ದಾವಣಗೆರೆ|ನೀರಿಗಷ್ಟೇ ಅಲ್ಲ ಗಾಳಿಗೂ ಶುಲ್ಕ!: ಅನುಮಾನ ಹೆಚ್ಚಿಸಿದ ‘ಜಲಸಿರಿ’ ಮೀಟರ್

ದಾವಣಗೆರೆ|ನೀರಿಗಷ್ಟೇ ಅಲ್ಲ ಗಾಳಿಗೂ ಶುಲ್ಕ!: ಅನುಮಾನ ಹೆಚ್ಚಿಸಿದ ‘ಜಲಸಿರಿ’ ಮೀಟರ್

ದಾವಣಗೆರೆ|ನೀರಿಗಷ್ಟೇ ಅಲ್ಲ ಗಾಳಿಗೂ ಶುಲ್ಕ!: ಅನುಮಾನ ಹೆಚ್ಚಿಸಿದ ‘ಜಲಸಿರಿ’ ಮೀಟರ್

ದಾವಣಗೆರೆ: ‘ಜಲಸಿರಿ’ ಯೋಜನೆಯಡಿ ಮನೆಗಳಿಗೆ ಸರಬರಾಜು ಮಾಡಿದ ನೀರಿಗಷ್ಟೇ ಅಲ್ಲ ಪೈಪ್‌ ಮೂಲಕ ಹಾದು ಹೋಗುವ ಗಾಳಿಗೂ ಮಹಾನಗರ ಪಾಲಿಕೆ ಶುಲ್ಕ ವಸೂಲಿ ಮಾಡುತ್ತಿದೆ. ನೀರಿಗೂ ಮುನ್ನ ಹೊರಬರುವ ಗಾಳಿಗೂ ‘ಮೀಟರ್‌’ ತಿರುಗಿ ಜನರು ಸಾವಿರಾರು ರೂಪಾಯಿ ಬಿಲ್‌ ತೆರಬೇಕಾಗಿದೆ!

‘ಜಲಸಿರಿ’ ಸೌಲಭ್ಯ ಪಡೆದು ಸಂತಸಗೊಂಡಿದ್ದ ಜನರು ಮಾಸಾಂತ್ಯದಲ್ಲಿ ಕೈಸೇರಿದ ಬಿಲ್‌ ಕಂಡು ಅವಕ್ಕಾಗಿದ್ದಾರೆ. ಸಾವಿರಾರು ರೂಪಾಯಿ ಬಿಲ್ ಪಾವತಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್‌ಸಿ) ಕಚೇರಿಗಳಿಗೆ ಅಲೆದು ಸುಸ್ತಾಗಿದ್ದಾರೆ.

ವಾರ್ಷಿಕ ₹ 2,400 ಕರವಿತ್ತು: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಜಲಸಿರಿ ಯೋಜನೆ ಅನುಷ್ಠಾನಕ್ಕೂ ಮುನ್ನ ವಾರ್ಷಿಕ ₹ 2,400 ನೀರಿನ ಕರವಿತ್ತು. ವರ್ಷಕ್ಕೊಮ್ಮೆ ನೀರಿನ ಕರ ಪಾವತಿಸಿದರೆ ಸಾಕಾಗುತ್ತಿತ್ತು. 24X7 ನೀರು ಸರಬರಾಜು ಮಾಡುವ ಯೋಜನೆಯಡಿ ಇದನ್ನು ಪರಿಷ್ಕರಣೆ ಮಾಡಲಾಗಿದೆ. ವಾರ್ಷಿಕ ನೀರಿನ ಕರದ ಬದಲಿಗೆ ಮಾಸಿಕ ಶುಲ್ಕ ಕಡ್ಡಾಯಗೊಳಿಸಲಾಗಿದೆ. ನಗರದ 26 ವಲಯಗಳಲ್ಲಿ ಜಲಸಿರಿ ಮೀಟರ್‌ ಅಳವಡಿಕೆ ಪೂರ್ಣಗೊಂಡಿದ್ದು, ಮಾಸಿಕ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ.

ಮಹಾನಗರ ಪಾಲಿಕೆಯ ಪ್ರಕಾರ 4–5 ಸದಸ್ಯರ ಕುಟುಂಬವೊಂದರ ಸರಾಸರಿ ಮಾಸಿಕ ನೀರಿನ ಬಳಕೆ 8,000 ಲೀಟರ್‌. ಇದಕ್ಕೆ ಕನಿಷ್ಠ ₹ 56 ದರ ನಿಗದಿಪಡಿಸಲಾಗಿದೆ. 8,000 ಲೀಟರ್‌ಗೂ ಹೆಚ್ಚು ಬಳಕೆ ಮಾಡುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ದರ ಹೆಚ್ಚಳವಾಗುತ್ತದೆ.

