ಮಹಾಲಿಂಗಪುರದಲ್ಲಿ ಮಹಾಲಿಂಗೇಶ್ವರ ಜಾತ್ರೆಯ ಸಡಗರ

ಮಹಾಲಿಂಗಪುರದಲ್ಲಿ ಮಹಾಲಿಂಗೇಶ್ವರ ಜಾತ್ರೆಯ ಸಡಗರ

ಮಹಾಲಿಂಗಪುರದಲ್ಲಿ ಮಹಾಲಿಂಗೇಶ್ವರ ಜಾತ್ರೆಯ ಸಡಗರ

ಮಹಾಲಿಂಗಪುರ: ಬೆಲ್ಲದ ನಗರಿ ಹಾಗೂ ಪ್ರಮುಖ ವಾಣಿಜ್ಯ ಕೇಂದ್ರವೆಂದೇ ಖ್ಯಾತಿ ಪಡೆದಿರುವ ಮಹಾಲಿಂಗಪುರ ಪಟ್ಟಣವೀಗ ಸಂಪೂರ್ಣವಾಗಿ ಭಕ್ತಿಭಾವದಲ್ಲಿ ಮಿಂದೆದ್ದಿದೆ. ಎತ್ತ ನೋಡಿದರೂ ಪರಮ ವೈರಾಗ್ಯ ಮೂರ್ತಿ ಮಹಾಲಿಂಗೇಶ್ವರ ಜಾತ್ರೆಯ ಅಪೂರ್ವ ಸಡಗರ, ಭಕ್ತರ ಜಯಘೋಷ.

ಹಿಂದೊಮ್ಮೆ ಕೇವಲ ‘ನರಗಟ್ಟಿ’ ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತಿದ್ದ ಈ ಪುಟ್ಟ ಗ್ರಾಮ, ಸಾಕ್ಷಾತ್ ಮಹಾಲಿಂಗೇಶ್ವರರ ಪಾದಸ್ಪರ್ಶದಿಂದಪುನೀತವಾಗಿ ‘ಮಹಾಲಿಂಗಪುರ’ ಎಂದು ನಾಮಕರಣಗೊಂಡಿತು. ಇಂದು ಈ ಪುಣ್ಯಕ್ಷೇತ್ರವು ಕೇವಲ ಹಿಂದೂಗಳ ಆರಾಧನಾ ಕೇಂದ್ರವಾಗಿರದೆ, ಹಿಂದು–ಮುಸ್ಲಿಂ ಭಾವೈಕ್ಯತೆಯ ಅನುಪಮ ತಾಣವಾಗಿ ಸರ್ವಧರ್ಮ ಸಮನ್ವಯತೆ ಸಂದೇಶ ಸಾರುತ್ತಿದೆ.

ಶಿವನ ಅಣತಿ– ಗುರುಗಳ ದಿವ್ಯ ಆಶೀರ್ವಾದ: ಪುರಾಣಗಳ ಐತಿಹ್ಯದಂತೆ, ಶಿವನ ಅಣತಿಯ ಮೇರೆಗೆ ಭುವಿಗೆ ಬಂದ ಮಹಾಲಿಂಗೇಶ್ವರರು, ಕಾಶಿ, ಶ್ರೀಶೈಲ, ತಿರುಪತಿ, ಕಂಚಿ, ಅರುಣಾದ್ರಿ, ಶಿವಗಂಗೆ, ಉಳುವಿ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಸಂಚರಿಸಿದರು. ಬಳಿಕ ಶಿವಸ್ವಪ್ನದ ವಾಣಿಯಂತೆ ಇಂದಿನ ಮಹಾರಾಷ್ಟ್ರದ ಢಪಳಾಪುರಕ್ಕೆ ತೆರಳಿ ಗುರುಲಿಂಗ ಜಗದಾರ್ಯರನ್ನು ಭೇಟಿಯಾಗಿ ಅವರ ಶಿಷ್ಯತ್ವ ಸ್ವೀಕರಿಸಿದರು.

