
ರಾಷ್ಟ್ರೀಯ ಟೂರ್ನಿಗಳಲ್ಲಿ ಪದಕ ಸಾಧನೆ: ಸೇನೆ ತರಬೇತಿಗೆ ಶೂಟರ್ ಮಹಾಲಕ್ಷ್ಮಿ
ತುಮಕೂರು: ರೈಫಲ್ ಶೂಟಿಂಗ್ ವಿಭಾಗದಲ್ಲಿ 16 ವರ್ಷದ ಮಹಾಲಕ್ಷ್ಮಿ ಮಿಂಚುತ್ತಿದ್ದು, ಭಾರತೀಯ ಸೇನೆಯ ಶೂಟಿಂಗ್ ತರಬೇತಿಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.
ನಗರದ ಮಾರುತಿ ನಗರದ ಮಹಾಲಕ್ಷ್ಮಿ ಕಳೆದ ಒಂದೂವರೆ ವರ್ಷದಿಂದ ಮಧ್ಯಪ್ರದೇಶದ ಭಾರತೀಯ ಸೇನೆಯ ‘ಎಜಿ ಆರ್ಮಿ ಸ್ಪೋರ್ಟ್ಸ್ ಕಂಪನಿ’ಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸೇನೆಯ ಜೂನಿಯರ್ ತಂಡಕ್ಕೆ ಸೇರಲು ಪೂರಕ ತಯಾರಿ ನಡೆಸುತ್ತಿದ್ದಾರೆ. ಸೇನೆ ನಡೆಸಿದ ಟ್ರಯಲ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ತರಬೇತಿಗೆ ಆಯ್ಕೆಯಾಗಿದ್ದಾರೆ.
2024 ಮತ್ತು 2025ರಲ್ಲಿ ಸತತವಾಗಿ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಇದು ಅವರನ್ನು ಸೇನೆಯ ತನಕ ಕರೆದುಕೊಂಡು ಹೋಗಿದೆ. ಶೂಟಿಂಗ್ ಜತೆಯಲ್ಲಿ ಶಿಕ್ಷಣವನ್ನೂ ಮುಂದುವರಿಸಿದ್ದಾರೆ. ಸದ್ಯ 10ನೇ ತರಗತಿ ಓದುತ್ತಿದ್ದಾರೆ. ಮೊದಲಿಗೆ ವಿವೇಕಾನಂದ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಷನ್‌ನಲ್ಲಿ ಶೂಟಿಂಗ್ ತರಬೇತಿ ಪಡೆದಿದ್ದರು.
ಪ್ರಾರಂಭದಲ್ಲಿ ಮಹಾಲಕ್ಷ್ಮಿ ಅಣ್ಣ ತರಬೇತಿ ಪಡೆಯುತ್ತಿದ್ದರು. ಅವರ ಜತೆಯಲ್ಲಿ ಪ್ರತಿ ದಿನ ತರಬೇತಿಗೆ ಹೋಗುತ್ತಿದ್ದ ಮಹಾಲಕ್ಷ್ಮಿ ಶೂಟಿಂಗ್ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಪ್ರಾರಂಭದಲ್ಲಿ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ ನಂತರ ಒಪ್ಪಿಗೆ ಸೂಚಿಸಿದರು. ದಿನ ಕಳೆದಂತೆ ಮತ್ತಷ್ಟು ಹೊಳೆಯುತ್ತ ಹೋದರು. ಅನೇಕ ಟೂರ್ನಿಗಳಲ್ಲಿ ಪದಕ ಗಳಿಸಿ ತಮ್ಮ ಮೇಲಿನ ಭರವಸೆ ಉಳಿಸಿಕೊಂಡಿದ್ದಾರೆ.
2024, 2025ರಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. 2024ರ ಮಿನಿ ಒಲಿಂಪಿಕ್ಸ್ ಮತ್ತು 2025ರ ಕ್ರೀಡಾಕೂಟದಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್ ಒಳಗೊಂಡಂತೆ ಹಲವು ಪಂದ್ಯಾವಳಿಗಳಲ್ಲಿ ಪದಕ ಪಡೆದು ಮಿಂಚಿದ್ದಾರೆ.
ಮಹಾಲಕ್ಷ್ಮಿ ಶಾಲಾ ಕ್ರೀಡಾಕೂಟದಿಂದ ರಾಷ್ಟ್ರ ಮಟ್ಟದ ಟೂರ್ನಿಗಳವರೆಗೆ ಸಾಗಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ಟೂರ್ನಿಗಳಲ್ಲಿ ಭಾರತೀಯ ಸೇನೆಯನ್ನು ಪ್ರತಿನಿಧಿಸಲಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿ ದಿನ ಅಭ್ಯಾಸ ನಡೆಸುತ್ತಿದ್ದಾರೆ. ಮಹಾಲಕ್ಷ್ಮಿ ಸಾಧನೆ ಗುರುತಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‘ಅಸಾಧಾರಣ ಪ್ರತಿಭೆ’ ಪ್ರಶಸ್ತಿ ನೀಡಿ ಗೌರವಿಸಿದೆ.
‘ಮಗಳು ಈಗಲೂ ಸೇನೆಯಿಂದ ತರಬೇತಿ ಪಡೆಯುತ್ತಿದ್ದಾಳೆ. ಪ್ರಾರಂಭದಲ್ಲಿ ರೈಫಲ್ ಖರೀದಿಸಲು ಹಣ ಇರಲಿಲ್ಲ. ಡಿಸಿಸಿ ಬ್ಯಾಂಕ್ ಒಳಗೊಂಡಂತೆ ಹಲವರು ನೆರವಿನ ಹಸ್ತ ಚಾಚಿದರು. ಮಹಾಲಕ್ಷ್ಮಿ ಸಾಧನೆ ಮುಖಾಂತರ ಎಲ್ಲರ ನಂಬಿಕೆ ಉಳಿಸಿಕೊಳ್ಳುತ್ತಾಳೆ ಎಂಬ ವಿಶ್ವಾಸವಿದೆ. ಸೇನೆಯಲ್ಲಿಯೇ ಇನ್ನಷ್ಟು ದಿನ ಅಭ್ಯಾಸ ಇರಲಿದೆ’ ಎಂದು ಅವರ ತಂದೆ ರವಿಕುಮಾರ್ ಪ್ರತಿಕ್ರಿಯಿಸಿದರು.