ಶಿರಸಿ: ನಿರಂತರ ಕೊಳೆಗೆ ಅಡಿಕೆ ಮರಗಳು ನಾಶ

ಶಿರಸಿ: ನಿರಂತರ ಕೊಳೆಗೆ ಅಡಿಕೆ ಮರಗಳು ನಾಶ

ಶಿರಸಿ: ನಿರಂತರ ಕೊಳೆಗೆ ಅಡಿಕೆ ಮರಗಳು ನಾಶ

ಶಿರಸಿ: ಮೂರ್ನಾಲ್ಕು ವರ್ಷಗಳಿಂದ ಅಡಿಕೆಗೆ ನಿರಂತರವಾಗಿ ಕಾಡುತ್ತಿರುವ ತೀವ್ರತರದ ಕೊಳೆ ರೋಗ ಇದೀಗ ಕೇವಲ ಫಸಲನ್ನಷ್ಟೇ ಅಲ್ಲ, ಬೆಳೆಗಾರರ ಭವಿಷ್ಯದ ಆಧಾರವಾಗಿರುವ ಅಡಿಕೆ ಮರಗಳನ್ನೇ ನುಂಗಿಹಾಕುತ್ತಿದೆ. ಇದು ಬೆಳೆಗಾರರನ್ನು ಆತಂಕದ ತುದಿಗೆ ತಳ್ಳಿದೆ.

ಸಾಮಾನ್ಯವಾಗಿ ಕೊಳೆ ರೋಗ ಬಂದಾಗ ಇಳುವರಿ ಮಾತ್ರ ಕುಸಿಯುತ್ತಿತ್ತು. ಆದರೆ ಸತತ ಮೂರು-ನಾಲ್ಕು ವರ್ಷಗಳಿಂದ ಒಂದೇ ಸಮನೆ ಹತ್ತಾರು ಸಾವಿರ ಎಕರೆ ಪ್ರದೇಶದಲ್ಲಿ ಕೊಳೆ ರೋಗ ಕಾಣಿಸಿಕೊಳ್ಳುತ್ತಿದೆ. ಪದೇ ಪದೇ ಈ ರೋಗಕ್ಕೆ ತುತ್ತಾಗುತ್ತಿರುವ ಮರಗಳ ಸುಳಿ ಕೊಳೆತು, ತಮ್ಮ ರೋಗನಿರೋಧಕ ಶಕ್ತಿ ಕಳೆದುಕೊಂಡು, ಮಣ್ಣಿನಿಂದ ಪೋಷಕಾಂಶ ಗ್ರಹಿಸಲಾಗದೇ ಅಂತಿಮವಾಗಿ ಸಾಯುತ್ತಿವೆ.

ಕಳೆದ ನಾಲ್ಕು ವರ್ಷಗಳಿಂದ ಸಂಭವಿಸುತ್ತಿರುವ ಅತಿವೃಷ್ಟಿ ಹಾಗೂ ನಿರಂತರ ಮಳೆ ಒಂದೆಡೆಯಾದರೆ, ಮಳೆ-ಬಿಸಿಲಿನ ಹೊಯ್ದಾಟ ತೋಟಗಳಲ್ಲಿ ತೇವಾಂಶ ಮತ್ತು ಬಿಸಿಯನ್ನು ಒಟ್ಟಿಗೆ ಹೆಚ್ಚಿಸುತ್ತಿದೆ. ಪರಿಣಾಮವಾಗಿ, ಗಾಳಿಯ ಮೂಲಕ ರೋಗಾಣುಗಳು ಅತ್ಯಂತ ವೇಗವಾಗಿ ತೋಟದಿಂದ ತೋಟಕ್ಕೆ ವ್ಯಾಪಿಸುತ್ತಿವೆ. ಜಿಲ್ಲೆಯ ಸುಮಾರು 10 ಸಾವಿರಕ್ಕೂ ಹೆಚ್ಚು ಎಕರೆ ವಿಸ್ತೀರ್ಣದಲ್ಲಿ ಈ ರೋಗ ವ್ಯಾಪಿಸಿದೆ. ಸ್ವಲ್ಪ ಬಲಹೀನ ಮರಗಳು ಈ ರೋಗದ ದೀರ್ಘಾವಧಿ ಪರಿಣಾಮದಿಂದ ನಾಶವಾಗುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

