
ಉತ್ತರ ಕನ್ನಡ | ವಿಚಾರಣೆ ಎದುರಿಸುತ್ತಿರುವ ಮತದಾರ
ಕಾರವಾರ: ಹೆಸರಿನ ಗೊಂದಲ, ತಂದೆ–ಮಗನ ವಯಸ್ಸಿನ ವ್ಯತ್ಯಾಸ ಸೇರಿದಂತೆ ಕರಡು ಮತದಾರರ ಪಟ್ಟಿಯಿಂದ ದೂರ ಉಳಿದಿರುವ ಮತದಾರರು ಎಸ್‌ಐಆರ್ ಪ್ರಕ್ರಿಯೆಯ ಸಹಾಯಕ ಚುನಾವಣಾ ಅಧಿಕಾರಿಗಳಿಂದ (ಎಇಆರ್‌ಒ) ವಿಚಾರಣೆಗೆ ಒಳಪಡುತ್ತಿದ್ದಾರೆ.
ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿಂದ ಗೊಂದಲಗಳ ಕಾರಣದಿಂದ ಮತದಾರರ ಪಟ್ಟಿ ಸೇರಿಕೊಳ್ಳದೆ ಉಳಿದ 65,337 ಮತದಾರರಿಗೆ ನೋಟಿಸ್ ನೀಡುವ ಕೆಲಸ ಮತಗಟ್ಟೆ ಅಧಿಕಾರಿಗಳಿಂದ ನಡೆದಿದೆ. ಸೆ. 7ರ ಅಂತ್ಯದವರೆಗೆ 39,125 ಮಂದಿಗೆ ನೋಟಿಸ್ ತಲುಪಿಸಲಾಗಿದೆ.
ಮತದಾರರ ಹೆಸರು, ವಯಸ್ಸು ಸೇರಿದಂತೆ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಮಾಹಿತಿ ದೃಢೀಕರಿಸಿಕೊಳ್ಳುವ ಸಲುವಾಗಿ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ಎಇಆರ್‌ಒಗಳಾಗಿ ಬಿ ದರ್ಜೆಯ ಅಧಿಕಾರಿಗಳನ್ನು ನೇಮಿಸಲಾಗಿದೆ. ವಿವಿಧ ಇಲಾಖೆಯ ಜವಾಬ್ದಾರಿ ನಿಭಾಯಿಸಬೇಕಿರುವ ಅವರು ಸದ್ಯ ಇಲಾಖೆಯ ಕೆಲಸ ಬಿಟ್ಟು ಮತದಾರರ ವಿಚಾರಣೆಯಲ್ಲಿ ತೊಡಗಿಸಿಕೊಳ್ಳುವಂತಾಗಿದೆ.
‘ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ (ಎಸ್‌ಐಆರ್) ವೇಳೆ ಕೆಲ ಮತದಾರರ ವಯಸ್ಸಿಗಿಂತ ಅವರ ತಂದೆಯ ವಯಸ್ಸು ಕೇವಲ 15 ವರ್ಷದಷ್ಟು ಅಂತರ ಕಾಣಿಸಿದೆ. ಕೆಲವು ಪಾಲಕರು–ಮಕ್ಕಳ ವಯಸ್ಸಿನ ಅಂತರ 50 ವರ್ಷ ದಾಟಿದ್ದೂ ಇದೆ. ಹಲವು ಮತದಾರರ ಹೆಸರು 2002ರ ಎಸ್‌ಐಆರ್ ನಡೆದ ವೇಳೆ ಇದ್ದ ಮಾಹಿತಿಗೆ ಹೊಂದಾಣಿಕೆಯಾಗಿಲ್ಲ. ಅಂತಹ ಪ್ರಕರಣಗಳಿಗೆ ಮತದಾರರಿಗೆ ನೋಟಿಸ್ ನೀಡಿ, ವಿಚಾರಣೆಗೆ ಕರೆಯಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.
