
ಉಪ್ಪಿನಂಗಡಿ: ಸದ್ಬಳಕೆಯಾಗಲಿ ನೂರಾರು ಎಕರೆ ಹುಲ್ಲುಗಾವಲು
ಉಪ್ಪಿನಂಗಡಿ: ದೃಷ್ಟಿ ಹಾಯಿಸಿದಷ್ಟು ಉದ್ದಕ್ಕೂ ಹಸಿರು ಹಾಸಿದ ನೆಲ. ಕಣ್ಣಿಗೆ ಹಬ್ಬವನ್ನುಂಟು ಮಾಡುವ ನಿರಾಭರಣ ಸುಂದರಿಯರಂತೆ ಕಾಣುವ ಇಲ್ಲಿನ ಬೆಟ್ಟ ಗುಡ್ಡಗಳು. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರವು ಸುಮಾರು 600 ಎಕರೆ ಹುಲ್ಲುಗಾವಲನ್ನು ಹೊಂದಿದೆ. ಆದರೆ, ಇದರ ಸಂಪೂರ್ಣ ಪ್ರಯೋಜನ ಪಡೆಯುವ ಕಾರ್ಯ ನಡೆಯುತ್ತಿಲ್ಲ.
ಇಷ್ಟು ವಿಶಾಲವಾದ ಪಶು ಸಂವರ್ಧನಾ ಪ್ರದೇಶದಲ್ಲ್ಲಿಮಲೆನಾಡು ಗಿಡ್ಡ ಜಾತಿಯ ಹಾಲು ಕರೆಯುವ 50 ಹಸುಗಳು, ಹಾಲು ಬತ್ತಿರುವ 54 ಹಸುಗಳು, 76 ಗಂಡು ಮತ್ತು ಹೆಣ್ಣು ಕರುಗಳು, ಇನ್ನೂ ಕರು ಹಾಕದ 52 ದನಗಳು, 28 ಹೋಡಿ ಸೇರಿ 260 ಜಾನುವಾರುಗಳು ಮಾತ್ರ ಇವೆ. ಹಂದಿ ತಳಿ ಅಭಿವೃದ್ಧಿ ಪಡಿಸುವ ಮತ್ತು ಕೋಳಿ ಮರಿ ಉತ್ಪಾದಿಸಿ ಮಾರಾಟ ಮಾಡುವ ಕೇಂದ್ರವೂ ಇಲ್ಲಿ ಕಾರ್ಯಾಚರಿಸುತ್ತಿದೆ. ‘ಅಮೃತ ಸಿರಿ’ ಯೋಜನೆಯಲ್ಲಿ ಹೆಣ್ಣು ಕರುಗಳನ್ನು ಆಸಕ್ತ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸುವ ಕಾರ್ಯ 6 ತಿಂಗಳಿಗೊಮ್ಮೆ ನಡೆಯುತ್ತಿದೆ.
ಈ ಕೇಂದ್ರಕ್ಕೆ ಉಪ ನಿರ್ದೇಶಕ, ಮೂವರು ವೈದ್ಯರು, ತಾಂತ್ರಿಕ ಸಿಬ್ಬಂದಿ ಸೇರಿ 40 ಹುದ್ದೆಗಳು ಮಂಜೂರಾಗಿವೆ. ಆದರೆ ಇಲ್ಲಿ ಒಬ್ಬ ಉಪನಿರ್ದೇಶಕ ಮತ್ತು ನಾಲ್ವರು ತಾಂತ್ರಿಕ ಸಿಬ್ಬಂದಿ ಹಾಗೂ 21 ಹೊರಗುತ್ತಿಗೆ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. 1951ರಲ್ಲಿ ಇಲ್ಲಿನ 1,100 ಎಕರೆ ಪ್ರದೇಶದಲ್ಲಿ ಪಶು ಸಂಗೋಪನಾ ಕ್ಷೇತ್ರವನ್ನು ಆರಂಭಿಸಲಾಗಿತ್ತು. ಕ್ಷೀರ ಕ್ರಾಂತಿ ಉತ್ತೇಜಿಸುವ ಸಲುವಾಗಿ ಇಲ್ಲಿ ತರಬೇತಿ ಕೇಂದ್ರವೂ ಕಾರ್ಯಾಚರಿಸುತ್ತಿತ್ತು. ಹಿರಿಯರು ಹೇಳುವ ಪ್ರಕಾರ, ಮುರ ಎಮ್ಮೆ, ಧಾರವಾಡ ಎಮ್ಮೆ, ಎಚ್.ಎಫ್., ಜರ್ಸಿ, ಸಿಂಧಿ ಹಸುಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಜಾನುವಾರುಗಳು ಇಲ್ಲಿದ್ದವು. ದೂರದ ಊರಗಳ ಶಾಲಾ ವಿದ್ಯಾರ್ಥಿಗಳು, ರೈತರು ಈ ಸಂವರ್ಧನಾ ಕ್ಷೇತ್ರವನ್ನು ಸಂದರ್ಶಿಸುತ್ತಿದ್ದರು. ಒಂದು ಕಾಲದಲ್ಲಿ ವೈಭವ ಮೆರೆದಿದ್ದ ಈ ಜಾನುವಾರು ತಳಿ ಸಂವರ್ಧನಾ ಕ್ಷೇತ್ರ ಈಗ ಪಾಳು ಬಿದ್ದ ಗುಡ್ಡವಾಗಿದೆ.ಕೇಂದ್ರದ 1100 ಎಕರೆ ಜಾಗದಲ್ಲಿ 250 ಎಕರೆಯನ್ನು ಕೊಯಿಲ ಪಶು ವೈದ್ಯ ಕಾಲೇಜಿಗೆ ಒದಗಿಸಲಾಗಿದೆ. 100 ಎಕರೆ ಜಾಗದಲ್ಲಿ ಗೋ ಶಾಲೆ ಸ್ಥಾಪನೆಯಾಗಿದೆ. ಉಳಿದ 100 ಎಕರೆ ಪ್ರದೇಶದಲ್ಲಿ ಕೊಯಿಲ ಜಾನುವಾರು ತಳಿ ಸಂವರ್ಧನಾ, ತರಬೇತಿ ಕೇಂದ್ರ ಕಾರ್ಯಾಚರಿಸುತ್ತಿದೆ. ಇನ್ನುಳಿದ ಜಾಗವನ್ನು ಹುಲ್ಲುಗಾವಲನ್ನು ಅಭಿವೃದ್ಧಿ ಪಡಿಸಿ ಸದ್ಬಳಕೆ ಮಾಡಲು ಸರ್ಕಾರ ಕಾರ್ಯಕ್ರಮ ರೂಪಿಸಬೇಕು ಎನ್ನುವುದು ರೈತರ ಹಾಗೂ ಸ್ಥಳೀಯರ ಒತ್ತಾಯ.
