
ಕೆಂಭಾವಿ: ಹತ್ತಿ ಬೆಳೆಗೆ ಎಲೆ ಮುಟ್ಟು ವ್ಯಾಪಕ ರೋಗ, ರೈತರಲ್ಲಿ ಆತಂಕ
ಕೆಂಭಾವಿ: ಈ ವಲಯದ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿಗೆ ಈ ಬಾರಿ ಎಲೆ ಮುಟ್ಟು ರೋಗ ತೀವ್ರವಾಗಿ ಬೆನ್ನುಬಿದ್ದಿದ್ದು, ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ಹತ್ತಿ ಬೆಳೆಗಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಆರಂಭದಲ್ಲಿ ಉತ್ತಮವಾಗಿ ಮೂಡಿಬಂದಿದ್ದ ಹತ್ತಿ ಗಿಡಗಳು, ಪ್ರಸ್ತುತ ದಿನಗಳಲ್ಲಿ ರೋಗದ ಬಾಧೆಯಿಂದಾಗಿ ಸೊರಗುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ.
ಹತ್ತಿ ಬೆಳೆಯ ಪ್ರಮುಖ ಭಾಗಗಳಾದ ಎಲೆ, ಕಾಂಡಗಳು ಮುದುಡಿಕೊಳ್ಳುತ್ತಿರುವುದರಿಂದ ಇಡೀ ಬೆಳೆ ನಾಶವಾಗುವ ಭೀತಿ ಎದುರಾಗಿದೆ.
ಮಳೆಯಾಶ್ರಿತ ಪ್ರದೇಶಗಳಲ್ಲಿ ಮಳೆಯಿಲ್ಲದೇ ಬರದ ಛಾಯೆಯಿಂದ ನಲುಗುತ್ತಿರುವ ರೈತರು ಒಂದೆಡೆಯಾದರೆ, ನೀರಾವರಿ ಪ್ರದೇಶಗಳಲ್ಲಿ ಕಾಲುವೆ ನೀರಿನ ಸಹಾಯದಿಂದ ಅಲ್ಪ ಸ್ವಲ್ಪ ಹತ್ತಿ ಬೆಳೆ ಬೆಳೆಯುತ್ತಿರುವ ರೈತರಿಗೆ ಎಲೆ ಮುಟ್ಟು ರೋಗ ಬೆನ್ನು ಬಿಡದೇ ಕಾಡುತ್ತಿರುವುದು ರೈತರನ್ನು ಚಿಂತಾಕ್ರಾಂತರನ್ನಾಗಿ ಮಾಡಿದೆ.
ರೋಗದ ಲಕ್ಷಣ: ಎಲೆಗಳ ನರಗಳು ದಪ್ಪಗಾಗಿ, ಗಾಢ ಹಸಿರು ಬಣ್ಣಕ್ಕೆ ತಿರುಗುತ್ತಿವೆ. ಎಲೆಯು ಒಳಭಾಗ ಅಥವಾ ಹೊರ ಭಾಗಗಳಲ್ಲಿ ಮುದುಡುತ್ತಿವೆ, ಗಿಡಗಳ ಬೆಳವಣಿಗೆ ಸಂಪೂರ್ಣ ಕುಂಠಿತಗೊಂಡು ಬೆಳವಣಿಕೆ ಕುಂಠಿತವಾಗುತ್ತಿದೆ. ಹೂ ಬಿಡುವುದು ಮತ್ತು ಕಾಯಿ ಕೊಂಡಿ ಕಟ್ಟುವುದು ಗಣನೀಯವಾಗಿ ಕಡಿಮೆಯಾಗುತ್ತದೆ.
ರೈತರ ಅಳಲು: ಲಕ್ಷಾಂತರ ರೂಪಾಯಿ ಸಾಲ ಸೋಲ ಮಾಡಿ ಹತ್ತಿ ಬಿತ್ತನೆ ಮಾಡಿದ್ದ ರೈತರು ಈಗ ರೋಗ ನಿಯಂತ್ರಣಕ್ಕಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡಿ ವಿವಿಧ ಕೀಟನಾಶಕಗಳನ್ನು ಸಿಂಪಡಿಸುತ್ತಿದ್ದಾರೆ. ಆದರೂ ರೋಗ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ. ಮಳೆಯ ಕೊರತೆಯಿಂದ ಕಳೆದ ಬಾರಿಗಿಂತ ಈ ಬಾರಿ ರೋಗದ ತೀವ್ರತೆ ಹೆಚ್ಚಾಗಿದ್ದು, ಎಕರೆಗೆ ಬಂಡವಾಳ ಹೂಡಿದ ಹಣವೂ ಕೈ ಸೇರುವುದು ಕಷ್ಟವಾಗಿದೆ ಎಂದು ಸ್ಥಳೀಯ ರೈತ ಶಿವಯೋಗಿ ಕುಂಬಾರ ಅಳಲು ತೋಡಿಕೊಂಡಿದ್ದಾರೆ.
ಕೃಷಿ ಇಲಾಖೆಯ ಅಧಿಕಾರಿಗಳು ತಕ್ಷಣವೇ ಜಂಟಿ ಸಮೀಕ್ಷೆ ನಡೆಸಿ, ರೋಗಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರಿಗೆ ಸೂಕ್ತ ಕೀಟನಾಶಕ ವಿತರಿಸಬೇಕು ಹಾಗೂ ಸಂಪೂರ್ಣ ನಷ್ಟ ಅನುಭವಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಹತ್ತಿ ಬೆಳೆಗೆ ರೋಗ ತಗುಲಿದ ಪ್ರದೇಶಗಳಿಗೆ ಕೃಷಿ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-30-1540775911