
ಕಸ್ತೂರಿರಂಗನ್ ವರದಿ ಜಾರಿಗೆ ಗ್ರಾಮಸ್ಥರ ವಿರೋಧ
ಸುಬ್ರಹ್ಮಣ್ಯ: ಕಸ್ತೂರಿರಂಗನ್ ವರದಿ ಆಧಾರದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯನ್ನು ಜಾರಿಗೊಳಿಸುವುದನ್ನು ಬಿಳಿನೆಲೆ ಗ್ರಾಮಸ್ಥರು ವಿರೋಧಿಸಿದ್ದಾರೆ.
ಬಿಳಿನೆಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಈ ಕುರಿತು ಗ್ರಾಮಸ್ಥರು ಒಕ್ಕೊರಲಿನಿಂದ ನಿರ್ಣಯ ಕೈಗೊಂಡರು.
ಕಸ್ತೂರಿರಂಗನ್ ವರದಿ ಜಾರಿಯಾ ದರೆ ಕೃಷಿ, ಜಮೀನು, ಮನೆ ನಿರ್ಮಾಣ, ದುರಸ್ತಿ ಸೇರಿದಂತೆ ಹಲವು ಚಟುವಟಿಕೆ ಮೇಲೆ ನಿರ್ಬಂಧ ಹೇರುವ ಆತಂಕವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.
ಬಿಳಿನೆಲೆ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಚಲುವರಂಗಪ್ಪ, ಸುಬ್ರಹ್ಮಣ್ಯ ಆರ್‌ಎಫ್‌ಒ ಚೇತನ್, ಕಡಬ ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಾಡ್ಯಪ್ಪ ಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ಭಾಗವಹಿಸಿದ್ದರು.
ಗ್ರಾಮಸ್ಥರ ಪರವಾಗಿ ಮಂಡಿಸಲಾದ ನಿರ್ಣಯದಲ್ಲಿ, ಕಸ್ತೂರಿರಂಗನ್ ವರದಿ ಆಧಾರಿತ ನಿಯಮಗಳನ್ನು ಬಿಳಿನೆಲೆ ಗ್ರಾಮದಲ್ಲಿ ಜಾರಿಗೊಳಿಸಬಾರದು. ಗ್ರಾಮ ಸ್ಥರ ಜಮೀನು, ಕೃಷಿ, ಮನೆ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುವ ಯಾವುದೇ ನಿರ್ಬಂಧ ಹೇರ ಬಾರದು ಎಂದು ಒತ್ತಾಯಿಸಲಾಯಿತು.
ಗ್ರಾಮಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯವನ್ನು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಸಲ್ಲಿಸಿ, ಬಿಳಿನೆಲೆ ಗ್ರಾಮವನ್ನು ಕಸ್ತೂರಿರಂಗನ್ ವರದಿ ಆಧಾರಿತ ವ್ಯಾಪ್ತಿಯಿಂದ ಹೊರಗಿಡುವಂತೆ ಮನವಿ ಮಾಡಲು ನಿರ್ಧರಿಸಲಾಯಿತು.