
ಹುಬ್ಬಳ್ಳಿ-ಧಾರವಾಡ: ಮಾದಕ ವಸ್ತು ವಿರುದ್ಧ ಪೊಲೀಸರ ಸಮರ
ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಮಾದಕ ವಸ್ತುಗಳ ಜಾಲವನ್ನು ಬೇರು ಸಹಿತ ಕಿತ್ತು ಹಾಕಲು ಪಣ ತೊಟ್ಟಿರುವ ಪೊಲೀಸರು, 1,339 ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಮೂರು ವರ್ಷಗಳಲ್ಲಿ 643 ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿ (ಎನ್‌ಡಿಪಿಎಸ್) ಪ್ರಕರಣಗಳು ದಾಖಲಾಗಿವೆ. ಎನ್‌ಡಿಪಿಎಸ್ ವಿಶೇಷ ಕಾರ್ಯಚರಣೆಯಲ್ಲಿ ಒಟ್ಟು 4,079 ವ್ಯಕ್ತಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಇದರಲ್ಲಿ 1,339 ಆರೋಪಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.
ಮಾದಕ ವಸ್ತು ಬಳಕೆಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ, ಕಳೆದ ತಿಂಗಳು ‘ನಶೆ ಮುಕ್ತ ಕರ್ನಾಟಕ’ ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಿತ್ತು. ಆ್ಯಪ್ ಮೂಲಕ ಸಾರ್ವಜನಿಕರೇ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ. ಇದರಿಂದ ಗಾಂಜಾ ಬೆಳೆಯುತ್ತಿರುವ ಬೆಳೆಗಾರರು, ಮಾರಾಟಗಾರರು, ಗ್ರಾಹಕರು, ಸಿಂಥೆಟಿಕ್ ಡ್ರಗ್ಸ್ ತಯಾರಿಸುವ ಪ್ರಯೋಗಾಲಯಗಳು, ಸಂಗ್ರಹಣೆ ಮಾಡುತ್ತಿರುವ ಸಂಗ್ರಹಕಾರರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆ ಆಗುತ್ತಿದ್ದಾರೆ. ನಶೆ ಮುಕ್ತ ಆ್ಯಪ್‌ಗೆ ಪ್ರತಿನಿತ್ಯ ನೂರಾರು ಸಂದೇಶಗಳು ಬರುತ್ತಿದ್ದು, ಕಾರ್ಯಾಚರಣೆಗೆ ಅನುಕೂಲವಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಕಳೆದ ಮೂರು ವರ್ಷಗಳಲ್ಲಿ ಒಟ್ಟು 568 ನಶೆಮುಕ್ತ ಜಾಗೃತಿ ಕಾರ್ಯಕ್ರಮಗಳನ್ನು ನಡೆದಿದ್ದು, 1.3 ಲಕ್ಷ ವಿದ್ಯಾರ್ಥಿಗಳು, 39 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದಾರೆ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ 368 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಮಾದಕ ವಸ್ತು ಮಾರಾಟ ಜಾಲ, ಪೆಡ್ಲರ್‌ಗಳ ವಿರುದ್ಧ ಕಾನೂನು ಜಾರಿ, ತಡೆಗಟ್ಟುವಿಕೆ, ಜನಜಾಗೃತಿ ಹಾಗೂ ಪುನರ್ವಸತಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಇದರ ಭಾಗವಾಗಿ ಪ್ರತಿಯೊಂದು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಡ್ರಗ್ಸ್ ವಿರೋಧಿ ಅಭಿಯಾನದಡಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಎಲ್ಲ ಪೊಲೀಸರಿಗೆ ಜವಾಬ್ದಾರಿ ನೀಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಡ್ರಗ್ಸ್ ಮಾರಾಟ ಜಾಲದ ವಿರುದ್ಧ ತೀವ್ರ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಪೂರೈಕೆದಾರರು, ಪೆಡ್ಲರ್‌ಗಳನ್ನು ಬಂಧಿಸಲಾಗುತ್ತಿದೆ. ಈ ಬಗ್ಗೆ ಯುವಕರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಶೃತಿ ಎನ್.ಎಸ್., ಡಿಸಿಪಿ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-24-778431271