
ಕುಕನೂರು: ರಸ್ತೆಗಳಿಗೆ ಭಾರದ ವಾಹನಗಳ ಭಾರ
ಕುಕನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಅಧಿಕ ಭಾರದ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸುವುದರಿಂದ ಗ್ರಾಮೀಣ ರಸ್ತೆಗಳು, ಜಿಲ್ಲಾ ಮುಖ್ಯ ರಸ್ತೆಗಳು ಸಂಪೂರ್ಣ ಹಾಳಾಗುತ್ತಿವೆ.
ತಾಲ್ಲೂಕು ವ್ಯಾಪ್ತಿಯ ಬಳಗೇರಿ, ಶಿರೂರು ಗ್ರಾಮಗಳಿಂದ ಮರಳು ಸಾಗಾಟ ನಡೆಯುತ್ತಿದ್ದು, ಮಿತಿ ಮೀರಿದ ಭಾರವನ್ನು ತುಂಬಿಕೊಂಡು ಟಿಪ್ಪರ್‌ಗಳು ಸಂಚರಿಸುತ್ತವೆ. ಜತೆಗೆ ಒಣ ಮಣ್ಣು (ಮರಂ) ತುಂಬಿಕೊಂಡು ಟಿಪ್ಪರ್‌ಗಳು ಸಂಚರಿಸುತ್ತಿರುವುದರಿಂದ ಗ್ರಾಮೀಣ ಭಾಗದ ಡಾಂಬರ್ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣಗೊಂಡಿವೆ. ಜಲ್ಲಿಕಲ್ಲುಗಳು ರಸ್ತೆ ತುಂಬೆಲ್ಲಾ ಹರಡಿವೆ. ಹೀಗಾಗಿ ಟಾರ್ ರಸ್ತೆಗಳು ಮಣ್ಣಿನ ರಸ್ತೆಗಳಾಗಿ ಪರಿವರ್ತನೆಗೊಂಡಿವೆ!
ಪಟ್ಟಣ ಕಲ್ಲು ಗಣಿಗಾರಿಕೆಗೆ ಹೆಸರಾಗಿದ್ದು, ಮಿತಿಮೀರಿದ ಕಲ್ಲು ಸರಬರಾಜು, ಕ್ರಷರ್ ಮಿಷನ್‌ಗಳ ಹಾವಳಿ ಹೆಚ್ಚಿದೆ. ಕ್ರಷರ್ ಮಿಷನ್‌ಗಳಿಂದ ಜಲ್ಲಿ ಕಲ್ಲುಗಳನ್ನು ತುಂಬಿಕೊಂಡು ಬರುವ ಟಿಪ್ಪರ್‌ಗಳು ರಸ್ತೆಯನ್ನು ಹಾಳು ಮಾಡುವುದಲ್ಲದೆ ಸಾರ್ವಜನಿಕರಿಗೆ ದೂಳಿನ ಕಿರಿಕಿರಿ ಉಂಟು ಮಾಡುತ್ತಿದೆ.
ಹಾವಳಿ: ತಾಲ್ಲೂಕಿನ ತಳಕಲ್, ಲಕಮಾಪುರ, ಚಿತ್ತಾಪುರ, ಅಡವಿಹಳ್ಳಿ, ಯರೇಹಂಚಿನಾಳ, ಬಿನ್ನಾಳ ಗ್ರಾಮಗಳ ಹೊರವಲಯದಲ್ಲಿ ಮಿತಿಮೀರಿದ ಸೋಲಾರ್, ವಿಂಡ್ ಫ್ಯಾನ್‌ಗಳಿಗೆ ಮರಂ ಹಾಗೂ ಕ್ರಷರ್‌ಗಳು ಇರುವ ಕಾರಣ ಭಾರಿ ಗಾತ್ರದ ವಾಹನಗಳ ಓಡಾಟ ಹೆಚ್ಚಾಗುತ್ತದೆ. ಇದರಿಂದ ಗ್ರಾಮೀಣ ಭಾಗದ ರಸ್ತೆಗಳು ನಿರ್ಮಿಸಿದ ಕೆಲವೇ ವರ್ಷಗಳಲ್ಲಿ ಹಾಳಾಗುತ್ತಿವೆ.
