ಅಲ್ಪ ಮಳೆಗೂ ಗದಗ ನಗರದಲ್ಲಿ ಕೆರೆಯಂತಾಗುವ ರಸ್ತೆಗಳು.. ವ್ಯವಸ್ಥೆಗೆ ಹಿಡಿಶಾಪ

ಅಲ್ಪ ಮಳೆಗೂ ಗದಗ ನಗರದಲ್ಲಿ ಕೆರೆಯಂತಾಗುವ ರಸ್ತೆಗಳು.. ವ್ಯವಸ್ಥೆಗೆ ಹಿಡಿಶಾಪ

ಅಲ್ಪ ಮಳೆಗೂ ಗದಗ ನಗರದಲ್ಲಿ ಕೆರೆಯಂತಾಗುವ ರಸ್ತೆಗಳು.. ವ್ಯವಸ್ಥೆಗೆ ಹಿಡಿಶಾಪ

ಗದಗ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮುಂಗಾರು ಮಳೆ ಕೊರತೆ ತೀವ್ರವಾಗಿದೆ. ಆದರೂ, ನಗರದಲ್ಲಿ ಈಚೆಗೆ ಸುರಿದ ಮಳೆಗೆ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ನಿಂತಿದ್ದು ವ್ಯವಸ್ಥೆಯನ್ನು ವಿಡಂಬನೆ ಮಾಡುವಂತಿದೆ.

ಮಳೆಯಿಂದಾಗಿ ಸ್ಟೇಷನ್ ರಸ್ತೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಮಳೆಯಿಂದ ರಕ್ಷಣೆ ಪಡೆಯಲು ಇಲ್ಲಿನ ಮಳಿಗೆಗಳ ಮುಂದೆ ನಿಂತಿದ್ದ ಜನರಿಗೆ, ಮಳೆ ನಿಂತ ಬಳಿಕ ಮೊಣಕಾಲುದ್ದದ ನೀರಿನಲ್ಲಿ ನಡೆದು ಹೋಗುವುದು ಪ್ರಯಾಸ ತಂದೊಡ್ಡಿತು. ವಾಹನ ಸವಾರರು ಸಹ ಪರದಾಡಿದರು. ಬೆಟಗೇರಿ ಮಾರುಕಟ್ಟೆಯಲ್ಲೂ ನೀರು ನಿಂತಿದ್ದರಿಂದ ವ್ಯಾಪಾರಿಗಳು, ಗ್ರಾಹಕರು ತೊಂದರೆಗೆ ಸಿಲುಕಿದರು. ಇಂತಹ ಸಂದಿಗ್ಧಕ್ಕೆ ಕಾರಣವಾದ ವ್ಯವಸ್ಥೆಗೆ ಹಿಡಿಶಾಪ ಹಾಕಿದರು.

ನಗರದಲ್ಲಿ ಸಮಪರ್ಕವಾಗಿ ಚರಂಡಿ ವ್ಯವಸ್ಥೆ ಇಲ್ಲದ್ದು, ಇರುವ ಚರಂಡಿಗಳನ್ನು ಸರಿಯಾಗಿ ನಿರ್ವಹಣೆ ಮಾಡದ್ದಕ್ಕೆ ಈ ಸಂದರ್ಭ ಸಾಕ್ಷಿಯಂತಿತ್ತು. ತುಸು ಜೋರು ಮಳೆ ಸುರಿದರೂ, ನೀರು ಸರಾಗವಾಗಿ ಹರಿಯಲು ಚರಂಡಿ ಇಲ್ಲದೆ, ಕೆಲವೆಡೆ ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊಂಡಿರುವುದರಿಂದ ಇಡೀ ರಸ್ತೆ ಕೊಳಚೆ ಮಿಶ್ರಿತ ನೀರಿನಿಂದ ತುಂಬಿಕೊಳ್ಳುವುದು ಜ್ವಲಂತ ಸಮಸ್ಯೆಯಾಗಿ ಮಾರ್ಪಟ್ಟಿದೆ.

ಮಾರುಕಟ್ಟೆ ಪ್ರದೇಶಗಳಲ್ಲಿರುವ ಚರಂಡಿಗಳನ್ನು ಎತ್ತರಿಸುವುದು ಇಲ್ಲವೇ ಮುಚ್ಚುವುದು ಅವ್ಯಾಹತವಾಗಿ ನಡೆಯುತ್ತಿದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಚರಂಡಿ ಹಾಗೂ ರಸ್ತೆ ಮೇಲೆ ಹಾಕಲಾಗುತ್ತಿದೆ. ವಿವಿಧೆಡೆ ಚರಂಡಿಯನ್ನು ಒತ್ತುವರಿ ಮಾಡಿಕೊಂಡ ಆರೋಪವೂ ಕೇಳಿಬಂದಿದೆ. ಇದೆಲ್ಲದರ ಪರಿಣಾಮ ಮಳೆ ನೀರು ರಸ್ತೆ ಮೇಲೆ ಸಂಗ್ರಹವಾಗುತ್ತಿದೆ.

