
ಭಾರತ ಮಂಟಪ ಮಾದರಿಯಲ್ಲಿ 'ಕರ್ನಾಟಕ ಮಂಟಪ' ನಿರ್ಮಾಣಕ್ಕೆ ಚಿಂತನೆ: ಸಿಎಂ ಡಿಕೆಶಿ
ಬೆಂಗಳೂರು: 'ದೆಹಲಿಯಲ್ಲಿ ಭಾರತ ಮಂಟಪದ ಮಾದರಿಯಲ್ಲಿ ಜಕ್ಕೂರು, ಮೈಸೂರು ಲ್ಯಾಂಪ್ಸ್ ಅಥವಾ ಎನ್. ಜಿ.ಇ.ಎಫ್ ಸ್ಥಳದಲ್ಲಿ , ಮೆಟ್ರೊ ನಿಲ್ದಾಣ ಸಮೀಪ 'ಕರ್ನಾಟಕ ಮಂಟಪ' ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿದೆ' ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಮೊದಲ ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರವಾಸೋದ್ಯಮ ಕಣ್ಣಿಗೆ, ಮನಸ್ಸಿಗೆ ಆನಂದ ನೀಡುತ್ತದೆ. ನಮ್ಮ ರಾಜ್ಯದ ಪರಿಸರ ನಮ್ಮ ದೊಡ್ಡ ಆಸ್ತಿ. ನಮ್ಮ ಸರ್ಕಾರ ಕಲೆ, ಸಂಸ್ಕೃತಿ, ಮನರಂಜನೆ ಒಳಗೊಂಡಂತೆ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ಪ್ರವಾಸೋದ್ಯಮದಲ್ಲಿ ಬದ್ಧತೆ, ಉತ್ಸಾಹವಿದ್ದರೆ ಮಾತ್ರ ಯಶಸ್ವಿ
ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಅಗತ್ಯವಿರುವ ಎಲ್ಲವೂ ಇದೆ. ರಾಜ್ಯದಲ್ಲಿ ಪ್ರವಾಸೋದ್ಯಮವೆಂದರೆ ಆತಿಥ್ಯ. ಇದು ಸಾಮಾನ್ಯ ವಿಚಾರವಲ್ಲ. ಪ್ರವಾಸೋದ್ಯಮದಲ್ಲಿ ತೊಡಗಿಕೊಳ್ಳಲು ಬದ್ಧತೆ ಮತ್ತು ಉತ್ಸಾಹವಿರಬೇಕು. ಇದಿಲ್ಲದಿದ್ದರೆ ಪ್ರವಾಸೋದ್ಯಮದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದರು.
ಹೂಡಿಕೆದಾರರ ಆಸಕ್ತಿ ಕಾಪಾಡಲು ಸಕಲ ವ್ಯವಸ್ಥೆ
"ಜಾಗತಿಕ ಹೂಡಿಕೆದಾರರ ಇಲಾಖೆಯನ್ನು ಕೂಡ ತೆರೆಯಲಾಗಿದ್ದು, ಅನಿವಾಸಿ ಭಾರತೀಯರಿಗೆ ವಿಶೇಷ ಸೌಲಭ್ಯಗಳು, ಹೂಡಿಕೆ ಮಾರ್ಗದರ್ಶನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಈಸ್ ಆಫ್ ಡೂಯಿಂಗ್ ಬಿಸಿನೆಸ್ ಕಲ್ಪಿಸಿ 2-3 ತಿಂಗಳಲ್ಲೇ ಎಲ್ಲಾ ಅನುಮತಿಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹೂಡಿಕೆದಾರರ ಆಸಕ್ತಿ ಕಾಪಾಡಲು ಸಕಲ ವ್ಯವಸ್ಥೆ ಮಾಡಲಾಗುತ್ತಿದೆ" ಎಂದರು.
ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳ ಸಮಸ್ಯೆಗಳಿಗೆ ಮುಕ್ತಿ ನೀಡಲು ಯತ್ನ
"ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳ ಸಮಸ್ಯೆಗಳಿಗೂ ಮುಕ್ತಿ ನೀಡಲು ಅನೇಕ ರಾಜ್ಯಗಳೊಂದಿಗೆ ವಿಚಾರ ವಿನಿಮಯ ಮಾಡಿ ಕೇರಳ ಹಾಗೂ ಗೋವಾ ಮಾದರಿಯ ನೀತಿಗಳಿಗೆ ನೀಡಿದಂತೆ ಶಕ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು" ಎಂದರು.