
ಬೆಳಗಾವಿ: ಬರ ಘೋಷಣೆಯಲ್ಲೂ ತಾರತಮ್ಯ, ರೈತರ ಆಕ್ರೋಶ
ಬೆಳಗಾವಿ: ರಾಜ್ಯ ಸರ್ಕಾರ ಪ್ರಕಟಿಸಿದ ಎರಡನೇ ಪಟ್ಟಿಯಲ್ಲಿ ಜಿಲ್ಲೆಯ ಒಂಬತ್ತು ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರಲು ಅರ್ಹತೆ ಪಡೆದಿವೆ. ಆದರೆ, ಮುಖ್ಯವಾಗಿ ಸವದತ್ತಿ, ರಾಮದುರ್ಗ ತಾಲ್ಲೂಕುಗಳೇ ಈ ಪಟ್ಟಿಯಲ್ಲಿ ಇಲ್ಲದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಸಪ್ತ ನದಿಗಳು ಹರಿದ ಸಮೃದ್ಧ ಜಿಲ್ಲೆ ಬೆಳಗಾವಿ. ಈ ಬಾರಿ ಮುಂಗಾರು ಹಂಗಾಮಿನ ಆರಂಭದಲ್ಲಿ ಸುರಿದ ಮಳೆ ರೈತರಲ್ಲಿ ಆಶಾಭಾವ ಮೂಡಿಸಿತ್ತು. ಉತ್ತಮ ಫಸಲಿನ ನಿರೀಕ್ಷೆಯಲ್ಲೇ ಕೃಷಿಕರು 7.40 ಲಕ್ಷ ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳ ಬಿತ್ತನೆ ಚಟುವಟಿಕೆ ಕೈಗೊಂಡಿದ್ದರು. ಆದರೆ, ನಂತರ ನಿರೀಕ್ಷೆಯಂತೆ ಮಳೆಯಾಗದೆ ಬೆಳೆಗಳೆಲ್ಲ ಕಮರಿಹೋಗಿವೆ.
ಇಡೀ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಅದರಲ್ಲೂ ಯರಗಟ್ಟಿ, ಸವದತ್ತಿ ಮತ್ತು ರಾಮದುರ್ಗ ತಾಲ್ಲೂಕಿನಲ್ಲಿ ಪರಿಸ್ಥಿತಿ ಗಂಭೀರವಾಗಿದೆ.
ಹಾಗಾಗಿ ಈ ಮೂರು ತಾಲ್ಲೂಕುಗಳಿಗೆ ಸಚಿವ ಸತೀಶ ಜಾರಕಿಹೊಳಿ ಅವರು, ಆಯಾ ಕ್ಷೇತ್ರದ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಹೋಗಿ ಬೆಳೆಗಳ ಸ್ಥಿತಿಗತಿ ಪರಿಶೀಲಿಸಿದ್ದರು. ‘ಈ ಸಲ ಬೆಳಿನ ಬಂದಿಲ್ರಿ. ನಮ್ಮ ತಾಲ್ಲೂಕು ಬರಪೀಡಿತ ಅಂತ ಘೋಷಣೆ ಮಾಡ್ರಿ’ ಎಂದು ರೈತರು ಅಳಲು ತೋಡಿಕೊಂಡಿದ್ದರು. ಈ ಬೇಡಿಕೆ ಈಡೇರಿಸುವುದಾಗಿ ಸಚಿವರು, ಶಾಸಕರಿಂದ ಆಶ್ವಾಸನೆ ಸಿಕ್ಕಿತ್ತು.
ಯರಗಟ್ಟಿಗಷ್ಟೇ ಸ್ಥಾನ: ಈ ಮೂರು ತಾಲ್ಲೂಕುಗಳ ಜತೆಗೆ, ಬೇರೆ ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು ಎಂಬ ಆಗ್ರಹ ರೈತರಿಂದ ಕೇಳಿಬಂದಿತ್ತು. ಆದರೆ, ಅಚ್ಚರಿ ಎಂದರೆ ಮೂರು ತಾಲ್ಲೂಕುಗಳ ಪೈಕಿ ಯರಗಟ್ಟಿ ಮಾತ್ರ ಬರಪೀಡಿತ ಪಟ್ಟಿಗೆ ಸೇರಲು ಅರ್ಹತೆ ಪಡೆದಿದೆ. ಉಳಿದೆರಡು ತಾಲ್ಲೂಕು ಪರಿಗಣಿಸದಿರುವುದು ರೈತರಲ್ಲಿ ಆಕ್ರೋಶ ಹೆಚ್ಚಿಸಿದೆ. ಗೋಕಾಕ ತಾಲ್ಲೂಕು ಕೈಬಿಟ್ಟಿದ್ದಕ್ಕೆ ಪ್ರತಿಭಟನೆ ನಡೆಯುತ್ತಿವೆ.
