ಗುತ್ತಿಗೆದಾರರ ಬಿಲ್ ಪಾವತಿಗೆ ಡಿಜಿಟಲ್‌ ವ್ಯವಸ್ಥೆ: ಕೃಷ್ಣ ಬೈರೇಗೌಡ

ಗುತ್ತಿಗೆದಾರರ ಬಿಲ್ ಪಾವತಿಗೆ ಡಿಜಿಟಲ್‌ ವ್ಯವಸ್ಥೆ: ಕೃಷ್ಣ ಬೈರೇಗೌಡ

ಗುತ್ತಿಗೆದಾರರ ಬಿಲ್ ಪಾವತಿಗೆ ಡಿಜಿಟಲ್‌ ವ್ಯವಸ್ಥೆ: ಕೃಷ್ಣ ಬೈರೇಗೌಡ

ಬೆಂಗಳೂರು: ಗುತ್ತಿಗೆದಾರರ ಬಿಲ್‌ಗಳ ಪರಿಶೀಲನೆ ಮತ್ತು ಪಾವತಿ ಪ್ರಕ್ರಿಯೆಯನ್ನು ಇನ್ನಷ್ಟು ವೇಗ, ಪಾರದರ್ಶಕ ಹಾಗೂ ಜವಾಬ್ದಾರಿಯುತವಾಗಿಸಲು ಪಾರದರ್ಶಕವಾದ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಸರ್ಕಾರಿ ಅನುದಾನದ ಕಾಮಗಾರಿಗಳಾಗಲಿ ಅಥವಾ ನಗರ ಪಾಲಿಕೆಗಳ ಸ್ವಂತ ನಿಧಿಯ ಕಾಮಗಾರಿಗಳಾಗಲಿ, ಎಲ್ಲಕ್ಕೂ ಈ ಹೊಸ ನಿಯಮಗಳು ಏಕರೂಪವಾಗಿ ಅನ್ವಯಿಸಲಿವೆ. ಸಾರ್ವಜನಿಕ ಕಾಮಗಾರಿಗಳ ಬಿಲ್‌ ಸಲ್ಲಿಕೆ ಮತ್ತು ಪಾವತಿಯಲ್ಲಿ ಎದುರಾಗುತ್ತಿದ್ದ ಸುದೀರ್ಘ ವಿಳಂಬ ಹಾಗೂ ಅನಿಶ್ಚಿತತೆಗೆ ಮುಕ್ತಿ ನೀಡುವುದು ಈ ಸುಧಾರಣೆಗಳ ಪ್ರಮುಖ ಉದ್ದೇಶವಾಗಿದೆ. ಈ ಹಿಂದಿನ ಹಂತ-ಹಂತದ ಕೈ ಬರಹದ ಪರಿಶೀಲನೆಗಳ ಬದಲಿಗೆ, ಪ್ರತಿಯೊಂದು ಹಂತದಲ್ಲೂ ಸ್ಪಷ್ಟ ಹೊಣೆಗಾರಿಕೆ, ಕೆಲಸಕ್ಕೆ ವೇಗ ತುಂಬುವ ಹಾಗೂ ಪಾರದರ್ಶಕವಾದ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹೊಸ ವ್ಯವಸ್ಥೆಯು ಕೇವಲ ಪಾವತಿಯನ್ನು ವೇಗಗೊಳಿಸುವುದು ಮಾತ್ರವಲ್ಲದೆ, ಬೆಂಗಳೂರಿನ ಐದೂ ನಗರ ಪಾಲಿಕೆಗಳಲ್ಲಿ ಗುತ್ತಿಗೆದಾರರ ಪಾವತಿ ಪ್ರಕ್ರಿಯೆಯನ್ನು ನಂಬಿಕೆಗೆ ಅರ್ಹವಾಗಿಸಲಿದೆ. ಜೊತೆಗೆ ಕಾಮಗಾರಿಗಳ ಗುಣಮಟ್ಟ, ಒಪ್ಪಂದಗಳ ನಿರ್ವಹಣೆ ಮತ್ತು ಆರ್ಥಿಕ ಶಿಸ್ತನ್ನು ಬಲಪಡಿಸಲಿದೆ. ಬಿಲ್‌ಗಳು ಸಮಗ್ರ ಆರ್ಥಿಕ ನಿರ್ವಹಣಾ ವ್ಯವಸ್ಥೆ (ಐಎಫ್‌ಎಂಎಸ್‌) ತಂತ್ರಾಂಶದ ಮೂಲಕ ಹಂತ-ಹಂತವಾಗಿ ಸರಳವಾಗಿ ವಿಲೇ ಆಗಲಿವೆ. ಪ್ರತಿಯೊಂದು ಬಿಲ್ ಅನ್ನು ಮೊದಲು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ (ಪಿಎಂಸಿ) ಪರಿಶೀಲಿಸುತ್ತದೆ. ನಂತರ ಸ್ಥಳೀಯ ಎಂಜಿನಿಯರ್‌ಗಳು ತಪಾಸಣೆ ನಡೆಸಿ ದೃಢೀಕರಿಸುತ್ತಾರೆ. ತದನಂತರ ಮುಖ್ಯ ಎಂಜಿನಿಯರ್‌ ಅವರಿಂದ ಪ್ರಿ-ಆಡಿಟ್ ಮತ್ತು ಅನುಮೋದನೆ ದೊರೆತ ಬಳಿಕ, ಜೇಷ್ಠತೆಯ ಆಧಾರದ ಮೇಲೆ ಪಾವತಿ ಪ್ರಕ್ರಿಯೆ ನಡೆಯುತ್ತದೆ. ಈ ಸರಳೀಕೃತ ಪ್ರಕ್ರಿಯೆಯಿಂದಾಗಿ ಅನಗತ್ಯ ಅನುಮೋದನೆಗಳ ಹಂತಗಳು ಕಡಿಮೆಯಾಗಿ, ಬಿಲ್ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬ ತಪ್ಪಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕಾಗದರಹಿತ ಪಾವತಿ: ಗುತ್ತಿಗೆದಾರರ ನೋಂದಾಯಿತ ಬ್ಯಾಂಕ್ ಖಾತೆಗಳಿಗೆ ಐಎಫ್‌ಎಂಎಸ್‌ ತಂತ್ರಾಂಶದ ಮೂಲಕ ಒಟಿಪಿ ಆಧಾರಿತ ದೃಢೀಕರಣದೊಂದಿಗೆ ನೇರವಾಗಿ ಹಣ ಜಮಾ ಆಗಲಿದೆ. ಇದರಿಂದ ಹಳೆಯ ಮಾದರಿಯ ಮ್ಯಾನುವಲ್ ಆರ್‌ಟಿಜಿಎಸ್‌ ವ್ಯವಸ್ಥೆಗೆ ಪೂರ್ಣವಿರಾಮ ಬೀಳಲಿದೆ. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ,ಪ್ರಕ್ರಿಯೆ ಹೆಚ್ಚು ಸುರಕ್ಷಿತ ಹಾಗೂ ಪಾರದರ್ಶಕವಾಗಲಿದೆ ಎಂದಿದ್ದಾರೆ.

