ಕಲಬುರಗಿ ನಗರದಲ್ಲಿ ಗೌರಿಸುತನ ಸ್ವಾಗತಕ್ಕೆ ಭರದ ಸಿದ್ಧತೆಗಳು

ಕಲಬುರಗಿ ನಗರದಲ್ಲಿ ಗೌರಿಸುತನ ಸ್ವಾಗತಕ್ಕೆ ಭರದ ಸಿದ್ಧತೆಗಳು

ಕಲಬುರಗಿ ನಗರದಲ್ಲಿ ಗೌರಿಸುತನ ಸ್ವಾಗತಕ್ಕೆ ಭರದ ಸಿದ್ಧತೆಗಳು

ಕಲಬುರಗಿ: ಮತ್ತೆ ಗಣೇಶೋತ್ಸವ ಬಂದಿದೆ. ನಗರದ ಚೌಕಗಳು, ಗಲ್ಲಿಗಳಲ್ಲಿ ಸಂಭ್ರಮ ತಂದಿದೆ. ಭಾದ್ರಪದ ಚೌತಿಗೆ ಎರಡೇ ದಿನ ಬಾಕಿ ಉಳಿದಿದ್ದು, ಗೌರಿಸುತನ ಸ್ವಾಗತಕ್ಕೆ ನಗರದಲ್ಲಿ ಭರದ ಸಿದ್ಧತೆಗಳು ಸಾಗಿವೆ.

ವಿವಿಧ ಸಾರ್ವಜನಿಕ ಗಣೇಶ ಮಂಡಳಿಗಳು, ತರುಣ ಸಂಘಗಳು ಪೈಪೋಟಿಗೆ ಬಿದ್ದಂತೆ ವೈವಿಧ್ಯಮ ಪೆಂಡಾಲ್‌ಗಳನ್ನು ನಿರ್ಮಿಸುತ್ತಿದ್ದಾರೆ. ಗಲ್ಲಿ ತುಂಬೆಲ್ಲ ವಿದ್ಯುದ್ದೀಪಗಳು ಮಿನುಗಲು ಅಣಿಯಾಗುತ್ತಿವೆ. ಬೀದಿಗಳಲ್ಲಿ ಈಗಾಗಲೇ ಪೋಸ್ಟರ್‌, ಬ್ಯಾನರ್‌ಗಳು ರಾರಾಜಿಸುತ್ತಿವೆ.

ಬೆನಕ ಬರುವುದು ಭಾದ್ರಪದ ಮಾಸದ ಚೌತಿಯಂದು. ಆದರೆ, ಆತನ ಸ್ವಾಗತಕ್ಕೆ ಎರಡ್ಮೂರು ತಿಂಗಳು ಮೊದಲೇ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಸಕ್ರಿಯವಾಗುತ್ತವೆ. ಈ ವರ್ಷ ಎಷ್ಟು ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪಿಸಬೇಕು? ಅದನ್ನು ಎಲ್ಲಿಂದ ತರಬೇಕು? ಯಾವ ಪರಿಕಲ್ಪನೆಯ ಮೂರ್ತಿ ಇಡಬೇಕು? ಬೇರೆಯವರಿಗಿಂತಲೂ ಹೇಗೆ ಭಿನ್ನವಾಗಿ ವಕ್ರತುಂಡನ ಆರಾಧಿಸಬೇಕು? ಏಕದಂತನ ಸಿಂಗಾರ ಹೇಗಿರಬೇಕು? ಭಕ್ತರಿಗೆ ಅನ್ನದಾಸೋಹದ ಮೆನ್ಯು ಹೇಗಿರಬೇಕು? ಎಂದೆಲ್ಲ ಲೆಕ್ಕಾಚಾರ ಹಾಕುತ್ತವೆ. ಇದೀಗ ಬರೀ ‘ಮಹಾಕಾಯ’ನ ಬರುವಿಕೆಗೆ ಕ್ಷಣಗಣನೆ ಆರಂಭವಾಗಿದೆ.

ಸರಾಫ ಬಜಾರ್‌ನ ವರಸಿದ್ಧಿ ವಿನಾಯಕ ಮಂದಿರ ಎದುರು ಭಾರತೀಯ ಗಣೇಶ ಮಂದಿರದ ಸರಾಫ್ ಬಜಾರ್ ಸಂಘವು 83ನೇ ವರ್ಷದ ಗಣೇಶೋತ್ಸವ ಆಚರಣೆಗೆ ಅಣಿಯಾಗಿದೆ. 11 ಅಡಿ ಎತ್ತರದ ಚಿಂತಾಮಣಿ ಶೈಲಿಯ ಗಣಪ ಪ್ರತಿಷ್ಠಾಪನೆ ನಡೆಯಲಿದೆ. ಸೆ.14ರಂದು ಗಂಗಾ ಆರತಿಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಲಬುರಗಿಯಲ್ಲೇ ಅತ್ಯಂತ ಹಳೆಯ ಗಣೇಶೋತ್ಸವ ಸಮಿತಿಯಲ್ಲಿ ಇದು ಮುಂಚೂಣಿಯಲ್ಲಿದೆ.

