
ಕುಮಟಾದಲ್ಲಿ ಲಾರಿ ಹರಿದು ಎಳನೀರು ವ್ಯಾಪಾರಿ ಸಾವು
ಕುಮಟಾ: ರಸ್ತೆ ಬದಿ ನಿಂತಿದ್ದ ಲಗೇಜ್ ರಿಕ್ಷಾಗೆ ಲಾರಿ ಡಿಕ್ಕಿ ಹೊಡೆದು ರಿಕ್ಷಾ ಚಾಲಕ ಗಾಯಗೊಂಡಿದ್ದಲ್ಲದೆ ಸಮೀಪದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ಪಟ್ಟಣದ ಎ.ಪಿ.ಎಂ.ಸಿ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ.
ಹೆದ್ದಾರಿ ಬದಿಗೆ ಎಳನೀರು ಮಾರಾಟ ಮಾಡುವ ಪಟ್ಟಣದ ಉಮೇಶ ರ‍್ಮಲಕರ್ (62) ಮೃತಪಟ್ಟವರು. ತಾಲ್ಲೂಕಿನ ಕಲಭಾಗದ ರಿಕ್ಷಾ ಚಾಲಕ ವಸಂತ ನಾಯ್ಕ ಗಾಯಗೊಂಡವರು.
ಕುಮಟಾದಿಂದ ಹೊನ್ನಾವರ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಲಾರಿ ಮೊದಲು ಲಗೇಜ್ ರಿಕ್ಷಾಕ್ಕೆ ಡಿಕ್ಕಿ ಹೊಡೆದಾಗ ರಿಕ್ಷಾ ರಸ್ತೆ ಪಕ್ಕ ಉರುಳಿ ಬಿದ್ದಿತು. ನಂತರ ಎದುರು ಇದ್ದ ಎಳನೀರು ಹಾಗೂ ಹಣ್ಣಿನ ರಾಶಿ ಹಾಗೂ ನಂತರ ವ್ಯಾಪಾರಿ ಉಮೇಶ ರ‍್ಮಲಕರ್ ಮೈಮೇಲೆ ಹರಿದು ದುರಂತ ಸಂಭವಿಸಿದೆ.
ಲಾರಿ ಚಾಲಕನನ್ನು ಮಧ್ಯಪ್ರದೇಶದ ಗ್ವಾಲಿಯರ್‌ನ ರಘುವೀರ ಖುಷವ್ಹಾ ಎಂದು ಗುರುತಿಸಲಾಗಿದೆ. ಸಮೀಪದ ಪೈರಗದ್ದೆ ನಿವಾಸಿ ಮಹಮದ್ ಅಲಿ ಕೊಂಚೂರ್ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಕುಮಟಾ ಪೊಲೀಸರು ತಿಳಿಸಿದ್ದಾರೆ.