‘ಒಂದು ಮರವನ್ನು ಫಲ ನೀಡುವ ಹಂತಕ್ಕೆ ತರಲು ಕನಿಷ್ಠ 7 ರಿಂದ 8 ವರ್ಷಗಳ ನಿರಂತರ ಶ್ರಮ ಮತ್ತು ಬಂಡವಾಳ ಬೇಕಾಗುತ್ತದೆ. ಕೊಳೆ ಕಾಣಿಸಿಕೊಂಡ ಹಲವು ಭಾಗಗಳಲ್ಲಿ ಇಂತಹ ನೂರಾರು ಮರಗಳು ನಾಶವಾಗುತ್ತಿರುವುದು ರೈತರನ್ನು ಶಾಶ್ವತ ಸಾಲದ ಸುಳಿಗೆ ತಳ್ಳುವ ಭೀತಿ ಹುಟ್ಟುಹಾಕಿದೆ. ರೋಗ ನಿಯಂತ್ರಣಕ್ಕೆ ಬೆಳೆಗಾರರು ಎಷ್ಟೇ ದುಬಾರಿ ಹಾಗೂ ಆಧುನಿಕ ಔಷಧಗಳನ್ನು ಸಿಂಪಡಿಸಿದರೂ ಯಾವುದೇ ಪ್ರಯೋಜನ ಸಿಗುತ್ತಿಲ್ಲ. ರೋಗಪೀಡಿತ ಮರಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಬೆಳೆಗಾರರು ಅಸಹಾಯಕರಾಗಿದ್ದಾರೆ. ರೋಗ ತೋಟದಾದ್ಯಂತ ಹರಡಬಾರದೆಂಬ ಕಾರಣಕ್ಕೆ ಈಗಾಗಲೇ ಹತ್ತಾರು ಮರಗಳನ್ನು ಕಡಿದು ಹಾಕಿದ್ದಾರೆ’ ಎಂದು ಹುಲೇಕಲ್ ಭಾಗದ ರೈತ ಸುರೇಶ ಹೆಗಡೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ರೈತರಲ್ಲಿ ಮುನ್ನೆಚ್ಚರಿಕೆ ಮುಖ್ಯ

‘ಅಡಿಕೆ ತೋಟಗಳಲ್ಲಿ ಸುಳಿಕೊಳೆ ರೋಗ ಕಾಣಿಸಿಕೊಂಡರೆ ಮರ ಸಂಪೂರ್ಣವಾಗಿ ನಾಶವಾಗುವುದು ನಿಶ್ಚಿತ ಹಾಗೂ ಇದಕ್ಕೆ ಯಾವುದೇ ತಕ್ಷಣದ ಉಪಶಮನ ಕ್ರಮಗಳಾಗಲಿ ಅಥವಾ ಚಿಕಿತ್ಸೆಯಾಗಲಿ ಇಲ್ಲವಾದ್ದರಿಂದ, ಬೆಳೆಗಾರರು ಮುನ್ನೆಚ್ಚರಿಕೆ ವಹಿಸುವುದೊಂದೇ ಏಕೈಕ ದಾರಿಯಾಗಿದೆ. ಫಸಲಿಗೆ ಕೊಳೆ ರೋಗದ ಆರಂಭಿಕ ಲಕ್ಷಣಗಳು ಗೋಚರಿಸಿದ ತಕ್ಷಣವೇ ಎಚ್ಚೆತ್ತುಕೊಂಡು, ಶಿಲೀಂಧ್ರನಾಶಕವಾದ ಬೋರ್ಡೋ ದ್ರಾವಣವನ್ನು ಕೇವಲ ಅಡಿಕೆ ಗೊಂಚಲುಗಳಿಗೆ ಮಾತ್ರವಲ್ಲದೆ, ಮರದ ಸುಳಿ ಭಾಗಕ್ಕೂ ತಲುಪುವಂತೆ ಕಡ್ಡಾಯವಾಗಿ ಸಿಂಪಡಿಸಬೇಕು’ ಎಂಬುದು ತೋಟಗಾರಿಕಾ ಇಲಾಖೆಯ ಅಧಿಕಾರಿ ಗಣೇಶ ಹೆಗಡೆ ಅವರ ಸಲಹೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-20-246909810

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