ಪಿಎಂಸಿ ಪರಿಶೀಲನೆ ಮತ್ತು ಗುಣಮಟ್ಟ ತಪಾಸಣೆ ಸೇರಿದಂತೆ ಬಿಲ್ ವಿಲೇವಾರಿಯ ಪ್ರತಿಯೊಂದು ಹಂತಕ್ಕೂ ನಿರ್ದಿಷ್ಟ ಕಾಲಮಿತಿ ಇರುತ್ತದೆ. ಉದಾಹರಣೆಗೆ, ಸ್ಥಳೀಯ ಎಂಜಿನಿಯರ್‌ಗಳು ತಪಾಸಣೆ ನಡೆಸಿ ವರದಿ ನೀಡಲು ಏಳು ದಿನಗಳ ಅವಕಾಶವಿರುತ್ತದೆ. ನಿಗದಿತ ಅವಧಿಯಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ, ಆ ಬಿಲ್ ‘ಸ್ವಯಂಚಾಲಿತವಾಗಿ ಅನುಮೋದನೆಗೊಂಡಿದೆ’ ಎಂದು ಪರಿಗಣಿತವಾಗಿ ಮುಂದಿನ ಹಂತಕ್ಕೆ ಸಾಗಲಿದೆ. ಇದರ ಜೊತೆಗೆ, ಅಧಿಕಾರಿಗಳ ಜವಾಬ್ದಾರಿಯನ್ನೂ ಸ್ಪಷ್ಟಪಡಿಸಲಾಗಿದೆ. ಯಾವುದೇ ಅಧಿಕಾರಿಯು ನಿಗದಿತ ಸಮಯದಲ್ಲಿ ಪರಿಶೀಲಿಸದೆ ಬಿಟ್ಟು, ಮುಂದೆ ಆ ಕಾಮಗಾರಿಯಲ್ಲಿ ಲೋಪದೋಷ ಕಂಡುಬಂದರೆ, ಅದಕ್ಕೆ ಸಂಬಂಧಿಸಿದ ಅಧಿಕಾರಿಯನ್ನೇ ನೇರ ಹೊಣೆ ಗಾರರನ್ನಾಗಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ತಂತ್ರಾಂಶದಲ್ಲಿ ಕಾರಣ ಕಡ್ಡಾಯ

