
ಚಿಕ್ಕಬಳ್ಳಾಪುರ ಸರ್ಕಾರಿ ಜಾಗಕ್ಕೆ ಇ–ಖಾತೆ; ಯಾರ ತಲೆದಂಡ?
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ಕಸಬಾ ಹೋಬಳಿಯ ಅಣಕನೂರು ಗ್ರಾಮದ ಸರ್ವೆ ಸಂಖ್ಯೆ 109ರಲ್ಲಿನ 97,130.30 ಚದುರ ಮೀಟರ್ ಸರ್ಕಾರಿ (ಸುಮಾರು 24 ಎಕರೆ) ಜಾಗಕ್ಕೆ ನಗರಸಭೆಯು ಇ–ಖಾತೆ ನೀಡಿರುವ ಪ್ರಕರಣ ಸಂಬಂಧಿಸಿದಂತೆ ಯಾರ ತಲೆದಂಡ ಆಗಲಿದೆ ಎನ್ನುವುದು ನಾಗರಿಕರಲ್ಲಿ ಚರ್ಚೆಗೆ ಕಾರಣವಾಗಿದೆ.
ಯಾವುದೇ ಇ–ಖಾತೆ ಸೃಜನೆಗೆ ಕೇಸ್‌ವರ್ಕರ್, ಆರ್‌ಐ, ಆರ್‌ಒ ಮತ್ತು ನಗರಸಭೆ ಪೌರಾಯುಕ್ತರು ಲಾಗಿನ್ ಮಾಡಬೇಕು. ತೆರಿಗೆ ಮಾಹಿತಿ ದಾಖಲಿಸುವಾಗ, ಕಡತ ಮುಂದುವರಿಯುವಾಗ ಮತ್ತು ಇ–ಖಾತೆಯ ಅಂತಿಮ ಪ್ರತಿ ಪಡೆಯುವಾಗಲೂ ಅಧಿಕಾರಿಗಳ ಲಾಗಿನ್ ಅಗತ್ಯ. ಹೀಗೆ ನಗರಸಭೆ ಅಧಿಕಾರಿಗಳ ಕಣ್ಗಾವಲಿನಲ್ಲಿಯೇ ಇ–ಖಾತೆ ಪ್ರಕ್ರಿಯೆಗಳು ಜರುಗುತ್ತವೆ.
ಅಣಕನೂರು ಗ್ರಾಮದ ಸರ್ವೆ ಸಂಖ್ಯೆ 109ರಲ್ಲಿನ 97,130.30 ಚದುರ ಮೀಟರ್ ಜಾಗವನ್ನು ಚಿಕ್ಕಬಳ್ಳಾಪುರದ 29ನೇ ವಾರ್ಡ್ ವ್ಯಾಪ್ತಿಗೆ ಖಾತೆ ಮಾಡಿರುವ ಪ್ರಕರಣದಲ್ಲಿಯೂ ಈ ಎಲ್ಲ ಪ್ರಕ್ರಿಯೆಗಳು ಜರುಗಿದ ನಂತರವೇ ಇ–ಖಾತೆ ಸೃಜನೆ ಆಗಿದೆ.
ಈ ಸರ್ಕಾರಿ ಜಾಗ ಖಾಸಗಿಯವರಿಗೆ ಇ–ಖಾತೆ ಆಗಿರುವ ಪ್ರಕರಣ ಹೊರ ಬೀಳುತ್ತಲೇ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್ ಅಧ್ಯಕ್ಷತೆಯಲ್ಲಿ ತನಿಖಾ ತಂಡವನ್ನು ಜಿಲ್ಲಾಧಿಕಾರಿ ರಚಿಸಿದ್ದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎ.ಎಸ್.ಮಂಜುನಾಥ್, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಶಿಲ್ಪಾ ದೇಸಾಯಿ ತನಿಖಾ ತಂಡದ ಸದಸ್ಯರಾಗಿದ್ದಾರೆ. 24 ಗಂಟೆಗಳ ಒಳತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಈ ತಂಡಕ್ಕೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದರು.
