
ಪ್ರಜ್ವಲ್ ಹೆಸರಿನಲ್ಲಿ ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲಾಗದು: ಕುಮಾರಸ್ವಾಮಿ
ಹಾಸನ: ಪ್ರಜ್ವಲ್ ರೇವಣ್ಣ ಪ್ರಕರಣವನ್ನುಮುಂದಿಟ್ಟುಕೊಂಡು ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಜೈಲಿನಲ್ಲಿದ್ದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಹಾಗೂ ಅಶ್ಲೀಲ ಚಿತ್ರಗಳು ಹೇಗೆ ಬಂದವು? ಅವುಗಳನ್ನು ನೀಡಿದವರು ಯಾರು ಎಂಬುದನ್ನು ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಅಮೆರಿಕ ಪ್ರವಾಸ ಮುಗಿಸಿ ತವರು ಜಿಲ್ಲೆ ಹಾಸನಕ್ಕೆ ಬಂದ ಕುಮಾರಸ್ವಾಮಿ ಅವರು ಸೋಮವಾರ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆಯಲ್ಲಿ ತಾಯಿ ದಿ.ಚೆನ್ನಮ್ಮ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪ್ರದಕ್ಷಿಣೆ ಹಾಕಿ ಆಶೀರ್ವಾದ ಪಡೆದರು.
ಬಳಿಕ ಬೆಟ್ಟದ ಮೇಲಿರುವ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಒಂದು ಸಾಕ್ಷಿ ಸಿದ್ಧಪಡಿಸುವುದರಲ್ಲೇ ಸಾಕಾಗಿ ಹೋಗಿದೆ ಎಂದು ಹೇಳಿದವರು ಯಾರು? ದೇವೇಗೌಡರ ಕುಟುಂಬವನ್ನು ಮುಗಿಸುತ್ತೇವೆ ಎಂದು ಹೇಳಿದವರು ಯಾರು? ಅದು ಇದೇ ಮುಖ್ಯಮಂತ್ರಿಯಲ್ಲವೇ’ ಎಂದು ಅವರು ಪ್ರಶ್ನಿಸಿದರು.
ಎರಡು ವರ್ಷಗಳಿಂದ ಯಾವುದೇ ಹೊಸ ವಿಚಾರ ಇರಲಿಲ್ಲ. ಆದರೆ ಬಿಡದಿ, ನೈಸ್ ಹಾಗೂ ಕೆಪಿಎಸ್‌ಸಿ ವಿಚಾರಗಳು ಮುನ್ನೆಲೆಗೆ ಬಂದಾಗಲೆಲ್ಲಾ ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವಿಚಾರಗಳು ಹೊರಬರುತ್ತಿವೆ ಎಂದು ಆರೋಪಿಸಿದರು.
ಎರಡು ವರ್ಷಗಳಿಂದ ಈ ಮೊಬೈಲ್ ವಿಚಾರ ಏಕೆ ಇರಲಿಲ್ಲ? ಈಗ ಮಾತ್ರ ಹೇಗೆ ಬಂತು? ಜೈಲಿನಲ್ಲಿದ್ದ ವ್ಯಕ್ತಿಯ ಬಳಿ ಅಶ್ಲೀಲ ಚಿತ್ರಗಳು ಹೇಗೆ ಬಂದವು? ಅವುಗಳನ್ನು ನೀಡಿದವರು ಯಾರು? ಜೈಲಿನೊಳಗೆ ಆ ಚಿತ್ರಗಳು ಹೇಗೆ ಬಂದವು ಎಂದು ಪ್ರಶ್ನಿಸಿದರು.
‘ಕೆಪಿಎಸ್‌ಸಿ ಅಕ್ರಮ, ಬಿಡದಿ ವಿಚಾರ ಹಾಗೂ ನೈಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಗಳು ಬಂದಿರುವ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರ ಹೆಸರನ್ನು ಮುಂದಿಟ್ಟುಕೊಂಡು ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಸಾಧ್ಯವಿಲ್ಲ. ನೀವು ಏನೇನು ನಡೆಸಿದ್ದೀರಿ ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ. ಏನು ನಡೆದಿದೆ, ಯಾವ ರೀತಿ ನಡೆದಿದೆ ಎಂಬುದು ನಮಗೆ ಗೊತ್ತಿದೆ’ ಎಂದು ಹೇಳಿದರು.
‘ದಾಖಲೆ ಸಮೇತ ಬರುತ್ತೇನೆ’
‘ಅಮೆರಿಕಕ್ಕೆ ಹೋಗುವ ಮುಂಚೆ ಕೆಪಿಎಸ್‌ಸಿ, ಬಿಡದಿ, ನೈಸ್ ಹಗರಣಗಳ ಬಗ್ಗೆ ಚರ್ಚೆ ಮಾಡಿದ್ದೆ. ಕೆಲವು ವಿಷಯಗಳನ್ನು ಸಾರ್ವಜನಿಕವಾಗಿ ಇಡುತ್ತೇನೆ ಎಂದು ಹೇಳಿದ್ದೆ. ನಮ್ಮ ವಿರೋಧಿಗಳು ಲಘುವಾಗಿ ಮಾತನಾಡಿದರೂ ಉದ್ರೇಕಕ್ಕೆ ಒಳಗಾಗುವುದಿಲ್ಲ. ದಾಖಲೆಗಳ ಸಮೇತವೇ ನಾಡಿನ ಜನತೆ ಮುಂದೆ ಇಡುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದರು.
‘ಪಶು ವೈದ್ಯರ ನೇಮಕಾತಿ, ಎಇಇ ನೇಮಕಾತಿಯಲ್ಲಿ ಹುದ್ದೆ ಮಾರಾಟಕ್ಕೆ ಇಟ್ಟು ವಸೂಲಿ ಮಾಡಿದ್ದಾರೆ. ಸಾಕ್ಷ್ಯಗಳನ್ನು ಕೊಟ್ಟಿದ್ದೇನೆ. ವ್ಯವಸ್ಥೆಯನ್ನೇ ಬುಡಮೇಲು ಮಾಡುವವರ ವಿರುದ್ಧ ಹೋರಾಟ ಮಾಡುತ್ತೇನೆ’ ಎಂದು ಹೇಳಿದರು.
ನೂರು ದಿನದ ಸಾಧನೆಗೆ ವ್ಯಂಗ್ಯ
ರಾಜ್ಯ ಸರ್ಕಾರ ನೂರು ದಿನ ಪೂರೈಸಿದ ಬಗ್ಗೆ ಲೇವಡಿ ಮಾಡಿದ ಕುಮಾರಸ್ವಾಮಿ, ನೂರು ದಿನದಲ್ಲಿ ಇವರು ಮುಖ್ಯಮಂತ್ರಿ ಆಗಿದ್ದು ಯಾವ ದಿನಾಂಕ? ಮಂತ್ರಿಮಂಡಲದಲ್ಲಿ ಎಷ್ಟು ಜನ ಮಂತ್ರಿಗಳು ಇದ್ರು? ಮಂತ್ರಿಮಂಡಲ ವಿಸ್ತರಣೆಗೆ, ಖಾತೆ ಕೊಡಲು ಎಷ್ಟು ದಿನ ತಗೊಂಡ್ರು? ಎಲ್ಲವನ್ನೂ ತೆಗೆಯಿರಿ, ನೂರೇ ದಿನಕ್ಕೆ ಒಂದು ಬುಕ್‌ಲೆಟ್ ಬೇರೆ ಎಂದು ಟೀಕಿಸಿದರು.