
ಮಲೆ ಮಹದೇಶ್ವರ: ಹುಲಿ ಯೋಜನೆ ಜಾರಿಗೆ ಸ್ಥಳೀಯರ ವಿರೋಧ
ಹನೂರು: ಮಲೆ ಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಧಾಮವನ್ನಾಗಿಸುವ ಪ್ರಸ್ತಾವಕ್ಕೆ ದಶಕವೇ ಕಳೆದಿದೆ. ಆದರೆ, ಸ್ಥಳೀಯರ ವಿರೋಧದ ಕಾರಣಕ್ಕೆ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ.
ಮಲೆಗಳ ನಡುವೆ ನೆಲೆಸಿರುವ ಮಹದೇಶ್ವರನ ವಾಹನವೇ ಹುಲಿ. ಹೀಗಾಗಿ ಹುಲಿ ಬಗ್ಗೆ ಇಲ್ಲಿನ ಆದಿವಾಸಿಗಳ ಆದಿಯಾಗಿ ಎಲ್ಲರಲ್ಲೂ ಪೂಜ್ಯ ಭಾವವಿದೆ. ಆದರೆ, ಕಳ್ಳಬೇಟೆಯನ್ನೇ ಗುರಿಯಾಗಿಸಿ ಕೊಂಡವರಿಗೆ ಇದರ ಭಯವಿಲ್ಲ. ಹುಲಿ ಹತ್ಯೆ ಆಗಾಗ್ಗೆ ನಡೆಯುತ್ತಲೇ ಇದೆ. ಕಳೆದ ವರ್ಷ ಒಂದೇ ಸ್ಥಳದಲ್ಲಿ ಐದು ಹುಲಿಗಳ ಹತ್ಯೆ ನಡೆದ ಘಟನೆ ಬಳಿಕ, ಹುಲಿ ಯೋಜನೆ ಜಾರಿಗೆ ಒತ್ತಾಯ ತೀವ್ರವಾಗಿತ್ತು. ಇದೀಗ ಮತ್ತೆ ಈ ವಿಷಯ ಮುನ್ನೆಲೆಗೆ ಬಂದಿದೆ.
ಒಂದು ವೇಳೆ ಈ ಯೋಜನೆ ಜಾರಿಯಾದಲ್ಲಿ ಇದು ಚಾಮರಾಜನಗರ ಜಿಲ್ಲೆಯ ಮೂರನೇ ಹಾಗೂ ರಾಜ್ಯದ ಆರನೇ ಹುಲಿ ಸಂರಕ್ಷಿತ ಧಾಮವಾಗಲಿದೆ. ಈಗಾಗಲೇ ಈ ಜಿಲ್ಲೆಯಲ್ಲಿ ಬಂಡೀಪುರ ಹಾಗೂ ಬಿಳಿಗಿರಿರಂಗನ ಬೆಟ್ಟ ಕಾಡು ಹುಲಿಗಳ ಸಂರಕ್ಷಿತ ಪ್ರದೇಶವಾಗಿದ್ದು, ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಇಲ್ಲಿ ಕಳ್ಳಬೇಟೆ ಒಂದು ಹಂತಕ್ಕೆ ನಿಯಂತ್ರಣದಲ್ಲಿದೆ. ಈ ಕಾರಣಕ್ಕೆ ಕಾಡುಗಳ್ಳರ ಚಿತ್ತ ಮಲೆ ಮಹದೇಶ್ವರ ಧಾಮದತ್ತ ಹರಿದಿದ್ದು, ಇಲ್ಲಿಯೂ ತೀವ್ರ ನಿಗಾ ಬೇಕಿದೆ ಎನ್ನುವುದು ಪರಿಸರ ಕಾರ್ಯಕರ್ತರ ವಾದ.
