
ಮರಗಳ ಹರಾಜು ಅಕ್ರಮ, ತನಿಖೆಗೆ ವಿಶೇಷ ತಂಡ ರಚಿಸಿ: ಕೆ.ನಾರಾಯಣಗೌಡ
ಕೋಲಾರ: ಕೋಲಾರ–ವೇಮಗಲ್ ರಸ್ತೆ ವಿಸ್ತರಣೆಗೆ ಮರಗಳ ತೆರವು ಸಂಬಂಧ ನಡೆದಿರುವ ಹರಾಜು ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಲು ವಿಶೇಷ ತಂಡ ರಚಿಸಬೇಕು, ಕಡಿಮೆ ಮೌಲ್ಯ ನಿಗದಿಪಡಿಸಿರುವ ಅರಣ್ಯಾಧಿಕಾರಿಗಳು ಹಾಗೂ ಅವರಿಗೆ ಸಹಕರಿಸಿರುವ ಕಾರ್ಯಪಾಲಕ ಎಂಜಿಜಿಯರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಗ್ರಹಿಸಿದ್ದಾರೆ.
‘ಎಸ್‌ಎಚ್-96ರ ದೇವನಹಳ್ಳಿ–ವೇಮಗಲ್–ಕೋಲಾರ ಮಾರ್ಗದ ಸರಪಳಿ ಕಿ.ಮೀ. 29.140ರಿಂದ 49.284ರವರೆಗೆ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿಗೆ ಅಡ್ಡಿಯಾಗಿರುವ ವಿವಿಧ ಜಾತಿಯ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯಿಂದ ಮೌಲ್ಯ ನಿಗದಿ ಮಾಡಲಾಗಿದೆ. ಒಟ್ಟು 2,349 ಹಳೆಯ ಮರಗಳಿಗೆ ಅರಣ್ಯಾಧಿಕಾರಿಗಳು ಅತ್ಯಂತ ಕಡಿಮೆ ಮೌಲ್ಯ ನಿಗದಿಪಡಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಈ ಬಗ್ಗೆ ತನಿಖೆ ಅಗತ್ಯವಾಗಿದೆ’ ಎಂದು ತಿಳಿಸಿದ್ದಾರೆ.
40 ವರ್ಷಗಳಷ್ಟು ಹಳೆಯ ಮರಗಳ ಮೌಲ್ಯವನ್ನು ನಿಗದಿಪಡಿಸುವಾಗ ವೈಜ್ಞಾನಿಕವಾಗಿ ಹಾಗೂ ಪಾರದರ್ಶಕವಾಗಿ ಅಂದಾಜು ಮಾಡಬೇಕಿತ್ತು. ಆದರೆ, ಕೋಟಿ ರೂಪಾಯಿ ಮೌಲ್ಯ ಹೊಂದಬಹುದಾದ ಮರಗಳಿಗೆ ಲಕ್ಷಗಳ ಲೆಕ್ಕದಲ್ಲಿ ಮೌಲ್ಯ ನಿಗದಿಪಡಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.