ವಿಶ್ವ ನದಿಗಳ ದಿನ: ಚಿಕ್ಕಬಳ್ಳಾಪುರ ಜಿಲ್ಲೆಯ ನದಿಗಳಿಗಿಲ್ಲ ರಕ್ಷಣೆ, ಕಾಯಕಲ್ಪ

ವಿಶ್ವ ನದಿಗಳ ದಿನ: ಚಿಕ್ಕಬಳ್ಳಾಪುರ ಜಿಲ್ಲೆಯ ನದಿಗಳಿಗಿಲ್ಲ ರಕ್ಷಣೆ, ಕಾಯಕಲ್ಪ

ವಿಶ್ವ ನದಿಗಳ ದಿನ: ಚಿಕ್ಕಬಳ್ಳಾಪುರ ಜಿಲ್ಲೆಯ ನದಿಗಳಿಗಿಲ್ಲ ರಕ್ಷಣೆ, ಕಾಯಕಲ್ಪ

ಚಿಕ್ಕಬಳ್ಳಾಪುರ: ಜಿಲ್ಲೆಯನ್ನು ಏಳು ನದಿಗಳು ಉಗಮವಾಗುತ್ತವೆ. ಮಳೆಗಾಲದಲ್ಲಿ ಮಾತ್ರ ಮೈದುಂಬಿ ಹರಿಯುವ ಈ ನದಿಗಳು ‘ಜೀವನದಿ’ಯ ಹಣೆಪಟ್ಟಿ ಹೊಂದಿಲ್ಲ. ಹೀಗಿದ್ದರೂ ತನ್ನ ಪಾತ್ರದಲ್ಲಿ ಸಿಗುವ ಕೆರೆಗಳ ಒಡಲನ್ನು ಭರ್ತಿ ಮಾಡಿ ಮುಂದೆ ಸಾಗುತ್ತವೆ.

2021 ಮತ್ತು 2022ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಾಖಲೆಯ ಮಳೆ ಸುರಿಯಿತು. ಆಗ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಷ್ಟೇ ಅಲ್ಲ ನೆರೆ ಹೊರೆಗಳ ಜಿಲ್ಲೆಯ ಜನರೂ ಜಿಲ್ಲೆಯಲ್ಲಿ ಹುಟ್ಟುವ ನದಿಗಳ ವೈಭೋಗ ಕಂಡರು.

ಹೀಗೆ ಜಿಲ್ಲೆಯಲ್ಲಿ ನದಿಗಳು ಉಗಮವಾದರೂ ಬಯಲು ಸೀಮೆಯ ಚಿಕ್ಕಬಳ್ಳಾಪುರದಲ್ಲಿ ನೀರಿನ ಹಾಹಾಕಾರ ತಪ್ಪಿಲ್ಲ. ಇದಕ್ಕೆ ಕಾರಣ ನದಿಗಳಿಗೆ ಕಾಯಕಲ್ಪ ಮತ್ತು ಪುನರುಜ್ಜೀವನಕ್ಕೆ ಪ್ರಯತ್ನಗಳು ನಡೆದಿಲ್ಲ. ನದಿ ಪಾತ್ರದ ಒತ್ತುವರಿ, ಅವುಗಳ ಮೇಲಿನ ಆಕ್ರಮಣ, ಕೆರೆ ಪಾತ್ರದಲ್ಲಿ ಅವ್ಯಾಹತ ಚಟುವಟಿಕೆಗಳು, ಕಾಲುವೆಗಳ ಒತ್ತುವರಿ ಈ ನದಿಗಳ ಅಸ್ತಿತ್ವಕ್ಕೆ ಕುಂದು ತರುತ್ತಿವೆ.

ಜಿಲ್ಲೆಯಲ್ಲಿ ನದಿಗಳು ಉಕ್ಕಿ ಹರಿದಾಗ ಆ ನೀರು ಸಂಗ್ರಹಿಸಬೇಕು ಎನ್ನುವ ದೃಷ್ಟಿಗಿಂತ ದೂರದ ಎತ್ತಿನಹೊಳೆ, ಕೃಷ್ಣಾ ನದಿ ನೀರನ್ನು ತರುವ ಮಾತುಗಳಷ್ಟೇ ಬಲವಾಗಿವೆ.

