
ಬೆಂಗಳೂರು ಸಾರ್ವಜನಿಕ ಶೌಚಾಲಯಗಳ ಸ್ಥಿತಿ: ಮುಚ್ಚಬೇಕು ಮೂಗು, ಬರುತ್ತಿಲ್ಲ ನೀರು
ಬೆಂಗಳೂರು: ಒಳಹೊಕ್ಕರೆ ಮೂಗು ಮುಚ್ಚಿಕೊಂಡೇ ಮೂತ್ರ ಮಾಡಬೇಕು.. ಕೈ ತೊಳೆಯಲು ನಳ ತಿರುಗಿಸಿದರೆ ನೀರು ಬಾರದು. ಗೋಡೆಗಳ ಮೇಲೆ ಪಾನ್ ಮಸಾಲದ ಚಿತ್ತಾರ...
ಇದು ರಾಜಧಾನಿಯಲ್ಲಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿ.
1.40 ಕೋಟಿ ಜನಸಂಖ್ಯೆ ಇರುವ ಬೃಹತ್ ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಸಾವಿರ ದಾಟುವುದಿಲ್ಲ. ಅವುಗಳ ನಿರ್ವಹಣೆ ಬಗ್ಗೆಯೂ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯವಹಿಸಿದೆ. ಎಷ್ಟು ಶೌಚಾಲಯಗಳಿವೆಯೆಂಬ ದತ್ತಾಂಶವೂ ಇಲ್ಲ. ಅತಿ ಹೆಚ್ಚು ದಟ್ಟಣೆಯ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೌಚಾಲಯಗಳ ಸ್ಥಿತಿಯಂತೂ ಶೋಚನೀಯವಾಗಿದೆ.
ರಾಜ್ಯದ ವಿವಿಧ ಮೂಲೆಗಳಿಂದ ರೈಲು, ಬಸ್‌ಗಳಲ್ಲಿ ಲಕ್ಷಾಂತರ ಮಂದಿ ರಾಜಧಾನಿಗೆ ಬರುತ್ತಾರೆ. ಜನನಿಬಿಡ ಪ್ರದೇಶವಾದ ಮೆಜೆಸ್ಟಿಕ್ ಸುತ್ತಮುತ್ತ ಶೌಚಾಲಯಗಳ ಸಮಸ್ಯೆ ದಟ್ಟವಾಗಿದೆ. ಸ್ವಚ್ಛತೆ, ಸುರಕ್ಷತೆ, ಸೇವಾ ಗುಣಮಟ್ಟವೂ ಕಳಪೆಯಾಗಿದೆ.
ಪ್ರವೇಶಕ್ಕೆ ₹5ರಿಂದ ₹10 ಪಡೆಯುವ ನಿರ್ವಾಹಕರು ಶುಚಿತ್ವ ಕಾಪಾಡುವುದಿಲ್ಲ. ಮೂತ್ರ ವಿಸರ್ಜನೆಗೂ ಕೆಲವೆಡೆ ₹10 ಕೊಡಬೇಕಿದೆ. ಇದರ ನಿರ್ವಹಣೆ ಮಾಡುವ ಬಹುಪಾಲು ಮಂದಿ ಉತ್ತರ ಭಾರತದ ಬಿಹಾರ, ಜಾರ್ಖಂಡ್, ಉತ್ತರ ಪ‍್ರದೇಶ, ಮಧ್ಯಪ್ರದೇಶಕ್ಕೆ ಸೇರಿದವರು.