‘ಈ ಕನಿಷ್ಠ ದರವನ್ನು ರದ್ದುಪಡಿಸಿ ಉಚಿತ ವ್ಯವಸ್ಥೆ ಮಾಡುವ ಆಲೋಚನೆ ಪಾಲಿಕೆ ಮುಂದಿದೆ. 10,000–12,000 ಲೀಟರ್‌ ನೀರು ಬಳಸುವ ಮನೆಗಳು ಕೂಡ ಉಚಿತ ವ್ಯವಸ್ಥೆಗೆ ಒಳಪಡುವ ಹಂಬಲದಿಂದ ಜಲ ಮಿತವ್ಯಯಕ್ಕೆ ಮುಂದಾಗುವ ಸಾಧ್ಯತೆ ಇದೆ’ ಎಂಬುದು ಪಾಲಿಕೆಯ ಲೆಕ್ಕಾಚಾರ.

ಗಾಳಿಗೂ ತಿರುಗುವ ಮೀಟರ್‌: ನೀರು ಪೂರೈಕೆಗೆ ಅಳವಡಿಸಿದ ಪೈಪ್‌ಲೈನ್‌ ಜಾಲದಲ್ಲಿ ದಿನದ 24 ಗಂಟೆಯೂ ನೀರು ಇರುವುದಿಲ್ಲ. ನೀರು ಇಲ್ಲದಿರುವ ಸಂದರ್ಭದಲ್ಲಿ ಪೈಪ್‌ಲೈನ್‌ ಅನ್ನು ಗಾಳಿ ಆವರಿಸಿಕೊಳ್ಳುತ್ತದೆ. ಪೈಪ್‌ಲೈನ್‌ನಲ್ಲಿ ನೀರು ಹರಿಯುತ್ತಿದ್ದಂತೆಯೇ ಗಾಳಿಯು ಆ ನಳದ ಮೂಲಕ ಹೊರಹೋಗುತ್ತದೆ. ಆಗ ಮೀಟರ್‌ ತಿರುಗಿ, ಶುಲ್ಕವಾಗಿ ಪರಿವರ್ತನೆ ಹೊಂದುತ್ತಿದೆ ಎಂಬುದು ಪಾಲಿಕೆ ಪರಿಶೀಲನೆಯಲ್ಲಿ ಖಚಿತವಾಗಿದೆ.

‘ಪೈಪ್‌ನಲ್ಲಿರುವ ಗಾಳಿ ಹೊರಹೋಗಲು ಅಲ್ಲಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೂ, ಮನೆಯ ನಳಗಳ (ನಲ್ಲಿ) ಮೂಲಕ ಗಾಳಿ ಹೊರಹೋಗುತ್ತಿದೆ. ಯೋಜನೆ ಸಂಪೂರ್ಣ ಅನುಷ್ಠಾನಗೊಂಡಾಗ ಕೊಳವೆಮಾರ್ಗದ ಜಾಲದೊಳಗೆ ದಿನದ 24 ಗಂಟೆ ನೀರು ತುಂಬಿರುತ್ತದೆ. ಆಗ ಗಾಳಿಯ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಅಲ್ಲಿಯವರೆಗೆ ಜನರು ನೀರಿನ ಅಗತ್ಯ ಇದ್ದಾಗ ಮಾತ್ರ ನಳ ಆನ್‌ ಮಾಡಿಕೊಳ್ಳಬೇಕು. ಉಳಿದ ಸಮಯದಲ್ಲಿ ನಳವನ್ನು ಬಂದ್‌ ಮಾಡುವುದು ಸೂಕ್ತ’ ಎನ್ನುತ್ತಾರೆ ಮಹಾನಗರ ಪಾಲಿಕೆ ಅಧಿಕಾರಿಗಳು.

20 ಲೀಟರ್‌ ಕ್ಯಾನ್‌ನಲ್ಲಿ ಪರಿಶೀಲನೆ: ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಹಾಯವಾಣಿ (9036544419) ಸಂಪರ್ಕಿಸಿದ ಜನರಿಗೆ ಸಕಾಲಕ್ಕೆ ಸ್ಪಂದನೆ ಸಿಗುತ್ತಿಲ್ಲ ಎಂಬ ಆರೋಪಗಳಿವೆ. ‘ಮನೆ ಟ್ಯಾಂಕ್‌ನಲ್ಲಿ ಸೋರಿಕೆ ಇರಬೇಕು ಅಥವಾ ಇಂಗುವಿಕೆ ಹೆಚ್ಚಾಗಿರಬೇಕು ಗಮನಿಸಿ’ ಎಂಬ ಸಲಹೆ ನೀಡಲಾಗುತ್ತದೆ. ಗ್ರಾಹಕರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್‌ಸಿ) ಕಚೇರಿಗಳಿಗೆ ಅಲೆದಾಡಿದ ಬಳಿಕ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸುತ್ತಾರೆ.

