
ಯುವತಿ ಅಪಹರಣ ಯತ್ನ: ರಾಜಸ್ಥಾನದ ಮೂವರ ಸೆರೆ
ಬೆಂಗಳೂರು: ಯುವತಿಯನ್ನು ಅಪಹರಿಸಲು ಯತ್ನಿಸಿದ ರಾಜಸ್ಥಾನದ ಮೂವರನ್ನು ವಿಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗೆ ಹುಡುಕಾಟ ನಡೆಸುತ್ತಿದ್ದಾರೆ.
ರಾಕೇಶ್ (31), ಕರಣ್ (25) ಹಾಗೂ ಅಯಾನ್ (18) ಬಂಧಿತರು. ಕಾರು ಚಾಲಕ ಸದ್ದಾಂ ತಲೆಮರೆಸಿಕೊಂಡಿದ್ದಾನೆ.
ಯುವತಿಯನ್ನು ಅಪಹರಿಸಿ ಕೊಂಡು ಹೋಗುವಾಗ ಕಾರನ್ನು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿದ್ದರ ಪರಿಣಾಮ ಆರು ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಪೃಥ್ವಿರಾಜ್ (12), ಯಶಿಕಾ (9), ಅಮುಲ್ (35), ಮಣಿ (64), ಜಯಲಕ್ಷ್ಮಿ (57), ಸಂತೋಷ್ (33) ಗಾಯಗೊಂಡವರು. ಜಯಲಕ್ಷ್ಮಿ ತಲೆಗೆ ಪೆಟ್ಟು ಬಿದ್ದಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜಸ್ಥಾನ ಪೂಜಾ (21) ಹಾಗೂ ಓಂ ಪ್ರಕಾಶ್ (23) ಪ್ರೀತಿಸಿ ಎಂಟು ತಿಂಗಳ ಹಿಂದೆ ಮದುವೆ ಆಗಿದ್ದರು. ಇತ್ತೀಚೆಗೆ ಬೆಂಗಳೂರಿಗೆ ಬಂದು ಅಗ್ರಹಾರ ದಾಸರಹಳ್ಳಿಯಲ್ಲಿ ನೆಲಸಿದ್ದರು. ಈ ಮದುವೆ ಪೂಜಾ ಪೋಷಕರಿಗೆ ಇಷ್ಟ ಇರಲಿಲ್ಲ.
ನಾಲ್ವರು ಆರೋಪಿಗಳನ್ನು ಬೆಂಗಳೂರಿಗೆ ಕಳುಹಿಸಿ, ಅಪಹರಿಸಿಕೊಂಡು ಬರುವಂತೆ ಪೂಜಾ ಪೋಷಕರು ಸೂಚಿಸಿದ್ದರು. ಬುಧವಾರ ಸಂಜೆ ನಗರಕ್ಕೆ ಬಂದಿದ್ದ ನಾಲ್ವರು ಆರೋಪಿಗಳು ಯುವತಿಯನ್ನು ಕಾರಿನಲ್ಲಿ ಅಪಹರಿಸಿಕೊಂಡು ತೆರಳುತ್ತಿದ್ದರು.
ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದರ ಪರಿಣಾಮ ಹಲವು ವಾಹನಗಳು ಜಖಂಗೊಂಡು, ಆರು ಮಂದಿ ಗಾಯಗೊಂಡಿದ್ದಾರೆ. ಕಾರನ್ನು ಜಪ್ತಿ ಮಾಡಲಾಗಿದೆ.
ಮೂವರನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.