
ಶಿಡ್ಲಘಟ್ಟ: ಮಳೆ ಕೊರತೆ ನಡುವೆಯೂ ರಾಗಿ ಬೆಳೆ ಉಳಿಸಿಕೊಳ್ಳಲು ರೈತರ ಸಾಹಸ
ಶಿಡ್ಲಘಟ್ಟ: ತಾಲ್ಲೂಕಿನಲ್ಲಿ ಮಳೆ ಕೊರತೆ ನಡುವೆಯೇ ಬಿತ್ತನೆ ಮಾಡಿರುವ ರಾಗಿ ಬೆಳೆ ಉಳಿಸಿಕೊಳ್ಳಲು ಅಪ್ಪೇಗೌಡನಹಳ್ಳಿ ಗ್ರಾಮದ ರೈತರು ಪರ್ಯಾಯ ನೀರಾವರಿ ವ್ಯವಸ್ಥೆಗಳ ಮೊರೆ ಹೋಗಿದ್ದಾರೆ.
ಅಪ್ಪೇಗೌಡನಹಳ್ಳಿಯ ರೈತರೊಬ್ಬರು ತಾವು ಬೆಳೆದ ರಾಗಿ ಬೆಳೆಗೆ ನೀರುಣಿಸಲು ಸ್ಪ್ರಿಂಕ್ಲರ್ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಿದ್ದ ರೈತರಿಗೆ ಮಳೆ ಕೈಕೊಟ್ಟಿರುವುದರಿಂದ ಬೆಳೆ ಉಳಿಸಿಕೊಳ್ಳಲು ಹೆಚ್ಚುವರಿ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಒಂದು ಎಕರೆ ಜಮೀನಿನಲ್ಲಿ ಸಂಪೂರ್ಣ ಸ್ಪ್ರಿಂಕ್ಲರ್ ವ್ಯವಸ್ಥೆ ಅಳವಡಿಸಲು ಸುಮಾರು ₹25 ಸಾವಿರದಿಂದ ₹30 ಸಾವಿರದವರೆಗೆ ವೆಚ್ಚವಾಗುತ್ತದೆ. ಆಧಾರ ಕಡ್ಡಿಗೆ ಸುಮಾರು ₹7 ಹಾಗೂ ಸ್ಪ್ರಿಂಕ್ಲರ್ ಮತ್ತು ಪೈಪ್ ಫಿಟ್ಟಿಂಗ್ ಸೇರಿದಂತೆ ಪ್ರತಿ ಸೆಟ್‌ಗೆ ₹10ರಿಂದ ₹12ರಷ್ಟು ವೆಚ್ಚವಾಗುತ್ತದೆ ಎಂದು ರೈತರು ತಿಳಿಸಿದ್ದಾರೆ.
‘ಮಳೆ ಸಕಾಲಕ್ಕೆ ಬಂದಿದ್ದರೆ ಇಷ್ಟೊಂದು ಖರ್ಚು ಮಾಡುವ ಅಗತ್ಯವಿರಲಿಲ್ಲ. ಬೆಳೆ ಉಳಿಸಿಕೊಳ್ಳಬೇಕೆಂಬ ಕಾರಣಕ್ಕೆ ಅನಿವಾರ್ಯವಾಗಿ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ’ ಎಂದು ಎಂದು ರೈತ ಬಾಲಾಜಿ ತಿಳಿಸಿದ್ದಾರೆ.