ರೈಲ್ವೆ ಕೆಳಸೇತುವೆಗಳಲ್ಲಿ ಸಮಸ್ಯೆ ಕಾಯಂ: ನಗರದ ಬಳ್ಳಾರಿ ರೈಲ್ವೆ ಕೆಳಸೇತುವೆ, ಪಾಳ–ಬಾದಾಮಿ ಮಾರ್ಗದ ರೈಲ್ವೆ ಕೆಳಸೇತುವೆ ಸೇರಿದಂತೆ ವಿವಿಧೆಡೆ ಮಳೆಯಾದರೆ ನೀರು ನಿಲ್ಲುವುದು ಕಾಯಂ ಸಮಸ್ಯೆಯಾಗಿದೆ. ಇದರಿಂದ ಕೆಲ ಸಮಯ ಎರಡು ಭಾಗದ ಸಂಪರ್ಕ ಕಡಿತವಾಗಿ, ವಾಹನ ಸವಾರರು ಸಾಲುಗಟ್ಟಿ ನಿಲ್ಲುವಂತಾಗುತ್ತದೆ. ತುರ್ತು ಇದ್ದವರು ಕೆಸರಿನ ಮಜ್ಜನ ಮಾಡಿಯೇ ಸಾಗಬೇಕು ಎಂಬಂತಹ ಪರಿಸ್ಥಿತಿ ಇದೆ.

ಹದಗೆಟ್ಟ ರಸ್ತೆಗಳು: ಮಾರುಕಟ್ಟೆ ಪ್ರದೇಶ ಸೇರಿದಂತೆ ವಿವಿಧೆಡೆ ರಸ್ತೆಗಳು ಉಬ್ಬು–ತಗ್ಗಿನಿಂದ ಕೂಡಿವೆ. ಉಬ್ಬು ರಸ್ತೆಯಿಂದ ತಗ್ಗಿಗೆ ಮಳೆ ನೀರು ಹರಿದು, ಮುಂದೆ ಸಾಗದೆ ನಿಲ್ಲುತ್ತದೆ. ಪ್ರಮುಖ ರಸ್ತೆಗಳು ಮೊದಲುಗೊಂಡು ಅನೇಕ ರಸ್ತೆಗಳಲ್ಲಿ ಗುಂಡಿಗಳೇ ಕಾಣಸಿಗುತ್ತವೆ. ಗುಂಡಿ– ತಗ್ಗುಗಳಲ್ಲಿ ಮಳೆ ನೀರು ಸಂಗ್ರಹವಾದಾಗ, ವಾಹನ ಸವಾರರು ಆಯತಪ್ಪಿಬಿದ್ದ ಹಲವು ನಿದರ್ಶನಗಳಿವೆ.

ಶಿವಾನಂದ ನಗರ, ಬಾಲಾಜಿ ನಗರ, ರಾಧಾಕೃಷ್ಣ ನಗರ, ಗಂಗಿಮಡಿ, ಬಣ್ಣದನಗರ, ಜಮಾದಾರ್ ನಗರ, ನರಸಾಪೂರ ಆಶ್ರಯ ಕಾಲೊನಿ, ಹಮಾಲರ ಕಾಲೊನಿ, ವೆಲ್‌ಫೇರ್ ಟೌನ್‌ಶಿಪ್‌ ಸೇರಿದಂತೆ ಹೊಸ ಬಡಾವಣೆಗಳಲ್ಲಿ ರಸ್ತೆ, ಚರಂಡಿ ಸೌಕರ್ಯ ಸಮರ್ಪಕವಾಗಿ ಇಲ್ಲದ ಕಾರಣ, ಮಳೆ ನೀರು ನಿಂತು, ಕೆಸರುಗದ್ದೆಯಂತಾಗುತ್ತದೆ.

ಗದಗ ನಗರದಲ್ಲಿ ಒಳಚರಂಡಿ ವ್ಯವಸ್ಥೆ, ಸಿ.ಸಿ ರಸ್ತೆ ಸರಿಯಿಲ್ಲ. ದಾಖಲೆಯಲ್ಲಿ ಖರ್ಚು ಮಾಡಿದ ಹಣ ತೋರಿಸುತ್ತಾರೆ. ಆದರೆ, ಯಾವ ವ್ಯವಸ್ಥೆಯೂ ಸರಿಯಾಗಿಲ್ಲ. ಗದಗ–ಬೆಟಗೇರಿ ಸಂಪರ್ಕಕ್ಕೆ ರೈಲ್ವೆ ಮೇಲ್ಸೇತುವೆ ನಿರ್ಮಿಸುವಂತೆ ಈ ಹಿಂದೆ ಹೋರಾಟ ಮಾಡಲಾಗಿತ್ತು. ಕೆಳ ಸೇತುವೆಗಳು ಮಳೆ ನೀರಿನಿಂದ ಬಂದ್ ಆದರೆ ಪರ್ಯಾಯ ಮಾರ್ಗ ಇಲ್ಲದಾಗುತ್ತದೆ. ತಗ್ಗು ಪ್ರದೇಶವಾದ ಗಂಗಿಮಡಿಯಲ್ಲಿ ಮಳೆಯಿಂದ ಮನೆಗಳಿಗೆ ಹಾನಿಯಾಗಿತ್ತು. ಕೊಳೆಗೇರಿಗಳಿಗೆ ಅಗತ್ಯ ಸೌಕರ್ಯ ಕಲ್ಪಿಸದ ಕಾರಣ ಮಳೆಯಾದರೆ, ತೀವ್ರ ಸಂಕಷ್ಟ ಎದುರಾಗುತ್ತದೆ