ನಂದಿಯೇ ಉಗಮದ ಆಧಾರ: ನಂದಿಬೆಟ್ಟ ಶ್ರೇಣಿಯು ಪಂಚನದಿಗಳ ನದಿಗಳ ಉಗಮ ಸ್ಥಾನ ಎನಿಸಿದೆ. ಈ ಗಿರಿ ಶ್ರೇಣಿಯಲ್ಲಿಯೇ ಐದು ನದಿಗಳು ಜನಿಸುತ್ತವೆ. ಬೆಟ್ಟದಲ್ಲಿ ಉಗಮವಾಗುವ ಪಾಲಾರ್ ನದಿಯು ದಕ್ಷಿಣದಲ್ಲಿ ಹರಿದು ತಮಿಳುನಾಡು ಸೇರುತ್ತದೆ. ಅರ್ಕಾವತಿ ನದಿಯೂ ನಂದಿಬೆಟ್ಟದಲ್ಲಿ ಉಗಮವಾಗುತ್ತದೆ. ಗೋಪಿನಾಥ ಬೆಟ್ಟದಲ್ಲಿ ದಕ್ಷಿಣ ಪಿನಾಕಿನಿ ನದಿಯು ಉಗಮ ಆಗುತ್ತದೆ. ಕಳವಾರ ಗಿರಿಶ್ರೇಣಿಯಲ್ಲಿ ಉತ್ತರ ಪಿನಾಕಿನಿ ನದಿ ಉಗಮವಾಗುತ್ತದೆ. ಕಳವಾರದುರ್ಗದ ಸಮೀಪ ಹುಟ್ಟುವ ಪಾಪಾಗ್ನಿ ನದಿ ಬಾಗೇಪಲ್ಲಿ ಮೂಲಕ ಆಂಧ್ರಪ್ರದೇಶ ಸೇರುತ್ತದೆ. ಆವುಲಬೆಟ್ಟದಲ್ಲಿ ಉಗಮವಾಗುವ ಕುಶಾವತಿ ನದಿಯು ಗುಡಿಬಂಡೆ ಬೈರಸಾಗರವನ್ನು ಸೇರುತ್ತದೆ. ಹರಿಹರೇಶ್ವರ ಬೆಟ್ಟದಲ್ಲಿ ಹುಟ್ಟುವ ಚಿತ್ರಾವತಿ ಬಾಗೇಪಲ್ಲಿ ಮೂಲಕ ಆಂಧ್ರಪ್ರದೇಶ ಸೇರುತ್ತದೆ. ಮಾಕಳಿದುರ್ಗದಲ್ಲಿ ಹುಟ್ಟಿ ಗೌರಿಬಿದನೂರು ತಾಲ್ಲೂಕಿನಲ್ಲಿ ಹರಿಯುವ ಕುಂದಾರ್ ನದಿಯು ಉತ್ತರ ಪಿನಾಕಿನಿ ನದಿಯಲ್ಲಿ ಸೇರಿ ಕುಮದವತಿ ಆಗುತ್ತದೆ.

ಜಿಲ್ಲೆಯಲ್ಲಿ ವರ್ಷಪೂರ್ತಿ ನೀರಿನಿಂದ ತುಂಬಿ ಹರಿಯುವ ನದಿಗಳು ಯಾವುದೂ ಇಲ್ಲ. ಪಾಲಾರ್, ಪಾಪಾಗ್ನಿ, ದಕ್ಷಿಣ ಪೆನ್ನಾರ್, ಉತ್ತರ ಪೆನ್ನಾರ್, ಚಿತ್ರಾವತಿ, ಅರ್ಕಾವತಿ ಹಾಗೂ ಇವುಗಳ ಉಪನದಿಗಳು ಮಳೆಗಾಲದಲ್ಲಿ ಮಾತ್ರವೇ ಹರಿಯುತ್ತವೆ. ಈ ನದಿಗಳ ಜಾಲವು ಒಟ್ಟು 671 ಕಿ.ಮೀ ಇದೆ. ಇವುಗಳ ಪಾತ್ರ 9,388 ಕಿ.ಮೀ ಆಗಿದೆ.

ಹೀಗೆ ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನದಿಗಳು ಜನಿಸಿದರೂ ಇವುಗಳು ಜಿಲ್ಲೆಯ ನೀರಾವರಿ ವಿಚಾರವಾಗಿ ಸದ್ಬಳಕೆ ಆಗುತ್ತಿಲ್ಲ.

‘ಚಿತ್ರಾವತಿ ನದಿ ಪುನಶ್ಚೇತನ’ಕ್ಕೆ ಸಮಿತಿ ಸಹ ರಚಿಸಲಾಗಿತ್ತು. ಜಿಲ್ಲೆಯ ಪ್ರಮುಖ ನದಿಗಳಲ್ಲಿ ಒಂದಾಗಿದ್ದ ಚಿತ್ರಾವತಿ ನದಿ ಪಾತ್ರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ಧಗೊಳಿಸಲು ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರ ನೇತೃತ್ವದ ತಂಡ ರಚಿಸಲಾಗಿತ್ತು.

