ಚಿಕ್ಕಬಳ್ಳಾಪುರ: ವರಿಷ್ಠರಿಗೆ ಕಗ್ಗಂಟಾದ ಡಿಸಿಸಿ ಅಧ್ಯಕ್ಷ ಸ್ಥಾನ

ಚಿಕ್ಕಬಳ್ಳಾಪುರ: ವರಿಷ್ಠರಿಗೆ ಕಗ್ಗಂಟಾದ ಡಿಸಿಸಿ ಅಧ್ಯಕ್ಷ ಸ್ಥಾನ

ಚಿಕ್ಕಬಳ್ಳಾಪುರ: ವರಿಷ್ಠರಿಗೆ ಕಗ್ಗಂಟಾದ ಡಿಸಿಸಿ ಅಧ್ಯಕ್ಷ ಸ್ಥಾನ

ಚಿಕ್ಕಬಳ್ಳಾಪುರ: ರಾಜ್ಯದ 35 ಸಂಘನಾತ್ಮಕ ಜಿಲ್ಲೆಗಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಎಐಸಿಸಿಯು ಪಕ್ಷದ ಮುಖಂಡರನ್ನು ನೇಮಿಸಿದೆ. ಆದರೆ ತೀವ್ರ ಕಗ್ಗಂಟಾದ ಕಾರಣ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಹೆಸರನ್ನು ಘೋಷಿಸಲು ಹೈಕಮಾಂಡ್‌ಗೆ ಸಾಧ್ಯವಾಗಿಲ್ಲ. ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವು ‘ಕೈ’ ವರಿಷ್ಠರಿಗೆ ಬಿಸಿ ತುಪ್ಪವಾಗಿದೆ.

ಬಣ ರಾಜಕೀಯ, ಶಾಸಕರ ನಡುವಿನ ತಿಕ್ಕಾಟ ಹೀಗಾ ನಾನಾ ಕಾರಣದಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಅಂತಿಮಗೊಳಿಸಲು ಕೈ ಪಾಳಯಕ್ಕೆ ಸಾಧ್ಯವಾಗಿಲ್ಲ. ಜಿಲ್ಲೆಯ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಾಭಿಪ್ರಾಯದ ಕಾರಣದಿಂದಲೇ ಅಧ್ಯಕ್ಷರ ಹೆಸರು ಘೋಷಣೆ ಸಾಧ್ಯವಾಗಿಲ್ಲ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

ಜಾತಿ, ವಿಧಾನಸಭಾ ಕ್ಷೇತ್ರ, ಪ್ರಭಾವ, ಸಂಘಟನೆ–ಹೀಗೆ ನಾನಾ ವಿಚಾರಗಳು ಅಧ್ಯಕ್ಷರ ಆಯ್ಕೆಯಲ್ಲಿ ಪ್ರಮುಖವಾಗುತ್ತದೆ. ಮಂಚೇನಹಳ್ಳಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎನ್.ಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗರೇಕಾಲುವೆ ನಾರಾಯಣ ಸ್ವಾಮಿ, ಮಾಜಿ ಸಚಿವ ಎನ್‌.ಎಚ್.ಶಿವಶಂಕರ ರೆಡ್ಡಿ ಹೆಸರು ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಪ್ರಮುಖವಾಗಿ ಚರ್ಚೆಗೆ ಒಳಗಾಗಿತ್ತು. ಈಚೆಗೆ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಸಹ ವರಿಷ್ಠರತ್ತ ಬೆರಳು ತೋರಿದ್ದರು.

ಕಳೆದ ಏಳು ವರ್ಷಗಳಿಂದ ಗೌರಿಬಿದನೂರು ವಿಧಾನಸಭಾ ಕ್ಷೇತ್ರ ಕೇಶವ ರೆಡ್ಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ರೆಡ್ಡಿ ಅವರಿಗೆ ಈಗ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಸಹ ನೀಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತರುವಾಯವೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಬದಲಾಗುವರು ಎನ್ನುವ ಚರ್ಚೆಗಳು ಗರಿಗೆದರಿದ್ದವು. ಆದರೆ ಪಕ್ಷದೊಳಗಿನ ನಾಯಕರ ತಿಕ್ಕಾಟದ ಕಾರಣ ಆಯ್ಕೆ ಸಾಧ್ಯವಾಗಲಿಲ್ಲ. ಕೇಶವ ರೆಡ್ಡಿ ಅವರೇ ಮುಂದುವರಿದಿದ್ದರು.