-ಇಮ್ತಿಯಾಜ್ ಮಾನ್ವಿ, ಸಂಘಟನಾ ಸಂಚಾಲಕ, ಸ್ಲಂ ಜನಾಂದೋಲನ ಸಮಿತಿ

ಪುಟ್ಟರಾಜ ಗವಾಯಿ ಸರ್ಕಲ್‌ನಿಂದ ಗಾಂಧಿ ಸರ್ಕಲ್‌ವರೆಗೆ ರಸ್ತೆ ವಿಸ್ತರಣೆಗೆ ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದರು. ಈ ಪ್ರಕರಣ ನ್ಯಾಯಾಲಯದಲ್ಲಿದೆ. ರಸ್ತೆ ವಿಸ್ತರಣೆ, ಅಭಿವೃದ್ಧಿ ಸಾಧ್ಯವಾದರೆ ಮಳೆ ನೀರು ನಿಲ್ಲುವ ಸಮಸ್ಯೆಗೂ ಪರಿಹಾರ ಸಿಗುತ್ತದೆ. ನಗರದಲ್ಲಿ ಒಳಚರಂಡಿ ಯೋಜನೆ ವಿಫಲವಾಗಿದೆ. ಈ ವಿಚಾರವಾಗಿ ಇಲಾಖೆಗಳ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ರಸ್ತೆಗಳು ಹಾಳಾಗಿರುವುದರಿಂದ ಮಳೆ ಬಂದರೆ ಸಮಸ್ಯೆ ಉಲ್ಬಣವಾಗುತ್ತದೆ.

-ಮುತ್ತು ಬಿಳೆಯಲಿ, ಮುಖಂಡ, ಸಮಾನತೆಗಾಗಿ ನಾವು ಸಂಘಟನೆ

ಗದುಗಿನಲ್ಲಿ 2 ಲಕ್ಷ ಜನಸಂಖ್ಯೆ ಇದ್ದರೂ, ಪಕ್ಕದ ಜಿಲ್ಲೆಗಳಿಗೆ ಹೋಲಿಸಿದರೆ ಅಭಿವೃದ್ಧಿ ವಿಚಾರದಲ್ಲಿ ತುಂಬಾ ಹಿಂದುಳಿದಿದೆ. ಇಲ್ಲಿನ ಯಾವ ರಸ್ತೆಗಳೂ ಚೆನ್ನಾಗಿಲ್ಲ. ಇಲ್ಲಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿ, ಅಭಿವೃದ್ಧಿಪಡಿಸಬೇಕು.

‘ಚರಂಡಿ ಸ್ವಚ್ಛತೆಗೆ ಕ್ರಮ’

‘ಮಳೆಯಾದ ಸಂದರ್ಭದಲ್ಲಿ ಎಲ್ಲಿಯಾದರೂ ನೀರು ನಿಂತಾಗ ಅದನ್ನು ತಕ್ಷಣ ಖಾಲಿ ಮಾಡಲಾಗುತ್ತಿದೆ. ಚರಂಡಿಗಳಲ್ಲಿ ತ್ಯಾಜ್ಯ ಕಟ್ಟಿಕೊಂಡಿದ್ದರೆ ಪೌರಕಾರ್ಮಿಕರು ಹಾಗೂ ಯಂತ್ರಗಳ ಮೂಲಕ ಸ್ವಚ್ಛಗೊಳಿಸಲಾಗುತ್ತಿದೆ. ತಗ್ಗು–ಗುಂಡಿಗಳಿಂದ ಕೂಡಿರುವ ರಸ್ತೆಗಳಿಗೆ ಕಡಿ ಹಾಕಿ, ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗುತ್ತಿದೆ’ ಎನ್ನುತ್ತಾರೆ ಗದಗ–ಬೆಟಗೇರಿ ನಗರಸಭೆ ಅಧಿಕಾರಿಗಳು. ‘ಮಳೆಗಾಲದ ಮುಂಜಾಗ್ರತಾ ಕ್ರಮವಾಗಿ ರಾಜನಾಲೆಯನ್ನು ಮೊದಲೇ ಸ್ವಚ್ಛಗೊಳಿಸಲಾಗಿದೆ. ಇದರಿಂದ ರಾಜನಾಲೆ ತುಂಬಿ, ಸುತ್ತಲಿನ ಮನೆಗಳಿಗೆ ನೀರು ನುಗ್ಗುವುದು ತಪ್ಪಿದೆ. ಅನುದಾನದ ಅನುಸಾರ ವಿವಿಧ ವಾರ್ಡ್‌ಗಳಲ್ಲಿ ಚರಂಡಿ, ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ’ ಎಂದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