
ಪಾವಗಡ: ವಾರದ ಸಂತೆಗೆ ಸೀಮಿತವಾದ ಎಪಿಎಂಸಿ
ಪಾವಗಡ: ಸ್ವಚ್ಛತೆ, ನಿರ್ವಹಣೆ, ಮೂಲಸೌಕರ್ಯ ಕೊರತೆಯಿಂದ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವಾರದ ತರಕಾರಿ, ಕುರಿ ಸಂತೆಗೆ ಸೀಮಿತವಾಗಿದೆ.
25 ಎಕರೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಿಸಲಾಗಿದ್ದರೂ, ದಶಕಗಳಿಂದಲೂ ಅಭಿವೃದ್ಧಿ ಕಾಣುತ್ತಿಲ್ಲ. ವರ್ತಕರು, ರೈತರು, ಕುರಿ ಮಾರಾಟಗಾರರಿಂದ ಸುಂಕ ವಸೂಲಿ ಮಾಡಲಾಗುತ್ತಿದೆ. ಆದರೆ ಅಭಿವೃದ್ಧಿ ಮರೀಚಿಕೆಯಾಗಿದೆ.
ಮಾರುಕಟ್ಟೆ ಆವರಣದಲ್ಲಿ ಬಾಡಿಗೆಗೆ ನೀಡಿರುವ ಮಳಿಗೆಗಳು ಶಿಥಿಲಾವಸ್ಥೆ ತಲುಪಿವೆ. ಇಲ್ಲಿನ ವರ್ತಕರು, ರೈತರು, ಸಾರ್ವಜನಿಕರು ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಕರ್ಯವಿಲ್ಲದೆ ಪರದಾಡಬೇಕಿದೆ.
ತಾಲ್ಲೂಕಿನ ವಿವಿಧ ಭಾಗಗಳಿಂದ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟಕ್ಕಾಗಿ ಪಟ್ಟಣಕ್ಕೆ ತರುತ್ತಾರೆ. ಆದರೆ, ಎಪಿಎಂಸಿ ಆವರಣದಲ್ಲಿ ಉತ್ಪನ್ನಗಳ ವಹಿವಾಟಿಗೆ ಅನುಕೂಲವಾಗುವಂತೆ ಸಮರ್ಪಕ ವ್ಯವಸ್ಥೆ ಇಲ್ಲದಿರುವುದರಿಂದ ಬಸ್ ನಿಲ್ದಾಣದ ಮಾರ್ಗ, ಶಿರಾ ರಸ್ತೆ ಸೇರಿದಂತೆ ಪಟ್ಟಣದ ವಿವಿಧ ರಸ್ತೆಗಳ ಬದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ವಾರದ ಸಂತೆ ದಿನ ಸಮಸ್ಯೆ: ಪ್ರತಿ ಸೋಮವಾರ ಪಟ್ಟಣದಲ್ಲಿ ನಡೆಯುವ ವಾರದ ಸಂತೆಯ ದಿನ ಎಪಿಎಂಸಿ ಸುತ್ತಮುತ್ತ ಹೆಚ್ಚಿನ ಜನದಟ್ಟಣೆ, ವಾಹನ ದಟ್ಟಣೆ ಕಂಡುಬರುತ್ತದೆ. ಇದೇ ದಿನ ಕುರಿಸಂತೆಯೂ ನಡೆಯುವುದರಿಂದ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಕುರಿ ಕೊಂಡೊಯ್ಯಲು ಬೃಹತ್ ವಾಹನಗಳು ಸಂತೆಗೆ ಬರುತ್ತವೆ. ರೈತರು, ವರ್ತಕರು, ಗ್ರಾಹಕರು ಒಂದೇ ಕಡೆ ಸೇರುವುದರಿಂದ ವಾಹನ ಸಂಚಾರಕ್ಕೂ ತೊಂದರೆಆಗುತ್ತಿದೆ. ಮಾರುಕಟ್ಟೆ ಆವರಣವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಿ, ಸಂತೆ, ಕೃಷಿ ಉತ್ಪನ್ನಗಳ ವಹಿವಾಟಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಜನರ ಒತ್ತಾಯ.