ಹಲವು ಶೌಚಾಲಯಗಳೇ ನಿರ್ವಾಹಕರಿಗೆ ವಾಸಸ್ಥಾನಗಳಾಗಿವೆ. ಅಲ್ಲಿಯೇ ನಿತ್ಯ ಅಡುಗೆ ಮಾಡಿಕೊಳ್ಳುತ್ತಾರೆ. ಅವರಿಗೆ ಪರ್ಯಾಯ ವಸತಿ ವ್ಯವಸ್ಥೆಯನ್ನು ಗುತ್ತಿಗೆದಾರರು ಮಾಡಿಕೊಟ್ಟಿಲ್ಲ. ಹಲಸೂರಿನ ಕೇಂಬ್ರಿಡ್ಜ್ ರಸ್ತೆಯ ವಾರ್ಡ್ ನಂ. 8ರ ಶೌಚಾಲಯದಲ್ಲಿ ಅಡುಗೆ ಮಾಡುವುದು ನಿತ್ಯ ನಡೆದಿದೆ. ಜೆ.ಸಿ.ರಸ್ತೆಯ ಶೌಚಾಲಯದಲ್ಲಿ ನಿರ್ವಾಹಕರು ಸೂರಿಲ್ಲದೇ ಹೊರಗೆಯೇ ಕೂರಬೇಕಿದೆ. ವಾರ್ಡ್ 80ರ ಹೊಯ್ಸಳ ನಗರದಲ್ಲಿನ ಶೌಚಾಲಯದ ದುರ್ವಾಸನೆಯು ದಾರಿ
ಹೋಕರ ಮುಖಕ್ಕೆ ಬಡಿಯುತ್ತದೆ. ಚಾಮರಾಜಪೇಟೆಯ ಆರ್.ಕಲ್ಯಾಣಮ್ಮ ಆಟದ ಮೈದಾನ ಆವರಣದಲ್ಲಿನ ಶೌಚಾಲಯ ಪಾಚಿಗಟ್ಟಿದೆ.
ಪಾದಚಾರಿ ಮಾರ್ಗದಲ್ಲೇ ಬಹುತೇಕ ಶೌಚಾಲಯಗಳು
ನಗರದ ಕೇಂದ್ರ ಭಾಗದ ಬಹುತೇಕ ಶೌಚಾಲಯಗಳು ಮುಖ್ಯ ರಸ್ತೆಗಳ ಪಾದಚಾರಿ ಮಾರ್ಗಗಳ ಮೇಲೆಯೇ ಇವೆ. ಪ್ರತ್ಯೇಕ ನಿವೇಶನದಲ್ಲಿ ಕಟ್ಟಿಲ್ಲ. ವಾಹನ ಪಾರ್ಕಿಂಗ್ ಮಾಡಿ ಹೋಗುವುದು ಅಸಾಧ್ಯ. ಹೀಗಾಗಿಯೇ ಮೆಜೆಸ್ಟಿಕ್ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಂಪೌಂಡ್, ಖಾಲಿ ಜಾಗಗಳೇ ಮೂತ್ರ ವಿಸರ್ಜನೆಯ ತಾಣಗಳಾಗಿವೆ.
ಮುಚ್ಚಿದ ಶೌಚಾಲಯಗಳು: ಪುರಭವನದ ಆವರಣ, ಮಿಲ್ಲರ್ಸ್ ಟ್ಯಾಂಕ್ ಬಂಡ್ ರಸ್ತೆಯಲ್ಲಿನ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ನಗರದ ಇ–ಶೌಚಾಲಯಗಳು ನಿರ್ವಹಣೆ ಇಲ್ಲದೇ ಶಾಶ್ವತವಾಗಿ ಮುಚ್ಚಿವೆ.
ಉದ್ಯಾನ ನಗರಿಯ ಶೌಚಾಲಯಗಳ ಸ್ಥಿತಿಗತಿಯ ಸಮೀಕ್ಷೆ ನಡೆಸಿದ್ದ ‘ಬೆಂಗಳೂರು ಪೊಲಿಟಿಕಲ್ ಆ್ಯಕ್ಷನ್ ಕಮಿಟಿ (ಬಿ.ಪ್ಯಾಕ್)’ ಸಂಸ್ಥೆಯು ವರದಿ ಬಿಡುಗಡೆ ಮಾಡಿ, ಉನ್ನತೀಕರಣವನ್ನು ತುರ್ತಾಗಿ ಮಾಡಬೇಕೆಂದು ಹೇಳಿತ್ತು. ಕಳವಳಕಾರಿ ಅಂಶಗಳ ಬಗ್ಗೆ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಗಮನಕ್ಕೆ ತಂದಿತ್ತು. ಅದರ ಅನುಷ್ಠಾನವನ್ನೂ ಪ್ರಾಧಿಕಾರ ಮಾಡಿಲ್ಲ.
