ಭದ್ರಾ ಕಾಲುವೆ; ಎಂಜಿನಿಯರಿಂಗ್‌ ಯಶೋಗಾಥೆಯನ್ನು ಅನಾವರಣಗೊಳಿಸಿದೆ

ಭದ್ರಾ ಕಾಲುವೆ; ಎಂಜಿನಿಯರಿಂಗ್‌ ಯಶೋಗಾಥೆಯನ್ನು ಅನಾವರಣಗೊಳಿಸಿದೆ

ಭದ್ರಾ ಕಾಲುವೆ; ಎಂಜಿನಿಯರಿಂಗ್‌ ಯಶೋಗಾಥೆಯನ್ನು ಅನಾವರಣಗೊಳಿಸಿದೆ

ಚಿತ್ರದುರ್ಗ: ವಿದ್ಯುಚ್ಛಕ್ತಿ ಹಾಗೂ ಗುರುತ್ವಾಕರ್ಷಣ ಶಕ್ತಿಯ ಆಧಾರದ ಮೇಲೆ 164 ಕಿ.ಮೀ. ದೂರದಿಂದ ಹರಿಯುತ್ತಿರುವ ಭದ್ರಾ ನೀರು ಎಂಜಿನಿಯರಿಂಗ್‌ ಯಶೋಗಾಥೆಯನ್ನು ಅನಾವರಣಗೊಳಿಸಿದೆ. ದೇಶದ ಎಲ್ಲಾ ನೀರಾವರಿ ಯೋಜನೆಗಳೂ ಇದೇ ರೀತಿ ಇದ್ದರೂ ಭದ್ರಾ ಮೇಲ್ದಂಡೆ ಯೋಜನೆ ಹಲವು ವಿಶೇಷಗಳಿಂದ ಗಮನ ಸೆಳೆಯುತ್ತಿದೆ.

ಕಾವ್ಯಾತ್ಮಕವಾಗಿ ಹೇಳುವುದಾದರೆ ಭದ್ರೆಯು ದಾರಿಯುದ್ದಕ್ಕೂ ನರ್ತಿಸುತ್ತಾ, ಏರುತ್ತಾ, ಇಳಿಯುತ್ತಾ, ಧುಮ್ಮಿಕ್ಕುತ್ತಾ ಬರುತ್ತಿದ್ದಾಳೆ. ಆದರೆ, ವಾಸ್ತವವಾಗಿ ನಾಲೆ ನಿರ್ಮಾಣ ದಶಕಗಳವರೆಗೆ ನಡೆದಿದ್ದು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಹಲವು ಸವಾಲುಗಳನ್ನು ಎದುರಿಸಿ ಬಯಲುಸೀಮೆಗೆ ನೀರು ಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಲು ಸಾಲು ಕೋರ್ಟ್‌ ಕೇಸ್‌ಗಳು, ಸೂಕ್ಷ್ಮ ಅರಣ್ಯ ಭೂಮಿಯಲ್ಲಿ ಬೃಹತ್‌ ಕಾಮಗಾರಿ, ಪರಿಸರ ಅನುಮತಿ ಸವಾಲು, ವಿದ್ಯುತ್‌ ಲೈನ್‌ ಸಂಪರ್ಕ, 15 ಕಿ.ಮೀ.ಯಷ್ಟು ಸುರಂಗ ನಿರ್ಮಾಣ ಕಾರ್ಯಗಳು ಎಂಜಿನಿಯರಿಂಗ್‌ ಯಶೋಗಾಥೆಗಳೇ ಆಗಿವೆ. 50ರ ದಶಕದಲ್ಲೇ ಹುಟ್ಟಿದ್ದ ಭದ್ರಾ ಮೇಲ್ದಂಡೆ ಯೋಜನೆಯ ಕನಸು ಅಸಾಧ್ಯ ಎನ್ನುವ ಕಾರಣದಿಂದಾಗಿಯೇ ಸಾಕಾರಗೊಂಡಿರಲಿಲ್ಲ. ಆದರೆ, ಈಗಿನ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ಎಲ್ಲವೂ ಸಾಧ್ಯವಾಗಿದ್ದು ಬಯಲು ಸೀಮೆಗೆ ನೀರು ಹರಿದಿದೆ ಎಂದು ನಿಗಮದ ಅಧಿಕಾರಿಗಳೇ ಹೇಳುತ್ತಾರೆ.

ಭದ್ರಾ ಜಲಾಶಯದಿಂದ ಗುರುತ್ವಾಕರ್ಷಣ ಶಕ್ತಿಯ ಆಧಾರದ ಮೇಲೆ 10 ಕಿ.ಮೀ ಹರಿಯುವ ನೀರು ಶಾಂತಿಪುರ ಪಂಪ್‌ಹೌಸ್‌ ಸೇರುತ್ತದೆ. ಇಲ್ಲಿ 4 ಯಂತ್ರಗಳಿದ್ದು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನೀರೆತ್ತಲಾಗುತ್ತದೆ. ಸದ್ಯ 1 ಯಂತ್ರ ಮಾತ್ರ ಬಳಕೆಯಾಗುತ್ತಿದೆ. ಬೃಹತ್‌ ಪೈಪ್‌ಗಳ ಮೂಲಕ 45 ಮೀಟರ್‌ ಮೇಲೇರಿ ನಂತರ 150 ಅಡಿ ಕೆಳಗಿಳಿದು ತೊಟ್ಟಿಗೆ ಧುಮ್ಮಿಕ್ಕುತ್ತದೆ. ನೀರು ಬಸಿದುಕೊಳ್ಳುವ ದೃಶ್ಯಗಳು ನಾಲೆಯ ಬಳಿ ಸೌಂದರ್ಯ ಸೃಷ್ಟಿಸಿದೆ.

ಮುಂದೆ 35 ಕಿ.ಮೀ ವರೆಗೆ ನೀರು ಗುರುತ್ವಾಕರ್ಷಣ ಶಕ್ತಿಯ ಆಧಾರದ ಮೇಲೆ ಹರಿಯುತ್ತದೆ. ನಂತರ ಬೆಟ್ಟತಾವರೆಕೆರೆ ಪಂಪ್‌ಹೌಸ್‌ ತಲುಪುತ್ತದೆ. ಶಾಂತಿಪುರ ಮಾದರಿಯಲ್ಲೇ ಮೇಲೇರುವ ನೀರು ತೊಟ್ಟಿಯಲ್ಲಿ ಧುಮ್ಮಿಕ್ಕಿ ಮುಂದೆ ಸಾಗುತ್ತದೆ. ಪ್ರತಿ ಪಂಪ್‌ಹೌಸ್‌ ಪಕ್ಕದಲ್ಲೇ ತಲಾ ಒಂದು 220/11 ಕೆ.ವಿ ಸಾಮರ್ಥ್ಯದ ವಿದ್ಯುತ್‌ ಸರಬರಾಜು ಘಟಕ (ಪವರ್‌ ಸ್ಟೇಷನ್‌) ನಿರ್ಮಿಸಲಾಗಿದೆ.

ಮುಂದೆ ನರಸೀಪುರದಿಂದ ಅಜ್ಜಂಪುರ ಸುರಂಗ ಆರಂಭಗೊಳ್ಳುತ್ತದೆ. ಇದು ರಾಜ್ಯದ 2ನೇ ಅತೀ ಉದ್ದದ ಸುರಂಗ ಎಂದೇ ಪ್ರಸಿದ್ಧಿ ಪಡೆದಿದೆ. 2008ರಲ್ಲಿ ಆರಂಭವಾದ ಸುರಂಗ ಕಾಮಗಾರಿ 2022ರಲ್ಲಿ ಪೂರ್ಣಗೊಂಡಿದೆ. 7 ಕಿ.ಮೀ ವ್ಯಾಪ್ತಿಯಲ್ಲಿ ಸುರಂಗ ಕೊರೆದಿರುವ ಕಾರಣ ಲಕ್ಷಾಂತರ ಮರ ಕಡಿಯುವುದನ್ನು ತಪ್ಪಿಸಲಾಗಿದೆ. ಸುರಂಗ ಮಾರ್ಗಕ್ಕಾಗಿ ಅನುಮತಿ ಪಡೆಯಲು ಹಲವು ವರ್ಷಗಳ ಕಾಲ ಪ್ರಯತ್ನ ಪಟ್ಟಿದ್ದನ್ನು ನಿಗಮದ ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ.

