ಬೆಳಗಾವಿ: ‘ಗಣಪ‘ನಿಗೆ ಸಂಭ್ರಮದ ವಿದಾಯ

ಬೆಳಗಾವಿ: ‘ಗಣಪ‘ನಿಗೆ ಸಂಭ್ರಮದ ವಿದಾಯ

ಬೆಳಗಾವಿ: ‘ಗಣಪ‘ನಿಗೆ ಸಂಭ್ರಮದ ವಿದಾಯ

ಬೆಳಗಾವಿ: ಒಂದೆಡೆ ಗಣೇಶನಿಗೆ ಜೈಕಾರ. ಮತ್ತೊಂದೆಡೆ ಪಟಾಕಿ, ಸಿಡಿಮದ್ದುಗಳ ಅಬ್ಬರ. ಇನ್ನೊಂದೆಡೆ ಯುವಜನರ ನೃತ್ಯ, ಸಂಗೀತವಾದ್ಯಗಳ ಸದ್ದು. ಸಾಲು ಸಾಲು ಸಂಭ್ರಮಗಳ ಮಧ್ಯೆ ಹರಿದ ಭಕ್ತಿಯ ಹೊಳೆ.

ಕುಂದಾನಗರಿಯಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಈ ದೃಶ್ಯಕಾವ್ಯಕ್ಕೆ ಸಾಕ್ಷಿಯಾಯಿತು.

ಇಲ್ಲಿನ ಹುತಾತ್ಮ ಚೌಕ್‌ನಿಂದ ಆರಂಭವಾದ ಮೆರವಣಿಗೆಯು ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಯಂಡೇಖೂಟ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಕಿರ್ಲೋಸ್ಕರ್‌ ರಸ್ತೆ, ರಾಮಲಿಂಗಖಿಂಡ್‌ ಗಲ್ಲಿ ರಸ್ತೆ, ಟಿಳಕ ಚೌಕ, ಹೆಮು ಕಲಾನಿ ಚೌಕ್‌, ಪಾಟೀಲ ಗಲ್ಲಿಯ ಶನಿ ಮಂದಿರ, ಕಪಿಲೇಶ್ವರ ರೈಲ್ವೆ ಮೇಲ್ಸೇತುವೆ ಮಾರ್ಗವಾಗಿ ಸಾಗಿ, ಕಪಿಲೇಶ್ವರ ದೇವಸ್ಥಾನ ಬಳಿಯ ಹೊಂಡ ತಲುಪಿತು.

ವೈಭೋಗದಿಂದ ನಡೆದ ಮೆರವಣಿಗೆ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಬೆಳಗಾವಿ, ಸುತ್ತಲಿನ ಗ್ರಾಮಗಳು ಮಾತ್ರವಲ್ಲದೆ; ನೆರೆಯ ಮಹಾರಾಷ್ಟ್ರ ಮತ್ತು ಗೋವಾದಿಂದಲೂ ಮಕ್ಕಳು, ಯುವಜನರು, ಮಹಿಳೆಯರು, ವೃದ್ಧರು ಹೀಗೆ... ಎಲ್ಲ ವಯೋಮಾನದವರೂ ಬಂದಿದ್ದರು. ಮೆರವಣಿಗೆ ಕೇಂದ್ರಸ್ಥಳವಾದ ಧರ್ಮವೀರ ಸಂಭಾಜಿ ವೃತ್ತವು ಜನರಿಂದ ಕಿಕ್ಕಿರಿದು ತುಂಬಿತ್ತು.

ಬೆಳಗಾವಿ ನಗರ ಹಾಗೂ ಉಪನಗರ ವ್ಯಾಪ್ತಿಯಲ್ಲಿ 380 ಸಾರ್ವಜನಿಕ ಗಣಪನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಆಕರ್ಷಕ ವಿನ್ಯಾಸಗಳ ಮೂರ್ತಿಗಳು 10ರಿಂದ 20 ಅಡಿಗಿಂತ ಹೆಚ್ಚಿನ ಎತ್ತರ ಹೊಂದಿದ್ದವು. ಪ್ರತಿವರ್ಷ 11 ದಿನ ಅವುಗಳನ್ನು ಪೂಜಿಸಿ ವಿಸರ್ಜಿಸಲಾಗುತ್ತಿತ್ತು. ಆದರೆ, ಈ ಸಲ ಮುಹೂರ್ತದ ಪ್ರಕಾರ 12 ದಿನ ಪ್ರತಿಷ್ಠಾಪಿಸಿ 9 ಕಡೆ ವಿಸರ್ಜನೆ ಮಾಡಲಾಯಿತು.

ಭವ್ಯ ಮೆರವಣಿಗೆಯಲ್ಲಿ ತಂದ ಮೂರ್ತಿಗಳನ್ನು ಕಪಿಲೇಶ್ವರ ದೇವಸ್ಥಾನದ ಹೊಸ ಹೊಂಡ, ಹಳೇ ಹೊಂಡ, ಇಂದ್ರಪ್ರಸ್ಥ ನಗರದ ಜಕ್ಕೇರಿಹೊಂಡ, ಕೋಟೆ ಕೆರೆ, ಕಣಬರ್ಗಿ ಕೆರೆ, ಅನಗೋಳದ ಲಾಲ್‌ ತಾಲಾಬ್‌, ಮಜಗಾವಿಯ ಬ್ರಹ್ಮದೇವ ಮಂದಿರದ ಕೆರೆ, ವಡಗಾವಿಯ ನಾಜರ್‌ಕ್ಯಾಂಪ್‌, ಹಳೇ ಬೆಳಗಾವಿಯ ಕಲ್ಪೇಶ್ವರ ಹೊಂಡದ ನೀರಿನಲ್ಲಿ ಮುಳುಗಿಸಿ ಅಂತಿಮ ವಿದಾಯ ಹೇಳಲಾಯಿತು.

