ವೇಮಗಲ್‌ನಲ್ಲಿ ಪಾಳುಬಿದ್ದ ವೈದ್ಯಾಧಿಕಾರಿ ವಸತಿ ಗೃಹ

ವೇಮಗಲ್‌ನಲ್ಲಿ ಪಾಳುಬಿದ್ದ ವೈದ್ಯಾಧಿಕಾರಿ ವಸತಿ ಗೃಹ

ವೇಮಗಲ್‌ನಲ್ಲಿ ಪಾಳುಬಿದ್ದ ವೈದ್ಯಾಧಿಕಾರಿ ವಸತಿ ಗೃಹ

ವೇಮಗಲ್: ಗ್ರಾಮೀಣ ಭಾಗದ ಜನರಿಗೆ ಸಮರ್ಪಕ ಮತ್ತು ತುರ್ತು ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ವೈದ್ಯರು ತಾವು ಕಾರ್ಯ ನಿರ್ವಹಿಸುವ ಆಸ್ಪತ್ರೆಯ ಕೇಂದ್ರ ಸ್ಥಾನದಲ್ಲೇ ಉಳಿದುಕೊಳ್ಳಲಿ ಎಂಬ ಕಾರಣಕ್ಕೆ ಸರ್ಕಾರಿ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಆದರೆ, ವೇಮಗಲ್‌ನಲ್ಲಿರುವ ಸರ್ಕಾರಿ ವೈದ್ಯರ ವಸತಿ ಗೃಹಗಳು ಸಮರ್ಪಕ ನಿರ್ವಹಣೆ ಇಲ್ಲದೆ, ಅಧೋಗತಿಗೆ ತಲುಪಿವೆ.

ವೇಮಗಲ್ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯಾಧಿಕಾರಿಗಳ ವಾಸ್ತವ್ಯಕ್ಕಾಗಿ ನಿರ್ಮಿಸಿದ್ದ ಸುಸಜ್ಜಿತ ಸರ್ಕಾರಿ ವಸತಿ ಗೃಹಗಳಲ್ಲೇ ಹಿಂದೆ ವೈದ್ಯರು ತಮ್ಮ ಕುಟುಂಬ ಸಹಿತವಾಗಿ ವಾಸಿಸುತ್ತಿದ್ದರು. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರಿಗೆ ಆರೋಗ್ಯ ಸೇವೆ ಕಲ್ಪಿಸುತ್ತಿದ್ದರು. ಆದರೆ, ಕಳೆದ ಹಲವು ಈ ವಸತಿ ಗೃಹಗಳಲ್ಲಿ ಯಾರೂ ವಾಸಿಸುತ್ತಿಲ್ಲ. ಇದರಿಂದಾಗಿ ವಸತಿ ಗೃಹಗಳು ಸಂಪೂರ್ಣವಾಗಿ ಪಾಳು ಬಿದ್ದಿದ್ದು, ಬೀಗ ಜಡಿದು ವರ್ಷಗಳೇ ಕಳೆದಿದೆ. ಇದರ ಪರಿಣಾಮ ಗ್ರಾಮೀಣ ಜನರ ಆರೋಗ್ಯ ದೃಷ್ಟಿಯಿಂದ ವೈದ್ಯರ ವಾಸಕ್ಕಾಗಿ ನಿರ್ಮಾಣಕ್ಕಾಗಿ ವೆಚ್ಚ ಮಾಡಿದ ಲಕ್ಷಾಂತರ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ಈ ನಿವಾಸದ ಸುತ್ತಮುತ್ತ ಅತಿಯಾಗಿ ಕಳೆ, ಮುಳ್ಳುಕಂಟಿಗಳು ಹಾಗೂ ಗಿಡಗಂಟಿಗಳು ದಟ್ಟವಾಗಿ ಬೆಳೆದಿವೆ. ಒಟ್ಟಾರೆ, ಈ ಪ್ರದೇಶವು ವಿಷ ಜಂತುಗಳು ಹಾಗೂ ಹಾವುಗಳ ವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಕಟ್ಟಡದ ಮೇಲ್ಛಾವಣಿ ಮೇಲೆ ಅನಗತ್ಯ ಗಿಡಗಳು ಬೆಳೆದಿದ್ದು, ಮಳೆ ನೀರು ಸರಾಗವಾಗಿ ಹರಿಯದೆ, ಕಸಕಡ್ಡಿ ಕೊಳೆತು ದುರ್ನಾತ ಬೀರುತ್ತಿದೆ. ಈಚೆಗೆ ಸುರಿದ ಧಾರಾಕಾರ ಮಳೆಯಿಂದ ನಿವಾಸದ ಮುಂಭಾಗದ ಕಾಂಪೌಂಡ್ ಕುಸಿದು ಬಿದ್ದಿದೆ. ಇಟ್ಟಿಗೆ ಮತ್ತು ಕಲ್ಲುಗಳ ರಾಶಿ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಆದರೆ, ಈವರೆಗೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ.

