
ಸಾಲ ಮನ್ನಾಗೆ ಒತ್ತಾಯ: ಬಾದಾಮಿಯಲ್ಲಿ ಮುಂದುವರಿದ ರೈತರ ಧರಣಿ
ಬಾದಾಮಿ: ‘ ಮುಂಗಾರು ಮಳೆಯಾಗದೆ ಬೆಳೆಗಳೆಲ್ಲ ಒಣಗಿ ರೈತರು ಸಂಕಷ್ಟದಲ್ಲಿದ್ದಾರೆ. ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ರೈತರಿಂದ ಯಾವುದೇ ಸಾಲವನ್ನು ವಸೂಲಿ ಮಾಡಬಾರದು ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಶಿವನಪ್ಪ ಪೂಜಾರಿ ಒತ್ತಾಯಿಸಿದರು.
ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದ ಎದುರಿಗೆ ತಾಲ್ಲೂಕು ಘಟಕದ ರೈತ ಸಂಘ ಮತ್ತು ಭಾರತೀಯ ಕಿಸಾನ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ 11 ನೇ ದಿನಕ್ಕೆ ಮುಂದುವರೆದ ಧರಣಿ ಸ್ಥಳಕ್ಕೆ ಮಂಗಳವಾರ ಅವರು ಭೇಟಿ ನೀಡಿ ಬೆಂಬಲಿಸಿದರು.
ತಕ್ಷಣ ಬರ ಘೋಷಣೆ ಮಾಡಿ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಅವರು ಒತ್ತಾಯಿಸಿದರು. ರೈತ ಮುಖಂಡ ಶಶಿಕಾಂತ ಗುರೂಜಿ, ರೈತ ಸಂಘದ ಅಧ್ಯಕ್ಷ ಸಿದ್ದನಗೌಡ ಗೌಡರ , ಜಿಲ್ಲಾ ಘಟಕದ ಜೆಡಿಎಸ್ ಪಕ್ಷದ ಅಧ್ಯಕ್ಷ ಹನುಮಂತ ಮಾವಿನಮರದ ಮಾತನಾಡಿದರು.