ಯಾವ್ಯಾವ ತಾಲ್ಲೂಕು?: ಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ರಾಯಬಾಗ, ಚನ್ನಮ್ಮನ ಕಿತ್ತೂರು, ನಿಪ್ಪಾಣಿ, ಯರಗಟ್ಟಿ ಮತ್ತು ಮೂಡಲಗಿ ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರಲಿವೆ. ಇದಕ್ಕಾಗಿ ‘ಬರ ನಿರ್ವಹಣಾ ಕೈಪಿಡಿ–2020’ರ ಮಾನದಂಡಗಳ ಪ್ರಕಾರ, ‘ಕ್ರಾಪ್ ಲಾಸ್ ಜಿಟಿ’ ಆ್ಯಪ್ ಮೂಲಕ ತಕ್ಷಣವೇ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ.
ಸವದತ್ತಿಗಿಲ್ಲ ಸ್ಥಾನ: ಅಸಮಾಧಾನ
ಸವದತ್ತಿ: ರಾಜ್ಯ ಸರ್ಕಾರ ಮೊದಲು ಪ್ರಕಟಿಸಿದ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಸವದತ್ತಿ ಹೆಸರು ಇರಲಿಲ್ಲ. ಈಗ ಎರಡನೇ ಪಟ್ಟಿಯಲ್ಲೂ ಕೈಬಿಟ್ಟಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಸವದತ್ತಿ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಆರಂಭದಲ್ಲಿ ಸುರಿದ ಮಳೆ ರೈತರಲ್ಲಿ ಉತ್ತಮ ನಿರೀಕ್ಷೆ ಮೂಡಿಸಿತ್ತು. ಆದರೆ, ನಂತರ ಕೈಕೊಟ್ಟ ಮಳೆ ರೈತರನ್ನು ಸಂಕಷ್ಟಕ್ಕೆ ನೂಕಿತು.
ವರುಣನ ಅವಕೃಪೆಯಿಂದಾಗಿ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ರೈತರು ಬೆಳೆದಿದ್ದ ಹೆಸರು, ಉದ್ದು, ಗೋವಿನಜೋಳ, ಶೇಂಗಾ, ಹತ್ತಿ, ಸೂರ್ಯಕಾಂತಿ, ಸೋಯಾಬೀನ್, ತೊಗರಿ, ಸಜ್ಜೆ ಬೆಳೆಗಳು ಹಾನಿಗೆ ಒಳಗಾಗಿವೆ.
‘ಸಚಿವ ಸತೀಶ ಜಾರಕಿಹೊಳಿ, ಶಾಸಕ ವಿಶ್ವಾಸ ವೈದ್ಯ ಮತ್ತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ನಮ್ಮ ತಾಲ್ಲೂಕು ಬರಪೀಡಿತ ಪಟ್ಟಿಗೆ ಸೇರುತ್ತದೆ. ಬರ ಪರಿಹಾರ ಕಾಮಗಾರಿ ಆರಂಭಿಸುತ್ತೇವೆ ಎಂದು ಹೇಳಿಹೋಗಿದ್ದರು. ಆದರೆ, ನಿರೀಕ್ಷೆ ಹುಸಿಯಾಗಿದೆ’ ಎಂದು ರೈತರು ದೂರಿದ್ದಾರೆ.
21.8 ಸೆಂ.ಮೀ ಮಳೆ: ಸವದತ್ತಿ ತಾಲ್ಲೂಕಿನಲ್ಲಿ ಜೂನ್ 1ರಿಂದ ಸೆಪ್ಟೆಂಬರ್ 17ರವರೆಗೆ 26.4 ಸೆಂ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ, 21.8 ಸೆಂ.ಮೀ. ಮಳೆಯಾಗಿದ್ದು, ಶೇ 17ರಷ್ಟು ಮಳೆ ಕೊರತೆಯಾಗಿದೆ. ಅದರಲ್ಲೂ ಆಗಸ್ಟ್‌ನಲ್ಲಿ 5.69 ಸೆಂ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಈ ಪೈಕಿ 3.51 ಸೆಂ.ಮಿ ಮಳೆಯಾಗಿದ್ದು, ಶೇ 38ರಷ್ಟು ಮಳೆ ಕೊರತೆಯಾಗಿದೆ.