ತನಿಖಾ ತಂಡವು ಸೋಮವಾರ ಜಿಲ್ಲಾಧಿಕಾರಿ ಅವರಿಗೆ ಈ ಪ್ರಕರಣ ತನಿಖೆಯ ಮಧ್ಯಂತರ ವರದಿ ಸಲ್ಲಿಸಲಿದೆ. ಸಿದ್ದವಾಗಿದ್ದ ಮಧ್ಯಂತರ ವರದಿ ಶನಿವಾರ ಸಲ್ಲಿಕೆ ಆಗಬೇಕಾಗಿತ್ತು. ಆದರೆ ‘ಪ್ರಜಾಸೇವೆ’ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಪಾಲ್ಗೊಂಡಿದ್ದ ಕಾರಣ ಸಲ್ಲಿಕೆ ಸೋಮವಾರ ಸಲ್ಲಿಕೆಯಾಗುವ ಸಾಧ್ಯತೆ ಹೆಚ್ಚಿದೆ.
ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ನಿರ್ದೇಶಕರು ಈ ಪ್ರಕರಣದ ತರುವಾಯ ಎರಡು ದಿನ ನಗರಸಭೆಯಲ್ಲಿ ಸುದೀರ್ಘವಾಗಿ ಕಡತಗಳನ್ನು ಪರಿಶೀಲಿಸಿದ್ದರು. ಕೆಲವು ಕಡತಗಳನ್ನು ಕೊಂಡೊಯ್ದಿದ್ದರು.
ಮಧ್ಯಂತರ ವರದಿಯತ್ತ ಈ ಎಲ್ಲರ ಕುತೂಹಲದ ದೃಷ್ಟಿ ನೆಟ್ಟಿದೆ. ಯಾರಿಂದ ಲೋಪಗಳು ಆಗಿವೆ ಎನ್ನುವ ವಿವರಗಳೂ ಅಡಕವಾಗಿರುವ ಸಾಧ್ಯತೆ ಇದೆ. ವರದಿ ಆಧರಿಸಿ ಜಿಲ್ಲಾಧಿಕಾರಿ ಅವರು ಯಾವ ಕ್ರಮವಹಿಸುವರು? ಯಾರನ್ನಾದರೂ ಅಮಾನತುಗೊಳಿಸುವರೇ? ಕ್ರಮಕ್ಕೆ ಶಿಫಾರಸು ಮಾಡುವರೇ? ಮಧ್ಯಂತರ ವರದಿಯ ಪರಿಣಾಮಗಳೇನು ಎನ್ನುವ ಚರ್ಚೆ ನಾಗರಿಕ ವಲಯದಲ್ಲಿ ಜೋರಾಗಿದೆ.
ಮೇ ನಲ್ಲಿ ಇಬ್ಬರು ಅಮಾನತುಗೊಳಿಸಿದ್ದ ಡಿ.ಸಿ: ಚಿಕ್ಕಬಳ್ಳಾಪುರ ನಗರಸಭೆಯ ಕಂದಾಯ ಶಾಖೆಗೆ ಮೇ 14ರಂದು ಜಿಲ್ಲಾಧಿಕಾರಿ ಜಿ. ಪ್ರಭು ಭೇಟಿ ನೀಡಿ ತಪಾಸಣೆ ನಡೆಸಿದ್ದರು. ಆ ವೇಳೆ ನಗರಸಭೆಗೆ ಕೆಲಸ ಕಾರ್ಯಗಳ ನಿಮಿತ್ತ ಬಂದಿದ್ದ ನಾಗರಿಕರು ಕೆಲಸಗಳು ಸಮರ್ಪಕವಾಗಿ ನಡೆಯದಿರುವುದು ಮತ್ತು ಅಧಿಕಾರಿಗಳು ಸ್ಪಂದಿಸದಿರುವ ಬಗ್ಗೆ ದೂರು ಹೇಳಿದ್ದರು.