ಸ್ವಚ್ಛತೆಗೆ ಆದ್ಯತೆ ಅಗತ್ಯ: ಎಪಿಎಂಸಿ ಆವರಣ, ಸುತ್ತಮುತ್ತಲ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿಲ್ಲ ಎಂಬ ದೂರುಗಳಿವೆ. ಮಾರುಕಟ್ಟೆಗೆ ಬರುವ ರೈತರು ಹಾಗೂ ಸಾರ್ವಜನಿಕರಿಗೆ ಸ್ವಚ್ಛ ವಾತಾವರಣ ಕಲ್ಪಿಸುವುದು ಅಗತ್ಯ. ಕಸ ಸಂಗ್ರಹ, ವಿಲೇವಾರಿ, ಚರಂಡಿ ಸ್ವಚ್ಛತೆ ಸೇರಿದಂತೆ ಸ್ವಚ್ಛತಾ ವ್ಯವಸ್ಥೆಯನ್ನು ಸುಧಾರಿಸಬೇಕಿದೆ.
ಆವರಣದಲ್ಲಿ ಗಿಡಗಂಟಿ ಬೆಳೆದಿವೆ. ರಸ್ತೆಗಳಲ್ಲಿ ಕೊಳಚೆ ನೀರು ನಿಂತು ಕೆಟ್ಟ ವಾಸನೆ ಬರುತ್ತಿರುತ್ತದೆ. ವರ್ತಕರು, ತರಕಾರಿ ಮಾರಾಟಗಾರರು ಸಂತೆಯಂದು ಇದೇ ಪರಿಸರದಲ್ಲಿ ವ್ಯಾಪಾರ, ವಹಿವಾಟು ನಡೆಸಬೇಕಿದೆ.
ಸಿಬ್ಬಂದಿ ಕೊರತೆ: ಒಟ್ಟು 13 ಹುದ್ದೆಗಳ ಪೈಕಿ ಕೇವಲ ಕಾರ್ಯದರ್ಶಿ ಹುದ್ದೆ ಮಾತ್ರ ಭರ್ತಿಯಾಗಿದೆ. ಇದನ್ನು ಹೊರತು ಪಡಿಸಿ, ಲೆಕ್ಕಿಗ, ಮೇಲ್ವಿಚಾರಕ, ಸಹಾಯಕ ಕಾರ್ಯದರ್ಶಿ, ವಾಹನ ಚಾಲಕ, ಡಿ ಗ್ರೂಪ್ ನೌಕರ ಸೇರಿದಂತೆ ಒಟ್ಟು 12 ಹುದ್ದೆ ಖಾಲಿ ಇವೆ.
ಮೂಲಸೌಕರ್ಯ ಕಲ್ಪಿಸಲು ಒತ್ತಾಯ: ರೈತರಿಗೆ ಉತ್ಪನ್ನಗಳನ್ನು ಇಳಿಸಲು, ಸಂಗ್ರಹಿಸಲು ಅನುಕೂಲವಾಗುವ ಸ್ಥಳ, ಶೆಡ್, ಕುಡಿಯುವ ನೀರು, ಶೌಚಾಲಯ, ವಿದ್ಯುತ್, ರಸ್ತೆ, ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಮಾರುಕಟ್ಟೆ ಆವರಣವನ್ನು ಅಭಿವೃದ್ಧಿಪಡಿಸಿದರೆ ರೈತರು ಮಧ್ಯವರ್ತಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡು ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗಲಿದೆ.
ಕೃಷಿ ಪ್ರಧಾನ ತಾಲ್ಲೂಕಾಗಿರುವ ತಾಲ್ಲೂಕಿನಲ್ಲಿ ಎಪಿಎಂಸಿ ರೈತರ ಪಾಲಿಗೆ ಪ್ರಮುಖ ಮಾರುಕಟ್ಟೆಯಾಗಬೇಕು. ಕೇವಲ ವಾರದ ಸಂತೆಗೆ ಸೀಮಿತವಾಗದೆ, ಕೃಷಿ ಉತ್ಪನ್ನಗಳ ಸಮರ್ಪಕ ವಹಿವಾಟಿಗೆ 10x10 ತೆರೆದ ಚಿಕ್ಕ ಮಳಿಗೆಗಳು, ಹೈಮಾಸ್ಟ್ ದೀಪ, ಸಿ.ಸಿ.ರಸ್ತೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-17-296088987