಿದ್ಯಾರ್ಥಿಗಳ ಓಡಾಟ ಹೆಚ್ಚಿದೆ. ನಿತ್ಯ ದೊಡ್ಡ ಸಂಖ್ಯೆಯಲ್ಲಿಯೇ ಈ ರಸ್ತೆಯಲ್ಲಿ ಬಸ್‌ಗಳು, ಕಾರು, ದ್ವಿಚಕ್ರ ವಾಹನ ಸಂಚಾರವಿರುತ್ತದೆ.
ಆದರೆ ಇದೇ ರಸ್ತೆಯ ಚಿಲಕಲನೇರ್ಪು ಕೆರೆಕಟ್ಟೆ ಭಾಗದ ರಸ್ತೆ ನಿರ್ವಹಣೆಯಿಲ್ಲದೆ ಸಂಪೂರ್ಣ ಹದಗೆಟ್ಟಿದೆ. ಸವಾರರ ಪಾಲಿಗೆ ಅಸುರಕ್ಷಿತ ಮೃತ್ಯುಕೂಪವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಮುಳ್ಳಿನ ಗಿಡ, ದಟ್ಟ ಪೊದೆಗಳು ಹಾಗೂ ಒಣಗಿದ ಮರಗಳ ಕೊಂಬೆಗಳು ನೇರವಾಗಿ ರಸ್ತೆಯ ಮೇಲೆ ಬಾಗಿವೆ.
ಚಿಲಕಲನೇರ್ಪು ಗ್ರಾಮದಿಂದ ಕೆಂಚರ್ಲಹಳ್ಳಿ ವರೆಗಿನ ಸಂಪೂರ್ಣ ರಸ್ತೆಯು ಅವ್ಯವಸ್ಥೆಯಿಂದ ಕೂಡಿದೆ. ರಸ್ತೆಯ ಎರಡೂ ಬದಿಗಳಲ್ಲಿ ಅಡ್ಡಲಾಗಿ ಬೆಳೆದಿರುವ ಮುಳ್ಳಿನ ಗಿಡಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಒಣಗಿ ನಿಂತಿರುವ ಮತ್ತು ಅಪಾಯಕಾರಿ ಮಟ್ಟದಲ್ಲಿ ಬಾಗಿರುವ ಮರಗಳನ್ನು ತೆರವುಗೊಳಿಸಬೇಕು. ರಾತ್ರಿ ವೇಳೆ ಸಂಚರಿಸುವ ಸವಾರರಿಗೆ ಅನುಕೂಲವಾಗುವಂತೆ ರಸ್ತೆಯ ತಿರುವುಗಳಲ್ಲಿ ಸೂಕ್ತ ಸೂಚನಾ ಫಲಕಗಳನ್ನು ಅಳವಡಿಸಬೇಕು ಮತ್ತು ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಸಾರ್ವಜನಿಕರ ಆಗ್ರಹ ಇಂದಿಗೂ ಅಧಿಕಾರಿಗಳನ್ನು ಕೊಂಚವೂ ಅಲುಗಾಡಿಸಿಲ್ಲ.
ಈ ಕಾರಣದಿಂದ ಇಲ್ಲಿನ ಸಂಚಾರ ವಾಹನ ಸವಾರರಲ್ಲಿ ಭಯಕ್ಕೂ ಕಾರಣವಾಗುತ್ತಿದೆ. ಪ್ರತಿದಿನ ಈ ಮಾರ್ಗವಾಗಿ ಸಂಚರಿಸುವ ನೂರಾರು ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಪ್ರಯಾಣಿಸುತ್ತಿದ್ದಾರೆ.
ಚಿಲಕಲನೇರ್ಪು ಕೆರೆಕಟ್ಟೆ ರಸ್ತೆಯು ಅನೇಕ ಸೂಕ್ಷ್ಮ ತಿರುವುಗಳನ್ನು ಹೊಂದಿದೆ. ಈ ತಿರುವುಗಳ ಅಂಚಿನಲ್ಲಿಯೇ ದಟ್ಟವಾಗಿ ಬೆಳೆದಿರುವ ಮುಳ್ಳಿನ ಗಿಡಗಳು ಮತ್ತು ಮರಗಳು ಎದುರಿನಿಂದ ಬರುವ ವಾಹನಗಳು ಸಂಪೂರ್ಣವಾಗಿ ಕಾಣದಂತೆ ಮರೆಮಾಚುತ್ತದೆ.
