
ಶಿಡ್ಲಘಟ್ಟದಲ್ಲಿ ಬಸ್ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ
ಶಿಡ್ಲಘಟ್ಟ: ಜಂಗಮಶೀಗೆಹಳ್ಳಿಗೆ ಬೆಳಗಿನ ಸಮಯದಲ್ಲಿ ಬಸ್ ಸೌಲಭ್ಯ ಬೇಕು ಎಂದು ಒತ್ತಾಯಿಸಿ ಗುರುವಾರ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಕೆ.ಮುತ್ತುಕದಹಳ್ಳಿ ಬಳಿ ಕೆ.ಎಸ್.ಆರ್.ಟಿ.ಸಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಶಿಡ್ಲಘಟ್ಟದಿಂದ ಪ್ರತಿದಿನ ಬೆಳಿಗ್ಗೆ 7ಗಂಟೆಗೆ ಕನ್ನಮಂಗಲಕ್ಕೆ ಹೋಗುವ ಬಸ್ ಅನ್ನು ಜಂಗಮಶೀಗೆಹಳ್ಳಿ ಗ್ರಾಮದವರೆಗೆ ವಿಸ್ತರಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಬೆಳಗಿನ ಸಮಯದಲ್ಲಿ ಬಸ್ ಸೌಲಭ್ಯ ಇಲ್ಲದ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಜೂನ್ ತಿಂಗಳಲ್ಲೇ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ, ಬಸ್ ವ್ಯವಸ್ಥೆ ಆಗದ ಕಾರಣ ಪ್ರತಿಭಟನೆ ನಡೆಸಬೇಕಾಯಿತು ಎಂದು ವಿದ್ಯಾರ್ಥಿಗಳು ತಿಳಿಸಿದರು.
ಬೆಳಿಗ್ಗೆ 7ರಿಂದ ಕೆ.ಮುತ್ತುಕದಹಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಐದು ಕೆ.ಎಸ್.ಆರ್.ಟಿ.ಸಿ ಬಸ್‌ಗಳನ್ನು ತಡೆದ ವಿದ್ಯಾರ್ಥಿಗಳು, ತಮ್ಮ ಬೇಡಿಕೆ ಈಡೇರುವವರೆಗೆ ಮುಂದೆ ಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ವಿಷಯ ತಿಳಿದು ಸ್ಥಳಕ್ಕೆ 112 ಹೊಯ್ಸಳ ಪೊಲೀಸರು ಮತ್ತು ಕೆ.ಎಸ್.ಆರ್.ಟಿ.ಸಿ ಡಿಪೊ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಬಸ್ ಸೌಲಭ್ಯಕ್ಕೆ ಸಂಬಂಧಿಸಿದಂತೆ ಡಿಪೊ ಕಚೇರಿಗೆ ಬಂದು ಲಿಖಿತ ಮನವಿ ಸಲ್ಲಿಸುವಂತೆ ಅಧಿಕಾರಿಗಳು ಸೂಚಿಸಿದರು. ಮಾರ್ಗದ ಅವಶ್ಯ ಮತ್ತು ಪ್ರಯಾಣಿಕರ ಅನುಕೂಲ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಆದರೆ, ಬಸ್ ಸಂಚಾರ ಆರಂಭಿಸುವ ಬಗ್ಗೆ ಸ್ಪಷ್ಟ ಭರವಸೆ ನೀಡುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ಈ ವೇಳೆ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಮಧ್ಯಾಹ್ನ 11.30ರ ಸುಮಾರಿಗೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಲು ಮುಂದಾದರು. ಬಸ್‌ಗಳನ್ನು ರಸ್ತೆ ಮಧ್ಯೆ ತಡೆದು ನಿಲ್ಲಿಸುವುದರಿಂದ ಇತರ ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಸಮಸ್ಯೆಯನ್ನು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಗಮನಕ್ಕೆ ಲಿಖಿತವಾಗಿ ತಂದು ಕಾನೂನುಬದ್ಧವಾಗಿ ಪರಿಹಾರ ಕಂಡುಕೊಳ್ಳುವಂತೆ ಪೊಲೀಸರು ಮನವರಿಕೆ ಮಾಡಿದರು.
ಆದರೂ, ಕೆಲ ವಿದ್ಯಾರ್ಥಿಗಳು ‘ನಮ್ಮೂರಿಗೆ ಬಸ್ ಈಗಲೇ ಬರಬೇಕು’ ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು. ಕೊನೆಗೆ ಪೊಲೀಸರು ಮಧ್ಯಸ್ಥಿಕೆ ವಹಿಸಿ ಬಸ್ ಸಂಚಾರ ಮುಂದುವರಿಸುವಂತೆ ಮಾಡಿದರು.
ಸುಮಾರು ಐದು ಗಂಟೆಗಳ ಕಾಲ ನಡೆದ ಪ್ರತಿಭಟನೆಯಿಂದ ಪ್ರಯಾಣಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಬೆಂಗಳೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತು ಶಿಡ್ಲಘಟ್ಟ ಕಡೆಗೆ ಹೋಗಬೇಕಿದ್ದ ಕೆಲವರು ಪ್ರಯಾಣ ಮೊಟಕುಗೊಳಿಸಿ ಮನೆಗಳಿಗೆ ಹಿಂದಿರುಗಿದರು.