
ಉತ್ತರ ಕನ್ನಡ| ಹಳ್ಳಿ ಕಸ ಸಿಮೆಂಟ್ ಕಾರ್ಖಾನೆಗೆ; ಹಳ್ಳಿ ಕಸ ಸಿಮೆಂಟ್ ಕಾರ್ಖಾನೆಗೆ
ಕಾರವಾರ: ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗಳಿಂದ ಸಂಗ್ರಹಿಸಿದ ಘನ ತ್ಯಾಜ್ಯಗಳ ಪೈಕಿ ವಿಲೇವಾರಿಯಾಗದೆ ಉಳಿದಿರುವ ಟನ್‌ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಿಮೆಂಟ್ ಕಾರ್ಖಾನೆಗೆ ಪೂರೈಸುವ ಪ್ರಕ್ರಿಯೆ ಪ್ರಾಯೋಗಿಕವಾಗಿ ಆರಂಭಗೊಂಡಿದೆ.
ಮೊದಲ ಹಂತದಲ್ಲಿ ಭಟ್ಕಳ ತಾಲ್ಲೂಕಿನ ಶಿರಾಲಿ ಹಾಗೂ ಕುಮಟಾ ತಾಲ್ಲೂಕಿನ ಗೋಕರ್ಣ ಗ್ರಾಮ ಪಂಚಾಯಿತಿಗಳ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ವರ್ಷದಿಂದಲೂ ವಿಲೇವಾರಿಯಾಗದೆ, ದಾಸ್ತಾನಾಗಿರುವ ತ್ಯಾಜ್ಯಗಳನ್ನು ಕಾರ್ಖಾನೆಗೆ ಪೂರೈಸಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ.
ಕಳೆದ ಒಂದೆರಡು ವಾರದ ಅವಧಿಯಲ್ಲಿ ಶಿರಾಲಿ ಗ್ರಾಮ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ಘಟಕದಿಂದ 5 ಟನ್‌ಗೂ ಹೆಚ್ಚು ಮರುಬಳಕೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಉಡುಪಿ ಜಿಲ್ಲೆಯ ಸಿಮೆಂಟ್ ಕಾರ್ಖಾನೆಗೆ ರವಾನೆಯಾಗಿದೆ. ಘಟಕದಲ್ಲಿ ಇನ್ನೂ ಸಾಕಷ್ಟು ದಾಸ್ತಾನಿದ್ದು, ಅವುಗಳು ಸದ್ಯದಲ್ಲಿಯೇ ಕಾರ್ಖಾನೆಗೆ ರವಾನೆಯಾಗಲಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿಯ ಅಧಿಕಾರಿ.
ಜಿಲ್ಲೆಯ 229 ಗ್ರಾಮ ಪಂಚಾಯಿತಿಗಳ ಪೈಕಿ 210 ಕಡೆಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ (ಸ್ವಚ್ಛತಾ ಸಂಕೀರ್ಣ) ನಿರ್ಮಾಣಗೊಂಡಿದೆ. ಬಹುತೇಕ ಕಡೆಗಳಲ್ಲಿ ಮನೆಗಳಿಂದ ಸಂಗ್ರಹಿಸಿದ ತ್ಯಾಜ್ಯಗಳ ರಾಶಿ ಘಟಕಗಳಲ್ಲೇ ಹಲವು ತಿಂಗಳುಗಳಿಂದ ಉಳಿದುಕೊಂಡಿವೆ. ಈ ಸಮಸ್ಯೆ ಪರಿಹರಿಸಲು ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಪ್ರಾಯೋಗಿಕವಾಗಿ ಕಾರ್ಖಾನೆಗೆ ಪ್ಲಾಸ್ಟಿಕ್ ತ್ಯಾಜ್ಯ ಪೂರೈಸಲು ಯೋಜನೆ ರೂಪಿಸಿದ್ದಾರೆ.