ಪುಠಾಣಿ ಗಲ್ಲಿಯ ಶಾಂತಿ ಗಣೇಶ ಮಂಡಳವು ಈ ಸಲ ಬಿಲ್ಲುಧಾರಿ ರಾಮ ಅವತಾರಿ 15 ಅಡಿ ಎತ್ತರದ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಅಣಿಯಾಗಿದೆ. ಮಿಲನ್‌ ಚೌಕದಲ್ಲಿ ಮಿಲನ್‌ ಗಣರಾಜ ಯುವ ಪ್ರತಿಷ್ಠಾನದಿಂದ 50ನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ ಜೋರಾಗಿದೆ. ಈಸಲ ವಿಷ್ಣು ಅವತಾರದಲ್ಲಿ 15 ಅಡಿ ಎತ್ತರದ ‘ಮಿಲನ್ ಚೌಕ್ ಕಾ‌ ರಾಜಾ’ ಗಣಪತಿ ವಿರಾಜಮಾನ ಆಗಲಿದ್ದಾನೆ. ಗಂಗಾರತಿ, ಲೇಸರ್‌ ಶೋ, ಮದ್ದು ಸುಡುವ ಕಾರ್ಯಕ್ರಮ ಇಲ್ಲಿನ ಆಕರ್ಷಣೆ.

ಚಪ್ಪಲ ಬಜಾರ್‌ನಲ್ಲಿ 54ನೇ ಗಣೇಶೋತ್ಸವದ ಅಂಗವಾಗಿ ದೀಪಕ್‌ ಗಣೇಶ ಮಂಡಲವು 13 ಅಡಿ ಎತ್ತರದ ‘ಚಪ್ಪಲ ಬಜಾರ್ ಕಾ‌ ರಾಜಾ’ ಗಣಪನ ಸ್ಥಾಪನೆ ಅಣಿಯಾಗಿದೆ. ₹1.25 ಲಕ್ಷ ವೆಚ್ಚದಲ್ಲಿ ಸರ್ಪದ‌ ಮೇಲೆ ಕೊಳಲನೂದುತ ನಿಂತು ಕೃಷ್ಣಾವತಾರಿ ಬೆನಕ ಇಲ್ಲಿನ ಆಕರ್ಷಣೆ.

ನಗರದ ಕಲಬುರಗಿ ಕೋಟೆ ಎದುರು ಹಿಂದೂ ಮಹಾಗಣಪತಿ ಸಮಿತಿಯಿಂದ ಈ ವರ್ಷ ಲಂಬೋದರನಿಗಾಗಿ ಉತ್ತರಾಖಂಡದ ಕೇದಾರನಾಥ ದೇವಸ್ಥಾನ ಮಾದರಿಯ ಪೆಂಡಾಲ್‌ ನಿರ್ಮಿಸಲಾಗುತ್ತಿದೆ. 60 ಅಡಿ ಎತ್ತರ, 40 ಅಡಿ ಅಗಲ ಹಾಗೂ 48 ಅಡಿ ಉದ್ದದ ಈ ಪೆಂಡಾಲ್‌ನಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಚಿತ್ರಗಳೂ ಇರಲಿವೆ. ಹಿಮಪರ್ವತಗಳ ಹಿನ್ನೆಲೆಯ ಬ್ಯಾನರ್‌ ಮುಂದೆ ಈಸಲ 6 ಅಡಿ ಮಣ್ಣಿನ ಗಜಾನನ ಮೂರ್ತಿ ಪ್ರತಿಷ್ಠಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಮಿತಿಯ ಸದಸ್ಯ ಶಿವರಾಜ ಸಂಗೊಳಗಿ ಹೇಳಿದರು.

ಸರಾಫ್ ಬಜಾರ್ ಪ್ರದೇಶದ ಭೋವಿ ಗಲ್ಲಿಯಲ್ಲಿ 19 ಅಡಿ ಎತ್ತರದ ‘ಪಾರ್ವತಿ‌ ಚ‌ ಬಾಳಾ’ ಪರಿಕಲ್ಪನೆಯಲ್ಲಿ ವಿನಾಯಕನ ಪೂಜಿಸಲು ಸಜ್ಜಾಗಿದ್ದಾರೆ. ಹಫ್ತ ಗುಂಬಜ್‌ ಎದುರು ಗಜಾನನ ತರುಣ ಸಂಘದಿಂದ 36ನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ ಜೋರಾಗಿದೆ. ಈಗಾಗಲೇ ₹1.28 ಲಕ್ಷ ವೆಚ್ಚ ಮಾಡಿ 17 ಅಡಿ ಎತ್ತರದ ಕುಳಿತ ಭಂಗಿಯಲ್ಲಿರುವ ಗೌರಿನಂದನನ ಮೂರ್ತಿ ಹೈದರಾಬಾದ್‌ನ ದೂಳ್‌ಪೇಟ್‌ನಿಂದ ತರಿಸಲಾಗಿದೆ.

