ಮದ್ದೂರಲ್ಲಿ ಸಾಹಿತ್ಯ ಸಮ್ಮೇಳನ;ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ಮೊಳಗಲಿ: ಎಂ.ಕೆಂಪಮ್ಮ

ಮದ್ದೂರಲ್ಲಿ ಸಾಹಿತ್ಯ ಸಮ್ಮೇಳನ;ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ಮೊಳಗಲಿ: ಎಂ.ಕೆಂಪಮ್ಮ

ಮದ್ದೂರಲ್ಲಿ ಸಾಹಿತ್ಯ ಸಮ್ಮೇಳನ;ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ಮೊಳಗಲಿ: ಎಂ.ಕೆಂಪಮ್ಮ

ಮದ್ದೂರು: ಬ್ಯಾಂಕಿಂಗ್ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಕನ್ನಡ ಬಳಕೆಯಾಗಬೇಕು ಮತ್ತು ಉದ್ಯೋಗಾವಕಾಶದಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಬೇಕು. ಎಲ್ಲೆಡೆ ಕನ್ನಡ ಭಾಷೆ ಮೊಳಗಬೇಕು ಮತ್ತು ಬೆಳಗಬೇಕು ಎಂದು ಸಮ್ಮೇಳನಾಧ್ಯಕ್ಷೆ ಎಂ.ಕೆಂಪಮ್ಮ ಅಭಿಪ್ರಾಯಪಟ್ಟರು.

ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಉದಯ್ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಿದರು. ದೇಶಕ್ಕೇ ಅನ್ನ ನೀಡುವ ರೈತ ಕುಟುಂಬದ ಯುವಕರಿಗೆ ಈಗಿನ ಕಾಲದಲ್ಲಿ ಹೆಣ್ಣು ಸಿಗದೇ ಇರುವುದು ಶೋಚನೀಯ ಸಂಗತಿ. ಈ ಬಗ್ಗೆ ಸಮಾಜದ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.

ಕೊಕ್ಕರೆ ಬೆಳ್ಳೂರು, ಗಂಗರ ಅರೆತಿಪ್ಪೂರು, ವೈದ್ಯನಾಥಪುರದ ಗೋವಿನ ಹಾಡು, ಧ್ವಜ ಸತ್ಯಾಗ್ರಹ ಸೌಧ, ಮುಖ್ಯ ಬೆಳೆಯಲ್ಲೊoದಾದ ಕಬ್ಬು, ಮದ್ದೂರು ವಡೆ ಸೇರಿದಂತೆ ಮದ್ದೂರು ನೆಲದ ಸೊಗಡು ಹಾಗೂ ಇತಿಹಾಸ ಹಿನ್ನೆಲೆಯ ಬಗ್ಗೆ ಮಾತನಾಡಿದರು.

1963ರಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದವರು ಮದ್ದೂರಿನವರೇ ಆದ ರಾಮಮೂರ್ತಿ. ಅಷ್ಟೇ ಅಲ್ಲದೇ ಹಳದಿ ಕೆಂಪು ಬಣ್ಣದ ಕನ್ನಡ ಬಾವುಟವನ್ನು ಕನ್ನಡ ನಾಡಿಗೆ ಪರಿಚಯಿಸಿದ ಕೀರ್ತಿ ಕೂಡಾ ಅವರಿಗೇ ಸಲ್ಲಬೇಕು ಎಂದರು.