ಅನುಕೂಲಗಳೇನು?: ಹುಲಿ ಯೋಜನೆ ಎಂದರೆ ಕೇವಲ ಹುಲಿಗಳನ್ನು ರಕ್ಷಿಸುವುದಲ್ಲ. ಕಾಡಿನ ಸಮಗ್ರ ವನ್ಯಜೀವಿಗಳ ಸಂರಕ್ಷಣೆ. ಬೆಟ್ಟ ಹಲವು ಜಲಮೂಲ, ಅಮೂಲ್ಯ ವನಸಂಪತ್ತಿನ ತಾಣ. ಅವೆಲ್ಲದರ ರಕ್ಷಣೆಯೂ ಆಗುತ್ತದೆ ಎನ್ನುತ್ತಾರೆ ಪರಿಸರ ತಜ್ಞ ಸಂಜಯ್ ಗುಬ್ಬಿ. ದೇಶದ ಎಲ್ಲರ ಗಮನ ಇದರ ಮೇಲೆ ಇರುತ್ತದೆ. ಕಳ್ಳಬೇಟೆ ತಡೆ ವಿಚಾರದಲ್ಲಿ ಕಾನೂನು ಇನ್ನಷ್ಟು ಬಿಗಿ ಆಗಲಿದೆ. ಜನರು ಪುನರ್ವಸತಿಗೆ ಇಚ್ಛಿಸಿದಲ್ಲಿ ಅದಕ್ಕೂ ಕೇಂದ್ರದ ಅನುದಾನ ಸಿಗಲಿದೆ ಎನ್ನುತ್ತಾರೆ ಅವರು.
ಯೋಜನೆ ಜಾರಿಯಾದಲ್ಲಿ ಎನ್‌ಟಿಸಿಎಯಿಂದ ವಾರ್ಷಿಕ ₹10ಕೋಟಿಯಷ್ಟು ಅನುದಾನ ಸಿಗಲಿದೆ. ಚೆಕ್‌ಪೋಸ್ಟ್, ಕಳ್ಳಬೇಟೆ ತಡೆ ಶಿಬಿರ ಹೆಚ್ಚಳ, ಹೆಚ್ಚುವರಿ ಸಿಬ್ಬಂದಿ ನಿಯೋಜನೆಯಂತಹ ಆಡಳಿತಾತ್ಮಕ ಅನುಕೂಲಗಳೂ ಇವೆ.
ವಿರೋಧ ಸಲ್ಲ: ‘ಹುಲಿ ಯೋಜನೆ ಜಾರಿಯಾದ ಮಾತ್ರಕ್ಕೆ ಅಲ್ಲಿನ ಜನರನ್ನು ಎತ್ತಂಗಡಿ ಮಾಡಿಸುವುದು ಕಾನೂನಿನಲ್ಲೇ ಇಲ್ಲ. ಬಿಳಿಗಿರಿರಂಗನ ಬೆಟ್ಟ ಸಹ ಈ ಯೋಜನೆಗೆ ಒಳಪಟ್ಟಿದ್ದರೂ ಅಲ್ಲಿ ಸೋಲಿಗರ ಆದಿಯಾಗಿ ಸಾಕಷ್ಟು ಮಂದಿ ಈಗಲೂ ಕಾಡಿನಲ್ಲಿ ಇದ್ದಾರೆ. ನಾಗರಹೊಳೆ, ದಾಂಡೇಲಿಯಲ್ಲೂ ಜನರಿದ್ದಾರೆ. ಬೇಕಂತಲೇ ಕೆಲವರು ತಪ್ಪು ಅಭಿಪ್ರಾಯ ಮೂಡಿಸಿದ್ದಾರೆ’ ಎನ್ನುತ್ತಾರೆ ಸಂಜಯ್ ಗುಬ್ಬಿ.
ಕೇಂದ್ರದ ಒಪ್ಪಿಗೆ; ರಾಜ್ಯದ ಹಿಂದೇಟು
ಬಂಡೀಪುರ, ನಾಗರಹೊಳೆ, ಬಿಆರ್‌ಟಿ ಮತ್ತು ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶಗಳ ನಡುವೆ ಪ್ರಮುಖ ಸಂಪರ್ಕ ಸೇತುವೆಯಾಗಿ ಈ ಅಭಯಾರಣ್ಯವು ಇದೆ. ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹುಲಿಗಳು ಇವೆ.
ಈ ವನ್ಯಜೀವಿ ಧಾಮವನ್ನು ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲು 2019ರ ಜನವರಿಯಲ್ಲಿ ರಾಜ್ಯ ವನ್ಯಜೀವಿ ಮಂಡಳಿಯು ಒಪ್ಪಿಗೆ ನೀಡಿತ್ತು.2020ರಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ (ಎನ್‌ಟಿಸಿಎ) ಪ್ರಸ್ತಾವ ಸಲ್ಲಿಕೆಯಾಗಿದ್ದು, ಪ್ರಾಧಿಕಾರ ಹಾಗೂ ಕೇಂದ್ರ ಸರ್ಕಾರ ಎರಡೂ ಒಪ್ಪಿಗೆ ಸೂಚಿಸಿವೆ. ಆದರೆ, ಸ್ಥಳೀಯರ ವಿರೋಧ, ರಾಜಕೀಯ ಒತ್ತಡದ ಕಾರಣಕ್ಕೆ ರಾಜ್ಯ ಸರ್ಕಾರ ಯೋಜನೆಯನ್ನು ಮರುಪರಿಶೀಲನೆಗೆ ಒಳಪಡಿಸಿದೆ.