ಸರ್ಕಾರದ ನಿಯಮದ ಪ್ರಕಾರ ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಸುಮಾರು 18ರಿಂದ 20 ಟನ್, ಜಿಲ್ಲಾ ಮುಖ್ಯ ರಸ್ತೆಗಳಲ್ಲಿ 30 ಟನ್, ರಾಜ್ಯ ಹೆದ್ದಾರಿಗಳಲ್ಲಿ 40 ಟನ್ ಭಾರದ ವಾಹನಗಳು ಸಂಚರಿಸಬೇಕು. ಆದರೆ ತಾಲ್ಲೂಕಿನಲ್ಲಿ ನಿಯಮ ಬಾಹಿರವಾಗಿ ಗ್ರಾಮೀಣ ರಸ್ತೆಗಳಲ್ಲಿ ಸುಮಾರು 25 ರಿಂದ 30 ಟನ್ ಅಧಿಕ ಭಾರದ ಟಿಪ್ಪರ್‌ಗಳು ಸಂಚಾರ ಮಾಡುತ್ತಿರುವ ಕಾರಣ ರಸ್ತೆಗಳು ಕಡಿಮೆ ಅವಧಿಯಲ್ಲಿ ಹಾಳಾಗುತ್ತಿವೆ ಎನ್ನುವುದು ಸಾರ್ವಜನಿಕರ ದೂರಾಗಿದೆ.
ತಾಲ್ಲೂಕಿನ ವ್ಯಾಪ್ತಿಯಲ್ಲಿ ಸಂಚರಿಸುವ ಟಿಪ್ಪರಗಳು 10 ಬ್ರಾಸ್, 6 ಬ್ರಾಸ್ ವ್ಯಾಪ್ತಿಯನ್ನು ಹೊಂದಿವೆ. ಇದರ ಜತೆಗೆ ಟಿಪ್ಪರ್ ಮಾಲೀಕರು ಟಿಪ್ಪರಿನ ಮೇಲೆ ಮತ್ತೆ 2 ಅಡಿಗಳಷ್ಟು ಎತ್ತರವನ್ನು ಹೆಚ್ಚಿಸುವದರಿಂದ ರಸ್ತೆಗಳು ಹಾಳಾಗುತ್ತಿವೆ ಎನ್ನುವುದು ಅವರು ನೀಡುವ ವಿವರಣೆ.
ಪ್ರತಿ ವರ್ಷ ನಿರ್ವಹಣೆ ಹೊರೆ
ಪ್ರತಿ ವರ್ಷ ಸರ್ಕಾರ ಜಿಲ್ಲಾ ಮುಖ್ಯ ರಸ್ತೆಗಳ, ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಹಾಗೂ ದುರಸ್ತಿಗಾಗಿ ಹಣ ಖರ್ಚು ಮಾಡುತ್ತದೆ. ಆದರೆ, ಅಧಿಕ ಭಾರದ ವಾಹನಗಳ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿವೆ.
‘ಜಿಲ್ಲೆಯಲ್ಲಿ ಗಣಿ–ಭೂವಿಜ್ಞಾನ ಮತ್ತು ಆರ್‌ಟಿಒ ಕಚೇರಿಗಳು ಇವೆ. ಅಧಿಕ ಭಾರದ ವಾಹನಗಳು ಹಗಲು ಹೊತ್ತಿನಲ್ಲೇ ಮರಳು ಸಾಗುತ್ತಿವೆ. ಕೆಲವು ಟಿಪ್ಪರ್‌ಗಳಿಗೆ ವಾಹನ ಸಂಖ್ಯೆಯೇ ಇರುವದಿಲ್ಲ. ಇಂತಹ ಟಿಪ್ಪರ್‌ಗಳು ಸಂಚರಿಸಿದರು ಸಹ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ’ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
‘ಅಧಿಕ ಭಾರವನ್ನು ಹೊತ್ತುಕೊಂಡು ಸಂಚರಿಸುವ ಟಿಪ್ಪರ್‌ಗಳ ವೇಗಕ್ಕೆ ರಸ್ತೆಗಳಲ್ಲಿ ದೂಳು ಆವರಿಸಿ ಅನೇಕ ವೇಳೆ ಅಪಘಾತಗಳು ಸಂಭವಿಸಿವೆ. ಜಿಲ್ಲಾ ಮುಖ್ಯ ರಸ್ತೆಯ ಮೇಲೆ ಅಧಿಕ ಭಾರದ ವಾಹನಗಳ ಸಂಚಾರ ನಿಷೇಧಿಸಬೇಕು’ ಎನ್ನುತ್ತಾರೆ ಸ್ಥಳೀಯರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-35-1335310101