ಯಾವುದೇ ಬಿಲ್ ಅನ್ನು ತಡೆಹಿಡಿಯಬೇಕಾದರೆ ಅಥವಾ ತಿರಸ್ಕರಿಸಬೇಕಾದರೆ, ಅದಕ್ಕೆ ಸೂಕ್ತ ಕಾರಣವನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಈ ಸೌಲಭ್ಯವು ಐಎಫ್‌ಎಂಎಸ್‌ ಸಾಫ್ಟ್‌ವೇರ್‌ನಲ್ಲೇ ಇರುವುದರಿಂದ ಗುತ್ತಿಗೆದಾರರಿಗೆ ತಮ್ಮ ಬಿಲ್ ಎಲ್ಲಿದೆ ಮತ್ತು ಯಾವ ಕಾರಣಕ್ಕೆ ತಡೆಹಿಡಿಯಲಾಗಿದೆ ಎಂಬ ಸ್ಪಷ್ಟ ಮಾಹಿತಿ ಸಿಗಲಿದೆ. ಕಾಮಗಾರಿಯ ಟೆಂಡರ್ ಹಂಚಿಕೆಯಿಂದ ಹಿಡಿದು ಅಂತಿಮ ಪಾವತಿಯವರೆಗಿನ ಎಲ್ಲಾ ಪ್ರಕ್ರಿಯೆಗಳನ್ನು ಐಎಫ್‌ಎಂಎಸ್‌ ಪ್ಲಾಟ್‌ಫಾರ್ಮ್‌ಗೆ ತರಲಾಗುತ್ತಿದೆ. ಇದರಿಂದ ಪ್ರತಿಯೊಂದು ಸಾರ್ವಜನಿಕ ಕಾಮಗಾರಿಯ ಹಂತ-ಹಂತದ ಮಾಹಿತಿಯೂ ಡಿಜಿಟಲ್ ರೂಪದಲ್ಲಿ ಲಭ್ಯವಿರುತ್ತದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಪ್ರತಿಯೊಂದು ಕಾಮಗಾರಿ ನಡೆಯುವ ಸ್ಥಳದಲ್ಲಿಯೂ ಅದಕ್ಕೆ ಜವಾಬ್ದಾರರಾದ ಎಂಜಿನಿಯರ್ ಮತ್ತು ಗುತ್ತಿಗೆದಾರರ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕಾಗುತ್ತದೆ. ಸಾರ್ವಜನಿಕರಿಗಾಗಿ ಆನ್‌ಲೈನ್ ಡ್ಯಾಶ್‌ಬೋರ್ಡ್ ಬಿಡುಗಡೆ ಮಾಡಲಾಗುತ್ತಿದ್ದು, ಇದರ ಮೂಲಕ ನಗರದಲ್ಲಿ ನಡೆಯುತ್ತಿರುವ ಮತ್ತು ಪೂರ್ಣಗೊಂಡಿರುವ ಕಾಮಗಾರಿಗಳ ಸ್ಥಿತಿಗತಿಯನ್ನು ಸಾರ್ವಜನಿಕರು ನೇರವಾಗಿ ವೀಕ್ಷಿಸಬಹುದುಮ ಎಂದಿದ್ದಾರೆ.

ಪ್ರಾಮಾಣಿಕವಾಗಿ ಕೆಲಸ ಮಾಡುವ ಗುತ್ತಿಗೆದಾರರಿಗೆ ಅನಗತ್ಯ ಅಲೆದಾಟ ತಪ್ಪಿಸಿ, ಗುಣಮಟ್ಟದ ಕೆಲಸದತ್ತ ಗಮನಹರಿಸಲು ಈ ವ್ಯವಸ್ಥೆ ನೆರವಾಗಲಿದೆ. ನಗರದಲ್ಲಿ ಸಾರ್ವಜನಿಕ ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಮತ್ತು ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸುವುದು ಜಿಬಿಎ ಮುಖ್ಯ ಆಶಯವಾಗಿದೆ ಎಂದು ಹೇಳಿದ್ದಾರೆ.

• ಐದೂ ನಗರ ಪಾಲಿಕೆಗಳಲ್ಲಿ ಬಿಲ್ ನಿರ್ವಹಣೆ, ಕಾಮಗಾರಿ ಮೇಲ್ವಿಚಾರಣೆ, ಗುಣಮಟ್ಟ ನಿಯಂತ್ರಣ ಮತ್ತು ಪಾವತಿಗೆ ಏಕರೂಪ ವ್ಯವಸ್ಥೆ

• ರಾಜ್ಯ ಸರ್ಕಾರದ ಅನುದಾನ ಮತ್ತು ಜಿಬಿಎ ವ್ಯಾಪ್ತಿಯ ನಗರಪಾಲಿಕೆಗಳ ಅನುದಾನಕ್ಕೂ ಅನ್ವಯ

• ಹೊಣೆಗಾರಿಕೆ ನಿಗದಿ, ಸರಳ–ಸುಲಭ, ಸಾರ್ವಜನಿಕ ಕಾಮಗಾರಿಗಳ ಗುಣಮಟ್ಟ ಹೆಚ್ಚಿಸುವ ಉದ್ದೇಶ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