
ಎರಡು ಮದುವೆ ಹೇಳಿಕೆ ಖಂಡಿಸಬೇಕಿತ್ತು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ‘ಕೆಲವು ಶಾಸಕರು ಎರಡು ಮದುವೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ ನೀಡಿದ ಹೇಳಿಕೆಯನ್ನು ಖಂಡಿಸಿ, 224 ಶಾಸಕರೂ ಅಲ್ಲಿಯೇ ಪ್ರತಿಭಟಿಸಬೇಕಿತ್ತು’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸದನದಲ್ಲಿ ಇಂತಹ ಮಾತು ಆಡುವವರನ್ನು ಮುಖ್ಯಮಂತ್ರಿ ಮಾಡಿರುವ ಕಾಂಗ್ರೆಸ್ ಅನ್ನು ದೇವರೇ ಕಾಪಾಡಬೇಕು. ಸದನದಲ್ಲಿ ಯಾರಾದರೂ ಹೀಗೆ ಮಾತನಾಡುತ್ತಾರಾ?’ ಎಂದು ಪ್ರಶ್ನಿಸಿದರು.
‘ರಾಜ್ಯದಲ್ಲಿ ತೀವ್ರ ಬರ ಇದೆ. ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಬರಗಾಲ ಮತ್ತು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕರೆದಿದ್ದ ಅಧಿವೇಶನದಲ್ಲಿ ಮುಖ್ಯಮಂತ್ರಿ ಈ ರೀತಿಯ ಮಾತುಗಳನ್ನಾಡಿದ್ದಾರೆ. ರೈತರ ಬಗ್ಗೆ ಇವರಿಗೆ ಕಾಳಜಿ ಇದೆಯೇ’ ಎಂದರು.
ಗುರುವಾರ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಬೆಂಗಳೂರಿಗೆ ಬಂದು ನೆಲಸಿದ ಬೇರೆ ಬೇರೆ ಜಿಲ್ಲೆಗಳ ಹಲವು ಶಾಸಕರು ಎರಡು ಮದುವೆಯಾಗಿದ್ದಾರೆ. ಅಂತಹವರ ಪಟ್ಟಿ ನನ್ನ ಬಳಿ ಇದೆ’ ಎಂದಿದ್ದರು.
ಬರದ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ವಿವರಿಸಿದ ಅವರು, ‘ಬೆಂಗಳೂರಿಗೆ ಬಂದ ಶಾಸಕರು ಯಾರೂ ವಾಪಸ್ ಹೋಗುತ್ತಿಲ್ಲ. ಅವರ ಹಿಸ್ಟರಿ ನನ್ನ ಬಳಿ ಇದೆ. ನಾನು ಬೇಕಿದ್ರೆ ಆ ಪಟ್ಟಿ ಹೇಳ್ತೀನಿ’ ಎಂದಿದ್ದರು.
ನನಗೆ ಒಬ್ಬಳೇ ಹೆಂಡತಿ: ಯಶವಂತರಾಯಗೌಡ ಪಾಟೀಲ
ವಿಜಯಪುರ: ‘ಆತ್ಮ ಸಾಕ್ಷಿಯಾಗಿ ಹೇಳುತ್ತೇನೆ. ನಾನು ಶ್ರೀರಾಮಚಂದ್ರನ ಹಾಗೇ ಆದರ್ಶ ಇಟ್ಟುಕೊಂಡ ವ್ಯಕ್ತಿ. ನನಗೆ ಒಬ್ಬಳೇ ಹೆಂಡತಿ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ ಆ ಕೆಟಗರಿಯಲ್ಲಿ ನಾನು ಬರುವುದಿಲ್ಲ’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದ್ದಾರೆ.