ರಾಜಶೇಖರ ನಾಯ್ಡು ಕಾರ್ಯದರ್ಶಿಯಾಗಿದ್ದು ವಿವಿಧ ವಲಯಗಳ ತಜ್ಞರು ಸಮಿತಿಯಲ್ಲಿ ಇದ್ದಾರೆ. ಬೆಂಗಳೂರಿನಲ್ಲಿ ಕಳೆದ ವರ್ಷ ನಡೆದ ಚಿತ್ರಾವತಿ ನದಿ ಪುನಶ್ಚೇತನ ಸಮಿತಿ ಸದಸ್ಯರ ಸಭೆಯಲ್ಲಿ ಈ ತಂಡ ರಚಿಸಲಾಗಿದೆ.

1990ರ ದಶಕದಲ್ಲಿ ಚಿತ್ರಾವತಿ ನದಿಯ ಹರಿವು ಯಾವ ರೀತಿ ಇತ್ತು. ಈಗ ಯಾವ ರೀತಿ ಇದೆ. ಮೃತ ಚಿತ್ರಾವತಿ ನದಿಯ ಪುನರುಜ್ಜೀವನಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಏನು? ಎನ್ನುವ ಬಗ್ಗೆ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ನಡೆದ ಸಭೆಗಳಲ್ಲಿ ಚರ್ಚಿಸಲಾಗಿತ್ತು. ಸಭೆಗಳ ಹೊರತು ಪುನಶ್ಚೇತನದ ವಿಚಾರವಾಗಿ ಯಾವುದೇ ಮಹತ್ವದ ಬೆಳವಣಿಗೆಗಳು ಇಲ್ಲಿಯವರೆಗೂ ಘಟಿಸಿಲ್ಲ.

ಜಿಲ್ಲೆಯಲ್ಲಿ ಒಟ್ಟು 1,556 ಕೆರೆಗಳಿವೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 124, ಗೌರಿಬಿದನೂರು ತಾಲ್ಲೂಕಿನಲ್ಲಿ 150, ಬಾಗೇಪಲ್ಲಿ 473, ಶಿಡ್ಲಘಟ್ಟ 309 ಹಾಗೂ ಚಿಂತಾಮಣಿ ತಾಲ್ಲೂಕಿನಲ್ಲಿ 500 ಕೆರೆಗಳಿವೆ. ಕೆರೆಗಳೆಲ್ಲ ಬಹುಪಾಲು ನದಿಗಳ ಜಲಮಾರ್ಗದಲ್ಲಿಯೇ ಹಾಗೂ ‘ಕೆರೆಯಿಂದ ಕೆರೆಗೆ’ ಎಂಬ ತತ್ವದ ಮೇಲೆ ನಿರ್ಮಿಸಿರುವುದು ವಿಶೇಷ. ಈ ನದಿಗಳು ಮೈ ತುಂಬಿ ಹರಿದರೆ ಕರೆಗಳ ಒಡಲು ಭರ್ತಿ ಆಗುತ್ತದೆ.

ನಂದಿಗಿರಿಯ ಸುತ್ತ ಹೆಚ್ಚಿದ ಹಸ್ತಕ್ಷೇಪ: ಪಂಚನದಿಗಳ ಉಗಮ ಸ್ಥಾನ ನಂದಿಗಿರಿಧಾಮದ ಸುತ್ತ ಹೆಚ್ಚಿದ ಲೇಔಟ್‌ಗಳು, ಗಣಿಗಾರಿಕೆ, ಬೆಟ್ಟದ ಬುಡದ ಅತಿಕ್ರಮವು ನದಿಗಳು ಹರಿಯುವ ಸರಪಳಿಯನ್ನು ತುಂಡು ಮಾಡಿವೆ. ಈ ಹಿಂದಿನಂತೆ ನದಿಯ ಹರಿವಿಲ್ಲ ಎಂದು ಪರಿಸರವಾದಿಗಳು ನುಡಿಯುತ್ತಿದ್ದಾರೆ. ಈ ಮಾತಿಗೆ ಪೂರಕ ಎನ್ನುವಂತೆ ಬೆಟ್ಟದಲ್ಲಿ ಮಳೆಗಾಲದಲ್ಲಿ ಹೊರತುಪಡಿಸಿ ಉಳಿದ ದಿನಗಳಲ್ಲಿ ಭೂಮಿ ಬರಡಾಗಿರುತ್ತದೆ.

