
ಶಿಶುಗಳನ್ನು ಬೀಸಾಡುವ ಪ್ರಕರಣ: ತೊಟ್ಟಿಲು ಇದ್ದರೂ ತಾಯಿಗೆ ಯಾಕಿಲ್ಲ ‘ಮಮತೆ’?
ಕೊಪ್ಪಳ: ತಮಗೆ ಬೇಡವಾದ ನವಜಾತ ಶಿಶುವನ್ನು ಎಲ್ಲೆಂದರಲ್ಲಿ ಬೀಸಾಡಬಾರದು ಎನ್ನುವ ಕಾರಣಕ್ಕಾಗಿಯೇ ಸರ್ಕಾರ ಮಮತೆಯ ತೊಟ್ಟಿಲು ಯೋಜನೆ ಆರಂಭಿಸಿದ್ದರೂ ಜಿಲ್ಲೆಯಲ್ಲಿ ಹಲವು ತಾಯಂದಿರು ಎಲ್ಲೆಂದರಲ್ಲಿ ಶಿಶುಗಳನ್ನು ಬೀಸಾಡುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇದ್ದು ಮನುಷ್ಯ ಸಂಕುಲವನ್ನು ಸಂಕಟಕ್ಕೆ ಒಳಗಾಗುವಂತೆ ಮಾಡುತ್ತಿವೆ.
ಇತ್ತೀಚೆಗಷ್ಟೇ ಕುಕನೂರು ತಾಲ್ಲೂಕಿನ ಬೆದವಟ್ಟಿ ಗ್ರಾಮದ ಸಮೀಪದ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ ನವಜಾತ ಗಂಡು ಶಿಶುವಿನ ಶವ ಪತ್ತೆಯಾಗಿತ್ತು. ಇದೇ ವರ್ಷದ ಜನವರಿಯಲ್ಲಿ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರಸಾದ ನಿಲಯದ ಸಮೀಪದ ಮುಳ್ಳುಕಂಟೆಯಲ್ಲಿ ಪತ್ತೆಯಾಗಿದ್ದ ಹೆಣ್ಣು ಶಿಶುವನ್ನು ರಕ್ಷಣೆ ಮಾಡಲಾಗಿತ್ತು.
ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಪುರ ಗ್ರಾಮದ ಡ್ಯಾಂ ಬಾಬು ಅವರ ಗದ್ದೆಯ ತುಂಗಭದ್ರಾ ಕಿರುನಾಲೆಯ ಸಮೀಪದಲ್ಲಿ ಇತ್ತೀಚೆಗೆ ಅಂತಿಮ ಸಂಸ್ಕಾರ ಮಾಡಲಾಗಿದ್ದ ನವಜಾತ ಶಿಶುವಿನ ದೇಹ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇವು ಕೆಲವು ಉದಾಹರಣೆಗಳು ಅಷ್ಟೇ. ಇಂಥ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಲೇ ಇವೆ. 2024–25ರಿಂದ 2026ರ ಬೆದವಟ್ಟಿ ಗ್ರಾಮದ ಪ್ರಕರಣದ ತನಕ 11 ಮೃತ ನವಜಾತ ಶಿಶುಗಳು ಪತ್ತೆಯಾಗಿವೆ.
