ಉಳ್ಳಾಲ | ಹಳೇ ಸೀರೆಗಳಿಗೆ ‘ಸೂಜಿ ಮಲ್ಲಿಗೆ’ ಹೊಸ ರೂಪ: ಮಹಿಳೆಯರ ಕೈಚಳಕ

ಉಳ್ಳಾಲ | ಹಳೇ ಸೀರೆಗಳಿಗೆ ‘ಸೂಜಿ ಮಲ್ಲಿಗೆ’ ಹೊಸ ರೂಪ: ಮಹಿಳೆಯರ ಕೈಚಳಕ

ಉಳ್ಳಾಲ | ಹಳೇ ಸೀರೆಗಳಿಗೆ ‘ಸೂಜಿ ಮಲ್ಲಿಗೆ’ ಹೊಸ ರೂಪ: ಮಹಿಳೆಯರ ಕೈಚಳಕ

ಉಳ್ಳಾಲ: ಒಮ್ಮೆ ಬಳಸಿ ಬದಿಗಿಡುವ ಬಟ್ಟೆಗಳು, ಹಳೆಯ ಸೀರೆಗಳಿಗೆ ಮರು ಬಳಕೆಯ ಮೂಲಕ ಹೊಸ ಜೀವ ನೀಡುವ ಪರಿಸರ ಸ್ನೇಹಿ ಪ್ರಯತ್ನಕ್ಕೆ ‘ಹಸಿರು ದಳ’ ಸಂಸ್ಥೆ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರು ಮುಂದಾಗಿದ್ದಾರೆ.

ಗ್ರಾಮಗಳಲ್ಲಿ ಹಸಿರು ದಳವು ಹಸಿ ಮತ್ತು ಒಣ ಕಸವನ್ನು ವಿಂಗಡಿಸುವಂತೆ ಜಾಗೃತಿ ಮೂಡಿಸಿ, ಸಂಗ್ರಹವಾಗುವ ಹಸಿ ಕಸವನ್ನು ವೈಜ್ಞಾನಿಕ ವಿಧಾನದಲ್ಲಿ ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ. ಒಣ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಂಗಡಿಸಿ ಮೆಟೀರಿಯಲ್ ರಿಕವರಿ ಫೆಸಿಲಿಟಿಗೆ (ಎಂಆರ್‌ಎಫ್‌) ಕಳುಹಿಸಲಾಗುತ್ತದೆ. ಈ ವೇಳೆ ಬಟ್ಟೆ ತ್ಯಾಜ್ಯ ಹೊಸ ಸವಾಲಾಗಿ ಎದುರಾದಾಗ ಇದನ್ನು ಅವಕಾಶವನ್ನಾಗಿ ಪರಿವರ್ತಿಸುವ ಹೊಸ ಮಾದರಿಯನ್ನು ರೂಪಿಸಿತು. ಪ್ರತಿ ಗ್ರಾಮ ಪಂಚಾಯಿತಿಯ ಸಂಜೀವಿನಿ ಒಕ್ಕೂಟದ ಮಹಿಳೆಯರನ್ನು ಒಗ್ಗೂಡಿಸಿ ‘ಸೂಜಿ ಮಲ್ಲಿಗೆ’ ಎಂಬ ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡಿದೆ.

ಬಳಕೆಯಲ್ಲಿಲ್ಲದ ಉತ್ತಮ ಗುಣಮಟ್ಟದ ಹಳೆಯ ಬಟ್ಟೆಗಳ ಮರುಬಳಕೆ ಕುರಿತು ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನೀಡಿ, ನಂತರ ಮಹಿಳೆಯರು ತಮ್ಮ ಸೃಜನಶೀಲತೆಯನ್ನು ಬಳಸಿಕೊಂಡು ಹಳೆಯ ಸೀರೆ, ಬಟ್ಟೆ ಹಾಗೂ ಇತರ ಜವಳಿ ವಸ್ತುಗಳಿಗೆ ಹೊಸ ರೂಪ ನೀಡುತ್ತಿದ್ದಾರೆ ಎನ್ನುತ್ತಾರೆ ಹಸಿರು ದಳದ ಪ್ರಮುಖರು.