ಮಹಿಳೆಗೆ ಸಮ್ಮೇಳನಾಧ್ಯಕ್ಷತೆ ಗೌರವ: ಸಮ್ಮೇಳನದ ನೇತೃತ್ವ ವಹಿಸಿದ್ದ ಶಾಸಕ ಕೆ.ಎಂ. ಉದಯ್ ಮಾತನಾಡಿ, ‘3 ವರ್ಷಗಳ ಹಿಂದಿನಿಂದಲೂ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿರಲಿಲ್ಲ. ಹೀಗಾಗಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದಲೇ ನಗರದಲ್ಲಿ ಗಣೇಶೋತ್ಸವ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನ ಆಚರಿಸಲು ತೀರ್ಮಾನಿಸಲಾಯಿತು. ಮಹಿಳಾ ಸಮ್ಮೇಳನಾಧ್ಯಕ್ಷರ ಆಯ್ಕೆ ಈ ಬಾರಿಯ ವಿಶೇಷ’ ಎಂದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ‘ಮಂಡ್ಯದಲ್ಲಿ 1971,1994 ಹಾಗೂ 2024ರಲ್ಲಿ ಒಟ್ಟು ಮೂರು ಬಾಡರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿವೆ’ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ವಸುಂಧರಾ ಕದಲೂರು, ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ, ಬಿಇಒ ಧನಂಜಯ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಮಹಿಳಾಧ್ಯಕ್ಷೆ ಮಮತಾ ಶಂಕರೇಗೌಡ, ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ. ಚಂದು, ಕೋಣಸಾಲೆ ಸುನೀಲ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಬಸವರಾಜು, ಸಾಹಿತಿ ತೈಲೂರು ವೆಂಕಟಕೃಷ್ಣ, ಪ್ರೊ.ಕೃಷ್ಣ, ಜಿ.ಪಂ ಮಾಜಿ ಸದಸ್ಯ ಸ್ವರೂಪ್ ಚಂದ್, ಮನ್‌ಮುಲ್‌ ಅಧ್ಯಕ್ಷ ಹರೀಶ್, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್‌.ಸತ್ಯಾನಂದ ಪಾಲ್ಗೊಂಡಿದ್ದರು.

ಡೊಳ್ಳು ಕುಣಿತ, ಪೂಜಾ ಕುಣಿತ, ಪಟದ ಕುಣಿತ, ಕೋಲಾಟ, ವೀರಗಾಸೆ ಸೇರಿದಂತೆ ವಿವಿಧ ಜನಪದ ಕಲಾ ಪ್ರಕಾರಗಳು ಗಮನಸೆಳೆದವು. ಪೊಲೀಸ್ ಬ್ಯಾಂಡ್ ಹಾಗೂ 1500 ವಿದ್ಯಾರ್ಥಿಗಳು ಪಥ ಸಂಚಲನದ ಮೂಲಕ ಸಮ್ಮೇಳನಾಧ್ಯಕ್ಷೆ ಎಂ. ಕೆಂಪಮ್ಮ ಅವರನ್ನು ನಗರದ ಕೋಟೆ ಬೀದಿಯಲ್ಲಿರುವ ಉಗ್ರನರಸಿಂಹಸ್ವಾಮಿ ದೇವಸ್ಥಾನದಿಂದ ವೇದಿಕೆಯವರೆಗೆ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು.

ಸಮ್ಮೇಳನದ ವೇದಿಕೆಯಲ್ಲಿ ‘ಶಿoಷಾ ಸುಧಾ’ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ತಾಲ್ಲೂಕು ದರ್ಶನ, ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿಗಳು ಯಶಸ್ವಿಯಾಗಿ ನಡೆದವು. ಸಮ್ಮೇಳನಕ್ಕೆ ಬಂದಿದ್ದ ಸಾರ್ವಜನಿಕರಿಗೆ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.

ಮಾತೃಭಾಷೆಯನ್ನು ಪ್ರೀತಿಸಿ, ಗೌರವಿಸಿ

‘ನಮ್ಮ ತಂದೆ ತಾಯಿಯನ್ನು ಪ್ರೀತಿಸುವಂತೆ ಮಾತೃಭಾಷೆಯಾದ ಕನ್ನಡವನ್ನೂ ಪ್ರೀತಿಸಿ ಗೌರವಿಸಬೇಕು. ನಮ್ಮ ನಾಡಿನ ಸಂಸ್ಕೃತಿ, ಪರಂಪರೆ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕು’ ಎಂದು ಆದಿಚುಂಚನಗಿರಿ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.

ಶಾಸಕ ಕದಲೂರು ಉದಯ್ ಅವರು ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಸರಿಸಮನಾಗಿ ಆಯೋಜನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