ಶಿಷ್ಯನನ್ನು ಬೀಳ್ಕೊಡುವ ಶುಭ ಘಳಿಗೆಯಲ್ಲಿ ಗುರುಲಿಂಗರು, ‘ನೀನು ಸಂಚಾರಗೈಯುತ್ತ ಹೋಗುವಾಗ ಚೈತ್ರಶುದ್ಧ ಚತುರ್ದಶಿಯ ದಿನ ಎಲ್ಲಿ ನಿಲ್ಲುವೆಯೋ, ಅಲ್ಲಿಯೇ ಅಪ್ರತಿಮ ಶಿವಭಕ್ತೆಯೊಬ್ಬರು ಬರಮಾಡಿಕೊಳ್ಳುವರು. ಅದೇ ನಿನ್ನ ಶಾಶ್ವತ ಕರ್ಮಭೂಮಿ ಎಂದು ತಿಳಿದರು. ಆ ಊರು ಯಾವುದೇ ಇರಲಿ, ಮುಂದೆ ನಿನ್ನ ಪ್ರಭಾವದಿಂದ, ನಿನ್ನ ಹೆಸರಿನಿಂದಲೇ ನಾಮಾಂಕಿತವಾಗುತ್ತದೆ’ ಎಂದು ಆಶೀರ್ವದಿಸಿ ಕಳುಹಿಸಿದರು.

ದಾರಿ ಬಿಟ್ಟ ಕೃಷ್ಣೆ: ಗುರುಗಳ ಅಪ್ಪಣೆಯಂತೆ ಧರ್ಮೋಪದೇಶ ಮಾಡುತ್ತಾ ಸಂಚರಿಸುತ್ತಿದ್ದಮಹಾಲಿಂಗೇಶ್ವರರು, ಒಂದು ದಿನ ಸಂಜೆ ಮುಂದಿನ ಊರಿಗೆ ಹೊರಡಲು ಸಿದ್ಧರಾಗಿ ಕೃಷ್ಣಾನದಿ ತೀರಕ್ಕೆ ಬಂದರು. ಕಾಕತಾಳೀಯವೆಂಬಂತೆ ಅದೇ ಸಮಯಕ್ಕೆ ಗೋಕಾಕ ತಾಲ್ಲೂಕಿನ ಅರಭಾಂವಿಯ ದುರದುಂಡೇಶ್ವರರೂ ಅಲ್ಲಿಗೆ ಆಗಮಿಸಿದ್ದರು. ಕೃಷ್ಣಾ ನದಿಯು ಮೈದುಂಬಿ ಹರಿಯುತ್ತಿದ್ದ ಕಾರಣ ನಾವಿಕರು ದೋಣಿ ಚಲಾಯಿಸಲು ನಿರಾಕರಿಸಿದರು. ಈ ವೇಳೆ ಉಭಯ ಶ್ರೀಗಳು ನದಿ ದಾಟಲು ಕಾಲ್ನಡಿಗೆಯಲ್ಲೇಮುನ್ನಡೆದಾಗ, ಅಲ್ಲಿದ್ದ ಜನಸಾಮಾನ್ಯರು ಅಜ್ಞಾನದಿಂದ ಅವರನ್ನು ಅಣಕಿಸಿದರು.