ಹಳೆಯ ಬಟ್ಟೆಗಳಿಂದ ವಿವಿಧ ಮಾದರಿಯ ಬಟ್ಟೆ ಚೀಲಗಳು, ಶಾಪಿಂಗ್ ಬ್ಯಾಗ್‌ಗಳು, ಪೌಚ್‌ಗಳು, ಪೆನ್ಸಿಲ್ ಪೌಚ್‌ಗಳು, ಮ್ಯಾಟ್‌ಗಳು ಹಾಗೂ ವಿವಿಧ ಆಲಂಕಾರಿಕ ಮತ್ತು ಉಪಯುಕ್ತ ವಸ್ತುಗಳು ತಯಾರಾಗುತ್ತಿವೆ. ಹೊಲಿಗೆ ತರಬೇತಿ ಪಡೆದ ಮಹಿಳೆಯರು ತಮ್ಮ ಮನೆಯಲ್ಲಿಯೇ ಕುಳಿತು ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ತಿಂಗಳಿಗೆ ₹10 ಸಾವಿರದಿಂದ ₹20 ಸಾವಿರದವರೆಗೆ ಆದಾಯ ಪಡೆಯುತ್ತಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ಆಯೋಜಿಸಿದ್ದ ಭಾರತ್‌ ಟೆಕ್ಸ್ ಮೇಳಕ್ಕೆ ಸೂಜಿ ಮಲ್ಲಿಗೆ ತಂಡ ಆಯ್ಕೆಗೊಂಡಿತ್ತು. ತಂಡದ ರೇಖಾ, ವಿದ್ಯಾ, ರಮೀಝಾ ಬಾನು, ಹಸಿರು ದಳದ ನಾಗರಾಜ್‌ ದೆಹಲಿಗೆ ಭೇಟಿ ನೀಡಿ ಮಾರಾಟ ಮಳಿಗೆಗಳಲ್ಲಿ ಬಟ್ಟೆ ಚೀಲಗಳನ್ನು ಇರಿಸಿದ್ದರು. ಘನತ್ಯಾಜ್ಯ ನಿರ್ವಹಣೆಯಲ್ಲಿ ಉತ್ತಮ ಆವಿಷ್ಕಾರ ನಡೆಸಿರುವುದನ್ನು ಕೇಂದ್ರ ಜವಳಿ ಖಾತೆ ಸಚಿವ ಗಿರಿರಾಜ್‌ ಸಿಂಗ್‌ ಸೂಜಿ ಮಲ್ಲಿಗೆ ತಂಡವನ್ನು ಶ್ಲಾಘಿಸಿದ್ದರು.

‘ಹಸಿರು ದಳದ ಸೂಜಿ ಮಲ್ಲಿಗೆ ತಂಡದವರು ಹಳೆ ಬಟ್ಟೆಗಳಿಂದ ಚೀಲಗಳನ್ನು ಮಾಡುವ ಒಂದು ವಾರದ ತರಬೇತಿ ನೀಡಿದ್ದರು. ತರಬೇತಿ ಬಳಿಕ ಪ್ರತಿದಿನ ಹೊಲಿಯಲು ಆರ್ಡರ್‌ ಕೊಡುತ್ತಾ ಹೋದರು. ತಿಂಗಳಿಗೆ ₹15 ರಿಂದ 20 ಸಾವಿರ ದುಡಿಯುತ್ತಿದ್ದೇನೆ. ಇದು ಕುಟುಂಬಕ್ಕೆ ಬಹಳ ನೆರವಾಯಿತು. ಅಲ್ಲದೇ ದೆಹಲಿಗೆ ಹೋಗುವ ಅವಕಾಶವೂ ದೊರಕಿತು’ ಎಂದು ಫರಂಗಿಪೇಟೆಯ ವಿದ್ಯಾ ಹೇಳಿದರು.

‘ಫ್ರೀಡಂ ಫ್ರಮ್ ಪ್ಲಾಸ್ಟಿಕ್’ ಅಭಿಯಾನ ಇಂದು

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ), ಉಳ್ಳಾಲ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಉಳ್ಳಾಲ ಪ್ರೆಸ್‌ಕ್ಲಬ್ ಹಾಗೂ ಮಂಗಳೂರು ಹಸಿರು ದಳದ ಸಹಯೋಗದಲ್ಲಿ ‘ಫ್ರೀಡಂ ಫ್ರಮ್ ಪ್ಲಾಸ್ಟಿಕ್’ ಅಭಿಯಾನವನ್ನು ಸೆ.3ರಂದು ಬೆಳಿಗ್ಗೆ 10 ಗಂಟೆಗೆ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಕೊಣಾಜೆ ಹಾಗೂ ಉಳ್ಳಾಲ ಪೊಲೀಸ್ ಠಾಣಾಧಿಕಾರಿ ವಿರೂಪಾಕ್ಷ ಸ್ವಾಮಿ, ಜನಶಿಕ್ಷಣ ಟ್ರಸ್ಟ್‌ನ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಜನ ಶಿಕ್ಷಣ ಟ್ರಸ್ಟ್‌ನ ಕೃಷ್ಣ ಮೂಲ್ಯ, ಉಳ್ಳಾಲ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ್ ಪೊಯ್ಯತ್ತಬೈಲ್ ಇತರರು ಭಾಗವಹಿಸಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-29-1619147751

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