ಎಐಸಿಸಿಯು ಗುಜರಾತ್‌ನ ಪಾಲಕ್ ವರ್ಮ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ವೀಕ್ಷಕರನ್ನಾಗಿ ಕಳುಹಿಸಿತ್ತು. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿಪ್ರಾಯ ಸಂಗ್ರಹಿಸಿರುವ ಎಐಸಿಸಿ ವೀಕ್ಷಕರು ಆ ಮಾಹಿತಿಯನ್ನು ಪಕ್ಷದ ವರಿಷ್ಠರಿಗೆ ತಲುಪಿಸಿದ್ದರು. ಕಾಂಗ್ರೆಸ್‌ನ ವಿ.ಆರ್.ಸುದರ್ಶನ್ ಸೇರಿದಂತೆ ಪ್ರಮುಖ ನಾಯಕರು ಸಹ ವೀಕ್ಷಕರ ಜೊತೆ ಪ್ರವಾಸ ನಡೆಸಿ ಅಧ್ಯಕ್ಷರ ಆಯ್ಕೆಗೆ ಅಭಿಪ್ರಾಯ ಸಂಗ್ರಹಿಸಿದ್ದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಮಂಚೇನಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗರೇಕಾಲುವೆ ನಾರಾಯಣಸ್ವಾಮಿ, ಅಡ್ಡಗಲ್ ಶ್ರೀಧರ್, ಎಸ್‌.ಪಿ ಶ್ರೀನಿವಾಸ್, ನಾಯನಹಳ್ಳಿ ನಾರಾಯಣಸ್ವಾಮಿ, ಸುಮಿತ್ರಮ್ಮ, ಶಿಡ್ಲಘಟ್ಟ ಸಹನಾ ರಾಜೀವ್ ಗೌಡ, ಸುಬ್ರಹ್ಮಣಿ, ಡಿ.ವಿ ಪ್ರಸಾದ್, ಚಿಂತಾಮಣಿ ಕೋದಂಡ, ಶಿಡ್ಲಘಟ್ಟದ ಸೇರಿದಂತೆ ಹಲವರು ಎಐಸಿಸಿ ವೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದರು.

ಈ ನಡುವೆ ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಮುನ್ನಲೆಗೆ ಬಂದಿತ್ತು. ಇದು ತೀವ್ರ ಕುತೂಹಲ ಹುಟ್ಟಿಸಿತ್ತು. ಐದು ಬಾರಿ ಶಾಸಕರಾಗಿ ಒಮ್ಮೆ ಸಚಿವರಾಗಿ, ವಿಧಾನಸಭೆ ಉಪಸಭಾಪತಿಯಾಗಿಯೂ ಕೆಲಸ ಮಾಡಿರುವ ಶಿವಶಂಕರ ರೆಡ್ಡಿ ಅವರೂ ಸಹ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿ‌ದ್ದರು. ಶಿವಶಂಕರ ರೆಡ್ಡಿ ಹೆಸರು ಚಾಲ್ತಿಗೆ ಬರುವ ಮೂಲಕ ಅಧ್ಯಕ್ಷ ಸ್ಥಾನದ ಆಟಗಳೇ ಬದಲಾದವು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಕಾಂಗ್ರೆಸ್ ಶಾಸಕರ ನಿಲುವುಗಳು ಒಂದೊಂದು ಬಗೆಯಲ್ಲಿವೆ. ಈ ಕಾರಣದಿಂದಲೇ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿದೆ.