‘ಪ್ರತಿ ಮತದಾರರಿಗೆ ಗರಿಷ್ಠ 2 ನೋಟಿಸ್ ನೀಡಲು ಅವಕಾಶವಿದೆ. ಮೊದಲ ಬಾರಿಗೆ ವಿಚಾರಣೆಗೆ ಬರದವರಿಗೆ ಸ್ವಲ್ಪ ದಿನ ಬಿಟ್ಟು ಎರಡನೇ ನೋಟಿಸ್ ನೀಡಲಾಗುತ್ತದೆ. ಆಗಲೂ ವಿಚಾರಣೆಗೆ ಬರದಿದ್ದವರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಸಾಧ್ಯವಾಗದು. ಆದರೆ. ಮೊದಲ ನೋಟಿಸ್‌ಗೆ ಬಹುತೇಕರು ವಿಚಾರಣೆಗೆ ಬರುತ್ತಿದ್ದಾರೆ. ಚುನಾವಣಾ ಆಯೋಗ ಸೂಚಿಸಿದ ಜನ್ಮ ದಾಖಲಾತಿ, ಪಾಸ್‌ಪೋರ್ಟ್, ಎಸ್‌ಎಸ್‌ಎಲ್‌ಸಿ, ಪಿಯುಸಿಯ ಅಂಕ ಪಟ್ಟಿ ಸೇರಿ ಅಗತ್ಯ ದಾಖಲೆ ಹಾಜರುಪಡಿಸಿ, ಗೊಂದಲದ ಕುರಿತ ಪ್ರಶ್ನೆಗೆ ಉತ್ತರಿಸುತ್ತಿದ್ದಾರೆ’ ಎಂದು ಎಇಆರ್ ಅಧಿಕಾರಿಯೊಬ್ಬರು ತಿಳಿಸಿದರು.
‘ಗಣೇಶ ಚತುರ್ಥಿ ಹಬ್ಬದ ಮುನ್ನಾದಿನ ವಿಚಾರಣೆಗೆ ಹಾಜರಾಗಲು ನೋಟಿಸ್ ಬಂದಿದೆ. ಹಬ್ಬದ ಸಿದ್ಧತೆಯ ಕಾರಣಕ್ಕೆ ವಿಚಾರಣೆಗೆ ಬರಲು ಸಾಧ್ಯವಾಗದು ಎಂದು ತಿಳಿಸಿದರೂ ನೋಟಿಸ್ ನೀಡಿದ್ದಾರೆ’ ಎಂದು ಮತದಾರರೊಬ್ಬರು ದೂರಿದರು.
‘ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ನನಗೆ ವಾರಾಂತ್ಯದಲ್ಲಿ ವಿಚಾರಣೆಗೆ ಅವಕಾಶ ಕೊಡಿ ಎಂದು ಕೇಳಿದರೂ ವಾರದ ಮಧ್ಯ ದಿನ ಬರಲು ಸೂಚಿಸಿದ್ದಾರೆ’ ಎಂದು ಮತದಾರರೊಬ್ಬರು ದೂರಿದರು.
‘ಜಿಲ್ಲೆಯಲ್ಲಿ ಮತದಾರರಾಗಿದ್ದು, ಉದ್ಯೋಗದ ನಿಮಿತ್ತ ವಿದೇಶಗಳಲ್ಲಿ ನೆಲೆಸಿದ ಅನಿವಾಸಿ ಭಾರತೀಯರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಖಚಿತಪಡಿಸಿಕೊಳ್ಳಲು ಅವಕಾಶವಿದೆ. ಇದಕ್ಕಾಗಿ ಅವರು ನಮೂನೆ–6ಎ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಅಂತಹ 50ಕ್ಕೂ ಹೆಚ್ಚು ಅರ್ಜಿಗಳು ಈಗಾಗಲೆ ಸಲ್ಲಿಕೆಯಾಗಿವೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.