ಜನರ ಹಂಗಿಸುವಿಕೆಗೆ ಕಿವಿಗೊಡದ ಶ್ರೀಗಳು, ‘ತಾಯಿ ಕೃಷ್ಣೆ, ಇಂದು ನಾವಿಬ್ಬರೂ ಆ ಕಡೆ ಹೋಗಲೇಬೇಕಾಗಿದೆ. ನಮಗೆ ನದಿ ದಾಟಲು ದಾರಿ ಬಿಡು’ ಎಂದು ಕೈಮುಗಿದು ಪ್ರಾರ್ಥಿಸಿದರು. ಅವರ ನಿಷ್ಕಲ್ಮಶ ಭಕ್ತಿಗೆ ಒಲಿದ ಕೃಷ್ಣೆಯು ಸ್ತ್ರೀರೂಪದಲ್ಲಿ ಪ್ರತ್ಯಕ್ಷಳಾಗಿ, ‘ಶಿವಸ್ವರೂಪಿಗಳಾದ ತಮ್ಮ ದಿವ್ಯದರ್ಶನದಿಂದ ನಾನು ಪುನೀತಳಾದೆ. ನಿಮ್ಮ ಪವಿತ್ರ ಪಾದಧೂಳಿನಿಂದ ಧನ್ಯಳಾಗುವೆ. ನಿಮ್ಮ ಕೋರಿಕೆಯಂತೆ ದಾರಿ ಬಿಡುವೆ. ನಡೆದು ಆಚೆ ದಡ ಸೇರಬನ್ನಿ ಯತಿಪುಂಗವರೇ’ ಎಂದಳು. ಮೈದುಂಬಿ ಹರಿಯುತ್ತಿದ್ದ ಕೃಷ್ಣೆ ಕ್ಷಣಮಾತ್ರದಲ್ಲಿ ಇಬ್ಭಾಗವಾಗಿ ಯೋಗಿದ್ವಯರಿಗೆ ದಾರಿ ನೀಡಿದ ಈ ಅದ್ಭುತ ಪವಾಡವನ್ನು ಕಣ್ಣಾರೆ ಕಂಡ ಜನತೆ, ಮೂಕವಿಸ್ಮಿತರಾಗಿ ಧನ್ಯತೆ ಅನುಭವಿಸಿದರು. ನದಿ ದಾಟಿದ ಬಳಿಕ ಕವಲು ದಾರಿ ಬಂದಾಗ ದುರದುಂಡೇಶ್ವರರು ‘ನಾನು ಈ ಕಡೆ ಸಾಗುವೆ’ ಎಂದು ಹೇಳಿ ಬೇರೆ ಮಾರ್ಗದಲ್ಲಿ ಸಾಗಿದರು.

ಮಹಾಲಿಂಗೇಶ್ವರರು ‘ನರಗಟ್ಟಿ’ ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಶಿವಭಕ್ತೆ ಸಿದ್ದಾಯಿ ತಾಯಿ ಅವರನ್ನು ಭಕ್ತಿಯಿಂದ ಬರಮಾಡಿಕೊಂಡಳು. ಅಲ್ಲಿಯೇ ನೆಲೆನಿಂತ ಶ್ರೀಗಳು, ಭಕ್ತರ ಕಷ್ಟಗಳನ್ನು ನಿವಾರಿಸುತ್ತಾ ಅನೇಕ ಪವಾಡಗಳನ್ನು ಗೈದರು. ಗುರುಗಳ ವಾಕ್ಯದಂತೆ ಊರು ‘ಮಹಾಲಿಂಗಪುರ’ವಾಯಿತು.