20 ಲೀಟರ್‌ ಕ್ಯಾನ್‌ಗೆ ನಳದಿಂದ ನೀರು ಹರಿಸಲಾಗುತ್ತದೆ. ಮೀಟರ್‌ 20 ಲೀಟರ್‌ವರೆಗೆ ತಿರುಗಿದರೂ ಕ್ಯಾನ್‌ ಭರ್ತಿ ಆಗುವುದಿಲ್ಲ. ಸರಸ್ವತಿಪುರಂ 3ನೇ ಮುಖ್ಯರಸ್ತೆಯ ನಿವಾಸಿಯೊಬ್ಬರ ಮನೆಯ ಪರಿಶೀಲನೆಯಲ್ಲಿ 15 ಲೀಟರ್‌ ನೀರು ಮಾತ್ರ ಸಿಕ್ಕಿದೆ. 14 ತಿಂಗಳಿಗೆ ನೀಡಿದ್ದ ₹ 11,033 ಶುಲ್ಕವನ್ನು ₹ 6,391ಕ್ಕೆ ಇಳಿಸಲಾಗಿದೆ. ಮನೆಯ ಮಾಲೀಕರು ಹತ್ತಾರು ಬಾರಿ ಕಚೇರಿಗಳನ್ನು ಅಲೆದ ಪರಿಣಾಮ ಶುಲ್ಕ ಕಡಿತವಾಗಿದೆ.

‘ಶೇ 80ರಷ್ಟು ನಳ ಸಂಪರ್ಕಗಳನ್ನು ಶುಲ್ಕ ಪಾವತಿ ವ್ಯವಸ್ಥೆಗೆ ಒಳಪಡಿಸಲಾಗಿದೆ. ಶೇ 20ರಷ್ಟು ಸಂಪರ್ಕಗಳು ಶುಲ್ಕ ವಸೂಲಿಯ ಪ್ರಾಯೋಗಿಕ ಹಂತದಲ್ಲಿವೆ. ಅವರಿಗೆ ಪ್ರಯೋಗಾರ್ಥ ಶುಲ್ಕದ ಬಿಲ್‌ ನೀಡಿದರೂ ವಸೂಲಿ ಮಾಡುವುದಿಲ್ಲ. ಹೆಚ್ಚು ಶುಲ್ಕಕ್ಕೆ ಸಂಬಂಧಿಸಿದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸಹಾಯವಾಣಿಗೆ ದೂರು ದಾಖಲಾದ ತಕ್ಷಣ ಗ್ರಾಹಕರ ಮನೆಗೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸುತ್ತಾರೆ. ನೀರಿನ ವೇಗ, ಪ್ರಮಾಣವನ್ನು ಗಮನಿಸಲಾಗುತ್ತದೆ. ದೂರಿನಲ್ಲಿ ಸತ್ಯಾಂಶ ಕಂಡುಬಂದರೆ ಬಿಲ್‌ನಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ’ ಎನ್ನುತ್ತಾರೆ ಮಹಾನಗರ ಪಾಲಿಕೆ ಅಧಿಕಾರಿಗಳು.

24X7 ನೀರು ಹೆಸರಿಗಷ್ಟೇ!

‘ಜಲಸಿರಿ’ ಯೋಜನೆಯಡಿ ದಿನದ 24 ಗಂಟೆಯೂ ನೀರು ಕೊಡುವುದಾಗಿ ಮಹಾನಗರ ಪಾಲಿಕೆ ಹೇಳುತ್ತಿದೆ. ವಾಸ್ತವವಾಗಿ ಯೋಜನೆ ಅನುಷ್ಠಾನಗೊಂಡ ಬಡಾವಣೆಯ ಜನರಿಗೆ ನಿರಂತರ ನೀರು ಸರಬರಾಜು ಆಗುತ್ತಿಲ್ಲ. ಹಿಂದಿನಂತೆಯೇ ವಾರಕ್ಕೆ 2 ಅಥವಾ 3 ಬಾರಿ ನೀರು ಬರುತ್ತಿದೆ ಎಂಬ ದೂರುಗಳು ಹೆಚ್ಚಾಗಿವೆ.