ದ್ವಿಚಕ್ರ ವಾಹನ ಸವಾರರು, ಆಟೊಗಳು ಹಾಗೂ ಕಾರುಗಳು ಈ ತಿರುವುಗಳನ್ನು ದಾಟುವಾಗ ಅನಿರೀಕ್ಷಿತವಾಗಿ ಎದುರಿನಿಂದ ದೊಡ್ಡ ವಾಹನಗಳು ಬಂದಾಗ ನಿಯಂತ್ರಣ ಕಳೆದುಕೊಳ್ಳುತ್ತಿವೆ. ಯಾವುದೇ ಕ್ಷಣದಲ್ಲಿಯೂ ಇಲ್ಲಿ ಭೀಕರ ಮುಖಾಮುಖಿ ಅಪಘಾತಗಳು ಸಂಭವಿಸುವ ಎಲ್ಲ ಸಾಧ್ಯತೆಗಳೂ ಇದೆ. ರಸ್ತೆಯ ಅರ್ಧದಷ್ಟು ಭಾಗವನ್ನು ಮುಳ್ಳಿನ ಗಿಡಗಳೇ ಆವರಿಸಿವೆ.
ಅಪಾಯದ ತೀವ್ರತೆಗೆ ಸಾಕ್ಷಿ ಎನ್ನುವಂತೆ ಇದೇ ಕೆರೆಕಟ್ಟೆಯ ಮೇಲೆ ಕೆರೆಯ ಒಳಭಾಗದಲ್ಲಿ ಒಣಗಿ ನಿಂತಿರುವ ಒಂದು ಬೃಹತ್ ಮರವು ತನ್ನ ಬೇರುಗಳನ್ನು ಕಳೆದುಕೊಂಡು ಯಾವುದೇ ಕ್ಷಣದಲ್ಲಿ ರಸ್ತೆಗೆ ಉರುಳುವ ಸ್ಥಿತಿಯಲ್ಲಿದೆ. ಮಳೆ ಅಥವಾ ಜೋರು ಗಾಳಿ ಬೀಸಿದರೆ ಈ ಮರವು ರಸ್ತೆ ಮೇಲೆ ಉರುಳುವುದರಲ್ಲಿ ಯಾವುದೇ ಸಂದೇಹವಿಲ್ಲ.
ಈ ಜಿಲ್ಲಾ ರಸ್ತೆಯ ಅಂಚಿನಲ್ಲಿ ಬೆಳೆದಿರುವ ಕಳೆ ಗಿಡಗಳನ್ನು ಮತ್ತು ಅಪಾಯಕಾರಿ ಮರಗಳನ್ನು ಕಾಲಕಾಲಕ್ಕೆ ತೆರವುಗೊಳಿಸುವಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತೋರುತ್ತಿರುವ ಮೌನ ಹಾಗೂ ನಿರ್ಲಕ್ಷ್ಯ ಧೋರಣೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲ ಎನ್ನುತ್ತಾರೆ ಸ್ಥಳೀಯರು.
ಚಿಲಕಲನೇರ್ಪು-ಚಿಂತಾಮಣಿ ಮುಖ್ಯರಸ್ತೆ ಸಮಸ್ಯೆ ಗಮನಕ್ಕೆ ಬಂದಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆಯಲ್ಲಿದೆ. ಟೆಂಡರ್ ಮುಗಿದ ನಂತರ ರಸ್ತೆ ಅಂಚಿನಲ್ಲಿ ಬೆಳೆದಿರುವ ಜಂಗಲ್ ತೆರವು ಮಾಡಲಾಗುವುದು.
-ನಾಗರಾಜ್, ಎಇಇ, ಲೋಕೋಪಯೋಗಿ ಇಲಾಖೆ
ಅಪಘಾತಕ್ಕೆ ಮುನ್ನ ತೆರವುಗೊಳಿಸಿ
ಅಪಘಾತ ಸಂಭವಿಸುವ ಮೊದಲೇ ರಸ್ತೆಯಲ್ಲಿರುವ ಅಪಾಯಕಾರಿ ಗಿಡ–ಮರಗಳನ್ನು ತೆರವುಗೊಳಿಸಬೇಕು. ಅಪಘಾತ ಸಂಭವಿಸಿದ ನಂತರ ಚರ್ಚಿಸಿದರೆ ಪ್ರಯೋಜನವಿಲ್ಲ.
-ನವೀನ್, ದ್ವಿಚಕ್ರ ವಾಹನ ಸವಾರ
ರಸ್ತೆಯ ಅಂಚಿನಲ್ಲಿರುವ ಕಳೆ ಗಿಡಗಳನ್ನು ಮತ್ತು ಅಪಾಯಕಾರಿ ಗಿಡ ಮರಗಳನ್ನು ಕಾಲಕಾಲಕ್ಕೆ ತೆರವುಗೊಳಿಸದೆ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ.
-ವೆಂಕಟೇಶ್ ರೆಡ್ಡಿ, ನಾಗರಿಕ
ಈಚೆಗೆ ಇದೇ ಮುಖ್ಯ ರಸ್ತೆಯ ಏನಿಗದಲೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವುದು ಈ ಮಾರ್ಗದ ದುಸ್ಥಿತಿಗೆ ಸಾಕ್ಷಿಯಾಗಿದೆ.