ನದಿಗಳು ಹರಿಯುವ ಮಾರ್ಗದಲ್ಲಿನ ಒತ್ತುವರಿಗಳನ್ನು ತೆರವುಗೊಳಿಸಬೇಕು. ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಒತ್ತುವರಿ ತೆರವುಗೊಳಿಸಿ ರಾಜಕಾಲುವೆ ಮಾರ್ಗಗಳನ್ನು ಸರಿಪಡಿಸಬೇಕು. ಮಳೆಗಾಲದಲ್ಲಿ ಮೈದುಂಬಿ ಹರಿಯುವ ನದಿಗಳು ಕೊಡುವ ನೀರನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆ ಆಗಬೇಕು ಎನ್ನುವುದು ಜಿಲ್ಲೆಯ ಪರಿಸರವಾದಿಗಳ ಆಗ್ರಹ.

‘ಭವಿಷ್ಯದಲ್ಲಿ ನಕ್ಷೆಯಲ್ಲಷ್ಟೇ ನದಿ ಹೆಸರು’

ಉತ್ತರ ಪಿನಾಕಿನಿ, ಅರ್ಕಾವತಿ, ಪಾಲಾರ್, ಪೆನ್ನಾರ್, ಚಿತ್ರಾವತಿ, ಪಾಪಾಗ್ನಿ ನದಿಗಳು ಒಂದು ಸಮಯದಲ್ಲಿ ನಮ್ಮ ಬರಡು ಜಿಲ್ಲೆಯಲ್ಲಿ ಹುಟ್ಟಿ ಯಥೇಚ್ಛವಾಗಿ ಹರಿಯುತ್ತಿದ್ದವು. ಆದರೆ ಈಗ ಆ ವೈಭವ ಇಲ್ಲ. ಮುಂದಿನ ದಿನಗಳಲ್ಲಿ ಈ ನದಿಗಳ ಹೆಸರುಗಳನ್ನು ನಕ್ಷೆಗಳಲ್ಲಷ್ಟೇ ಕಾಣುವ ಸ್ಥಿತಿ ಬರುತ್ತದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ತಿಳಿಸಿದರು.

ಈ ನದಿಗಳು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾಲವನ್ನು ಹೊಂದಿವೆ. ನಮ್ಮ ಜಿಲ್ಲೆಯಲ್ಲಿ ಹುಟ್ಟುವ ನದಿಗಳನ್ನು ಬೇರೆ ಜಿಲ್ಲೆಗಳಲ್ಲಿರುವ ಜೀವ ನದಿಗಳ ರೀತಿ ಊಹಿಸಿಕೊಳ್ಳುವಂತಿಲ್ಲ. ಇಲ್ಲಿನ ನದಿಗಳು ಒಂದೊಂದು ಕೆರೆಗಳನ್ನು ಜೋಡಿಸಿಕೊಳ್ಳುವ ಮೂಲಕ ಹರಿಯುತ್ತವೆ ಎಂದರು.

ನಾವು ಬೇರೆ ಜಿಲ್ಲೆಗಳ ನದಿಗಳಿಂದ ನೀರು ತರಲು ಸಾವಿರಾರು ಕೋಟಿ ಖರ್ಚು ಮಾಡುತ್ತಿದ್ದೇವೆ. ಆದರೆ ನಮ್ಮ ಜಿಲ್ಲೆಯಲ್ಲಿ ಜನಿಸಿ ಹರಿಯುವ ನದಿಗಳಿಗೆ ಕುತ್ತು ತಂದಿದ್ದೇವೆ. ಈ ವಿಚಾರವಾಗಿ ಸರ್ಕಾರಗಳು ನಿರ್ಲಕ್ಷ್ಯವಹಿಸಿವೆ. ಜನರೂ ಸಹ ಪ್ರಜ್ಞೆಯನ್ನು ಹೊಂದಿಲ್ಲ. ನದಿ ಮತ್ತು ಕೆರೆ ಪಾತ್ರಗಳ ಬಫರ್ ವಲಯವನ್ನು ರಕ್ಷಿಸಬೇಕಾಗಿತ್ತು. ಆದರೆ ಆ ಕೆಲಸ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈಗಲಾದರೂ ನಮ್ಮ ಜಿಲ್ಲೆಯಲ್ಲಿ ಉಗಮವಾಗುವ ನದಿಗಳನ್ನು ಕಾಪಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಅವುಗಳನ್ನು ಚಿತ್ರಗಳಲ್ಲಿ ನಕ್ಷೆಗಳಲ್ಲಿ ಕಾಣಬೇಕಾಗುತ್ತದೆ ಎಂದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