ಮಾಜಿ ಸಚಿವ ಹಾಗೂ ಚಿಂತಾಮಣಿ ಶಾಸಕ ಡಾ.ಎಂ.ಸಿ ಸುಧಾಕರ್, ‍‍ಪಿ.ಎನ್. ಪ್ರಕಾಶ್ ಅವರ ಆಯ್ಕೆಗೆ ಒಲವು ತೋರಿದ್ದಾರೆ. ಆದರೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಪ್ರಕಾಶ್ ವಿರುದ್ಧ ಇದ್ದಾರೆ. ಗಂಗರೇಕಾಲುವೆ ನಾರಾಯಣಸ್ವಾಮಿ ಅಥವಾ ಶಿವಶಂಕರ ರೆಡ್ಡಿ ಅಧ್ಯಕ್ಷರಾಗಬೇಕು ಎನ್ನುವ ನಿಲುವು ಹೊಂದಿದ್ದಾರೆ. ಮತ್ತೊಂದು ಕಡೆ ಪಕ್ಷೇತರ ಶಾಸಕರಾಗಿ ಕಾಂಗ್ರೆಸ್ ಬೆಂಬಲಿಸಿರುವ ಗೌರಿಬಿದನೂರಿನ ಕೆ.ಎಚ್.ಪುಟ್ಟಸ್ವಾಮಿ ಗೌಡ ಅವರು ಸಹ ಪ್ರಕಾಶ್ ಪರ ಒಲವು ಹೊಂದಿದ್ದಾರೆ ಎನ್ನಲಾಗುತ್ತಿದೆ. ಬಾಗೇಪಲ್ಲಿ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಬಹಿರಂಗವಾಗಿ ಯಾರ ಪರವಾಗಿಯೂ ನಿಲುವು ವ್ಯಕ್ತಪಡಿಸಿಲ್ಲ.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಣ ರಾಜಕೀಯವಿದೆ. ಪುಟ್ಟು ಆಂಜನಪ್ಪ ಬಣವು ಡಾ.ಎಂ.ಸಿ ಸುಧಾಕರ್ ಅವರ ಸೂಚಿಸುವವರ ಪರವಾಗಿ ನಿಲುವು ಹೊಂದಿದೆ. ರಾಜೀವ್ ಗೌಡ ಅವರ ಪತ್ನಿ ಸಹನಾ ಸಹ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಎಂದು ಅರ್ಜಿ ಸಲ್ಲಿಸಿದ್ದಾರೆ. ಈ ಬಣವು ಡಾ.ಎಂ.ಸಿ ಸುಧಾಕರ್ ವಿರುದ್ಧವಿದೆ.

ಹೀಗೆ ‘ಕೈ’ನೊಳಗಿನ ಕಲಹ ವರಿಷ್ಠರಿಗೂ ಬಿಸಿ ತುಪ್ಪವಾಗಿದೆ. ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವುದು ಬಿಸಿ ತುಪ್ಪವಾಗಿದೆ.

ಹೀಗೆ ಶಾಸಕರು, ಮಾಜಿ ಶಾಸಕರ ನಡುವಿನ ಭಿನ್ನಾಭಿಪ್ರಾಯದ ಕಾರಣದಿಂದ ಒಮ್ಮತದಿಂದ ಅಧ್ಯಕ್ಷರ ಆಯ್ಕೆ ಸಾಧ್ಯವಾಗಿಲ್ಲ. ಈಗ ಹೈಕಮಾಂಡ್‌ನ ನಿಲುವಿನತ್ತ ನಾಯಕರು ದೃಷ್ಟಿ ಹರಿಸಿದ್ದಾರೆ.

ಗೌರಿಬಿದನೂರಿಗೆ 7 ವರ್ಷಗಳಿಂದ ಅವಕಾಶ

ಕೇಶವ ರೆಡ್ಡಿ ಕಳೆದ ಏಳು ವರ್ಷಗಳಿಂದ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಅವರು ಗೌರಿಬಿದನೂರು ಕ್ಷೇತ್ರದವರು. ಮತ್ತೆ ಶಿವಶಂಕರ ರೆಡ್ಡಿ ಅವರಿಗೆ ಅವಕಾಶ ನೀಡಿದರೆ ಅದೇ ವಿಧಾನಸಭಾ ಕ್ಷೇತ್ರದವರಿಗೆ ಅವಕಾಶ ನೀಡಿದಂತೆ ಆಗುತ್ತದೆ. ಆದ್ದರಿಂದ ಬೇರೆ ವಿಧಾನಸಭಾ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು ಎಂದು ಕಾಂಗ್ರೆಸ್‌ನ ಕೆಲವು ಮುಖಂಡರು ವಾದಿಸುವರು. ಅಹಿಂದ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಕಾಂಗ್ರೆಸ್‌ನ ಮತ್ತೊಂದು ಗುಂಪು ಸಹ ಪ್ರತಿಪಾದಿಸುತ್ತಿದೆ. ಆದ್ದರಿಂದ ಈ ಎಲ್ಲ ವಿಚಾರಗಳು ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಕಗ್ಗಂಟಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