‘ಜಲಸಿರಿಯ 50 ವಲಯಗಳ ಪೈಕಿ 26 ವಲಯಗಳಿಗೆ 24X7 ನೀರು ಪೂರೈಕೆ ಆಗುತ್ತಿದೆ. 22 ವಲಯಗಳಿಗೆ ಪ್ರತಿದಿನ ಕೆಲ ಗಂಟೆ ನೀರು ಸರಬರಾಜು ಮಾಡಲಾಗುತ್ತಿದೆ. 2 ವಲಯಗಳಲ್ಲಿ ಮಾತ್ರ ಯೋಜನೆ ಪ್ರಾಯೋಗಿತ ಹಂತದಲ್ಲಿದೆ. ಈ ಪ್ರದೇಶದ ಕೆಲ ಮನೆಗಳು ಇನ್ನೂ ಓವರ್ ಹೆಡ್‌ ಟ್ಯಾಂಕ್‌ ಸಂಪರ್ಕ ಪಡೆದುಕೊಂಡಿಲ್ಲ. ಈ ಬಡಾವಣೆಗಳಲ್ಲಷ್ಟೇ ಅನಿಯಮಿತ ನೀರು ಸರಬರಾಜು ಆಗುತ್ತಿದೆ’ ಎಂಬುದು ಮಹಾನಗರ ಪಾಲಿಕೆಯ ಹೇಳಿಕೆ.

ಯೋಜನೆ ಸಂಪೂರ್ಣ ಜಾರಿಯಾದ ಪಟ್ಟಿಯಲ್ಲಿ ಸರಸ್ವತಿ ಬಡಾವಣೆ ಕೂಡ ಇದೆ. ಪ್ರತಿ ಮನೆಗಳಿಗೆ 14 ತಿಂಗಳಿಂದ ನೀರಿನ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಮೊದಲಿನಂತೆಯೇ ವಾರಕ್ಕೆ 3 ದಿನ ಮಾತ್ರವೇ ನೀರು ಸರಬರಾಜು ಮಾಡಲಾಗುತ್ತಿದೆ ಎಂಬುದು ‘ಪ್ರಜಾವಾಣಿ’ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಖಚಿತವಾಗಿದೆ. ನಿರಂತರ ನೀರು ಸರಬರಾಜು ಹೆಸರಿನಲ್ಲಿ ಪಾಲಿಕೆ ವಂಚನೆ ಮಾಡುತ್ತಿದೆ ಎಂಬುದು ಜನರ ಆಕ್ರೋಶ.

ಯೋಜನೆ 2ನೇ ಹಂತಕ್ಕೆ ಒಲವು

‘ಜಲಸಿರಿ’ ಯೋಜನೆಯ 2ನೇ ಹಂತಕ್ಕೆ ಮಹಾನಗರ ಪಾಲಿಕೆ ಒಲವು ತೋರಿದೆ. ಹತ್ತು ವರ್ಷಗಳಲ್ಲಿ ಹೊಸದಾಗಿ ನಿರ್ಮಾಣಗೊಂಡ ಬಡಾವಣೆಗಳಿಗೆ 24X7 ನೀರು ಪೂರೈಕೆ ಮಾಡಲು ಇದೇ ಯೋಜನೆ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಸಾಧ್ಯತೆ ಇದೆ.

‘2016–17ನೇ ಸಾಲಿನ ನಗರದ ಬಡಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಜಲಸರಿ’ ಯೋಜನೆ ಸಿದ್ಧಪಡಿಸಲಾಗಿತ್ತು. ಆ ಬಳಿಕ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ಹೊಸ ಬಡಾವಣೆಗಳು ನಿರ್ಮಾಣವಾಗಿವೆ. ಇಲ್ಲಿಗೂ 24X7 ನೀರು ಪೂರೈಸುವ ಬೇಡಿಕೆ ಪಾಲಿಕೆ ಮುಂದಿದೆ. 8ರಿಂದ10 ಹೊಸ ಟ್ಯಾಂಕ್‌ಗಳ ನಿರ್ಮಾಣದ ಅಗತ್ಯವಿದೆ. ಈ ಕುರಿತು ಪ್ರಸ್ತಾವ ಸಿದ್ಧಪಡಿಸಬೇಕಿದೆ’ ಎಂದು ‘ಜಲಸಿರಿ’ ಯೋಜನೆಯ ಮುಖ್ಯಸ್ಥರೂ ಆಗಿರುವ ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಉದಯಕುಮಾರ್‌ ಎಂ.ಎಚ್‌.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