ಕೊಳವೆಬಾವಿ ಮೊರೆ: ಇದೇ ಗ್ರಾಮದ ರೈತ ಭಾರ್ಗವ್ ಎಂಬುವರು ಕೊಳವೆಬಾವಿಯಿಂದ ಸಂಪ್‌ಗೆ ನೀರು ತುಂಬಿಸಿ, ಮೋಟಾರ್ ಅಳವಡಿಸಿಕೊಂಡು ಪೈಪ್ ಮೂಲಕ ಹೊಲಕ್ಕೆ ನೀರು ಹರಿಸುತ್ತಿದ್ದಾರೆ. ಮಳೆ ನಂಬಿ ಕಳೆದ ಮೂರು–ನಾಲ್ಕು ದಿನಗಳ ಹಿಂದೆ ಸುಮಾರು 1.20 ಎಕರೆ ಜಮೀನಿನಲ್ಲಿ ರಾಗಿ ಬಿತ್ತನೆ ಮಾಡಿದ್ದಾರೆ. ಆದರೆ ಬಿತ್ತನೆ ಬಳಿಕ ಮಳೆಯಾಗದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಸದ್ಯ ಮಳೆ ಬರುವ ಲಕ್ಷಣ ಕಾಣುತ್ತಿಲ್ಲ. ನೀರಿನ ಕೊರತೆ ನಡುವೆಯೂ ನಾಲ್ಕೈದು ದಿನಕ್ಕೊಮ್ಮೆ ನೀರು ಹಾಯಿಸಿ ಭೂಮಿಯನ್ನು ತೇವವಾಗಿಟ್ಟುಕೊಂಡು ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಭಾರ್ಗವ್ ತಿಳಿಸಿದ್ದಾರೆ.
ಮಳೆ ಕೊರತೆ ನಡುವೆಯೂ ನೀರಿನ ಲಭ್ಯತೆಗೆ ಅನುಗುಣವಾಗಿ ಬೆಳೆಗಳಿಗೆ ನಾಲ್ಕೈದು ದಿನಕ್ಕೊಮ್ಮೆ ನೀರು ಹಾಯಿಸಲಾಗುತ್ತಿದೆ ಎಂದು ರೈತರೊಬ್ಬರು ಹೇಳಿದರು.
ಅನುಕೂಲವಿರುವ ರೈತರು ಮೈಕ್ರೊ ಸ್ಪ್ರಿಂಕ್ಲರ್ ಸೇರಿದಂತೆ ಪರ್ಯಾಯ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡರೆ, ಮಳೆ ಕೈಕೊಟ್ಟರೂ ಬೆಳೆಯನ್ನು ಉಳಿಸಿಕೊಂಡು ಉತ್ತಮ ಇಳುವರಿ ಪಡೆಯಬಹುದು ಎಂಬುದು ರೈತರ ಅಭಿಪ್ರಾಯ.
ಜಾನುವಾರುಗಳಿಗೆ ಮೇವು ಕೊರತೆ ಭೀತಿ
ಮಳೆ ಕೊರತೆ ಪರಿಣಾಮ ಕೃಷಿ ಚಟುವಟಿಕೆಗಳಷ್ಟೇ ಅಲ್ಲದೆ ಜಾನುವಾರುಗಳ ಮೇವಿನ ಸಮಸ್ಯೆ ಎದುರಾಗುವ ಆತಂಕ ರೈತರಲ್ಲಿ ಮೂಡಿದೆ. ಹಸಿರು ಮೇವು ದೊರೆಯದೆ ಹೋದರೆ ಮುಂದಿನ ದಿನಗಳಲ್ಲಿ ದನ–ಕರುಗಳನ್ನು ಮಾರಾಟ ಮಾಡುವ ಅನಿವಾರ್ಯತೆ ಎದುರಾಗಬಹುದು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಮಳೆ ಇನ್ನಷ್ಟು ವಿಳಂಬವಾದರೆ ರಾಗಿ ಬೆಳೆ ಇಳುವರಿ ಕುಸಿಯುವ ಸಾಧ್ಯತೆಯಿದ್ದು, ಇದರಿಂದ ಮಾರುಕಟ್ಟೆಯಲ್ಲಿ ರಾಗಿ ಬೆಲೆ ಮತ್ತು ಬೇಡಿಕೆ ಹೆಚ್ಚಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ನಿರೀಕ್ಷೆಯೂ ರೈತರಲ್ಲಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-16-915898283