ತಮಗೆ ಬೇಡವಾದ ಅಥವಾ ಅನಾಥ ಶಿಶುಗಳನ್ನು ಸುರಕ್ಷಿತವಾಗಿ ರಕ್ಷಿಸಲು ಮಮತೆಯ ತೊಟ್ಟಿಲು ಯೋಜನೆ ಜಾರಿಗೆ ತರಲಾಗಿದೆ. ಜಿಲ್ಲೆಯಲ್ಲಿ ತಾಯಿ ಮತ್ತು ಮಗುವಿನ ಆಸ್ಪತ್ರೆ, ಹುಲಿಗಿ ದೇವಸ್ಥಾನದ ಬಳಿ, ಹಲವು ಬಸ್ ನಿಲ್ದಾಣಗಳ ಬಳಿ, ತಾಲ್ಲೂಕು ಆಸ್ಪತ್ರೆಗಳ ಹತ್ತಿರ ಹೀಗೆ ಪ್ರಮುಖ ಪ್ರದೇಶಗಳಲ್ಲಿ ಮಮತೆಯ ತೊಟ್ಟಿಲು ಇರಿಸಲಾಗಿದೆ. ನವಜಾತ ಶಿಶುಗಳ ಮಾರಾಟ ಮಾಡುವವರಿಗೂ ಹಾಗೂ ಕೊಳ್ಳುವವರಿಗೂ ಐದು ವರ್ಷಗಳ ಸೆರೆವಾಸ ಜೊತೆಗೆ ₹10 ಸಾವಿರ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಮಗು ಬೇಡವಾಗಿದ್ದಲ್ಲಿ ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ ಹಾಗೂ ಪೊದೆಗಳಲ್ಲಿ ನವಜಾತು ಶಿಶುಗಳನ್ನು ಬೀಸಾಡಿ ಎಳೆಯ ಜೀವಗಳನ್ನು ಬೀದಿನಾಯಿ, ವಿಷ ಜಂತುಗಳಿಗೆ ಬಲಿಯಾಗುವುದನ್ನು ತಪ್ಪಿಸಬೇಕಾಗಿದೆ. ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿಯೇ ಇರುವ ದತ್ತು ಕೇಂದ್ರಗಳಲ್ಲಿ ಮತ್ತು ಮಮತೆಯ ತೊಟ್ಟಿಲಿನಲ್ಲಿ ಮಕ್ಕಳನ್ನು ಇಡಬಹುದು. ಒಂಬತ್ತು ತಿಂಗಳು ಹೊತ್ತು ಹೆರಿಗೆಯ ಸಂಕಟ ಅನುಭವಿಸಿ ತಾಯ್ತನ ಖುಷಿ ಕಂಡ ಬಳಿಕವೂ ತನ್ನ ಕೂಸನ್ನು ಬೀದಿ ಹೆಣ ಮಾಡುವ ಪೋಷಕರ ಅಮಾನವೀಯ ಕಾರ್ಯಕ್ಕೆ ಈಗಲಾದರೂ ಕಡಿವಾಣ ಬೀಳಬೇಕಿದೆ.
‘ಮಮತೆಯೂ ಇದೆ, ತೊಟ್ಟಿಲೂ ಇದೆ; ದಯವಿಟ್ಟು ಬಿಸಾಡಬೇಡಿ’
ಕೊಪ್ಪಳ: ತಾಯಿಗೆ ತನಗೆ ಬೇಡವಾದ ಮಗುವನ್ನು ಎಲ್ಲೆಂದರಲ್ಲಿ ಬೀಸಾಡದೆ ಮಮತೆಯ ತೊಟ್ಟಿಲಿನಲ್ಲಿ ಹಾಕಬಹುದು. ಅಥವಾ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿದರೆ ನಮ್ಮ ಇಲಾಖೆಯ ಸಿಬ್ಬಂದಿಯೇ ಬಂದು ಮಗುವನ್ನು ತೆಗೆದುಕೊಂಡು ಹೋಗುತ್ತಾರೆ. ನಮ್ಮಲ್ಲಿ ಮಮತೆಯೂ ಇದೆ, ತೊಟ್ಟಿಲು ಕೂಡ ಇದೆ. ದಯವಿಟ್ಟು ಶಿಶುವನ್ನು ಎಲ್ಲೆಂದರಲ್ಲಿ ಬೀಸಾಡಬಾರದು ಎಂದು ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ಮನವಿ ಮಾಡಿದ್ದಾರೆ.
‘ಸರ್ಕಾರದ ವಶಕ್ಕೆ ಶಿಶುವನ್ನು ಒಪ್ಪಿಸಿದ ಬಳಿಕ ಪೋಷಕರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ. ಇಂಥ ಪೋಷಕರ ಮೇಲೆ ಕಾನೂನಿನ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ ಸಿಕ್ಕ ನವಜಾತ ಮೃತ ಶಿಶುಗಳು
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-35-609122296