ನಗರಸಭೆಗೆ ಜಿಲ್ಲಾಧಿಕಾರಿ ಭೇಟಿ ನೀಡಿದ ಕೆಲವು ದಿನಗಳ ನಂತರ ನಗರಸಭೆ ಪ್ರಥಮ ದರ್ಜೆ ಸಹಾಯಕ ರಾಜೇಶ್ ಎಂ., ಮತ್ತು ಕರವಸೂಲಿಗಾರ ರಾಮಾಂಜಿನಪ್ಪ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರು.
ಈ ಎರಡು ಅಮಾನತಿಗ ಆದೇಶಗಳಲ್ಲಿನ ವಿವರಗಳು ಚಿಕ್ಕಬಳ್ಳಾಪುರ ನಗರಸಭೆಯಲ್ಲಿನ ಅಧ್ವಾನ, ಅವ್ಯವಸ್ಥೆಗಳನ್ನು ಸಾರಿದ್ದವು. ಖಾತಾ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡದಿರುವುದು, ಆಸ್ತಿ ಹಕ್ಕು ವರ್ಗಾವಣೆ ಮತ್ತು ಇತರೆ ಮನವಿಗಳನ್ನು ಅವಧಿ ಮೀರಿ ಬಾಕಿ ಉಳಿಸಿಕೊಂಡಿರುವುದು, ಇ–ಖಾತಾ ಅಭಿಯಾನದಡಿ ಸಾರ್ವಜನಿಕರಿಂದ ಸ್ವೀಕೃತವಾಗಿರುವ ಮನವಿಗಳನ್ನು ಸ್ವೀಕೃತಿ ಶಾಖೆಯಲ್ಲಿ ನಮೂದಿಸದೇ ಪಡೆದುಕೊಂಡಿರುವುದು. ಇದುವರೆಗೂ ಇ–ಖಾತೆ ನೀಡಲು ಕ್ರವಹಿಸದಿರುವುದು ಜಿಲ್ಲಾಧಿಕಾರಿ ಭೇಟಿ ವೇಳೆ ಎದ್ದು ಕಂಡಿತ್ತು.
ಎಂಟತ್ತು ದಿನಗಳಲ್ಲಿ ಸಮಗ್ರ ವರದಿ
‘ಮೇಲ್ನೋಟಕ್ಕೆ ಮತ್ತು ದಾಖಲೆಗಳನ್ನು ಪರಿಶೀಲಿಸಿದಾಗ ಈ ಜಮೀನು ಖರಾಬು ಎನ್ನುವುದು ಕಾಣುತ್ತದೆ. ಎಂಟತ್ತು ದಿನಗಳಲ್ಲಿ ಸಮಗ್ರ ವರದಿ ಸಲ್ಲಿಸಲಾಗುವುದು ’ ಎಂದು ತನಿಖಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿರುವ ನಗರಸಭೆ ಮಾಜಿ ಸದಸ್ಯ ಮಹಮದ್ ಸಾದಿಕ್ ಅವರಿಂದ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸಹ ಮಾಹಿತಿ ಪಡೆದಿದ್ದಾರೆ. ಲೋಕಾಯುಕ್ತ ಪೊಲೀಸ್ ಕಚೇರಿಗೆ ಸಾದಿಕ್ ಅವರನ್ನು ಕರೆಸಿಕೊಂಡಿರುವ ಅಧಿಕಾರಿಗಳು ಅವರಿಂದ ದಾಖಲೆಗಳನ್ನು ಪಡೆದಿದ್ದಾರೆ.
ಜಿಲ್ಲೆಯಲ್ಲಿಯೇ ತೀವ್ರ ಸಂಚಲನಕ್ಕೆ ಕಾರಣವಾಗಿರುವ ಈ ಪ್ರಕರಣದ ಬಗ್ಗೆ ಲೋಕಾಯುಕ್ತ ಪೊಲೀಸರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸುವರು ಎನ್ನುವ ಮಾತುಗಳಿವೆ.