ಕುಷ್ಟಗಿ | ಬರ ಘೋಷಣೆ ಮೊದಲೇ ಶ್ರೇಯಕ್ಕೆ ಕಸರತ್ತು: BJP–ಕಾಂಗ್ರೆಸ್ ಮಧ್ಯೆ ಪೈಪೋಟಿ

ಕುಷ್ಟಗಿ | ಬರ ಘೋಷಣೆ ಮೊದಲೇ ಶ್ರೇಯಕ್ಕೆ ಕಸರತ್ತು: BJP–ಕಾಂಗ್ರೆಸ್ ಮಧ್ಯೆ ಪೈಪೋಟಿ

ಕುಷ್ಟಗಿ | ಬರ ಘೋಷಣೆ ಮೊದಲೇ ಶ್ರೇಯಕ್ಕೆ ಕಸರತ್ತು: BJP–ಕಾಂಗ್ರೆಸ್ ಮಧ್ಯೆ ಪೈಪೋಟಿ

ಕುಷ್ಟಗಿ: ತಾಲ್ಲೂಕು ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸೇರುವ ಸಾಧ್ಯತೆ ಹೆಚ್ಚಿದೆ. ಸರ್ಕಾರ ಇನ್ನೂ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿಲ್ಲ. ಬರ ಸಮಗ್ರ ಮೌಲ್ಯಮಾಪನ (ಗ್ರೌಂಡ್‌ ಟ್ರೂಂಥಿಂಗ್) ಪ್ರಕ್ರಿಯೆಗೆ ಇನ್ನೂ 4 ದಿನ ಬಾಕಿ ಇದೆ. ಘೋಷಣೆಗೆ ಮೊದಲೇ ‘ಯಶಸ್ಸಿನ ಶ್ರೇಯಸ್ಸು ಪಡೆಯಲು ಬಿಜೆಪಿ–ಕಾಂಗ್ರೆಸ್‌ ಮಧ್ಯೆ ಪೈಪೋಟಿ ಶುರುವಾಗಿದೆ.

ಮಳೆ ಇಲ್ಲದೆ ಬರ ಪರಿಸ್ಥಿತಿ ತೀವ್ರಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಭೇಟಿ ನೀಡಿದ್ದು ಇದೇ ಮೊದಲ ತಾಲ್ಲೂಕು. ಆದರೆ, ಈವರೆಗೂ ಸರ್ಕಾರ ಬರಪೀಡಿತ ತಾಲ್ಲೂಕೆಂದು ಘೋಷಿಸಿಲ್ಲ.

ಹೋಬಳಿ ಕೇಂದ್ರದ ಬಂದ್‌ನಿಂದ ಹಿಡಿದು ಅನೇಕ ರೀತಿಯಲ್ಲಿ ಪ್ರತಿಭಟನೆಗಳು ತಾಲ್ಲೂಕಿನಲ್ಲಿ ನಡೆದಿವೆ. ರೈತರು ಅನೇಕ ಗ್ರಾಮಗಳಿಂದ ಪಾದಯಾತ್ರೆ ನಡೆಸಿದ್ದಾರೆ. ಬರ ಪರಿಸ್ಥಿತಿ ಕೆಲವರು ವೈಯಕ್ತಿಕ, ರಾಜಕೀಯ ಲಾಭ ಪಡೆಯುವುದಕ್ಕೆ ಅವಕಾಶ ಕಲ್ಪಿಸಿತು ಎನ್ನುವ ಮಾತು ಕೇಳಿಬಂದಿವೆ. ಇನ್ನೂ ಕೆಲವರು ಇದನ್ನೇ ವಿಜಯೋತ್ಸವದ ಮಾದರಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ.

ಶಾಸಕ ದೊಡ್ಡನಗೌಡ ಪಾಟೀಲರು ಬೃಹತ್‌ ಹೋರಾಟ ನಡೆಸಿ ಸರ್ಕಾರದ ಗಮನಸೆಳೆದ ಕಾರಣದಿಂದಲೇ ಸರ್ಕಾರ ಬರ ಪೀಡಿತ ಪ್ರದೇಶವೆಂದು ಘೋಷಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ವಾದ ಬಿಜೆಪಿಗರದ್ದು.

ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಸರ್ಕಾರದ ಮಟ್ಟದಲ್ಲಿ ಹೆಚ್ಚು ಪ್ರಯತ್ನ ನಡೆಸಿ ಬರಪೀಡಿತ ತಾಲ್ಲೂಕು ಘೋಷಿಸುವಲ್ಲಿ ನಡೆಸಿದ ಪ್ರಯತ್ನ ಫಲ ನೀಡಿದೆ ಎಂಬುದು ಕಾಂಗ್ರೆಸ್ಸಿಗರ ವಾದ. ಈ ವಿಷಯ ಜಾಲತಾಣಗಳಲ್ಲಿ ಚರ್ಚೆಗೆ ಒಳಗಾಗಿದೆ.