‘ಜೈವಿಕ ಸುರಕ್ಷತಾ ಕೇಂದ್ರ ಸ್ಥಾಪಿಸಿ’
ಕೊಯಿಲದ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ಸದ್ಯಕ್ಕಿರುವ ಜಾನುವಾರುಗಳ ಉಪಯೋಗಕ್ಕೆ 100 ಎಕರೆ ಜಾಗ ಸಾಕು. ಜಾನುವಾರುಗಳಿಗೆ ರೋಗ ಹರಡದಂತೆ ತಡೆಯುವ ಸಂಶೋಧನೆಗೆ ಸಂಬಂಧಿಸಿದಂತೆ ಮತ್ತು ಮೂಲ ತಳಿಗಳ ಸಂರಕ್ಷಣೆ ಸಲುವಾಗಿ ತರಬೇತಿ ಕೇಂದ್ರ ನಿರ್ಮಿಸಬಹುದು. 15 ತಿಂಗಳ ಕಾಲ ವಸತಿ ಸಹಿತವಾಗಿ ರೈತರಿಗೆ ತರಬೇತಿ ನೀಡುವಂತಹ ಜೈವಿಕ ಸುರಕ್ಷತಾ ಕೇಂದ್ರವನ್ನು (ಬಯೋ ಸೆಕ್ಯುರಿಟಿ) ಇಲ್ಲಿ ಸ್ಥಾಪಿಸಬಹುದು ಎಂದು ನಿವೃತ್ತ ಪಶು ವೈದ್ಯಾಧಿಕಾರಿಯೊಬ್ಬರು ಸಲಹೆ ನೀಡಿದರು.
‘ಪಿಲಿಕುಳ ಮಾದರಿಯ ಪ್ರವಾಸಿ ಕೇಂದ್ರ ರೂಪಿಸಿ’
ಹುಲ್ಲುಗಾವಲು ಪ್ರದೇಶದ ಒಂದು ಬದಿಯಲ್ಲಿ ಕುಮಾರಧಾರಾ ನದಿ ಹರಿಯುತ್ತಿದೆ. ಅನೇಕ ಜಾತಿಗಳ ಹಕ್ಕಿಗಳು ವಲಸೆ ಬರುವ ಈ ತಾಣವನ್ನು ಪಕ್ಷಿಧಾಮವನ್ನಾಗಿ ಅಭಿವೃದ್ಧಿಪಡಿಸಬಹುದು. ಕೆಲ ವರ್ಷಗಳ ಹಿಂದೆ ವಿದೇಶದಿಂದ ವಲಸೆ ಬಂದಿದ್ದ ಹಕ್ಕಿಗಳು ಇಲ್ಲಿ ಕೆಲ ಕಾಲ ಬೀಡು ಬಿಟ್ಟಿದ್ದವು. ನಿಸರ್ಗ ಸೌಂದರ್ಯದ ಖನಿಯಾಗಿರುವ ಈ ಪ್ರದೇಶವನ್ನು ಮಂಗಳೂರು ಸಮೀಪದಲ್ಲಿರುವ ಪಿಲಿಕುಳ ಮಾದರಿಯಲ್ಲಿ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬಹುದು ಎಂದು ಕೊಯಿಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಹೇಳಿದ್ದಾರೆ.
‘ಸ್ಥಳೀಯ ರೈತರಿಗೆ ಪ್ರಯೋಜನ ಸಿಗಲಿ’
ಹಂದಿ, ಕೋಳಿ ಸಾಕಾಣಿಕೆಗೆ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಈ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದೆ. ತಾಂತ್ರಿಕ ಸಿಬ್ಬಂದಿಯನ್ನು ಬಳಸಿಕೊಂಡು ಸ್ಥಳೀಯವಾಗಿ ರೈತರಿಗೆ ಪ್ರಯೋಜನ ದೊರಕುವ ನಿಟ್ಟಿನಲ್ಲಿ ಯೋಜನೆ ರೂಪಿಸಿದರೆ, ಈ ಕೇಂದ್ರವನ್ನು ಚೆನ್ನಾಗಿ ಅಭಿವೃದ್ದಿಪಡಿಸಬಹುದು ಎಂದು ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪ ನಿರ್ದೇಶಕ ಡಾ.ಚಿದಾನಂದ ತಿಳಿಸಿದರು.