ಭಕ್ತೆ ಸಿದ್ದಾಯಿ ತಾಯಿ ಮತ್ತು ಬೆಳೆಯುವ ಪವಿತ್ರ ಜಟೆ: ಮಹಾಲಿಂಗೇಶ್ವರರು ಬಂದ ದಿನದಿಂದಲೂ ಶರಣೆ ಸಿದ್ದಾಯಿ ತಾಯಿಯು ನಿತ್ಯವೂ ಮಡಿಯಿಂದ ಅಡುಗೆ ಮಾಡಿ ಪ್ರಸಾದ ಅರ್ಪಿಸುವ ಪವಿತ್ರ ಕಾಯಕವನ್ನು ತನ್ನ ಉಸಿರಿರುವವರೆಗೂಒಂದು ವ್ರತದಂತೆ ನಡೆಸಿಕೊಂಡು ಬಂದಳು. ಒಂದು ದಿನ ಪರಶಿವನ ಅಪ್ಪಣೆಯಂತೆ ಶ್ರೀಗಳು ಇಹಲೋಕ ತ್ಯಜಿಸಲು ಅಣಿಯಾದರು. ಇದನ್ನು ಅರಿತ ಸಿದ್ದಾಯಿ ತಾಯಿ, ಬಿಕ್ಕಿ ಬಿಕ್ಕಿ ಅಳುತ್ತಾ ‘ನೀವು ಸಾಕಾರ ರೂಪವಾಗಿಯೇ ನಮ್ಮ ಕಣ್ಣೆದುರಿಗೆ ಸದಾ ಕಾಲ ಕಾಣಬೇಕು’ ಎಂಬ ಬಯಕೆ ವ್ಯಕ್ತಪಡಿಸಿದಳು. ಆಗ ಮಹಾಲಿಂಗೇಶ್ವರರು ತಮ್ಮ ಇರುವಿಕೆಯ ಶಾಶ್ವತ ಗುರುತಿಗಾಗಿ ಶಿರದ ಐದೆಳೆಯ ಜಟೆಗಳನ್ನು ಕಿತ್ತು ವರವಾಗಿ ನೀಡಿದರು. ‘ಈ ಜಟೆಗಳು ಪ್ರತಿವರ್ಷ ಒಂದು ಸಾಸಿವೆಯಷ್ಟು ಬೆಳೆಯುತ್ತವೆ. ಇದೇ ನಾನು ಸಾಕಾರ ರೂಪದಲ್ಲಿ ಈ ಮಣ್ಣಿನಲ್ಲಿ ಇರುವ ಕುರುಹು. ಯಾರು ಈ ಜಟೆಗಳಲ್ಲಿಯೇ ನನ್ನನ್ನು ಕಂಡು ಭಕ್ತಿಯಿಂದ ಜಟಾಭಿಷೇಕ ಮಾಡಿಸುವರೋ ಅವರ ಇಷ್ಟಾರ್ಥಗಳನ್ನು ಪೂರೈಸುತ್ತೇನೆ’ ಎಂದು ಅಭಯ ನೀಡಿ ಐಕ್ಯರಾದರು. ಅಂದು ಸಿದ್ದಾಯಿ ತಾಯಿಗೆ ನೀಡಿದ ಜಟೆಯ ಮುಂಗುರುಳುಗಳು ಇಂದು ಏಳು ಸಿಂಬೆ ಆಕಾರದಷ್ಟು ಬೆಳೆದು ನಿಂತಿದ್ದು, ಭಕ್ತರು ಇಂದಿಗೂ ಜಟಾಭಿಷೇಕದ ಮೂಲಕ ತಮ್ಮ ಆರಾಧ್ಯ ದೈವವನ್ನು ಕಣ್ತುಂಬಿಕೊಳ್ಳುತ್ತಾರೆ.

ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿಯೇ ಸಿದ್ದಾಯಿ ತಾಯಿಯ ದೇವಸ್ಥಾನ ನಿರ್ಮಿಸಲಾಗಿದ್ದು, ನಿತ್ಯ ಪೂಜೆಗಳು ಜರುಗುತ್ತಿವೆ. ಮಹಾಲಿಂಗೇಶ್ವರರ ದರ್ಶನಕ್ಕೆ ಬರುವ ಭಕ್ತರು ಮೊದಲು ಸಿದ್ದಾಯಿ ತಾಯಿಗೆ ನಮಸ್ಕರಿಸುವುದು ವಾಡಿಕೆ.