‘ಸ್ವಚ್ಛತಾ ಸಂಕೀರ್ಣದಲ್ಲಿ ಸಂಗ್ರಹವಾಗುವ ಗಾಜು ಮತ್ತು ಪ್ಲಾಸ್ಟಿಕ್ ಬಾಟಲಿಗಳು, ಕಾಗದಗಳನ್ನು ಖರೀದಿಸಲು ಗುಜರಿ ವ್ಯಾಪಾರಿಗಳು ಆಸಕ್ತಿ ತೋರಿಸುತ್ತಾರೆ. ಆದರೆ, ಮರುಬಳಕೆ ಮಾಡಲು ಸಾಧ್ಯವಿಲ್ಲದ, ಸುಲಭವಾಗಿ ಮಣ್ಣಿನಲ್ಲಿ ಕರಗದ ತಿಂಡಿ ತಿನಿಸುಗಳ ಖಾಲಿ ಪೊಟ್ಟಣಗಳು, ಪ್ಲಾಸ್ಟಿಕ್ ಕವರ್‌ಗಳು, ಗುಟಕಾ ಪೊಟ್ಟಣಗಳ ವಿಲೇವಾರಿ ಕಷ್ಟವಾಗಿದೆ. ಈ ತ್ಯಾಜ್ಯಗಳ ರಾಶಿಯೇ ಘಟಕಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಅವುಗಳ ವಿಲೇವಾರಿಗೆ ಸಿಇಒ ಸೂಚನೆಯಂತೆ ವಿನೂತನ ಪ್ರಯತ್ನ ಆರಂಭಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ವಿಭಾಗದ ಉಪಕಾರ್ಯದರ್ಶಿ ಎಂ.ಎಸ್.ಅಲ್ಲಾಭಕಷ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ವಿಲೇವಾರಿಗೆ ಸಾಧ್ಯವಾಗದ, ಯಾರೂ ಖರೀದಿಸದೆ ಸ್ವಚ್ಛತಾ ಸಂಕೀರ್ಣಕ್ಕೆ ಹೊರೆಯಾಗುವ ತ್ಯಾಜ್ಯಗಳನ್ನು ಸಿಮೆಂಟ್ ಕಾರ್ಖಾನೆಗೆ ನೀಡಲಾಗುತ್ತದೆ. ಅವುಗಳ ಸಾಗಣೆ ವೆಚ್ಚವನ್ನು ಆಯಾ ಗ್ರಾಮ ಪಂಚಾಯಿತಿ ಭರಿಸಲಿದೆ. ಇದಕ್ಕೆ ಸ್ವಚ್ಛತೆ ನಿರ್ವಹಣೆಗೆ ಮೀಸಲಿಟ್ಟ ಅನುದಾನ ಬಳಕೆಗೆ ಅವಕಾಶವಿದೆ’ ಎಂದರು.
ಪ್ರವಾಸಿ ತಾಣಗಳಿಗೆ ಆದ್ಯತೆ
‘ಗೋಕರ್ಣ, ಮುರುಡೇಶ್ವರ, ಯಾಣ, ಉಂಚಳ್ಳಿ, ದಾಂಡೇಲಿ ಸೇರಿದಂತೆ ಜಿಲ್ಲೆಯ ಹಲವು ಪ್ರವಾಸಿ ತಾಣಗಳಲ್ಲಿ ಮರುಬಳಕೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್ ಪೊಟ್ಟಣಗಳ ತ್ಯಾಜ್ಯ ಪ್ರಮಾಣ ಹೆಚ್ಚು ಸಂಗ್ರಹವಾಗುತ್ತಿದೆ. ಅವುಗಳ ವಿಲೇವಾರಿ ಕಷ್ಟವಾಗಿರುವುದರಿಂದ ಮೊದಲ ಹಂತದಲ್ಲಿ ಪ್ರವಾಸಿ ತಾಣಗಳಿರುವ ಗ್ರಾಮ ಪಂಚಾಯಿತಿಗಳ ಸ್ವಚ್ಛತಾ ಸಂಕೀರ್ಣದಲ್ಲಿನ ತ್ಯಾಜ್ಯಗಳನ್ನು ಕಾರ್ಖಾನೆಗಳಿಗೆ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಂ.ಎಸ್.ಅಲ್ಲಾಭಕಷ್ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-20-697393013