‘ವೈ’ ಜಂಕ್ಷನ್‌ನಿಂದ ಭದ್ರಾ ಮುಖ್ಯ ನಾಲೆ 2 ಮಾರ್ಗದಲ್ಲಿ ಕವಲೊಡೆಯುತ್ತದೆ. ಎಡಕ್ಕೆ ಚಿತ್ರದುರ್ಗ ಶಾಖಾ ನಾಲೆ, ಬಲಕ್ಕೆ ತುಮಕೂರು ಶಾಖಾ ನಾಲೆ ಇದೆ. ತುಮಕೂರು ನಾಲಾ ಕಾಮಗಾರಿ ಇನ್ನೂ ಆರಂಭಿಕ ಹಂತದಲ್ಲೇ ಇದೆ. ವಿಶೇಷವೆಂದರೆ, ಚಿತ್ರದುರ್ಗ ನಾಲೆಗೆ ನೀರು ಹರಿಸುವುದಕ್ಕೂ ಮೊದಲು ತುಮಕೂರು ನಾಲೆಗೆ ನೀರು ಹರಿಸಲಾಗಿತ್ತು. ಈ ನಾಲೆಯ ಮೂಲಕ ವೇದಾವತಿ ನದಿಗೆ ನೀರು ಹರಿಸಿ ವಿ.ವಿ. ಸಾಗರ ಜಲಾಶಯ ತುಂಬಿಸಲಾಗಿತ್ತು.

‘ವೈ’ ಜಂಕ್ಷನ್‌ನಿಂದ ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ 114 ಕಿ.ಮೀ ಹರಿದಿರುವ ನೀರು ಈಗ ಗೋನೂರು ಕೆರೆಗೆ ಧುಮ್ಮಿಕ್ಕುತ್ತಿದೆ. ಚಿತ್ರದುರ್ಗ ಶಾಖಾ ನಾಲೆ 6 ತಿಂಗಳ ಹಿಂದೆಯೇ ಪೂರ್ಣಗೊಂಡು ಪರೀಕ್ಷಾರ್ಥ ನೀರು ಹರಿವಿಗೆ ಸಿದ್ಧವಾಗಿತ್ತು. ಆದರೆ, ಅಲ್ಲಲ್ಲಿ ಬೃಹತ್‌ ಬಂಡೆಗಳು ಸಿಕ್ಕಿದ್ದ ಕಾರಣ ನಿಯಂತ್ರಿತ ಸ್ಫೋಟ ಕಾರ್ಯದಿಂದಾಗಿ ತಡವಾಗಿತ್ತು.

ಹೆಗಡೇಹಳ್ಳಿ ಬಳಿ ಆಳವಾದ ನಾಲೆಯಲ್ಲಿ ಹಲವು ಬೃಹತ್‌ ಬಂಡೆಗಳು ಸಿಕ್ಕಿದ್ದವು. ದೆಹಲಿಯಿಂದ ಬಂದಿದ್ದ ತಂತ್ರಜ್ಞರ ತಂಡ 3 ತಿಂಗಳವರೆಗೆ ಸ್ಫೋಟ ನಡೆಸಿ ನೀರು ಹರಿವಿಗೆ ಅವಕಾಶ ನೀಡಿತು. ನಾಲೆ ಪಕ್ಕದಲ್ಲೇ ಮನೆಗಳಿದ್ದ ಕಾರಣ ಬಲು ಎಚ್ಚರಿಕೆಯಿಂದ ಸ್ಫೋಟ ನಡೆಸಿ ಬಂಡೆ ತೆರವುಗೊಳಿಸಲಾಯಿತು. ಹಲವು ತಿಂಗಳವರೆಗೆ ಈ ಬೃಹತ್‌ ಬಂಡೆಗಳು ತಲೆನೋವಾಗಿದ್ದವು ಎಂದು ಎಂಜಿನಿಯರ್‌ಗಳು ನೆನೆಯುತ್ತಾರೆ.