‘ಶೌಚಾಲಯ ಮೂಲಸೌಲಭ್ಯವಾಗಿದ್ದು, ಪ್ರತಿಯೊಬ್ಬ ನಾಗರಿಕನ ಗೌರವ ಮತ್ತು ಘನತೆಯ ವಿಷಯ. ಜಾಗತಿಕವಾಗಿ ಐಟಿ–ಬಿಟಿ, ವಿಜ್ಞಾನ, ತಂತ್ರಜ್ಞಾನ ನಗರಿಯೆಂದು ಗುರುತಿಸಿಕೊಂಡ ಬೆಂಗಳೂರು ಮೂಲಸೌಕರ್ಯದಲ್ಲೂ ಮುಂಚೂಣಿ ನಗರಿಯಾಗಬೇಕು. ಇನ್ನೂ ಸಾವಿರ ಶೌಚಾಲಯಗಳ ನಿರ್ಮಾಣ ಅಗತ್ಯ’ ಎನ್ನುತ್ತಾರೆ ಸಂಸ್ಥೆಯ ಸಂಯೋಜಕ ಕೆ.ಮಂಜುನಾಥ.
ನಗರದ ಕೇಂದ್ರ ಭಾಗದಲ್ಲಿ ಮಹಿಳೆಯರು, ಅಂಗವಿಕಲರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಸ್ನೇಹಿ ಶೌಚಾಲಯಗಳಿಲ್ಲ. ಯಾವುದೇ ಶೌಚಾಲಯದಲ್ಲೂ ಸಾಬೂನು, ಕಸದ ಬುಟ್ಟಿಗಳಿಲ್ಲ. ಕೈ ತೊಳೆಯುವ ನಲ್ಲಿಗಳು ಮುರಿದಿವೆ. ಪಾಚಿಗಟ್ಟಿರುವ ಇವುಗಳನ್ನು ಸೋಂಕಿನ ಭೀತಿಯಿಂದಲೇ ಪ್ರವೇಶಿಸಬೇಕು. ಮಹಿಳಾ ಸಿಬ್ಬಂದಿ ಕೊರತೆಯೂ ಹಲವಡೆ ಇದೆ. ಬಳಕೆಗೆ ಯೋಗ್ಯವಲ್ಲದ ಈ ಶೌಚಾಲಯಗಳು ಧೂಮಪಾನ ಮಾಡುವ ಸ್ಥಳಗಳಾಗಿ ಪರಿವರ್ತನೆಯಾಗಿವೆ.
‘ಪಾಲಿಕೆ ಬಳಿ ಮಾಹಿತಿ ಇಲ್ಲ’
‘ಐದು ಪಾಲಿಕೆಗಳಾದ ನಂತರ ಕೇಂದ್ರ ಪಾಲಿಕೆಯಲ್ಲಿ ಎಷ್ಟು ಶೌಚಾಲಯಗಳಿವೆ ಎಂಬ ಮಾಹಿತಿ, ಅವುಗಳ ಸ್ಥಿತಿಗತಿ ಕುರಿತ ದತ್ತಾಂಶ ಪಾಲಿಕೆ ಬಳಿಯಿಲ್ಲ’ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
‘ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದಿಂದ (ಬಿಎಸ್‌ಡಬ್ಲ್ಯುಎಂಎಲ್) ಹೊಸದಾಗಿ ಉಚಿತ ಶೌಚಾಲಯಗಳನ್ನು ಕಟ್ಟಿಸಲಾಗುತ್ತಿದೆ. ಹಳೆ ಶೌಚಾಲಯಗಳ ಸ್ಥಿತಿಗತಿ ತಿಳಿಯಲು ಸಮೀಕ್ಷೆ ನಡೆಸಲು ಯೋಜಿಸಲಾಗಿದೆ’ ಎಂದರು.