
ಸೋಮವಾರಪೇಟೆ: ಕುಸಿಯುವ ಭೀತಿಯಲ್ಲಿ ಟರ್ಫ್ ಮೈದಾನ
ಸೋಮವಾರಪೇಟೆ: ಬಹಳ ಸಮಯದ ನಂತರ ಉದ್ಘಾಟನೆಗೊಂಡು ಹಾಕಿ ಪಟುಗಳಿಗೆ ಉತ್ತಮ ವೇದಿಕೆಯಾಗಬಹುದಾಗಿದ್ದ ಟರ್ಫ್ ಕ್ರೀಡಾಂಗಣ, ಸೂಕ್ತ ನಿರ್ವಹಣೆಯಿಲ್ಲದೆ ಪತನದತ್ತ ಸಾಗುತ್ತಿದೆ.
ಪರ ವಿರೋಧದ ನಡುವೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಪಟ್ಟಣದ ಪದವಿಪೂರ್ವ ಕಾಲೇಜು ಸಮೀಪ ನಿರ್ಮಾಣಗೊಂಡು, ರಾಷ್ಟ್ರೀಯ ಮಟ್ಟದ ಹಾಕಿ ಟೂರ್ನಿಗಳಿಗೆ ಸಾಕ್ಷಿಯಾಗಿದ್ದ ಮೈದಾನವನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿ ಸಂರಕ್ಷಿಸುವ ಬದಲು, ಪಕ್ಕದಲ್ಲೇ ಕೈಗೊಂಡಿರುವ ಮತ್ತೊಂದು ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣದ ಕಾಮಗಾರಿ ಮೈದಾನದ ಅಸ್ತಿತ್ವಕ್ಕೇ ಅಪಾಯ ತಂದೊಡ್ಡಿದೆ.ಕಾಮಗಾರಿ ಆರಂಭವಾದ ದಿನದಿಂದಲೇ ಈ ಮೈದಾನ ಹಲವು ಅಡೆತಡೆಗಳನ್ನು ಎದುರಿಸಿತ್ತು. ಜಾಗದ ಆಯ್ಕೆ, ಕಾಮಗಾರಿ ವಿಳಂಬ ಸೇರಿದಂತೆ ವಿವಿಧ ಕಾರಣಗಳಿಂದ ಹತ್ತಾರು ವರ್ಷ ಕುಂಟುತ್ತಾ ಸಾಗಿ, ಕೊನೆಗೂ ಪೂರ್ಣಗೊಂಡಿತ್ತು.
ಶಾಸಕ ಡಾ. ಮಂತರ್ ಗೌಡ ಅವರ ಪ್ರಯತ್ನದಿಂದಾಗಿ ಕ್ರೀಡಾಪ್ರೇಮಿಗಳ ಬಳಕೆಗೆ ಲೋಕಾರ್ಪಣೆಗೊಂಡಿತು. ಬಳಿಕ ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾಟಗಳು ನಡೆದಿದ್ದು, ಸ್ಥಳೀಯ ಆಟಗಾರರಲ್ಲಿ ಹೊಸ ಭರವಸೆ ಮೂಡಿಸಿತ್ತು. ಹಾಕಿ ಮೈದಾನಕ್ಕೆ ಹೊಂದಿಕೊಂಡಂತೆ ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣ ಕಾಮಗಾರಿಯನ್ನು ವೈಜ್ಞಾನಿಕವಾಗಿ ಕೈಗೊಳ್ಳದೆ ಅರ್ಧದಲ್ಲೇ ಸ್ಥಗಿತಗೊಳಿಸಿದ ಪರಿಣಾಮ, ಮಳೆಯಿಂದ ಮಣ್ಣು ಸಡಿಲಗೊಂಡು, ಹಾಕಿ ಮೈದಾನದ ಒಂದು ಭಾಗ ಕುಸಿದು, ಮಣ್ಣು ಕೊಚ್ಚಿಹೋಗಿದೆ. ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಹಾಕಿ ಮೈದಾನದ ತಳಭಾಗಕ್ಕೂ ಹಾನಿಯಾಗುವ ಆತಂಕ ಎದುರಾಗಿದೆ. ಮೈದಾನಕ್ಕೆ ಹೊಂದಿಕೊಂಡಿರುವ ಮನೆಗಳ ಮುಂಭಾಗದಲ್ಲಿ ಕಲ್ಲು ಮತ್ತು ಮಣ್ಣು ಸಂಗ್ರಹಗೊಂಡಿದ್ದು, ಸ್ಥಳೀಯ ನಿವಾಸಿಗಳು ಆತಂಕ ಎದುರಿಸುತ್ತಿದ್ದಾರೆ.ಇದಕ್ಕೂ ಮುನ್ನ ಚೌಡ್ಲು ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ₹ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಆವರಣಗೋಡೆಯನ್ನೂ ಬ್ಯಾಸ್ಕೆಟ್‌ಬಾಲ್ ಕಾಮಗಾರಿಗಾಗಿ ತೆರವುಗೊಳಿಸಲಾಗಿತ್ತು. ಒಂದು ಕಡೆ ಮಳೆ, ಮತ್ತೊಂದೆಡೆ ಮಣ್ಣು ಕುಸಿತದ ಆತಂಕ ಇರುವುದರಿಂದ ಇಲಾಖೆ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ರಕ್ಷಣಾ ಕಾಮಗಾರಿ ಕೈಗೊಳ್ಳಬೇಕು ಎಂದು ಕ್ರೀಡಾಪಟುಗಳು ಆಗ್ರಹಿಸಿದ್ದಾರೆ.
ಮೈದಾನದ ಹೊರಭಾಗದ ಸಮಸ್ಯೆಯಷ್ಟೇ ಅಲ್ಲದೆ, ಒಳಭಾಗದಲ್ಲಿರುವ ಹಾಕಿ ಟರ್ಫ್ ನಿರ್ವಹಣೆಯೂ ಸರಿಯಾಗಿ ನಡೆಯದೆ, ಹಲವು ಕಡೆ ಟರ್ಫ್ ಮ್ಯಾಟ್ ಕಿತ್ತುಬರುತ್ತಿದೆ. ಟರ್ಫ್ ಮೈದಾನವನ್ನು ನಿರ್ಮಿಸಿದ ಬಳಿಕ ಐದು ವರ್ಷ ನಿರ್ವಹಣೆ ಮಾಡುವ ಜವಾಬ್ದಾರಿ ಸಂಬಂಧಪಟ್ಟ ಸಂಸ್ಥೆಗೆ ನೀಡಲಾಗಿತ್ತು. ಆದರೆ, ವಾಟರ್ ಟ್ಯಾಂಕ್, ಮೋಟಾರ್, ಫೆನ್ಸಿಂಗ್, ವಾಕಿಂಗ್ ಪಾತ್ ಹಾಗೂ ಇಂಟರ್ ಲಾಕ್ ವ್ಯವಸ್ಥೆಗಳು ನಿರ್ವಹಣೆಯ ಕೊರತೆಯಿಂದ ಹದಗೆಟ್ಟಿವೆ. ಟರ್ಫ್‌ಗೆ ನೀರು ಸಿಂಪಡಿಸಲು ಅಳವಡಿಸಿರುವ ಜೆಟ್‌ಗಳು ತುಕ್ಕು ಹಿಡಿಯುತ್ತಿವೆ. ಮೈದಾನಕ್ಕೆ ನೀರು ಪೂರೈಸುತ್ತಿದ್ದ ಕೊಳವೆ ಬಾವಿಯಲ್ಲಿ ಸರಿಯಾಗಿ ನೀರು ಲಭ್ಯವಾಗಿಲ್ಲ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ ಕ್ರೀಡಾಸಕ್ತರು ದೂರುತ್ತಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-51-1484403269