ಕಪಿಲೇಶ್ವರ ದೇವಸ್ಥಾನದ ಹೊಸ ಹೊಂಡದಲ್ಲಿ ಪ್ರಥಮವಾಗಿ, ಮಾಳಿ ಗಲ್ಲಿಯ ಮಂಡಳದವರು ಡ್ರೈಫ್ರೂಟ್ಸ್‌ನಿಂದ ಸಿದ್ಧಪಡಿಸಿದ ಗಣಪನ ಮೂರ್ತಿ ವಿಸರ್ಜನೆಗೊಂಡಿತು. ಅಲ್ಲದೆ, ಜನರು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಗಳನ್ನು ಕಾರು, ಟಂಟಂ ಮತ್ತಿತರ ವಾಹನಗಳಲ್ಲಿ ತಂದು ವಿಸರ್ಜಿಸಿದರು. ಭಂಡಾರ ಹಾರಿಸಿ ಖುಷಿಪಟ್ಟರು.

ರಂಜಿಸಿದ ಕಲಾತಂಡಗಳು: ವಿವಿಧ ಗಣೇಶೋತ್ಸವ ಮಂಡಳ, ಯುವಕ ಮಂಡಳ ಹಾಗೂ ಕಲಾ ತಂಡದವರು ಪ್ರದರ್ಶಿಸಿದ ಕಲಾ ಪ್ರಕಾರಗಳು ಮೆರವಣಿಗೆಗೆ ಮೆರುಗು ತಂದವು. ಜಾನಪದ ಶೈಲಿಯ ನೃತ್ಯ ಗ್ರಾಮೀಣ ಸಂಸ್ಕೃತಿ ಅನಾವರಣ ಮಾಡಿದವು. ಸಾಂಪ್ರದಾಯಿಕ ದಿರಿಸಿನಲ್ಲಿದ್ದ ಯುವಜನರು ಉತ್ಸಾಹದಿಂದ ವಾದ್ಯಗಳನ್ನು ಬಾರಿಸಿ, ಹೆಜ್ಜೆಹಾಕಿ ಸಂಭ್ರಮಿಸಿದರು. ‘ಗಣಪ‍ತಿ ಬಪ್ಪಾ ಮೋರಯಾ...’ ಎನ್ನುವ ಜೈಕಾರ ಮುಗಿಲು ಮುಟ್ಟಿದ್ದವು.

ಮೆರವಣಿಗೆ ಮಾರ್ಗದಲ್ಲಿ ವಿವಿಧ ಸಂಘಟನೆಯವರು ಕುಡಿಯುವ ನೀರು, ತಂಪು ಪಾನೀಯ, ಉಪಾಹಾರ ವಿತರಿಸಿದರು. ಮೆರವಣಿಗೆ ಮಾರ್ಗದಲ್ಲಿ ಆಹಾರ ಖಾದ್ಯಗಳು, ತಂಪುಪಾನೀಯ ಮಾರಾಟ ಜೋರಾಗಿತ್ತು.

ಬಿಗಿ ಭದ್ರತೆ: ಮೆರವಣಿಗೆ ಮಾರ್ಗದ ಜತೆಗೆ, ಬೆಳಗಾವಿ ನಗರದ ಮುಖ್ಯರಸ್ತೆಗಳು, ಪ್ರಮುಖ ವೃತ್ತಗಳು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಕಾನ್‌ಸ್ಟೆಬಲ್‌ನಿಂದ ಹಿಡಿದು ಹಿರಿಯ ಪೊಲೀಸ್‌ ಅಧಿಕಾರಿಗಳು ಮೆರವಣಿಗೆ ಸ್ಥಳದಲ್ಲೇ ಠಿಕಾಣಿ ಹೂಡಿ ಪ್ರತಿ ಚಟುವಟಿಕೆ ಮೇಲೆ ನಿಗಾ ಇರಿಸಿದ್ದರು.

ಹುತಾತ್ಮ ಚೌಕ್‌ನಲ್ಲಿ ಗಣಪನ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಗಣ್ಯರು ಮೆರವಣಿಗೆಗೆ ಚಾಲನೆ ನೀಡಿದರು. ‘24 ತಾಸಿನೊಳಗೆ ಮೆರವಣಿಗೆ ಪೂರ್ಣಗೊಳಿಸಲು ಎಲ್ಲರೂ ಸಹಕರಿಸಬೇಕು’ ಎಂದರು.

ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮೇಯರ್‌ ಪ್ರೀತಿ ಕಾಮಕರ, ಉಪಮೇಯರ್‌ ಹನುಮಂತ ಕೊಂಗಾಲಿ, ಶಾಸಕರಾದ ಅಭಯ ಪಾಟೀಲ, ಆಸಿಫ್‌ ಸೇಠ್‌, ಮಾಜಿ ಶಾಸಕ ಅನಿಲ ಬೆನಕೆ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ನಗರ ಪೊಲೀಸ್‌ ಕಮಿಷನರ್‌ ಪ್ರಕಾಶ ನಿಕ್ಕಂ, ಪಾಲಿಕೆ ಆಯುಕ್ತ ಕಾರ್ತಿಕ ಎಂ., ಮಂಡಳ ಪದಾಧಿಕಾರಿಗಳು ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