ಬರಪೀಡಿತ ತಾಲ್ಲೂಕು ಪಟ್ಟಿಗೆ ಸೇರಿಸಲು ಆಗ್ರಹ: ಜಗಳೂರು ಪಟ್ಟಣ ಸಂಪೂರ್ಣ ಬಂದ್

ಬರಪೀಡಿತ ತಾಲ್ಲೂಕು ಪಟ್ಟಿಗೆ ಸೇರಿಸಲು ಆಗ್ರಹ: ಜಗಳೂರು ಪಟ್ಟಣ ಸಂಪೂರ್ಣ ಬಂದ್

ಬರಪೀಡಿತ ತಾಲ್ಲೂಕು ಪಟ್ಟಿಗೆ ಸೇರಿಸಲು ಆಗ್ರಹ: ಜಗಳೂರು ಪಟ್ಟಣ ಸಂಪೂರ್ಣ ಬಂದ್

ಜಗಳೂರು: ತಾಲ್ಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಬೇಕು ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಬೇಕು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ಸೋಮವಾರ ಕರೆ ನೀಡಿದ್ದ ಜಗಳೂರು ಪಟ್ಟಣ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ವರ್ತಕರು ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದರು. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿತ್ತು. ಆಟೊ, ಖಾಸಗಿ ಬಸ್‌ ಸೇರಿದಂತೆ ಇತರೆ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಶಾಲೆ– ಕಾಲೇಜು, ಬ್ಯಾಂಕ್, ಹಣಕಾಸು ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳ ಬಾಗಿಲು ಮುಚ್ಚಿದ್ದವು.

ರಸ್ತೆಯ ಮಧ್ಯೆ ಟೈರ್‌ಗಳನ್ನು ಸುಟ್ಟ ಪ್ರತಿಭಟನಕಾರರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಬಸ್ ಮೇಲೆ‌ ಕಲ್ಲು ತೂರಿದ ಆರೋಪದ ಮೇರೆಗೆ ಬಿಜೆಪಿಯ 10ಕ್ಕೂ ಅಧಿಕ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜಗಳೂರು ತಾಲ್ಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರಪೀಡಿತ ತಾಲ್ಲೂಕುಗಳ ಎರಡು ಪಟ್ಟಿಗಳಲ್ಲಿ ಸೇರಿಸಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯಡಿ ಅಗತ್ಯ ಅನುದಾನ ನೀಡದೇ ಕಾಮಗಾರಿ ಸ್ಥಗಿತವಾಗಿದೆ. ಪಕ್ಕದ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆ ಅಡಿಯ ನೀರು ಹರಿದು ಬಂದರೂ ಬರಪೀಡಿತ ಜಗಳೂರು ತಾಲ್ಲೂಕು ತಲುಪಿಲ್ಲ. ರಾಜ್ಯ ಸರ್ಕಾರ ಕೂಡಲೇ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪಟ್ಟಣದಿಂದ ಬೇರೆಡೆಗೆ ತೆರಳಲು ಆಗಮಿಸಿದ್ದ ಪ್ರಯಾಣಿಕರು ಬಸ್ ಸೌಲಭ್ಯ ಇಲ್ಲದೆ ಪರದಾಡಿದರು. ಜಗಳೂರು ಪಟ್ಟಣಕ್ಕೆ ಬರುವ ಚಳ್ಳಕೆರೆ, ಕೊಟ್ಟೂರು, ದಾವಣಗೆರೆ, ಬಿದರಕೆರೆ ಮಾರ್ಗದ ರಸ್ತೆಗಳಲ್ಲಿ ಪ್ರತಿಭಟನಕಾರರು ವಾಹನಗಳನ್ನು ತಡೆಗಟ್ಟಿದರು.

ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ ಹಾಗೂ ಎಚ್.ಪಿ.ರಾಜೇಶ್ ಅವರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನಕಾರರು ಸರ್ಕಾರದ ವಿರುದ್ಧ ರಸ್ತೆಯ ಮಧ್ಯೆ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕರು ಸೇರಿದಂತೆ ಪ್ರಮುಖ ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಭಾರತೀಯ ಕಿಸಾನ್ ಸಭಾ ಹಾಗೂ ಕರವೇ ಸಂಘಟನೆಗಳ ಕಾರ್ಯಕರ್ತರು ಜಗಳೂರು ಬಂದ್‌ಗೆ ಬೆಂಬಲಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಎ.ಎಂ. ಮರುಳಾರಾಧ್ಯ, ಜೆಡಿಎಸ್ ರಾಜ್ಯ ಘಟಕದ ಪ್ರಧಾನ‌ ಕಾರ್ಯದರ್ಶಿ ಕೆ.ಬಿ.‌ಕಲ್ಲೇರುದ್ರೇಶ್, ಮುಖಂಡರಾದ ಪಲ್ಲಾಗಟ್ಟೆ ಮಹೇಶ್, ಸೊಕ್ಕೆ ನಾಗರಾಜ್, ಬಿಸ್ತುವಳ್ಳಿ ಬಾಬು, ಧರ್ಮನಾಯ್ಕ, ರಘು, ಹನುಮಂತಪ್ಪ, ಯೋಗಾನಂದ, ಪ್ರವೀಣ್ ಸೇರಿದಂತೆ ವಿವಿಧ ಮೋರ್ಚಾಗಳ ಕಾರ್ಯಕರ್ತರು ಭಾಗವಹಿಸಿದ್ದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ

ಜಗಳೂರು ತಾಲ್ಲೂಕನ್ನು ಬರಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಕಾನನಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ -50 ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಬಣ) ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.