ಬರಪೀಡಿತ ತಾಲ್ಲೂಕು ಘೋಷಿಸಿ ಎಂದು ಒತ್ತಾಯಿಸುವ ಹೋರಾಟ ತಾಲ್ಲೂಕಿನಲ್ಲಿ ವೈಯಕ್ತಿಕ, ಸಾಮೂಹಿಕ ರೀತಿಯಲ್ಲಿ ದೊಡ್ಡ ಮಟ್ಟದಲ್ಲಿ ನಡೆದಿದೆ. ರೈತರ ಪರವಾಗಿ ಸ್ವತಃ ಬೀದಿಗಿಳಿದ ನಿಡಶೇಸಿಯ ಅಭಿನವ ಕರಿಬಸವ ಸ್ವಾಮೀಜಿ ಹಾಗೂ ಸಂಘಟನೆಗಳಿಂದ ಜಿಲ್ಲಾ ಕೇಂದ್ರದವರೆಗೆ ಪಾದಯಾತ್ರೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಪ್ರಯತ್ನವೂ ನಡೆಯಿತು.

ಬರ ಪರಿಸ್ಥಿತಿ ರೈತರು, ಚುನಾಯಿತ ಪ್ರತಿನಿಧಿಗಳು, ರಾಜಕೀಯ, ರೈತ ಇತರೆ ಪ್ರಗತಿಪರ ಸಂಘಟನೆಗಳನ್ನು ಸಂಘಟನಾತ್ಮಕ ರೀತಿಯಲ್ಲಿ ಇಂಥ ಜನಪರ ಹೋರಾಟ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದಕ್ಕೆ ಪ್ರೇರೇಪಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ಶೀಘ್ರದಲ್ಲಿ ಸಮಗ್ರ ಮೌಲ್ಯಮಾಪನ ವರದಿ’

‘ಸರ್ಕಾರದ ಸೂಚನೆಯಂತೆ ಗ್ರೌಂಡ್‌ ಟ್ರೂಥಿಂಗ್‌ ಪ್ರಕ್ರಿಯೆ ನಡೆದಿದೆ. ಸಮಗ್ರ ಮೌಲ್ಯಮಾಪನ ನಡೆದ ತಾಲ್ಲೂಕುಗಳು ಬರಪೀಡಿತ ಪಟ್ಟಿಯಲ್ಲಿ ಬರುವ ಸಾಧ್ಯತೆಗಳು ಹೆಚ್ಚು. 28ರವರೆಗೆ ಅವಕಾಶ ಇದ್ದರೂ ಎರಡು ದಿನ ಮೊದಲೇ ಮೌಲ್ಯಮಾಪನ ವರದಿ ಸಲ್ಲಿಸುತ್ತೇವೆ. ಬರ ಪೀಡಿತ ಪ್ರದೇಶದ ಘೋಷಣೆಯಾದರೆ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡ ಅಕ್ಟೋಬರ್‌ದಲ್ಲಿ ಭೇಟಿ ನೀಡುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ

‘ಅಧಿವೇಶನದಲ್ಲಿ ಪ್ರಸ್ತಾಪಿಸಬೇಕೆಂದಿದ್ದೆ’

ಜನರ, ರೈತರ, ಮಠಾಧೀಶರ ಹೋರಾಟದ ಫಲವಾಗಿ ತಾಲ್ಲೂಕನ್ನು ಬರಪೀಡಿತ ಎಂದು ಸರ್ಕಾರ ಅಂತೂ ಘೋಷಿಸಿದೆ. ಮತ್ತು ತಾವೂ ಕೂಡ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಹೆಚ್ಚಿನ ಒತ್ತಡ ಹೇರಿದ್ದೆ. ಬರ ಘೋಷಣೆಯಾದರೆ ಸಾಲದು ಜನ ಜಾನುವಾರುಗಳ ಸಮಸ್ಯೆಗೆ ಸ್ಪಂದಿಸಲು ಸರ್ಕಾರ ಮುಂದಾಗಬೇಕು.

‘ನಮ್ಮ ಪ್ರಯತ್ನ ಎಂಬುದು ಒಪ್ಪತಕ್ಕದ್ದಲ್ಲ’

ಘೋಷಣೆಗೆ ನಮ್ಮ ಪ್ರಯತ್ನ ಎಂಬುದು ಒಪ್ಪತಕ್ಕದ್ದಲ್ಲ. ಉಪಗ್ರಹ ಆಧಾರಿತ ಮಳೆ ಮಾಪನ ಕೇಂದ್ರದ ವರದಿ, ಹವಾಮಾನ ಪರಿಸ್ಥಿತಿ ಅವಲೋಕಿಸಿ, ವೈಜ್ಞಾನಿಕ ಆಧಾರದ ಮೇಲೆ ಕೇಂದ್ರ ಸರ್ಕಾರ ಬರ ಪರಿಸ್ಥಿತಿ ಬಗ್ಗೆ ತೀರ್ಮಾನಿಸುತ್ತದೆ. ಇಲ್ಲಿ ನಾವು ಅಥವಾ ಇನ್ಯಾರೋ ಪ್ರಯತ್ನ ಮಾಡಿದ್ದಾರಂತಲೊ ಅಲ್ಲ, ಬರಸ್ಥಿತಿ ಘೋಷಿಸುವುದಕ್ಕೆ ವೈಜ್ಞಾನಿಕ ಕಾರಣಗಳ ಪಟ್ಟಿಯಲ್ಲಿ ಈ ತಾಲ್ಲೂಕು ಬಂದಿದೆ. ನಮ್ಮ ಪ್ರಯತ್ನದಿಂದಲೇ ಆಯಿತು ಎನ್ನುವುದನ್ನು ತಾವಂತೂ ಒಪ್ಪುವುದಿಲ್ಲ.

ಅಮರೇಗೌಡ ಬಯ್ಯಾಪುರ ಮಾಜಿ ಶಾಸಕ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