ಸಂದಲ್‌ ಗಲ್ಲಿಯ ಗಣೇಶ ತರುಣ ಸಂಘವು 15ನೇ ವರ್ಷದ ಗಣೇಶೋತ್ಸವದ ಅಂಗವಾಗಿ ರಾಕ್ಷಸನ ಹೊಟ್ಟೆ ಬಗೆಯುತ್ತಿರುವ 17 ಅಡಿ ಎತ್ತರದ ನರಸಿಂಹ ಅವತಾರ ಗಣಪ ಮೂರ್ತಿ ಪ್ರತಿಷ್ಠಾಪಿಸಲು ಮುಂದಾಗಿದೆ. ಡಂಕಾ ಕ್ರಾಸ್‌ನಲ್ಲಿ 61ನೇ ವರ್ಷದ ಗಣೇಶೋತ್ಸವದ ನಿಮಿತ್ತ 6 ಅಡಿ ಎತ್ತರ ಬೆನಕನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲು ಅಣಿಯಾಗಿದೆ.

ಶಹಾಬಜಾರದ ರಾಮಮಂದಿರದಲ್ಲಿ 10 ಅಡಿ ಎತ್ತರದ ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಸಿದ್ಧತೆ ನಡೆದಿದೆ. ಜೆ.ಆರ್.ಕಾಲೊನಿಯ ಯುಗಾ ಗ್ರೂಪ್‌ ಗಣೇಶ ಮಂಡಳವು 16 ಅಡಿ ಎತ್ತರದ ನರಸಿಂಹ ಅವತಾರದ ಗಣೇಶ ಮೂರ್ತಿ ಪೂಜಿಸಲು ಸಜ್ಜಾಗಿದೆ.

ಪೊಲೀಸ್ ಇಲಾಖೆ ಸಜ್ಜು...

ಕಲಬುರಗಿ ನಗರ ಹಾಗೂ ಜಿಲ್ಲೆಯಲ್ಲಿ ಗಣೇಶೋತ್ಸವ ಸುಸೂತ್ರವಾಗಿ ನಡೆಸಲು ಪೊಲೀಸ್‌ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ.

‘ಗಣೇಶೋತ್ಸವದ ಅಂಗವಾಗಿ ಶಾಂತಿಸಭೆಗಳನ್ನು ನಡೆಸಲಾಗಿದೆ. ಡಿಜೆಗಳ ಬಳಕೆ, ಧ್ವನಿವರ್ಧಕಗಳ ಬಳಕೆಗಳಲ್ಲಿ ಸುಪ್ರೀಂಕೋರ್ಟ್‌ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಇಲಾಖೆಯ 300 ಹಾಗೂ ಸಾರ್ವಜನಿಕರ 19,800 ಸಿಸಿಟಿವಿಗಳ ಮೂಲಕ ನಿಗಾ ಇಡಲಾಗಿದೆ. ಸಿಬ್ಬಂದಿ ಗಸ್ತು, ಭದ್ರತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲು ಕ್ರಮವಹಿಸಲಾಗಿದೆ. ಕಳೆದ ವರ್ಷ ಕಲಬುರಗಿಯಲ್ಲಿ 648 ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದವು. ಈ ವರ್ಷವೂ ಹೆಚ್ಚು ಕಡಿಮೆ ಅಷ್ಟೇ ಇರಲಿವೆ’ ಎಂದು ಕಲಬುರಗಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಾದ್ಯಂತ ಶಾಂತಿಸಭೆ

‘ಜಿಲ್ಲೆಯಾದ್ಯಂತ ಈಗಾಗಲೇ ಶಾಂತಿಸಭೆಗಳನ್ನು ನಡೆಸಲಾಗಿದೆ. ಗಣೇಶೋತ್ಸವದ ವೇಳೆ ಗಸ್ತು ಹೆಚ್ಚಿಸಲು ಕ್ರಮವಹಿಸಲಾಗಿದೆ. ಕಳೆದ ವರ್ಷ 1,600ರಷ್ಟು ಸಾರ್ವಜನಿಕ ಗಣೇಶೋತ್ಸವ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿತ್ತು. ಈ ವರ್ಷವೂ ಬಹುತೇಕ ಅಷ್ಟೇ ಅರ್ಜಿಗಳು ಸಲ್ಲಿಕೆಯಾಗುವ ನಿರೀಕ್ಷೆಗಳಿವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