
ಮನೆ ಬಾಗಿಲಿಗೆ ನ್ಯಾಯ ಪರಿಕಲ್ಪನೆ ಸಾಕಾರ: ನ್ಯಾಯಮೂರ್ತಿ ಹಂಚಾಟಿ ಸಂಜೀವ್‌ಕುಮಾರ್
ಚೇಳೂರು: ಜನರಿಗೆ ಶೀಘ್ರ ಹಾಗೂ ನೈಜ ನ್ಯಾಯ ದೊರೆಯುವಂತೆ ನ್ಯಾಯಾಧೀಶರು ಮತ್ತು ವಕೀಲರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಪಟ್ಟಣದಲ್ಲಿ ನ್ಯಾಯಾಲಯ ಸ್ಥಾಪನೆಯಾಗಿರುವುದು ಮನೆ ಬಾಗಿಲಿಗೆ ನ್ಯಾಯ ಪರಿಕಲ್ಪನೆಯನ್ನು ಸಾಕಾರಗೊಳಿಸಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಂಚಾಟಿ ಸಂಜೀವ್‌ಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಮಾನಸ ಎಜುಕೇಷನಲ್ ಟ್ರಸ್ಟ್ ಆವರಣದಲ್ಲಿ ಭಾನುವಾರ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘದಿಂದ ಆಯೋಜಿಸಿದ್ದ ನೂತನ ಸಿವಿಲ್ ನ್ಯಾಯಾಲಯ ಹಾಗೂ ಜೆಎಂಎಫ್‌ಸಿ ಇಟಿನೆರರಿ ನ್ಯಾಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಡಿ.ವಿ. ಗುಂಡಪ್ಪ ಅವರ ಸಾಲುಗಳನ್ನು ಸ್ಮರಿಸಿದ ಅವರು, ‘ಪ್ರತಿದಿನ ಆತ್ಮಪರೀಕ್ಷೆ, ಮನಶ್ಶೋಧನೆ, ಧರ್ಮಚಿಂತನೆ ಹಾಗೂ ಲೋಕಹಿತ ಸೇವೆಯೇ ದೈವನಿಷ್ಠೆಯ ಲಕ್ಷಣ. ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಾರ್ವಜನಿಕರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ’ ಎಂದರು.
ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮಾತನಾಡಿ, ‘ಚೇಳೂರು ತಾಲ್ಲೂಕಿನ ಗಡಿಭಾಗದ ಜನರು ಸಣ್ಣಪುಟ್ಟ ನ್ಯಾಯಾಂಗ ಕೆಲಸಗಳಿಗೂ 40 ಕಿ.ಮೀ. ದೂರದ ಬಾಗೇಪಲ್ಲಿಗೆ ತೆರಳಬೇಕಾದ ಅನಿವಾರ್ಯತೆ ಇತ್ತು. ಈಗ ಚೇಳೂರಿನಲ್ಲಿಯೇ ನ್ಯಾಯಾಲಯ ಆರಂಭವಾಗಿರುವುದರಿಂದ ಈ ಭಾಗದ ಬಡ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ 20 ಎಕರೆ ಜಾಗ ಗುರುತಿಸಲಾಗಿದ್ದು, ₹10 ಕೋಟಿ ವೆಚ್ಚದಲ್ಲಿ ನೂತನ ಆಡಳಿತ ಸೌಧ ನಿರ್ಮಾಣಕ್ಕೆ ಶೀಘ್ರ ಭೂಮಿಪೂಜೆ ನೆರವೇರಿಸಲಾಗುವುದು’ ಎಂದರು.
ಸಂಸದ ಡಾ. ಕೆ. ಸುಧಾಕರ್ ಮಾತನಾಡಿ, ‘ಪ್ರಜಾಪ್ರಭುತ್ವದ ಯಶಸ್ಸಿಗೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಸಮನ್ವಯ ಅತ್ಯಗತ್ಯ. ಕೇಂದ್ರ ಸರ್ಕಾರದ ಡಿಜಿಟಲ್ ಕೋರ್ಟ್ ಯೋಜನೆಯಡಿ ನ್ಯಾಯಾಲಯಗಳ ಸೌಲಭ್ಯ ಹೆಚ್ಚುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸುಲಭವಾಗಿ ನ್ಯಾಯ ದೊರೆಯಲಿದೆ’ ಎಂದರು.
ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿ, ‘ಪ್ರಜಾಪ್ರಭುತ್ವ ಹಾಗೂ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಅತ್ಯಂತ ನಂಬಿಕಾರ್ಹ ವ್ಯವಸ್ಥೆಗಳಾಗಿವೆ. ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತವು ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಂಪೂರ್ಣ ಸಹಕಾರ ನೀಡಲಿದೆ’ ಎಂದು ಭರವಸೆ ನೀಡಿದರು.
ಹೈಕೋರ್ಟ್ ನ್ಯಾಯಮೂರ್ತಿ ರಾಘವೇಂದ್ರ ಸೀತಾರಾಮ ಶ್ರೀವತ್ಸ, ಸೆಷನ್ಸ್ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ, ಬಾಗೇಪಲ್ಲಿ ನ್ಯಾಯಾಲಯದ ನ್ಯಾಯಾಧೀಶೆ ಭಾರತಿ, ಉಪ ವಿಭಾಗಾಧಿಕಾರಿ ಅಶ್ವಿನ್, ಸಿಇಒ ನವೀನ್ ಭಟ್, ತಹಶೀಲ್ದಾರ್ ಶ್ವೇತ ಬಿ.ಕೆ., ಮನಿಷಾ ಎನ್. ಪತ್ರಿ, ಇಒ ನಾಗಮಣಿ, ವಕೀಲರು, ಅಧಿಕಾರಿಗಳು ಉಪಸ್ಥಿತರಿದ್ದರು.