ಪ್ರಾಣಿಗಳ ಓಡಾಟಕ್ಕೆ ವಿಶೇಷ ವ್ಯವಸ್ಥೆ

ಭದ್ರಾ ಅಭಯಾರಣ್ಯ, ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿ ನಾಲೆ ಸಾಗುವ ಕಾರಣ ಹಲವು ಕಡೆ ಪ್ರಾಣಿಗಳ ಓಡಾಟಕ್ಕಾಗಿ ಎಂಜಿನಿಯರ್‌ಗಳು ವಿಶೇಷ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಪ್ರಾಣಿಗಳ ಕುಡಿಯುವ ನೀರಿಗೂ ಸೌಲಭ್ಯ ಒದಗಿಸಲಾಗಿದೆ.

12 ಕಡೆಗಳಲ್ಲಿ 60X30 ಮೀಟರ್‌ ಉದ್ದದ ಸೇತುವೆಗಳನ್ನು ನಿರ್ಮಿಸಲಾಗಿದೆ. ಪ್ರಾಣಿಗಳು ನಾಲೆಯ ಒಳಗೆ ಇಳಿದು ನೀರು ಕುಡಿಯಲು 24 ಕಡೆಗಳಲ್ಲಿ ಇಳಿಜಾರು (ರ‍್ಯಾಂಪ್‌) ನಿರ್ಮಿಸಲಾಗಿದೆ. ಇಲ್ಲಿ ರೈತರು, ಕುರಿಗಾಹಿಗಳು ತಮ್ಮ ಜಾನುವಾರುಗಳನ್ನು ಇಳಿಸಿ ನೀರು ಕುಡಿಸಲು ಅನುಕೂಲ ಕಲ್ಪಿಸಲಾಗಿದೆ. ಸೋಪಾನಕಟ್ಟೆಯ ರೀತಿಯಲ್ಲೂ ಬಳಸಿಕೊಳ್ಳಬಹುದು. ಸದಾ ಕಾಲ ಪ್ರಾಣಿಗಳು ಓಡಾಡುವ ಜಾಗದಲ್ಲಿ ಕೊಳಗಳನ್ನೂ ನಿರ್ಮಿಸಲಾಗಿದೆ.

ನಿವೃತ್ತರಾದ ಅಧಿಕಾರಿಗಳು...

ಹಲವು ಅಧಿಕಾರಿಗಳು, ಎಂಜಿನಿಯರ್‌ಗಳು ಹಾಗೂ ಸಿಬ್ಬಂದಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಕೆಲಸ ಮಾಡಿದ್ದಾರೆ. ಭದ್ರಾ ನೀರು ತರಲು ಶ್ರಮಿಸಿ ತಮ್ಮ ವೃತ್ತಿ ಬದುಕನ್ನೇ ಪೂರ್ಣಗೊಳಿಸಿ ನಿವೃತ್ತರಾಗಿದ್ದಾರೆ. ಅವರೆಲ್ಲರ ಶ್ರಮವೂ ಭದ್ರಾ ನೀರಿನ ಹಿಂದಿದೆ.

‘ಭದ್ರಾ ನೀರಿಗಾಗಿ ವಿವಿಧ ಸಂಘಟನೆಗಳ ಸದಸ್ಯರು ಹೋರಾಡಿದ್ದಾರೆ. ಅದೇ ರೀತಿ ಅಸಂಖ್ಯಾತ ಅಧಿಕಾರಿಗಳು ಕೂಡ ತಮ್ಮದೇ ಆದ ಕೊಡುಗೆ ಕೊಟ್ಟು ಹೋಗಿದ್ದಾರೆ. ಅವರನ್ನೂ ನೆನೆಯುವ ಕೆಲಸವಾಗಬೇಕು’ ಎಂದು ರೈತಮುಖಂಡ ಹಂಪಯ್ಯನಮಾಳಿಗೆ ಧನಂಜಯ ಹೇಳಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