ಕೋಲಾರ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗವು 2023–24ನೇ ಸಾಲಿನ ಅನಿಬಂಧಿತ ಅನುದಾನದಲ್ಲಿ ₹2.50 ಲಕ್ಷ ವೆಚ್ಚ ಮಾಡಿ ಈ ವಸತಿ ಗೃಹಕ್ಕೆ ನೆಲಹಾಸು (ಟೈಲ್ಸ್), ವಿದ್ಯುದ್ದೀಕರಣ ಹಾಗೂ ಸುಣ್ಣ–ಬಣ್ಣ ಬಳಿಯುವ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಆದರೆ, ನವೀಕರಣಗೊಂಡ ಕಟ್ಟಡವನ್ನು ವೈದ್ಯಾಧಿಕಾರಿಗಳಾಗಲಿ ಅಥವಾ ಇಲಾಖೆಯಾಗಲಿ ಸದುಪಯೋಪಡಿಸಿಕೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಒಂದೆಡೆ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡದ ವೈದ್ಯರು ದೂರದ ನಗರಗಳಲ್ಲಿ ವಾಸಿಸುತ್ತಿದ್ದು, ಪ್ರತಿನಿತ್ಯವೂ ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಬಂದು ಕಾರ್ಯ ನಿರ್ವಹಿಸಿ, ನಗರಕ್ಕೆ ವಾಪಸ್ಸಾಗುತ್ತಿದ್ದಾರೆ. ಇದರಿಂದ ಅನಾರೋಗ್ಯಕ್ಕೆ ಸಿಲುಕುವ ಸ್ಥಳೀಯ ರೋಗಿಗಳು ಪರದಾಡುವಂತಾಗಿದೆ. ಇನ್ನೊಂದೆಡೆ ಸರ್ಕಾರಿ ವಸತಿ ಗೃಹಗಳು ನಿರ್ವಹಣೆ ಕೊರತೆಯಿಂದ ಭೂತ ಬಂಗಲೆಯಂತಾಗುತ್ತಿವೆ. ಇನ್ನಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಪಾಳುಬಿದ್ದ ಕಟ್ಟಡವನ್ನು ಶುಚಿಗೊಳಿಸಿ, ಕುಸಿದ ಕಾಂಪೌಂಡ್ ದುರಸ್ತಿಗೊಳಿಸಬೇಕು. ವೈದ್ಯಾಧಿಕಾರಿಗಳು ಇಲ್ಲೇ ಮೊಕ್ಕಾಂ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ನಿರುಪಯುಕ್ತವಾದ ವಸತಿ ಗೃಹಗಳು

ವೈದ್ಯಾಧಿಕಾರಿಗಳಿಗಾಗಿ ನಿರ್ಮಿಸಿರುವ ಕಟ್ಟಡಗಳನ್ನು ಯಾರೂ ಬಳಸದ ಹೊರತಾಗಿಯೂ, ಅವುಗಳ ದುರಸ್ತಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಇದು ಅನುಮಾನಕ್ಕೆ ಕಾರಣವಾಗಿದೆ. ವಸತಿ ಗೃಹಗಳು ಇಲ್ಲದ ಕಾರಣ, ವೈದ್ಯರು ಕೇಂದ್ರಸ್ಥಾನದಲ್ಲಿ ಉಳಿದುಕೊಳ್ಳುತ್ತಿಲ್ಲ. ಇದರಿಂದ ಸ್ಥಳೀಯರು ವೈದ್ಯರಿಲ್ಲದೆ ಪರದಾಡುವಂತಾಗಿದೆ.

ಸರ್ಕಾರಿ ಆಸ್ತಿ ಹಾಳಾಗಲು ಮತ್ತು ಸಾರ್ವಜನಿಕರ ತೆರಿಗೆ ಹಣ ಪೋಲಾಗಲು ಕಾರಣರಾದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು. ಈ ನವೀಕರಣ ಕಾಮಗಾರಿಯ ಸಂಪೂರ್ಣ ಲೆಕ್ಕಪತ್ರವನ್ನು ಬಹಿರಂಗಪಡಿಸಿ, ಸಂಬಂಧಪಟ್ಟವರಿಂದಲೇ ವೆಚ್ಚವನ್ನು ವಸೂಲಿ ಮಾಡಬೇಕು. ತಕ್ಷಣ ಈ ವಸತಿ ಗೃಹವನ್ನು ಸದುಪಯೋಗಕ್ಕೆ ತರಬೇಕು."

–ಅಜಯ್ ಕುಮಾರ್, ಮಾಹಿತಿ ಹಕ್ಕು ಕಾರ್ಯಕರ್ತ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