ಸೆ.24ಕ್ಕೆ ಬಂದ್: ‘ಬರಪೀಡಿತ ತಾಲ್ಲೂಕುಗಳ ಎರಡನೇ ಪಟ್ಟಿಯಲ್ಲಿ ಸವದತ್ತಿ ಕೈಬಿಟ್ಟಿದ್ದಕ್ಕೆ ರೈತರು ಆಕ್ರೋಶಗೊಂಡಿದ್ದಾರೆ. ಸರ್ಕಾರ ಕೂಡಲೇ ತನ್ನ ನಿರ್ಧಾರ ಮರುಪರಿಶೀಲಿಸಿ, ಸವದತ್ತಿಯನ್ನು ಬರಪೀಡಿತ ಎಂದು ಘೋಷಿಸಬೇಕು. ಇದಕ್ಕಾಗಿ ಸೆ.24ರಂದು ಸವದತ್ತಿ ಬಂದ್ ಕರೆ ಕೊಡಲು ತೀರ್ಮಾನಿಸಿದ್ದೇವೆ’ ಎಂದು ರೈತ ಸಂಘಟನೆಯವರು ಹೇಳಿದ್ದಾರೆ.
26ಕ್ಕೆ ಪ್ರತಿಭಟನೆಗೆ ನಿರ್ಧಾರ
ರಾಮದುರ್ಗ: ಎರಡನೇ ಪಟ್ಟಿಯಲ್ಲೂ ರಾಮದುರ್ಗವನ್ನು ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಹಾಗಾಗಿ ಕೆಲವು ಸಂಘಟನೆಯವರು ಸೆಪ್ಟೆಂಬರ್ 26ರಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
ತಾಲ್ಲೂಕಿನಲ್ಲಿ 62,191 ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆ ಮಾಡಲಾಗಿತ್ತು. ಈ ಪೈಕಿ 43,787 ಹೆಕ್ಟೇರ್‌ಗಳಲ್ಲಿ ಬೆಳೆದಿದ್ದ ಬೆಳೆಗಳು ಕಮರಿ ಹೋಗಿವೆ. ಶೇ 75ರಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಹೆಸರು, ಮೆಕ್ಕೆಜೋಳ, ಉದ್ದು, ತೊಗರಿ, ಸಜ್ಜೆ ಬಿತ್ತನೆ ಮಾಡಿದ್ದ ರೈತರು ಕೈಸುಟ್ಟುಕೊಂಡಿದ್ದಾರೆ.
‘ರಾಮದುರ್ಗವನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡದೆ ಸರ್ಕಾರ ರೈತರಿಗೆ ಅನ್ಯಾಯ ಮಾಡಿದೆ. ಶಾಸಕ ಅಶೋಕ ಪಟ್ಟಣ ಹೇಳಿದಂತೆ 10ರಿಂದ 15 ದಿನಗಳಲ್ಲಿ ರಾಮದುರ್ಗ ತಾಲ್ಲೂಕನ್ನು ಬರಪೀಡಿತವೆಂದು ಘೋಷಣೆ ಮಾಡದಿದ್ದರೆ ಹೋರಾಟ ಮಾಡಲಾಗುವುದು’ ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಮದುರ್ಗ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ ದೇವರಡ್ಡಿ ಎಚ್ಚರಿಕೆ ನೀಡಿದರು. ‘ಮಳೆರಾಯ ರೈತರ ಮೇಲೆ ಮುನಿಸಿಕೊಂಡಾಗ ಸರ್ಕಾರ ನೆರವಿಗೆ ಬರಬೇಕು. ಆದರೆ, ಮಳೆರಾಯನ ಜತೆಗೆ ಸರ್ಕಾರವೂ ಮುನಿಸಿಕೊಂಡರೆ ರೈತ ಸಂಕುಲ ಬದುಕುವುದು ಕಷ್ಟ’ ಎನ್ನುತ್ತಾರೆ ರೈತ ಮುಖಂಡ ಶಿವಾನಂದ ದೊಡವಾಡ.
ಸರ್ಕಾರ ತನ್ನ ನಿರ್ಧಾರ ಮರುಪರಿಶೀಲಿಸಬೇಕು. ಇಲ್ಲದಿದ್ದರೆ ಆಡಳಿತಾತ್ಮಕ ನಿರ್ಧಾರದ ವಿರುದ್ಧ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಇದೆ ಸುರೇಶ ಸಂಪಗಾಂವಿ ರೈತ ಮುಖಂಡ, ಹಿಟ್ಟಣಗಿ