ಹುಲಿ ಯೋಜನೆ ಜಾರಿಗೊಂಡರೆ ಆ ಕಾಡಿನಿಂದ ಸಂಪೂರ್ಣವಾಗಿ ಜನರನ್ನು ಹೊರಗಿಡಲಾಗುತ್ತದೆ. ಕೋರ್ ಹಾಗೂ ಬಫರ್ ವಲಯಕ್ಕೆ ಒಳಪಡುವ ಪ್ರದೇಶಗಳಲ್ಲಿ ಬಿಗಿ ನಿಯಮಗಳು ಜಾರಿಯಾಗಲಿದ್ದು, ಸ್ಥಳೀಯರು ಹಾಗೂ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತದೆ. ಕಾಡಿನೊಳಗೆ ಸಂಪೂರ್ಣ ನಿಷೇಧ ಇರಲಿದ್ದು, ಕಾಡಂಚಿನ ಪ್ರದೇಶಗಳ ಅಭಿವೃದ್ಧಿಗೂ ಅರಣ್ಯ ಇಲಾಖೆ ಅಡ್ಡಗಾಲು ಹಾಕಲಿದೆ ಎನ್ನುವುದು ಸ್ಥಳೀಯರ ಆತಂಕ.
ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮಲೆ ಮಹದೇಶ್ವರನ ಬೆಟ್ಟವೂ ಈ ಅರಣ್ಯದ ವ್ಯಾಪ್ತಿಗೆ ಬರುತ್ತದೆ. ಸಾವಿರ ಸಂಖ್ಯೆಯಲ್ಲಿ ಬರುವ ಭಕ್ತರು ಹಾಗೂ ಧಾರ್ಮಿಕ ಆಚರಣೆಗಳಿಗೆ ಅಡ್ಡಿ ಆಗದಂತೆ ನಿರ್ವಹಣೆ ಮಾಡುವ ಸವಾಲು ಇದೆ.
‘ಈ ಭಾಗದ ಕಾಡು– ಕಾಡಂಚಿನ 56 ಪೋಡುಗಳಲ್ಲಿ 15 ಸಾವಿರದಷ್ಟು ಸೋಲಿಗರು ವಾಸವಿದ್ದು, ಬೇಡಗಂಪಣ ಸಮುದಾಯವು ಸಾಕಷ್ಟು ಸಂಖ್ಯೆಯಲ್ಲಿದೆ. ಈಗಲೇ ನಮಗೆ ಇಲ್ಲಿ ಮನೆ ಕಟ್ಟಿಕೊಳ್ಳಲೂ ಅವಕಾಶ ನೀಡುತ್ತಿಲ್ಲ. ಹುಲಿ ಯೋಜನೆ ಜಾರಿಯಾದಲ್ಲಿ ಮೂಲಸೌಕರ್ಯಕ್ಕೆ ತೊಂದರೆ ಆಗಲಿದೆ. ನಮ್ಮನ್ನೆಲ್ಲ ಒಕ್ಕಲೆಬ್ಬಿಸುತ್ತಾರೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ. ಮಾದೇಗೌಡ.
ಹುಲಿ ಸೋಲಿಗರ ದೈವ. ವನ್ಯಜೀವಿ ಧಾಮವನ್ನೇ ಮುಂದುವರಿಸಿ ಸಂರಕ್ಷಣೆ ಮಾಡಬೇಕು. ಜಂಟಿ ಸಂರಕ್ಷಣಾ ಸಮಿತಿ ಮೂಲಕ ಜನರ ಸಹಭಾಗಿತ್ವದಲ್ಲಿ ಅರಣ್ಯ ರಕ್ಷಣೆ ಮಾಡಬೇಕು ಎಂಬುದು ಅವರ ಒತ್ತಾಯ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-39-1471655094