
ಬಿಳಿಗಿರಿರಂಗನಬೆಟ್ಟ: ದೇವಸ್ಥಾನದ ಕೊಳವೆ ಬಾವಿಗಳಲ್ಲಿ ನೀರಿಗೆ ಬರ
ಯಳಂದೂರು: ಈ ವರ್ಷ ಮಳೆ ಕೊರತೆಯಿಂದ ಕೆರೆ–ಕಟ್ಟೆಗಳು, ಜಲಮೂಲಗಳಲ್ಲಿ ನೀರಿನ ಒರತೆ ಕ್ಷೀಣವಾಗಿದ್ದು, ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಪರಿಸರದ ಮೇಲೂ ಗಂಭೀರ ಪರಿಣಾಮ ಬೀರಿದೆ.
ಮಳೆಗಾಲದಲ್ಲಿ ತಂಪಾದ ವಾತಾವರಣದಿಂದ ಹಸಿರು ಹೊದ್ದು ಕಂಗೊಳಿಸುತ್ತಿದ್ದ ಬಿಳಿಗಿರಿ ಬನದ ಪರಿಸರದಲ್ಲಿ ಈ ಬಾರಿ ಬಿಸಿಲಿನ ಧಗೆ ಆವರಿಸಿದೆ. ಬನದ ಜಲಮೂಲಗಳು ಬತ್ತುತ್ತಿದ್ದು, ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥ ಸ್ವಾಮಿಯ ದೇವಸ್ಥಾನ ಹಾಗೂ ಸುತ್ತಲಿನ ಪ್ರದೇಶಗಳಿಗೆ ನೀರು ಪೂರೈಸುವ ಕೊಳವೆಬಾವಿಗಳಲ್ಲೂ ನೀರಿನ ಲಭ್ಯತೆ ಕಡಿಮೆಯಾಗಿದೆ. ಸದ್ಯದ ಪರಿಸ್ಥಿತಿ ಮುಂದಿನ ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುವ ಎಚ್ಚರಿಕೆ ನೀಡುತ್ತಿದೆ.
ಪ್ರತಿ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮುಂಗಾರು ಮಳೆ ಸುರಿದು ಬೆಟ್ಟದ ತಪ್ಪಲು, ಕಣಿವೆ ಹಾಗೂ ಅರಣ್ಯ ಪ್ರದೇಶದಲ್ಲಿ ನೀರಿನ ಒರತೆ ಸದಾ ಜಿನುಗುತ್ತಿತ್ತು. ಸೋಮರಸನ ಕೆರೆ, ಲೀಲಾವತಿ ಕೆರೆ ಸಹಿತ ಬೆಟ್ಟದ ಪರಿಸರದಲ್ಲಿರುವ ವಿವಿಧ ಜಲಮೂಲಗಳು ತುಂಬಿ ಹರಿಯುತ್ತಿದ್ದವು. ಕಾಡಿನ ನಡುವೆ ಸಣ್ಣಪುಟ್ಟ ಚಿಲುಮೆಗಳು, ಊಟೆಗಳು ಜೀವ ಪಡೆಯುತ್ತಿದ್ದವು. ಆದರೆ, ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಮಳೆಯ ಹಾಡು ಕೇಳುತ್ತಿಲ್ಲ.
ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹಾಗೂ ಕ್ಷೇತ್ರಕ್ಕೆ ಭಕ್ತರು ಮತ್ತು ಪ್ರವಾಸಿಗರಿಗೆ ನೀರು ಪೂರೈಸುವ ಯಂತ್ರಗಾರಗಳೂ ಕೆಲಸ ನಿಲ್ಲಿಸಿವೆ. ಕೆಲವೆಡೆ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ, ನೀರು ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಕಲ್ಯಾಣಿ ಕೊಳದಲ್ಲಿ ಮಾತ್ರ ನೀರಿನ ಲಭ್ಯತೆ ತುಸು ಸಮಾಧಾನ ತರುವಂತಿದ್ದು, ಉಳಿದೆಡೆ ಜಲಮಟ್ಟ ಕುಸಿದಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಜೀವಾಮೃತ ವನ್ಯಜೀವಿಗಳಿಗೆ ಆಸರೆ: ಬಿಳಿಗಿರಿರಂಗನ ಬೆಟ್ಟದ ಅರಣ್ಯ ಪ್ರದೇಶದ ನೈಸರ್ಗಿಕ ಜಲ ಸಂಪತ್ತು ಕೇವಲ ಜನರ ನೀರಿನ ಅಗತ್ಯವನ್ನಷ್ಟೇ ಪೂರೈಸುವುದಿಲ್ಲ. ಆನೆ, ಜಿಂಕೆ, ಕಾಡೆಮ್ಮೆ, ಕರಡಿ ಸೇರಿದಂತೆ ವಿವಿಧ ವನ್ಯಜೀವಿಗಳಿಗೂ ಆಸರೆಯಾಗಿದೆ. ಜಲಮೂಲಗಳು ಬತ್ತಿದರೆ ವನ್ಯಜೀವಿಗಳು ನೀರಿಗೆ ದೂರದ ಪ್ರದೇಶಗಳಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಅರಣ್ಯ ಇಲಾಖೆ ಅಲ್ಲಲ್ಲಿ ಬಾಂದಾರ ಹಾಗೂ ಇತರ ಜಲ ಸಂರಕ್ಷಣಾ ಕಾಮಗಾರಿಗಳ ಮೂಲಕ ಮಳೆನೀರು ಸಂಗ್ರಹಿಸುವ ಪ್ರಯತ್ನ ನಡೆಸಿದ್ದರೂ ಮಳೆ ಕೈಕೊಟ್ಟಿರುವುದು ವನ್ಯಜೀವಿಗಳಿಗೆ ನೀರಿನ ಕೊರತೆ ಎದುರಾಗುವ ಆತಂಕ ಎದುರಾಗಿದೆ. ನೈಸರ್ಗಿಕ ಜಲಮೂಲಗಳು ನಿರೀಕ್ಷಿತ ಪ್ರಮಾಣದಲ್ಲಿ ಪುನಶ್ಚೇತನಗೊಂಡಿಲ್ಲ ಎನ್ನುತ್ತಾರೆ ಅರಣ್ಯ ಇಲಾಖೆಯ ಎಆರ್‌ಎಫ್‌ಒ ಮಧು.
ಪ್ರವಾಸಿಗರ ಕೊರತೆ: ಸಾಮಾನ್ಯವಾಗಿ ಮಳೆಗಾಲದಲ್ಲಿ ಬೆಟ್ಟ ಹಸಿರಿನ ಹೊದಿಕೆಯಿಂದ ಕಂಗೊಳಿಸುತ್ತಿತ್ತು. ಬೆಟ್ಟದ ಇಳಿಜಾರಿನಲ್ಲಿ, ಕಾಡಿನ ನಡುವೆ ಮೂಡುವ ಚಿಲುಮೆಗಳು ಹಾಗೂ ಕೆರೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದವು. ಆದರೆ, ಈ ಬಾರಿ ಮಳೆಯ ಕೊರತೆಯಿಂದ ಹಸಿರಿನ ಸೊಬಗು ನಿರೀಕ್ಷಿತ ಮಟ್ಟದಲ್ಲಿ ಕಾಣುತ್ತಿಲ್ಲ. ಇದರಿಂದ ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗಿದೆ. ಬೆಟ್ಟದ ನೈಸರ್ಗಿಕ ನೀರಿನ ಮೂಲಗಳು ಬಹುತೇಕ ಬತ್ತಿವೆ ಎನ್ನುತ್ತಾರೆ ಬೆಟ್ಟದ ಬೊಮ್ಮಯ್ಯ.
ಹಿಂಗಾರು ಸಮಯದಲ್ಲಿ ಉತ್ತಮ ಮಳೆಯಾದರೆ ಭೂಮಿಗೆ ನೀರು ಇಂಗಿ ಅಂತರ್ಜಲ ಮರು ಪೂರಣಗೊಳ್ಳುತ್ತದೆ. ಜಲಮೂಲಗಳು ಪುನಶ್ಚೇತನಗೊಂಡು ಅರಣ್ಯದ ಜೈವಿಕ ವ್ಯವಸ್ಥೆ ಬಲಗೊಳ್ಳುತ್ತದೆ. ಮಳೆ ಕೊರತೆಯಾದರೆ ವನ್ಯಜೀವಿಗಳು ಹಾಗೂ ಅರಣ್ಯ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ದೇವಸ್ಥಾನದ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲೂ ಜಲಮಟ್ಟ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಂತಹ ಹೊತ್ತಿನಲ್ಲಿ ಹಿಂಗಾರು ಆಶಾಕಿರಣದಂತೆ ಕಾಣುತ್ತಿದ್ದು, ದೇವರ ಕೃಪೆಯಿಂದ ಉತ್ತಮ ಮಳೆಯಾದರೆ ಭಕ್ತರು ಮತ್ತು ಪ್ರವಾಸಿಗರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದು ಎನ್ನುತ್ತಾರೆ ದೇವಸ್ಥಾನದ ಪಾರುಪತ್ತೇದಾರ ರಾಜು ಹೇಳಿದರು.