ಮಹಾಲಿಂಗೇಶ್ವರರ ಪವಾಡಗಳು

ಹುಟ್ಟುಗುರುಡಿಗೆ ನೇತ್ರದಾನ: ನರಕವಾಲಪುರದ ರುದ್ರಮ್ಮ ಎಂಬ ಶಿವಶರಣೆಯು ಹುಟ್ಟು ಕುರುಡಿಯಾಗಿದ್ದಳು. ಗುರುಲಿಂಗ ಜಂಗಮರಲ್ಲಿ ಅಪಾರ ಭಕ್ತಿ ಹೊಂದಿದ್ದ ಆಕೆ, ಶ್ರೀಗಳ ಪವಾಡಗಳನ್ನು ಕೇಳಿ ತಿಳಿದು, ಅವರ ಬಳಿ ಬಂದು ದೃಷ್ಟಿಗಾಗಿ ಮೊರೆಯಿಟ್ಟಳು. ಆಕೆಯ ಅನನ್ಯ ಭಕ್ತಿಗೆ ಕರಗಿದ ಶ್ರೀಗಳು, ತಮ್ಮ ಪವಿತ್ರ ಕಮಂಡಲದಲ್ಲಿದ್ದ ರುದ್ರಾಭಿಷೇಕದ ಪುಣ್ಯಜಲವನ್ನು ಆಕೆಯ ಕಣ್ಣುಗಳ ಮೇಲೆ ಸಿಂಪಡಿಸಿದರು. ಆ ಕ್ಷಣವೇ ಸೂರ್ಯೋದಯಕ್ಕೆ ಕೆಂದಾವರೆಗಳು ಅರಳುವಂತೆ ಆಕೆಯ ಕಣ್ಣುಗಳು ಅರಳಿ ದೃಷ್ಟಿ ಪಡೆದಳು.

ಮೃತ ಬಾಲಕನಿಗೆ ಜೀವದಾನ: ಮುಧೋಳ ಸಂಸ್ಥಾನದ ಮಾಲೋಜಿರಾವ ಘೋರ್ಪಡೆಯು ಆನೆ, ಕುದುರೆಗಳ ಭವ್ಯ ಚತುರಂಗ ಸೇನೆಯೊಂದಿಗೆ ಶ್ರೀಗಳ ದರ್ಶನಕ್ಕೆ ಬಂದಿದ್ದ. ಮಹಾರಾಜನ ಮೆರವಣಿಗೆಯನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದರು. ಮಕ್ಕಳ ಗುಂಪಿನಲ್ಲಿದ್ದ ‘ಮಹಾಲಿಂಗ’ ಎಂಬ ಬಾಲಕ ರಾಜನ ಪಟ್ಟದಾನೆಯ ಗಾಂಭೀರ್ಯಕ್ಕೆ ಮರುಳಾಗಿ ಹತ್ತಿರ ಹೋದಾಗ, ಮದವೇರಿದ ಆನೆ ತನ್ನ ಸೊಂಡಿಲಿನಿಂದ ಬಾಲಕನನ್ನು ಬಲವಾಗಿ ಒತ್ತಿ ಕೊಂದಿತು. ಅರಿವಿಲ್ಲದೆ ನಡೆದ ಈ ಶಿಶುಹತ್ಯೆಯಿಂದ ರಾಜ ಆಘಾತಕ್ಕೊಳಗಾದ. ಬಾಲಕನ ತಾಯಿ ಕಣ್ಣೀರು ಹಾಕುತ್ತಾ ಶ್ರೀಗಳ ಮೊರೆ ಹೋದಳು. ಆಗ ಶ್ರೀಗಳು ‘ಇದು ಶಿವನ ಲೀಲೆ, ಪಂಚಾಕ್ಷರಿ ಮಂತ್ರದ ಮಹಿಮೆ ತೋರಲು ನಡೆದ ಘಟನೆ’ ಎಂದು ಸಮಾಧಾನಪಡಿಸಿ, ‘ಓಂ ನಮಃ ಶಿವಾಯ’ ಮಂತ್ರ ಪಠಿಸಿ ಮೃತ ಮಗುವಿನ ಹಣೆಗೆ ವಿಭೂತಿ ಹಚ್ಚಿ ದರು. ತಕ್ಷಣ ಮೃತ ಬಾಲಕ ಗಾಢ ನಿದ್ದೆಯಿಂದ ಎಚ್ಚರವಾದವನಂತೆ ಎದ್ದು ಕುಳಿತನು.