‘ಮಳೆ–ಬೆಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಬರ ಘೋಷಿಸುವವರೆಗೂ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಧರಣಿ ಮುಂದುವರೆಸುತ್ತೇವೆ’ ಎಂದು ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕಾನನಕಟ್ಟೆ ತಿಪ್ಪೇಸ್ವಾಮಿ ಎಚ್ಚರಿಸಿದರು.

ಸಂಘಟನೆಯ ಅಧ್ಯಕ್ಷ ಚಿರಂಜೀವಿ ಸಿ.ಎಂ. ಹೊಳೆ, ಮುಖಂಡರಾದ ರಾಜನಹಟ್ಟಿ ರಾಜು, ಅಂಜಿನಪ್ಪ, ಸತೀಶ್ ಗೌಡಗೊಂಡನಹಳ್ಳಿ, ತಿಪ್ಪೇಸ್ವಾಮಿ, ಸಹದೇವರೆಡ್ಡಿ, ಮಹಾಲಿಂಗಪ್ಪ ಎಚ್.ಎಂ‌ಹೊಳೆ ಇದ್ದರು.

ಬಸ್ ಗಾಜು ಒಡೆದವರ ವಿರುದ್ಧ ಪ್ರಕರಣ ದಾಖಲು

ಬಂದ್ ವೇಳೆ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಎರಡು ಬಸ್‌ಗಳಲ್ಲಿ ತಾಲ್ಲೂಕಿನ ಗಡಿಮಾಕುಂಟೆ ಗ್ರಾಮದ ಉಪ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಕೆಲವು ಕಾರ್ಯಕರ್ತರು ಒಂದು ಬಸ್‌ನ ಗಾಜುಗಳನ್ನು ಒಡೆದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ 10ಕ್ಕೂ ಹೆಚ್ಚು ಜನರ ವಿರುದ್ಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇನ್‌ಸ್ಪೆಕ್ಟರ್‌ ಸಿದ್ರಾಮಯ್ಯ ತಿಳಿಸಿದರು.

ಬಂದ್ ವೇಳೆ ಡಿವೈಎಸ್‌ಪಿ ಬಸವರಾಜ್, ಇನ್‌ಸ್ಪೆಕ್ಟರ್‌ಗಳಾದ ನೂರ್ ಅಹ್ಮದ್ ಅವರು ಬಂದೋಬಸ್ತ್‌ ವಹಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಬರ ಘೋಷಣೆಗೆ ಆಗ್ರಹ: ತಾಳಿಕೋಟೆ ಬಂದ್‌

ವಿಜಯಪುರ: ಬರ ಘೋಷಣೆಗೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ, ಜೆಡಿಎಸ್‌ ಮತ್ತು ರೈತ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಕರೆ ನೀಡಿದ್ದ ತಾಳಿಕೋಟೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಸ್‌, ಆಟೊ ಸೇರಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಅಂಗಡಿ, ಮಳಿಗೆಗಳು ಮುಚ್ಚಿದ್ದವು. ಎತ್ತಿನ ಬಂಡಿ ಮತ್ತು ಟ್ರ್ಯಾಕ್ಟರ್‌ಗಳ ಸಮೇತ ರೈತರು ಬೃಹತ್‌ ಪ್ರತಿಭಟನಾ ಜಾಥಾ ನಡೆಸಿದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್‌.ಪಾಟೀಲ ನಡಹಳ್ಳಿ ಮಾತನಾಡಿ, ‘ವಿಜಯಪುರ ಜಿಲ್ಲೆಯನ್ನು ತೀವ್ರ ಬರ ಪ್ರದೇಶ ಎಂದು ಘೋಷಿಸಬೇಕು. ಪ್ರತಿ ಎಕರೆಗೆ ₹ 50 ಸಾವಿರ ಪರಿಹಾರ ನೀಡಬೇಕು, ರೈತರ ಸಾಲಮನ್ನಾ ಮಾಡಬೇಕು, ರೈತರ ಬೆಳೆ ವಿಮೆ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು’ ಎಂದರು.

‘ರಾಜ್ಯ ಸರ್ಕಾರ ಬರಗಾಲವನ್ನು ತನ್ನ ರಾಜಕೀಯ
ಅಸ್ತ್ರ ಮಾಡಿಕೊಳ್ಳಬಾರದು. ತಮಗೆ ಬೇಕಾದ ತಾಲ್ಲೂಕು
ಗಳನ್ನು ಮಾತ್ರ ಬೇಕಾಬಿಟ್ಟಿಯಾಗಿ ಬರ ಘೋಷಿಸದೇ, ಇಡೀ ರಾಜ್ಯವನ್ನು ಬರಪೀಡಿತ ಎಂದು ಘೋಷಿಸಬೇಕು’
ಎಂದರು.

ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮತ್ತಿತರರು ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