ರಣಭೂಮಿಯಲ್ಲಿ ಖಡ್ಗ ಮರಳಿಸಿದ್ದು: ಮುಧೋಳದ ಮಾಲೋಜಿ ಮಹಾರಾಜನು ಒಮ್ಮೆ ಶ್ರೀಗಳ ದರ್ಶನ ಪಡೆಯದೆ, ಆತುರದಿಂದ ಯುದ್ಧಕ್ಕೆ ತೆರಳಿದ್ದ. ರಣರಂಗದಲ್ಲಿ ಹೋರಾಡುವಾಗ ಆಕಸ್ಮಿಕವಾಗಿ ಆತನ ಕೈಯಿಂದ ಖಡ್ಗ ಜಾರಿ ಬಿತ್ತು. ನಿರಾಯುಧನಾದ ರಾಜನನ್ನು ಮೆಟ್ಟಿಹಾಕಲು ವೈರಿಗಳು ಆರ್ಭಟಿಸುತ್ತಾ ಮುನ್ನುಗ್ಗಿದಾಗ, ರಾಜ ಅಸಹಾಯಕನಾಗಿ ‘ಕಾಪಾಡು ತಂದೆ ಮಹಾಲಿಂಗೇಶ್ವರ’ ಎಂದು ಪ್ರಾರ್ಥಿಸಿದ. ತಕ್ಷಣ ಶ್ರೀಗಳು ರಣಭೂಮಿಯಲ್ಲಿಯೇ ಪ್ರತ್ಯಕ್ಷರಾಗಿ, ಬಿದ್ದ ಖಡ್ಗವನ್ನು ರಾಜನ ಕೈಗಿತ್ತು ‘ಪರಾಕ್ರಮದಿಂದ ಹೋರಾಡಿ ಜಯಶಾಲಿಯಾಗು’ ಎಂದು ಆಶೀರ್ವದಿಸಿ ಅಂತರ್ಧಾನರಾದರು. ಆ ಯುದ್ಧದಲ್ಲಿ ರಾಜನಿಗೆ ಅಭೂತಪೂರ್ವ ವಿಜಯ ಪ್ರಾಪ್ತಿಯಾಯಿತು.

ವಿಜ್ಞಾನಕ್ಕೂ ಸವಾಲಾದ ಜಟೆಯ ಬೆಳವಣಿಗೆ

ಮಹಾಲಿಂಗೇಶ್ವರರ ದಿವ್ಯ ವಾಣಿಯಂತೆ ಅಂದು ನೀಡಿದ ಜಟೆಯ ಮುಂಗುರುಳುಗಳು ವಿಜ್ಞಾನಕ್ಕೂ ಸವಾಲಾಗಿ ಪರಿಣಮಿಸಿದ್ದು, ಪ್ರತಿ ವರ್ಷ ಬೆಳೆಯುತ್ತಾ ಇಂದು ‘ಏಳು ಸುತ್ತಿನ ಸಿಂಬೆ’ಯಷ್ಟು ಬೃಹತ್ತಾಗಿ ಬೆಳೆದು ನಿಂತಿದೆ! ಜಟೆಗಳ ಮಹಿಮೆಯಿಂದ ತಮ್ಮ ಕಷ್ಟ ಕಾರ್ಪಣ್ಯಗಳಿಂದ ಪಾರಾಗಿ ಇಷ್ಟಾರ್ಥಗಳನ್ನು ಪಡೆದ ಅಸಂಖ್ಯಾತ ಭಕ್ತರು ಪ್ರತಿ ವರ್ಷ, ಅದರಲ್ಲೂ ವಿಶೇಷವಾಗಿ ‘ಶ್ರಾವಣ ಮಾಸ’ದಲ್ಲಿ ಭಕ್ತಿಯಿಂದ ಜಟಾಭಿಷೇಕ ಮಾಡಿಸುತ್ತಾರೆ. ಮಹಾಲಿಂಗೇಶ್ವರರ ಸಾಕಾರ ಇರುವಿಕೆಯನ್ನು ಜಗತ್ತಿಗೆ ಪರಿಚಯಿಸಿದ ಶರಣೆ ಸಿದ್ದಾಯಿ ತಾಯಿಯನ್ನು ಭಕ್ತರು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